Site icon Vistara News

Union Budget 2023: ಇನ್ನು ಗಡಿ ಪ್ರದೇಶಗಳಿಗೆ ಪ್ರವಾಸ ಹೋಗಿ!

hill

ನವ ದೆಹಲಿ: ಕೋವಿಡ್‌ ಸಾಂಕ್ರಾಮಿಕದ ಬಳಿಕ ನವಚೇತನ ಪಡೆದುಕೊಂಡಿರುವ ಪ್ರವಾಸೋದ್ಯಮದ ವಲಯಕ್ಕೆ ಇನ್ನಷ್ಟು ಶಕ್ತಿ ತುಂಬಲು ನಿರ್ಮಲಾ ಸೀತಾರಾಮನ್‌ ಈ ಸಾಲಿನ ಬಜೆಟ್‌ನಲ್ಲಿ ಪ್ರಯತ್ನಿಸಿದ್ದಾರೆ. ಗಡಿ ಗ್ರಾಮ ಪ್ರವಾಸಕ್ಕೆ ಉತ್ತೇಜನ, ಯುನಿಟಿ ಮಾಲ್‌ಗಳ ಸ್ಥಾಪನೆ ಇದರಲ್ಲಿ ಸೇರಿದೆ.

ಗಡಿ ಗ್ರಾಮಗಳಿಗೆ ಪ್ರವಾಸವನ್ನು ಉತ್ತೇಜಿಸಲು ಉಪಕ್ರಮಗಳನ್ನು ಕೈಗೊಳ್ಳುವುದಾಗಿ ನಿರ್ಮಲಾ ತಿಳಿಸಿದ್ದಾರೆ. ಗಡಿ ಗ್ರಾಮಗಳಲ್ಲಿ ಗುಡಿಕೈಗಾರಿಕೆಗಳು ಹಾಗೂ ಸ್ಥಳೀಯ ಕೃಷಿ ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ತೇಜನ ನೀಡುವುದೂ ಇದರಲ್ಲಿ ಸೇರಿದೆ.

ಪ್ರತಿ ರಾಜ್ಯದ ರಾಜಧಾನಿಯಲ್ಲೂ ಒಂದು ಯುನಿಟಿ ಮಾಲ್‌ ನಿರ್ಮಿಸಲಾಗುವುದು. ಅದರಲ್ಲಿ ಆಯಾ ರಾಜ್ಯದ ಜನಪ್ರಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪೂರಕ ವ್ಯವಸ್ಥೆ, ʼಒಂದು ಜಿಲ್ಲೆ ಒಂದು ಉತ್ಪನ್ನʼ ಹಾಗೂ ಜಿಐ (ಭೌಗೋಲಿಕ ಸೂಚಿತ) ಉತ್ಪನ್ನಗಳ ಹಾಗೂ ಕೈಮಗ್ಗದ ಉತ್ಪನ್ನಗಳ ಉತ್ತೇಜನ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ದೇಶದಲ್ಲಿ ಪ್ರವಾಸೋದ್ಯಮದ ಉತ್ತೇಜನಕ್ಕೆ ಭಾರಿ ಸಾಧ್ಯತೆಯಿದೆ. ಇದನ್ನು ಗರಿಷ್ಠ ರೀತಿಯಲ್ಲಿ ಬಳಸಿಕೊಳ್ಳಲು ಯತ್ನಿಸಲಾಗುತ್ತದೆ ಎಂದು ನಿರ್ಮಲಾ ಹೇಳಿದ್ದಾರೆ.

ದೇಶದ 50 ತಾಣಗಳನ್ನು ಗುರುತಿಸಿ ಸ್ಪರ್ಧಾತ್ಮಕ ರೀತಿಯಲ್ಲಿ ಅವುಗಳನ್ನು ಆಂತರಿಕ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಪೂರಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕೆ ಸಾರ್ವಜನಿಕ- ಖಾಸಗಿ ಭಾಗೀದಾರಿಕೆಯನ್ನು ಬಳಸಲಾಗುತ್ತದೆ. ಇದಕ್ಕೆ ಪೂರಕವಾಗಿ 50 ಹೆಚ್ಚುವರಿ ಏರ್‌ಪೋರ್ಟ್‌ಗಳು, ಹೆಲಿಪ್ಯಾಡ್‌ಗಳು, ಜಲ- ವಾಯು ಡ್ರೋನ್‌ ವ್ಯವಸ್ಥೆ, ಲ್ಯಾಂಡಿಂಗ್‌ ವ್ಯವಸ್ಥೆಗಳು ಕಲ್ಪಿಸಲಾಗುತ್ತದೆ.

ಇದನ್ನೂ ಓದಿ: Union Budget 2023 : ಲೀಥಿಯಮ್​ ಬ್ಯಾಟರಿ ತಯಾರಿಗೆ ಬೆಂಬಲ, ಇನ್ನು ಮುಂದೆ ಇವಿ ವಾಹನಗಳು ಅಗ್ಗ

Exit mobile version