ಬೆಂಗಳೂರು: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇ) ವಲಯಕ್ಕೆ ಪ್ರೇರಣೆ ನೀಡುವ ಉದ್ದೇಶದಿಂದ ಉದ್ದೇಶದಿಂದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024 ರ ಬಜೆಟ್ನಲ್ಲಿ (Union Budget 2024) ಹಲವಾರು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. ಮುದ್ರಾ ಯೋಜನೆಯಡಿ ಸಾಲಗಳ ಗರಿಷ್ಠ ಮಿತಿಯನ್ನು 10 ಲಕ್ಷ ರೂ.ಗಳಿಂದ 20 ಲಕ್ಷ ರೂ.ಗಳಿಗೆ ದ್ವಿಗುಣಗೊಳಿಸಲಾಗಿದೆ. ಜತೆಗೆ ಆರ್ಥಿಕ ಒತ್ತಡದ ಅವಧಿಯಲ್ಲಿ ಬ್ಯಾಂಕ್ ಸಾಲವನ್ನು ಮುಂದುವರಿಸಲು ಹೊಸ ವ್ಯವಸ್ಥೆ ಪರಿಚಯಿಸಲಾಗಿದೆ. ಅದೇ ರೀತಿ ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ನ 24 ಹೊಸ ಶಾಖೆಗಳನ್ನು ತೆರೆಯಲಾಗುವುದು ಎಂದು ಘೋಷಿಸಿದ್ದಾರೆ.
ವಾಣಿಜ್ಯ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ನಿಗಮಗಳ ಮೂಲಕ ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಸಾಲ ನೀಡಲು ಅನುಕೂಲವಾಗುವಂತೆ ಮುದ್ರಾ ಯೋಜನೆಯನ್ನು 2015 ರಲ್ಲಿ ಪ್ರಾರಂಭಿಸಲಾಗಿತ್ತು. ಈ ಯೋಜನೆಯು ಎಂಎಸ್ಎಂಇಗಳನ್ನು ಬೆಂಬಲಿಸುವ ಸರ್ಕಾರದ ಪ್ರಯತ್ನಗಳ ಮೊದಲ ಹೆಜ್ಜೆಯಾಗಿತ್ತು. ಕಳೆದ ಹಣಕಾಸು ವರ್ಷದಲ್ಲಿ 5.4 ಲಕ್ಷ ಕೋಟಿ ರೂಪಾಯಿ ಮುದ್ರಾ ಸಾಲ ವಿತರಣೆಯಾಗಿದೆ.
ಸಾಲದ ಮಿತಿಯನ್ನು ಹೆಚ್ಚಿಸುವುದರ ಜೊತೆಗೆ, ಆರ್ಥಿಕ ಒತ್ತಡದ ಅವಧಿಯಲ್ಲಿ ಎಂಎಸ್ಎಂಇಗಳಿಗೆ ಬ್ಯಾಂಕ್ ಸಾಲವನ್ನು ಮುಂದುವರಿಸಲು ಅನುಕೂಲವಾಗುವಂತೆ ಹಣಕಾಸು ಸಚಿವರು ಹೊಸ ಕಾರ್ಯವಿಧಾನ ಘೋಷಿಸಿದರು. ಈ ಕ್ರಮವು ತಾತ್ಕಾಲಿಕ ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿರುವ ಸಣ್ಣ ವ್ಯವಹಾರಗಳಿಗೆ ಸುರಕ್ಷತೆ ಒದಗಿಸಲಿದೆ. ಅಲ್ಲದೆ ಉದ್ಯಮಗಳಿಗೆ ಚೇತರಿಸಲು ಅವಕಾಶ ಮಾಡಿಕೊಡುತ್ತದೆ.
ಟ್ರೇಡ್ ರಿಸೀವಬಲ್ಸ್ ಡಿಸ್ಕೌಂಟಿಂಗ್ ಸಿಸ್ಟಮ್ ಪ್ಲಾಟ್ಫಾರ್ಮ್ನಲ್ಲಿ ಕಡ್ಡಾಯ ಆನ್ಬೋರ್ಡಿಂಗ್ನಲ್ಲಿ ವಹಿವಾಟು ಮಿತಿ 500 ಕೋಟಿ ರೂ.ಗಳಿಂದ 250 ಕೋಟಿ ರೂ.ಗೆ ಇಳಿಸಲಾಗಿದೆ
24 ಹೊಸ ಶಾಖೆಗಳ ಆರಂಭ
ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್ಐಡಿಬಿಐ) ಪ್ರಸಕ್ತ ಹಣಕಾಸು ವರ್ಷದಲ್ಲಿ 24 ಹೊಸ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಈ ವಿಸ್ತರಣೆಯು ದೇಶಾದ್ಯಂತ ಎಂಎಸ್ಎಂಇಗಳಿಗೆ ಹಣಕಾಸು ಸೇವೆಗಳ ಪಡೆಯಲು ನೆರವಾಗಲಿದೆ.
ಇದನ್ನೂ ಓದಿ: Union Budget 2024: ಮಿತ್ರಪಕ್ಷಗಳ ಸರ್ಕಾರ ಇರುವ ಬಿಹಾರ, ಆಂಧ್ರ ಪ್ರದೇಶಕ್ಕೆ ಬಜೆಟ್ನಲ್ಲಿ ಭರಪೂರ ಕೊಡುಗೆಗಳು
ಹಣಕಾಸು ಸಚಿವೆ ಸೀತಾರಾಮನ್ ಬಜೆಟ್ ವೇಳೆ, ಉದ್ಯೋಗ ಸೃಷ್ಟಿ ಮತ್ತು ಆರ್ಥಿಕ ಬೆಳವಣಿಗೆಗೆ ಅತ್ಯಗತ್ಯ, ಎಂಎಸ್ಎಂಇ ವಲಯವನ್ನು ಬೆಳೆಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. “ಈ ಕ್ರಮಗಳು ಎಂಎಸ್ಎಂಇಗಳಿಗೆ ಹೆಚ್ಚು ಆರ್ಥಿಕ ಬೆಂಬಲ ಮತ್ತು ಸಾಲದ ಹರಿವನ್ನು ಒದಗಿಸುತ್ತವೆ. ನಾವೀನ್ಯತೆ ಮತ್ತು ಆರ್ಥಿಕತೆಗೆ ಕೊಡುಗೆ ನೀಡಲು ಅನುವು ಮಾಡಿಕೊಡುತ್ತದೆ” ಎಂದು ಅವರು ಹೇಳಿದರು.
ಮುದ್ರಾ ಯೋಜನೆ ಮತ್ತು ಹೊಸ ಸಾಲ ಕಾರ್ಯವಿಧಾನಗಳ ಹೆಚ್ಚಳವು ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಗಣನೀಯ ಪರಿಹಾರ ಮತ್ತು ಬೆಳವಣಿಗೆಯ ಅವಕಾಶಗಳನ್ನು ಒದಗಿಸುವ ನಿರೀಕ್ಷೆಯಿದೆ/ ಇದು ಭಾರತೀಯ ಆರ್ಥಿಕತೆಯ ಬೆನ್ನೆಲುಬಾಗಿ ಅವರ ಪಾತ್ರವನ್ನು ಬಲಪಡಿಸುತ್ತದೆ.