Site icon Vistara News

ವಿಸ್ತಾರ ಸಂಪಾದಕೀಯ: ಹೆದ್ದಾರಿಗಳು ಸುರಕ್ಷಿತವಾಗಲು ತುರ್ತು ಕ್ರಮಗಳಾಗಲೇಬೇಕು

National Highway

ಹೆದ್ದಾರಿಗಳಲ್ಲಿನ ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮುಂದಾಗಿದ್ದು, ರಸ್ತೆಗಳು ಮತ್ತು ಹೆದ್ದಾರಿಗಳಲ್ಲಿನ ಅಪಾಯದ ತಾಣಗಳನ್ನು (ಬ್ಲ್ಯಾಕ್‌ಸ್ಪಾಟ್‌) ಗುರುತಿಸಲು ಮತ್ತು ಅವುಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಸೂಚನೆ ನೀಡಿದ್ದಾರೆ. ಈ ಗುರಿಯನ್ನು ಸಾಧಿಸಲು NHAI ಪ್ರಾದೇಶಿಕ ಅಧಿಕಾರಿಗಳು (RO) ಮತ್ತು ಯೋಜನಾ ನಿರ್ದೇಶಕರು (PD) ಸ್ವತಃ ಫೀಲ್ಡಿಗಿಳಿಯುವಂತೆ ಅವರು ಆದೇಶಿಸಿದ್ದಾರೆ. ಈ ಅಧಿಕಾರಿಗಳೇ ಸ್ವತಃ ಕ್ಷೇತ್ರಕಾರ್ಯಕ್ಕೆ ಇಳಿದು ಅಪಾಯಕಾರಿ ಬ್ಲ್ಯಾಕ್‌ ಸ್ಪಾಟ್‌ಗಳ ಮೂಲ ಕಾರಣಗಳನ್ನು ಕಂಡುಹಿಡಿಯಬೇಕಿದೆ. ಉತ್ತರದಾಯಿತ್ವ ಹೊಂದಿರುವ ಅಧಿಕಾರಿಗಳನ್ನೇ ಇದಕ್ಕಾಗಿ ಮುಂದೆ ಬಿಟ್ಟಿರುವುದು ಗಮನೀಯವಾಗಿದೆ.

ನಮ್ಮ ಹೆದ್ದಾರಿಗಳು ಪೂರ್ತಿಯಾಗಿ ಅಪಘಾತಮುಕ್ತವಾಗಬೇಕು ಎಂಬುದೊಂದು ಆದರ್ಶ. ಆದರೆ 2025ರ ಅಂತ್ಯದೊಳಗೆ ರಸ್ತೆ ಅಪಘಾತಗಳ ಸಂಖ್ಯೆಯನ್ನು ಶೇಕಡಾ 50ರಷ್ಟು ಕಡಿಮೆ ಮಾಡುವ ಗುರಿಯನ್ನು ಸಚಿವರು ಹೊಂದಿದ್ದಾರೆ. ಅವರು ಕಂಡುಕೊಂಡಂತೆ, ದೋಷಯುಕ್ತ ಡಿಪಿಆರ್ (ವಿವರಗಳ ಯೋಜನಾ ವರದಿ) ಕಾರಣದಿಂದ ಅನೇಕ ಬ್ಕ್ಯಾಕ್‌ಸ್ಪಾಟ್‌ಗಳು ಸೃಷ್ಟಿಯಾಗುತ್ತಿವೆ. ಕಳಪೆ ಯೋಜನಾ ವರದಿಗಳಿಂದಾಗಿ ಕೆಲವು ಟ್ರಾಫಿಕ್ ಅಪಘಾತಗಳು ಸಂಭವಿಸುತ್ತಿವೆ. ಹೆದ್ದಾರಿಗಳ ಸಂಪೂರ್ಣ ಯೋಜನಾ ವರದಿಗಳನ್ನು ರಚಿಸುವಾಗ ನಿಗಮಗಳು ಸಾಕಷ್ಟು ನಿಗಾ ವಹಿಸುವುದು ಅಗತ್ಯವಾಗಿದೆ. NHAI ಪ್ರಕಾರ, 2015-2018ರ ನಡುವೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಮಾರು 4002 ಬ್ಲ್ಯಾಕ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ. 2021-22ರಲ್ಲಿ ಸುಮಾರು 716 ಬ್ಲಾಕ್‌ಸ್ಪಾಟ್‌ಗಳಲ್ಲಿ ಭದ್ರತಾ ಕ್ರಮಗಳನ್ನು ಅಳವಡಿಸಲಾಗಿದೆ. ಸಿಗ್ನಲ್‌ಗಳ ಅಳವಡಿಕೆ, ಜೀಬ್ರಾ ಕ್ರಾಸಿಂಗ್, ರಸ್ತೆ ಗುರುತುಗಳು, ಪಕ್ಕದ ರಸ್ತೆಗಳಿಗೆ ಬ್ರೇಕರ್, ಬಿಳಿ ಪಟ್ಟಿಗಳು, ಸೋಲಾರ್ ಲೈಟ್ ಮತ್ತು ಹೈಮಾಸ್ಟ್ ಲೈಟ್ ಅಳವಡಿಸುವುದು ಇವುಗಳು ಬ್ಲ್ಯಾಕ್‌ ಸ್ಪಾಟ್‌ ನಿವಾರಣೆಯ ಅಲ್ಪಾವಧಿಯ ವಿಧಾನಗಳಾಗಿದ್ದರೆ, ಸರ್ವಿಸ್‌ ರಸ್ತೆಗಳು, ಪ್ರಮುಖ ಜಂಕ್ಷನ್ ರಚನೆ, ಪಾದಚಾರಿ ಅಂಡರ್‌ಪಾಸ್, ವಾಹನ ಅಂಡರ್‌ಪಾಸ್‌, ಫ್ಲೈಓವರ್‌ಗಳು, ಫುಟ್-ಓವರ್ ಸೇತುವೆಗಳು ಮತ್ತಿತರ ನಿರ್ಮಾಣಗಳು ದೀರ್ಘಾವಧಿಯದಾಗಿವೆ. ಸುಧಾರಣೆಗಳ ನಂತರ ಇಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆಯೇ ಎಂದು ನಿರ್ಧರಿಸಲು ಮುಂದಿನ ಮೂರು ವರ್ಷ ನಿಗಾ ವಹಿಸಲಾಗುತ್ತದಂತೆ.

ಇತ್ತೀಚೆಗೆ ಮೈಸೂರು- ಬೆಂಗಳೂರು ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿದೆ ಎಂದು ವರದಿಯಾಗಿತ್ತು. ಐದು ತಿಂಗಳಲ್ಲಿ 150ಕ್ಕೂ ಅಧಿಕ ಅಪಘಾತಗಳಾಗಿದ್ದವು. ಇದರ ಬಳಿಕ ರಾಜ್ಯ ಸರ್ಕಾರ ಕೂಡ ಇಲ್ಲಿ ಪರಿಶೀಲನೆ ಮಾಡಿದೆ; ಅಪಘಾತಗಳನ್ನು ನಿವಾರಿಸಲು ಮೂರು ಲೇನ್‌ಗಳಿಗೆ ಪ್ರತ್ಯೇಕ ವೇಗಮಿತಿಗಳನ್ನು ಅಳವಡಿಸಲಾಗಿದೆ. ದ್ವಿಚಕ್ರ ವಾಹನಗಳನ್ನು ಹೊರಗಿಡಲಾಗಿದೆ. ನಿಗದಿತ ಅಂತರಗಳಲ್ಲಿ ಟ್ರಾಫಿಕ್‌ ಪೊಲೀಸರನ್ನು ನಿಯೋಜಿಸಲಾಗಿದೆ. ಸರ್ವಿಸ್‌ ರಸ್ತೆಗಳು ಭಾಗಶಃ ಪೂರ್ತಿಗೊಂಡಿದ್ದು, ಕೆಲವು ಕಡೆ ಪೂರ್ತಿಗೊಳ್ಳಬೇಕಿದೆ. ಮುಖ್ಯವಾಗಿ ಹೆದ್ದಾರಿಗಳು ವೇಗ ಚಾಲನೆಗಾಗಿಯೇ ಇರುವುದರಿಂದ, ಸುರಕ್ಷತಾ ಕ್ರಮಗಳು ಇರಬೇಕಾದುದೇ ಇಲ್ಲಿ. ಹೆದ್ದಾರಿಗಳ ಪಕ್ಕದ ಊರುಗಳವರಿಗೆ ಸಂಚಾರಕ್ಕೆ ಅಗತ್ಯವಾದ ಸರ್ವಿಸ್‌ ರಸ್ತೆಗಳಿಲ್ಲದೆ ಹೋದರೆ, ಅವುಗಳನ್ನು ಸರಿಯಾಗಿ ನಿರ್ವಹಿಸದೇ ಇದ್ದರೂ ದ್ವಿಚಕ್ರ ಸವಾರರು ಬೇರೆ ದಾರಿಯಿಲ್ಲದೆ ಹೈವೇಗಳತ್ತ ಬಂದುಬಿಡುತ್ತಾರೆ. ಹೆದ್ದಾರಿಗಳ ಹೆಚ್ಚಿನ ಭಾಗ ನಿರ್ಜನ ಪ್ರದೇಶಗಳಲ್ಲಿ ಸಾಗಿಹೋಗುವುದರಿಂದ ನಿಯಮಿತ ಪೊಲೀಸ್‌ ಪ್ಯಾಟ್ರೋಲಿಂಗ್‌ ಕೂಡ ಅಗತ್ಯವಾಗುತ್ತದೆ.

ಇದನ್ನೂ ಓದಿ: Nitin Gadkari: ಹೆದ್ದಾರಿಗಳ ಡೇಂಜರ್‌ ಸ್ಪಾಟ್‌ ನಿವಾರಣೆಗೆ ನಿತಿನ್ ಗಡ್ಕರಿ ಕಠಿಣ ಸೂಚನೆ

ಇಂದು ಬಹುತೇಕ ಎಲ್ಲ ಹೆದ್ದಾರಿಗಳೂ ಸುಂಕಕ್ಕೆ ಒಳಪಟ್ಟಿರುವುದರಿಂದ, ಇಲ್ಲಿ ಸಂಚರಿಸುವವರು ತಮ್ಮ ಜೀವಕ್ಕೆ ಭದ್ರತೆ, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೇಳಿದರೆ ತಪ್ಪಿಲ್ಲ. ಹಾಗೆಂದು ಮಿತಿ ಮೀರಿದ ವೇಗದಲ್ಲಿ ಚಲಾಯಿಸಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವವರೂ ಸಂಯಮದಿಂದ ವರ್ತಿಸಬೇಕಿದೆ. ಇಲ್ಲವಾದರೆ ಎಷ್ಟೇ ಸುರಕ್ಷತಾ ಕ್ರಮ ಕೈಗೊಂಡರೂ ವ್ಯರ್ಥವಾಗಲಿದೆ.,

Exit mobile version