ಬೆಂಗಳೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಸಂಸತ್ತಿನಲ್ಲಿ ಕೇಂದ್ರ ಬಜೆಟ್ (Union Budget 2024) ಮಂಡಿಸಿದ್ದಾರೆ. ಆದರೆ ಈ ಬಜೆಟ್ನಲ್ಲಿ ದೊಡ್ಡ ಮೊತ್ತವನ್ನು ಸಾಲಗಳ (Interest) ಮೇಲಿನ ಬಡ್ಡಿಗಳ ಪಾವತಿಗೆ ನಿಗದಿ ಮಾಡಲಾಗಿದೆ. ನಂತರದ ಸ್ಥಾನವನ್ನು ಮಿಲಿಟರಿ, ಸಬ್ಸಿಡಿ ಸೇರಿದಂತೆ ಇತರ ಯೋಜನೆಗಳಿಗೆ ವಿನಿಯೋಗಿಸಲಾಗುತ್ತದೆ. ಕೇಂದ್ರವು ತನ್ನ ಬಜೆಟ್ನ ಗಮನಾರ್ಹ ಭಾಗವನ್ನು ತೆರಿಗೆ ಆಡಳಿತ, ಜಿಎಸ್ಟಿ ಪರಿಹಾರ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವರ್ಗಾವಣೆಗೂ ಖರ್ಚು ಮಾಡುತ್ತದೆ ಎಂಬುದನ್ನೂ ಗಮನಿಸಬೇಕಾಗುತ್ತದೆ.
ಒಟ್ಟು ಬಜೆಟ್ನಲ್ಲಿ ಬಡ್ಡಿ ಪಾವತಿಗಾಗಿ 11,62,940 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ವಿನಿಯೋಗಿಸಲಿದೆ. ಇದು ಬಜೆಟ್ನ ಅತಿ ದೊಡ್ಡ ಭಾಗವಾಗಿದೆ. ಇನ್ನು ರಕ್ಷಣಾ ವಲಯಕ್ಕೆ 4,54,773 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಓದಿದ ಬಜೆಟ್ನಲ್ಲಿದೆ. ಇನ್ನು ಸಬ್ಸಿಡಿ ಮೊತ್ತವು ಮೂರನೇ ಸ್ಥಾನವನ್ನು ಸಬ್ಸಿಡಿ ವಿತರಣೆ ಪಡೆದುಕೊಂಡಿದೆ. ಆಹಾರ ವಲಯದ ಸಬ್ಸಿಡಿಗಾಗಿ 2,05,250 ಕೋಟಿ ರೂಪಾಯಿ, ರಸಗೊಬ್ಬರ ಸಬ್ಸಿಡಿಗಅಗಿ 1,64,000 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.
ಬಜೆಟ್ನಲ್ಲಿ ಪೆಟ್ರೋಲಿಯಂಗಾಗಿ 11,925 ಕೋಟಿ ರೂಪಾಯಿಗಳನ್ನು ನೀಡಲಾಗಿದ್ದು ಗ್ರಾಮೀಣಾಭಿವೃದ್ಧಿಗಾಗಿ 2,65,808 ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಸಾರಿಗೆಗೆ 5,44,128 ಕೋಟಿ ರೂಪಾಯಿ ಪ್ರಕಟಿಸಿದ್ದರೆ, ಪಿಂಚಣಿ ಮೊತ್ತಕ್ಕಾಗಿ 2,43,296 ಕೋಟಿ ರೂಪಾಯಿ ಕೊಡಲಾಗಿದೆ.
ಗೃಹ ವ್ಯವಹಾರಕ್ಕಾಗಿ 1,50,983 ಕೋಟಿ ರೂಪಾಯಿ ಕೊಟ್ಟಿದ್ದರೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ 1,51,851 ಕೋಟಿ ರೂಪಾಯಿಗಳನ್ನು ನಿರ್ಮಲಾ ಸೀತರಾಮನ್ ಅವರು ನಿಗದಿ ಮಾಡಿದ್ದಾರೆ. ಶಿಕ್ಷಣಕ್ಕಾಗಿ 1,25,638 ಕೋಟಿ ರೂಪಾಯಿ ಹಾಗೂ ಐಟಿ ಮತ್ತು ಟೆಲಿಕಾಂ ವಲಯಕ್ಕೆ 1,16,342 ಕೋಟಿ ರೂಪಾಯಿ ಬಜೆಟ್ನಲ್ಲಿ ನಿಗದಿಯಾಗಿದೆ.
2024-25ನೇ ಸಾಲಿನ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ.4.9ಕ್ಕೆ ಅಂದಾಜಿಸಲಾಗಿದೆ. ಸಾಲಗಳನ್ನು ಹೊರತುಪಡಿಸಿ ಒಟ್ಟು ಆದಾಯವನ್ನು 32.07 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದ್ದು, ಒಟ್ಟು ವೆಚ್ಚವನ್ನು 48.21 ಲಕ್ಷ ಕೋಟಿ ರೂ.ಗೆ ಅಂದಾಜಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ವಿತ್ತೀಯ ಕೊರತೆ ಕಡಿಮೆ ಮಾಡುವ ಅಂದಾಜು
2025-26ರ ಹಣಕಾಸು ವರ್ಷದ ವೇಳೆಗೆ ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇಕಡಾ 4.5 ಕ್ಕಿಂತ ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ. ವಿತ್ತೀಯ ಕೊರತೆ ಎಂದರೆ ಸರ್ಕಾರವು ಗಳಿಸುವ ಮತ್ತು ಖರ್ಚು ಮಾಡುವ ನಡುವಿನ ಅಂತರವಾಗಿದೆ, ಇದು ಅದು ಎಷ್ಟು ಸಾಲ ಪಡೆಯಬೇಕಾಗಬಹುದು ಎಂಬುದನ್ನು ತೋರಿಸುತ್ತದೆ.
ಇದನ್ನೂ ಓದಿ: Union Budget 2024 : ಕೇಂದ್ರ ಬಜೆಟ್ ನಮ್ಮ ರಾಹುಲ್ ಗಾಂಧಿ ಆಲೋಚನೆಗಳ ನಕಲು; ಕಾಂಗ್ರೆಸ್ ಟೀಕೆ
2021 ರಲ್ಲಿ ನಾನು ಘೋಷಿಸಿದ ಹಣಕಾಸಿನ ಬಲವರ್ಧನೆ ಮಾರ್ಗವು ನಮ್ಮ ಆರ್ಥಿಕತೆಗೆ ಉತ್ತಮವಾಗಿ ಪ್ರತಿಕ್ರಿಯಿಸಿದೆ. ಮುಂದಿನ ವರ್ಷ ಶೇಕಡಾ 4.5 ಕ್ಕಿಂತ ಕಡಿಮೆ ಕೊರತೆಯನ್ನು ತಲುಪುವ ಗುರಿ ಹೊಂದಿದ್ದೇವೆ ಎಂದು ಸೀತಾರಾಮನ್ ಹೇಳಿದರು. 2026-27 ರಿಂದ ಪ್ರತಿ ವರ್ಷ ವಿತ್ತೀಯ ಕೊರತೆಯನ್ನು ಉಳಿಸಿಕೊಳ್ಳುವುದು ನಮ್ಮ ಪ್ರಯತ್ನವಾಗಿದೆ. ಇದರಿಂದ ಕೇಂದ್ರ ಸರ್ಕಾರದ ಸಾಲವು ಕಡಿಮೆಯಾಗಲಿದೆ ಎಂದು ಅವರು ಹೇಳಿದರು.
ಮೂಲಸೌಕರ್ಯ ವೆಚ್ಚ ಗುರಿಯಲ್ಲಿ ಯಾವುದೇ ಬದಲಾವಣೆ ಇಲ್ಲ
ಮಾರ್ಚ್ 2025 ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಮೂಲಸೌಕರ್ಯಕ್ಕಾಗಿ ದಾಖಲೆಯ 11,11,000 ಕೋಟಿ ರೂ.ಗಳನ್ನು ಖರ್ಚು ಮಾಡುವುದಾಗಿ ಕೇಂದ್ರ ಘೋಷಿಸಿದೆ. ಈ ವೆಚ್ಚದ ಯೋಜನೆ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್ನಷ್ಟೇ ಇದೆ. ಇದು ನಮ್ಮ ಜಿಡಿಪಿಯ (ಒಟ್ಟು ದೇಶೀಯ ಉತ್ಪನ್ನ) 3.4% ಆಗಿರುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸುವಾಗ ಹೇಳಿದ್ದಾರೆ.