Site icon Vistara News

ವಿಸ್ತಾರ ಸಂಪಾದಕೀಯ: ಏಕರೂಪ ನಾಗರಿಕ ಸಂಹಿತೆ ವ್ಯವಸ್ಥಿತವಾಗಿ ಜಾರಿಗೆ ಬರಲಿ

Uniform Civil Code Bill In Monsoon Session

Uniform Civil Code bill to be tabled in Parliament monsoon session: Sources Say

ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುನಿಫಾರ್ಮ್‌ ಸಿವಿಲ್‌ ಕೋಡ್-‌ ಯುಸಿಸಿ) ಜಾರಿಯ ಸಾಧ್ಯಾಸಾಧ್ಯತೆಗಳ ಬಗ್ಗೆ ದಶಕಗಳಿಂದ ಚರ್ಚೆ ನಡೆಯುತ್ತಿದೆ. ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ನರೇಂದ್ರ ಮೋದಿ ಅವರ ಸರ್ಕಾರ ಈ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆ ಮುಂದಿರಿಸುತ್ತಿದೆ. ಇದೀಗ ಭಾರತದ ಕಾನೂನು ಆಯೋಗವು, ಸಮಾನ ನಾಗರಿಕ ಸಂಹಿತೆ ಜಾರಿ ಕುರಿತಂತೆ ದೇಶದ ನಾಗರಿಕರಿಂದ ಅಭಿಪ್ರಾಯ ಕೇಳಿದೆ. ಇದು ಈ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಂತಾಗಿದೆ ಎನ್ನಬಹುದು.

ಭಾರತ ಜಾತ್ಯತೀತ ದೇಶ. ಇಲ್ಲಿ ಎಲ್ಲರಿಗೂ ಒಂದೇ ಕಾನೂನು ಎಂದು ನಾವು ಬಾಯಿ ಮಾತಿನಲ್ಲಿ ಹೇಳುತ್ತಿರುತ್ತೇವೆ. ಆದರೆ ಧರ್ಮದ ಆಧಾರದಲ್ಲಿ ಇಲ್ಲಿ ಹಲವು ನೀತಿ ನಿಯಮಗಳು ಚಾಲ್ತಿಯಲ್ಲಿವೆ. ನಮ್ಮ ದೇಶದಲ್ಲಿ ಎಲ್ಲರಿಗೂ ಅನ್ವಯವಾಗುವ ಒಂದೇ ದಂಡಸಂಹಿತೆ ಇದೆ. ಆದರೆ ಭಾರತದಲ್ಲಿರುವ ಬಹುತೇಕ ಕೌಟುಂಬಿಕ ಕಾನೂನುಗಳು ಆಯಾ ಧರ್ಮಾಚರಣೆಗಳಿಂದ ಪ್ರೇರೇಪಿತವಾಗಿವೆ. ಹಿಂದೂ, ಸಿಖ್‌, ಜೈನ್‌, ಬೌದ್ಧರು ಹಿಂದೂ ವೈಯಕ್ತಿಕ ಕಾನೂನುಗಳ ಅಡಿಯಲ್ಲಿ ಬಂದರೆ, ಮುಸ್ಲಿಂ ಮತ್ತು ಕ್ರೈಸ್ತರು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಹೊಂದಿದ್ದಾರೆ. ಮುಸ್ಲಿಮರು ಅನುಸರಿಸುವ ಕಾನೂನುಗಳನ್ನು ಹೊರತಪಡಿಸಿದರೆ ಉಳಿದೆಲ್ಲ ಕಾನೂನುಗಳು ಭಾರತದ ಸಂಸತ್ತಿನಿಂದ ರೂಪಿಸಲ್ಪಟ್ಟಿವೆ. ಮುಸ್ಲಿಮ್‌ ಕಾನೂನುಗಳು ಷರಿಯಾ ಆಧರಿತವಾಗಿವೆ. ಹೀಗಾಗಿ ವಿವಾಹ, ಉತ್ತರಾಧಿಕಾರ, ಆಸ್ತಿ ಹಂಚಿಕೆ, ವಿಚ್ಛೇದನ, ಜೀವನಾಂಶ ಮುಂತಾದ ವಿಚಾರಗಳಲ್ಲಿ ಗಣನೀಯವಾದ ಭೇದಗಳಿವೆ. ಇದು ಒಂದೇ ದೇಶದ ಪ್ರಜೆಗಳಲ್ಲಿ ಭೇದವನ್ನು ಸೃಷ್ಟಿಸಿದೆ. ಸೆಕ್ಯುಲರ್‌ ಆಗಿರುವ ಒಂದು ದೇಶದಲ್ಲಿ ಕಾನೂನುಗಳು ಧರ್ಮಕ್ಕೊಂದು ಎಂಬಂತಿರುವುದು ಒಂದು ವಿಚಿತ್ರ ಸಂಗತಿ.

ಯುಸಿಸಿ ಜಾರಿಗೆ ತರುವ ಬಗ್ಗೆ ಸಂವಿಧಾನ ಕೂಡ ಅವಕಾಶ ಕಲ್ಪಿಸಿದೆ. ʼʼಭಾರತದ ಎಲ್ಲ ಪ್ರದೇಶಗಳಲ್ಲಿ ತನ್ನೆಲ್ಲ ಜನರಿಗೆ ಸಮಾನ ನಾಗರಿಕ ಸಂಹಿತೆಯನ್ನು ರೂಪಿಸಲು ಸರಕಾರ ಪ್ರಯತ್ನಿಸಬೇಕುʼʼ ಎಂದು ಸಂವಿಧಾನದ 44ನೇ ವಿಧಿ ಹೇಳಿದೆ. ಈ ವಿಧಿಯು ಸಮಾನ ನಾಗರಿಕ ಸಂಹಿತೆಯ ಅನುಷ್ಠಾನವನ್ನು ರಾಜ್ಯ ನಿರ್ದೇಶಕ ತತ್ವಗಳಲ್ಲಿ ಸೇರಿಸಿದೆ. ಹೀಗಾಗಿ ಸಂಸತ್ತು ಒಮ್ಮತಕ್ಕೆ ಬಂದು ಯುಸಿಸಿ ಜಾರಿಗೊಳಿಸಬೇಕಾದ ಅಗತ್ಯವಿದೆ. ಸಮಾನ ನಾಗರಿಕ ಸಂಹಿತೆಯಿಂದ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ. ಈ ಕಾನೂನು ಎಲ್ಲ ಪ್ರಜೆಗಳನ್ನು ಸಮಾನವಾಗಿ ಕಾಣುತ್ತದೆ. ಅನೇಕ ವೈಯಕ್ತಿಕ ಕಾನೂನುಗಳು ಮಹಿಳೆಯರ ಹಕ್ಕುಗಳು, ವೈವಾಹಿಕ ನಿರ್ಬಂಧಗಳು, ಆಸ್ತಿ ಹಕ್ಕುಗಳಲ್ಲಿ ತಾರತಮ್ಯಪೂರಿತವಾಗಿವೆ. ಅಂತರ್‌ಧರ್ಮೀಯ ವಿವಾಹ ಮುಂತಾದ ಪ್ರಗತಿಪರ ವಿಚಾರಗಳನ್ನು ಇವು ಪ್ರೋತ್ಸಾಹಿಸುವುದಿಲ್ಲ. ಹಿಂದೂ ವಿವಾಹ ಕಾಯ್ದೆ ಹೊರತುಪಡಿಸಿ, ಉಳಿದ ವಿವಾಹ ಕಾಯ್ದೆಗಳಲ್ಲಿ ಗಂಡನಿಂದ ಹೆಂಡತಿಗೆ ಜೀವನಾಂಶ ಸಂಬಂಧ ಸ್ಪಷ್ಟತೆ ಇಲ್ಲ. ಯುಸಿಸಿಯ ಮೂಲಕ ಇದೆಲ್ಲದಕ್ಕೂ ಒಂದು ಸಮಾನ ಪಾತಳಿ ಕಲ್ಪಿತವಾಗಲಿದೆ. ದೇಶದ ಎಲ್ಲ ಪ್ರಜೆಗಳು ಒಂದೇ ಕಾನೂನಿನಡಿಯಲ್ಲಿ ಬರುವುದರಿಂದ ವ್ಯಾಜ್ಯಗಳನ್ನು ತ್ವರಿತವಾಗಿ ಬಗೆಹರಿಸಲು ನ್ಯಾಯಾಲಯಗಳಿಗೆ ಸಾಧ್ಯವಾಗುತ್ತದೆ.

ಇದನ್ನೂ ಓದಿ: Uniform Civil Code: ಏಕರೂಪ ನಾಗರಿಕ ಸಂಹಿತೆ ಜಾರಿಗೆ ಮಹತ್ವದ ಹೆಜ್ಜೆ; ಅಭಿಪ್ರಾಯ ಸಂಗ್ರಹಕ್ಕೆ ಕೇಂದ್ರ ಕ್ರಮ

ಸದ್ಯ ಆಡಳಿತದಲ್ಲಿರುವ ಬಿಜೆಪಿ ಏಕರೂಪ ಕಾನೂನಿಗೆ ಬೆಂಬಲವಾಗಿದೆ. ಕಾಂಗ್ರೆಸ್‌ ಹಾಗೂ ಕೆಲವು ಮುಸ್ಲಿಮ್‌ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ. ಜವಾಹರ್‌ಲಾಲ್‌ ನೆಹರೂ, ಡಾ.ಬಿ.ಆರ್‌.ಅಂಬೇಡ್ಕರ್‌ರಂಥ ಮುತ್ಸದ್ದಿಗಳು ಏಕರೂಪ ಸಂಹಿತೆಯನ್ನು ಬೆಂಬಲಿಸಿದ್ದರು ಎಂಬುದನ್ನು ನಾವು ಗಮನಿಸಬೇಕು. ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಒಂದೇ ನೀತಿ ನಿಯಮ ಇರಬೇಕಾದದ್ದು ಸೂಕ್ತ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಮುಂದಡಿ ಇಡಲಿ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ಜಾರಿಗೆ ಮೊದಲು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ, ತಜ್ಞರ ಸಂವಾದ, ಚರ್ಚೆಗೆ ಅವಕಾಶ ಕಲ್ಪಿಸಬೇಕು. ಸಮ್ಮತಿಯ ವಾತಾವರಣ ನಿರ್ಮಾಣದ ಮೂಲಕ ಇದು ಜಾರಿಯಾಗಬೇಕು. ಯಾಕೆಂದರೆ ಇದರಲ್ಲಿ ಸೂಕ್ಷ್ಮ ಮತೀಯ ವಿಚಾರಗಳೂ ಅಡಕವಾಗಿವೆ. ಆತುರಾತುರವಾಗಿ ಜಾರಿ ಮಾಡಿ ಕೃಷಿ ಕಾಯಿದೆ, ರಾಷ್ಟ್ರೀಯ ಪೌರತ್ವ ಕಾಯಿದೆಯಂತೆ ಗೊಂದಲಕ್ಕೆ ಆಸ್ಪದವಾಗಬಾರದು. ಹಾಗೆಯೇ ರಾಜಕೀಯ ಪಕ್ಷಗಳು ಈ ವಿಚಾರವಾಗಿ ವೋಟ್ ಬ್ಯಾಂಕ್‌ಗಾಗಿ ರಾಜಕೀಯ ಮಾಡದೆ ದೇಶದ ಸಮಗ್ರ ಹಿತಾಸಕ್ತಿಯ ದೃಷ್ಟಿಯಿಂದ ಒಮ್ಮತದ ನಿಲುವು ತೆಗೆದುಕೊಳ್ಳಬೇಕು.

Exit mobile version