Site icon Vistara News

HD Kumaraswamy: ಎಚ್‌ಎಂಟಿ ಕಾರ್ಖಾನೆಗೆ ಮರು ಜೀವ: ಎಚ್.ಡಿ. ಕುಮಾರಸ್ವಾಮಿ

HD Kumaraswamy

ಬೆಂಗಳೂರು: ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy), ಬೆಂಗಳೂರಿನಲ್ಲಿ ಶನಿವಾರ ಎಚ್‌ಎಂಟಿ (HMT) (ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್) ಕಂಪನಿಯ ಉನ್ನತ ಅಧಿಕಾರಿಗಳ ಸಭೆ ನಡೆಸಿದರು. ಕಂಪನಿಯ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಕೊಹ್ಲಿ ಸೇರಿದಂತೆ ಉನ್ನತ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಸಚಿವರು, ಕಂಪನಿಯ ಕಾರ್ಯ ಚಟುವಟಿಕೆ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಸಮಗ್ರ ಮಾಹಿತಿ ಪಡೆದುಕೊಂಡರು.

ವಹಿವಾಟು, ನಿವ್ವಳ ಲಾಭ ಇತ್ಯಾದಿಗಳ ಬಗ್ಗೆ ಮಾಹಿತಿ ಪಡೆದುಕೊಂಡ ಸಚಿವರು, ಕಂಪನಿಯ ಆರ್ಥಿಕತೆ, ಉತ್ಪಾದನೆ, ಇನ್ನಿತರೆ ಸ್ಥಿತಿಗತಿಗಳ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿದರು.

ಇದನ್ನೂ ಓದಿ: Job Alert: ಅಂಚೆ ಇಲಾಖೆಯಲ್ಲಿ 50,000ಕ್ಕೂ ಹೆಚ್ಚಿನ ಹುದ್ದೆಗೆ ಅರ್ಜಿ ಆಹ್ವಾನ

ಒಂದು ಕಾಲದಲ್ಲಿ ವೈಭವಯುತವಾಗಿ ಮೆರೆದಿದ್ದ ಕಂಪನಿ ಇವತ್ತು ದುಸ್ಥಿತಿಗೆ ಬಂದಿದೆ. ಕಂಪನಿಯನ್ನು ಮತ್ತಷ್ಟು ಸದೃಢ ಮಾಡಿ. ಅದಕ್ಕೆ ಅಗತ್ಯವಾದ ಉಪ ಕ್ರಮ ಕೈಗೊಳ್ಳಿ. ಅದಕ್ಕೆ ಅಗತ್ಯವಾದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಎಂದು ರಾಜೇಶ್ ಕೊಹ್ಲಿ ಅವರಿಗೆ ಸಚಿವರು ಸೂಚಿಸಿದರು.

ಮೋದಿಯವರ ಆತ್ಮನಿರ್ಭರ ಪರಿಕಲ್ಪನೆಯಂತೆ HMT ಪುನಶ್ಚೇತನ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೈಗಾರಿಕೆ ಅಭಿವೃದ್ಧಿ ಬಗ್ಗೆ ದೊಡ್ಡ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಅವರ ಆತ್ಮನಿರ್ಭರ ಪರಿಕಲ್ಪನೆಯ ಮೂಲಕ ಎಚ್‌ಎಂಟಿ ಕಂಪನಿಯನ್ನು ಪುನರುಜ್ಜೀವನಗೊಳಿಸಬಹುದು. ಪ್ರಧಾನಿಗಳ ಆಲೋಚನೆಯಂತೆ ಚಿಂತಿಸಿ ಕಂಪನಿಯ ಚೇತರಿಕೆಗೆ ಮುಂದಾಗಿ. ಅದಕ್ಕೆ ಅಗತ್ಯವಾದ ನೆರವನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ ಎಂದು ಸಚಿವರು ಹೇಳಿದರು.

ನೀವು ರಕ್ಷಣಾ ಇಲಾಖೆಗೆ, ಬಾಹ್ಯಾಕಾಶ ಯೋಜನೆಗಳಿಗೆ ಪರಿಕರಗಳನ್ನು ತಯಾರಿಸಿ ಕೊಡುತ್ತೀರಿ. ದೇಶದ ಉದ್ದಗಲಕ್ಕೂ ಕಂಪನಿಯ ಉತ್ಪಾದನಾ ಘಟಕಗಳು ಇವೆ. ಹೀಗಾಗಿ ಕಂಪನಿಯ ಕ್ಷಮತೆಯನ್ನು ಹೆಚ್ಚಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಕಂಪನಿಯು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಇದೇ ವೇಳೆ ಕಂಪನಿಯ ಅಧ್ಯಕ್ಷ ರಾಜೇಶ್ ಕೊಹ್ಲಿ ತಿಳಿಸಿದರು. ನಷ್ಟದ ಜತೆಗೆ ಆರ್ಥಿಕ ಬಿಕ್ಕಟ್ಟು, ನ್ಯಾಯಾಲಯಗಳಲ್ಲಿ ಮೊಕದ್ದಮೆ ಇತ್ಯಾದಿ ಸಂಕಷ್ಟಗಳನ್ನು ಎಚ್‌ಎಂಟಿ ಎದುರಿಸುತ್ತಿದೆ. ಇದಕ್ಕೆ ಕೇಂದ್ರದ ನೆರವು ಬೇಕಿದೆ ಎಂದು ಸಚಿವರಿಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು, ಈ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದರು.

ಇದನ್ನೂ ಓದಿ: Karnataka Weather : ವೀಕೆಂಡ್‌ ಪ್ರಿಯರೇ ಎಚ್ಚರ; ಭಾನುವಾರ ಸುರಿಯಲಿದೆ ಮಳೆ ಧಾರಾಕಾರ

ಸಭೆಯಲ್ಲಿ ಕೋಲಾರ ಸಂಸದ ಮಲ್ಲೇಶ್ ಬಾಬು, ಕಂಪನಿಯ ನಿರ್ದೇಶಕಿ ಸಮೀನಾ ಕೊಹ್ಲಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.

Exit mobile version