Site icon Vistara News

Union Budget 2024: ಮಿತ್ರಪಕ್ಷಗಳ ಸರ್ಕಾರ ಇರುವ ಬಿಹಾರ, ಆಂಧ್ರ ಪ್ರದೇಶಕ್ಕೆ ಬಜೆಟ್​ನಲ್ಲಿ ಭರಪೂರ ಕೊಡುಗೆಗಳು

Union Budget 2024

ಬೆಂಗಳೂರು: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಬಜೆಟ್​​ನಲ್ಲಿ (Union Budget 2024) ಎನ್​​ಡಿಎ ಪಾಲುದಾರರಾದ ಟಿಡಿಪಿಯ ಸರ್ಕಾರ ಇರುವ ಆಂಧ್ರಪ್ರದೇಶ ಹಾಗೂ ಜೆಡಿಯು ಸರ್ಕಾರ ಇರುವ ಬಿಹಾರಕ್ಕೆ ಭರ್ಜರಿ ಕೊಡುಗೆಗಳನ್ನು ಪ್ರಕಟಿಸಿದ್ದಾರೆ. ಬಿಹಾರದಲ್ಲಿ ಹೊಸ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು, ಹೆದ್ದಾರಿಗಳು ಮತ್ತು ಆಂಧ್ರಪ್ರದೇಶಕ್ಕೆ ವಿಶೇಷ ಆರ್ಥಿಕ ಬೆಂಬಲವನ್ನು ಘೋಷಿಸಲಾಗಿದೆ.

ಆಂಧ್ರಪ್ರದೇಶ ಮತ್ತು ಅಲ್ಲಿನ ಕೃಷಿ ಸಮುದಾಯಕ್ಕೆ ನಿರ್ಣಾಯಕ ಎನಿಸಿರುವ ಪೊಲ್ಲಾವರಂ ನೀರಾವರಿ ಯೋಜನೆಗೆ ಧನಸಹಾಯ ಮತ್ತು ಪೂರ್ಣಗೊಳಿಸಲು ಸರ್ಕಾರದ ಪೂರ್ಣ ಬೆಂಬಲವನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಈ ವರ್ಷ, ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಹೆಚ್ಚಿನ ಹಣವನ್ನು ಹಂಚಿಕೆ ಮಾಡಲಾಗುವುದು ಎಂಬುದಾಗಿ ಹೇಳಲಾಗಿದೆ.

“ಆಂಧ್ರಪ್ರದೇಶ ಮರುಸಂಘಟನೆ ಕಾಯ್ದೆಯಲ್ಲಿನ ಬದ್ಧತೆಗಳನ್ನು ಪೂರೈಸಲು ನಮ್ಮ ಸರ್ಕಾರ ಪ್ರಯತ್ನಗಳನ್ನು ಮಾಡಿದೆ. ರಾಜ್ಯದ ಬಂಡವಾಳದ ಅಗತ್ಯವನ್ನು ಗುರುತಿಸಿ, ನಾವು ಬಹುಪಕ್ಷೀಯ ಸಂಸ್ಥೆಗಳ ಮೂಲಕ ವಿಶೇಷ ಆರ್ಥಿಕ ಬೆಂಬಲ ಒದಗಿಸುತ್ತೇವೆ. ಪ್ರಸಕ್ತ ಹಣಕಾಸು ವರ್ಷದಲ್ಲಿ, ಮುಂದಿನ ವರ್ಷಗಳಲ್ಲಿ ಹೆಚ್ಚುವರಿ ಮೊತ್ತಗಳೊಂದಿಗೆ 15,000 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುವುದು” ಎಂದು ಸೀತಾರಾಮನ್ ಬಜೆಟ್​ನಲ್ಲಿ ಓದಿದರು.

ಅಭಿವೃದ್ಧಿ ಬ್ಯಾಂಕುಗಳಿಂದ ಬಾಹ್ಯ ಸಹಾಯಕ್ಕಾಗಿ ಬಿಹಾರ ಸರ್ಕಾರದ ಮನವಿಯನ್ನು ತ್ವರಿತವಾಗಿ ಪರಿಗಣಿಸಲಾಗುವುದು ಎಂಬುದಾಗಿ ನಿರ್ಮಲಾ ಅವರು ಉಲ್ಲೇಖಿಸಿದ್ದಾರೆ. 2024-25ರ ಬಜೆಟ್​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಹಿರಂಗಪಡಿಸಿದಂತೆ ಬಿಹಾರದ ವಿವಿಧ ರಸ್ತೆ ಯೋಜನೆಗಳಿಗೆ ಕೇಂದ್ರ ಸರ್ಕಾರ 26,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.

ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್​​ನಲ್ಲಿ ಕೃಷಿ ಕ್ಷೇತ್ರಕ್ಕ ಭರ್ಜರಿ ಕೊಡುಗೆ; ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ

ಹಲವು ಅಭಿವೃದ್ಧಿ ಸಂಸ್ಥೆಗಳ ಬೆಂಬಲದ ಮೂಲಕ ಬಿಹಾರವು ಧನ ಸಹಾಯ ಪಡೆಯಲಿದೆ. ರಸ್ತೆ ಯೋಜನೆಗಳ ಜೊತೆಗೆ, ಬಿಹಾರದಲ್ಲಿ ವಿಮಾನ ನಿಲ್ದಾಣಗಳು, ವೈದ್ಯಕೀಯ ಕಾಲೇಜುಗಳು ಮತ್ತು ಕ್ರೀಡಾ ಸೌಲಭ್ಯಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ ಎಂದು ಅವರು ಹೇಳಿದರು/

ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಒಟ್ಟಾರೆ ಅಭಿವೃದ್ಧಿಯನ್ನು ಉತ್ತೇಜಿಸಲು ‘ಪೂರ್ವೋದಯ’ ಎಂಬ ಸಮಗ್ರ ಯೋಜನೆಯನ್ನು ಅಭಿವೃದ್ಧಿಪಡಿಸಲಾಗುವುದು. ಹೆಚ್ಚುವರಿಯಾಗಿ, ಪೂರ್ವ ಪ್ರದೇಶದಲ್ಲಿ ಕೈಗಾರಿಕಾ ಕಾರಿಡಾರ್ ರಚಿಸಲು ಸರ್ಕಾರ ಬೆಂಬಲ ನೀಡಲಿದೆ ಎಂದು ಬಜೆಟ್​ನಲ್ಲಿ ನಿರ್ಮಲಾ ಸೀತರಾಮನ್ ಅವರು ಹೇಳಿದರು.

ಸರ್ಕಾರವು ವಾರ್ಷಿಕವಾಗಿ 100,000 ವಿದ್ಯಾರ್ಥಿಗಳಿಗೆ ಇ-ವೋಚರ್​​ಗಳನ್ನು ನೀಡಲಿದೆ. ಸಾಲದ ಮೊತ್ತದ ಮೇಲೆ 3% ಬಡ್ಡಿ ಸಬ್ಸಿಡಿ ನೀಡುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ.

Exit mobile version