ವಾಷಿಂಗ್ಟನ್: ಇರಾನ್ ಬೆಂಬಲಿತ ಹೌತಿ ಬಂಡುಕೋರರು (iran Militant), ವಾಣಿಜ್ಯ ಹಡಗುಗಳ ಮೇಲೆ ಪದೆ ಪದೇ ದಾಳಿ ನಡೆಸುತ್ತಿರುವುದರಿಂದ ಜಾಗತಿಕ ವ್ಯಾಪಾರಕ್ಕೆ ಅಡ್ಡಿಯುಂಟು ಮಾಡುತ್ತಿದೆ. ಇದರಿಂದ ಸಿಟ್ಟಿಗೆದ್ದಿರುವ ಅಮೆರಿಕ ಉಗ್ರರ ವಿರುದ್ಧ ಸತತವಾಗಿ ದಾಳಿ ಮಾಡುತ್ತಿದೆ. ಅಂತೆಯೇ ಅಮೆರಿಕ ಮತ್ತು ಬ್ರಿಟನ್ ಜಂಟಿಯಾಗಿ ಶನಿವಾರ ಯೆಮೆನ್ ನಲ್ಲಿರುವ ಡಜನ್ ಗಟ್ಟಲೆ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿವೆ.
ಜನವರಿ 28 ರಂದು ಜೋರ್ಡಾನ್‌ನಲ್ಲಿ ಮೂವರು ಯುಎಸ್ ಸೈನಿಕರ ಹತ್ಯೆಗೆ ಪ್ರತಿಕ್ರಿಯೆಯಾಗಿ ಇರಾಕ್ ಮತ್ತು ಸಿರಿಯಾದಲ್ಲಿರುವ ಹೌತಿ ನೆಲೆಗಳ ಮೇಲೆ ಅಮೆರಿಕದ ಶುಕ್ರವಾರ ಏಕಪಕ್ಷೀಯ ದಾಳಿ ನಡೆಸಿತ್ತು. ಅದಾದ ಒಂದು ದಿನದ ಬಳಿಕ ಯೆಮೆನ್ನಲ್ಲಿ ಜಂಟಿ ವಾಯು ದಾಳಿಗಳು ನಡೆದಿವೆ.
ಅಂತಾರಾಷ್ಟ್ರೀಯ ಮತ್ತು ವಾಣಿಜ್ಯ ಹಡಗುಗಳು ಮತ್ತು ಕೆಂಪು ಸಮುದ್ರದಲ್ಲಿ ಸಾಗುವ ನೌಕೆಗಳ ವಿರುದ್ಧ ಹೌತಿಗಳ ನಿರಂತರ ದಾಳಿಗೆ ಪ್ರತಿಕ್ರಿಯೆಯಾಗಿ ಯೆಮೆನ್ ನ 13 ಸ್ಥಳಗಳಲ್ಲಿನ 36 ಹೌತಿ ನೆಲೆಗಳ ಮೇಲೆ ಈ ದಾಳಿಗಳು ನಡೆದಿವೆ ಎಂದು ಕಾರ್ಯಾಚರಣೆಗೆ ಬೆಂಬಲ ನೀಡಿದ ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಇತರ ದೇಶಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿವೆ.
ಜಾಗತಿಕ ವ್ಯಾಪಾರ ಮತ್ತು ಮುಗ್ಧ ನಾವಿಕರ ಜೀವಕ್ಕೆ ಬೆದರಿಕೆ ಹಾಕುತ್ತಿರುವ ಹೌತಿಗಳು ಬಳಿ ಇರುವ ಸಾಮರ್ಥ್ಯಗಳನ್ನು ಅಡ್ಡಿಪಡಿಸುವ ಮತ್ತು ನಾಶ ಮಾಡುವ ಉದ್ದೇಶವನ್ನು ಈ ದಾಳಿ ಹೊಂದಿವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ದಾಳಿಯು “ಹೌತಿ ಉಗ್ರರ ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು, ಕ್ಷಿಪಣಿ ವ್ಯವಸ್ಥೆಗಳು ಮತ್ತು ಲಾಂಚರ್ಗಳ ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ರಾಡಾರ್ಗೆ ಸಂಬಂಧಿಸಿದ ತಾಣಗಳನ್ನು ಗುರಿಯಾಗಿಸಿಕೊಂಡಿದೆ. ಎಂಬುದಾಗಿಯೂ ಹೇಳಿದೆ
ಕೆಂಪು ಸಮುದ್ರದಲ್ಲಿ ಹಡಗುಗಳ ವಿರುದ್ಧ ಉಡಾಯಿಸಲು ಸಿದ್ಧವಾಗಿದ್ದ ಆರು ಹೌತಿ ಹಡಗು ಕ್ಷಿಪಣಿಗಳ ವಿರುದ್ಧ ಯುಎಸ್ ಪಡೆಗಳು ಶನಿವಾರ ಪ್ರತ್ಯೇಕವಾಗಿ ದಾಳಿ ನಡೆಸಿದ್ದವು ಎಂದು ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ತಿಳಿಸಿದೆ.
ಯೋಧರ ಹತ್ಯೆಗೆ ಅಮೆರಿಕ ಪ್ರತೀಕಾರ; ಸಿರಿಯಾ, ಇರಾಕ್‌ನಲ್ಲಿ 85ಕ್ಕೂ ಹೆಚ್ಚು ಕಡೆ ವಾಯುದಾಳಿ
ಇರಾನ್ ಬೆಂಬಲಿತ ಭಯೋತ್ಪಾದಕರ (Iran militia) 85ಕ್ಕೂ ಹೆಚ್ಚು ನೆಲೆಗಳ ಮೇಲೆ ಅಮೆರಿಕ ಶುಕ್ರವಾರ ರಾತ್ರಿ ವಾಯುದಾಳಿ (US Air Strikes) ನಡೆಸಿದೆ. ಜೋರ್ಡಾನ್‌ನಲ್ಲಿ ಮೂವರು ಅಮೆರಿಕನ್ ಸೈನಿಕರನ್ನು ಕೊಂದುಹಾಕಿದ ಭಯೋತ್ಪಾದಕರ (terrorist attacks) ಡ್ರೋನ್ ದಾಳಿಗೆ (drone strike) ಪ್ರತೀಕಾರವಾಗಿ ಈ ದಾಳಿಗಳು ನಡೆದಿವೆ.
ಇರಾಕ್ ಮತ್ತು ಸಿರಿಯಾ ಎರಡೂ ಕಡೆ ಇರಾನ್ ಪಡೆಗಳು ಮತ್ತು ಟೆಹ್ರಾನ್ ಬೆಂಬಲಿತ ಉಗ್ರರ ಗುಂಪುಗಳ ನೆಲೆಗಳ ಮೇಲೆ ಯುಎಸ್ ಮಿಲಿಟರಿ ಪ್ರತೀಕಾರದ ವೈಮಾನಿಕ ದಾಳಿಯನ್ನು ಶುಕ್ರವಾರ ಪ್ರಾರಂಭಿಸಿತು. ಡ್ರೋನ್ ದಾಳಿಯನ್ನು ಇರಾನ್ ಬೆಂಬಲಿತ ಉಗ್ರ ಪಡೆಗಳು ನಡೆಸಿವೆ ಎಂದು ಅಮೆರಿಕದ ದೂಷಿಸಿದ್ದರೂ, ಇರಾನ್ ಭೂಪ್ರದೇಶದ ಮೇಲೆ ಪ್ರತಿದಾಳಿ ಮಾಡಿಲ್ಲ. ಸಂಭಾವ್ಯ ಪೂರ್ಣ ಯುದ್ಧ ಪರಿಸ್ಥಿತಯನ್ನು ತಡೆಗಟ್ಟುವ ದೃಷ್ಟಿಯಿಂದ ಆ ದಾಳಿಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ : Imran Khan: ಇಸ್ಲಾಂ ವಿರುದ್ಧ ಮದುವೆ; ಇಮ್ರಾನ್ ಖಾನ್, ಪತ್ನಿ ಬುಶ್ರಾಗೆ 7 ವರ್ಷ ಜೈಲು!
“ಜೋರ್ಡಾನ್ ದಾಳಿಗೆ ನಮ್ಮ ಪ್ರತಿದಾಳಿ ಇಂದು ಪ್ರಾರಂಭವಾಯಿತು. ದಾಳಿ ನಮ್ಮ ಆಯ್ಕೆಯ ಸಮಯ ಮತ್ತು ಸ್ಥಳಗಳಲ್ಲಿ ಮುಂದುವರಿಯುತ್ತದೆ” ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಮಧ್ಯಪ್ರಾಚ್ಯದಲ್ಲಿ ಅಥವಾ ಪ್ರಪಂಚದ ಬೇರೆಲ್ಲಿಯೂ ಸಂಘರ್ಷವನ್ನು ಅಮೆರಿಕ ಬಯಸುವುದಿಲ್ಲ. ಆದರೆ ನಮಗೆ ಹಾನಿ ಮಾಡಲು ಬಯಸುವ ಎಲ್ಲರಿಗೂ ಇದನ್ನು ತಿಳಿದಿರಲಿ: ನೀವು ಅಮೆರಿಕನ್ನರಿಗೆ ಹಾನಿ ಮಾಡಿದರೆ, ನಾವು ಪ್ರತಿಕ್ರಿಯಿಸುತ್ತೇವೆ” ಎಂದು ಅವರು ಹೇಳಿದರು.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಕ್ಯುಡ್ಸ್ ಫೋರ್ಸ್ ಮತ್ತು ಸಂಯೋಜಿತ ಭಯೋತ್ಪಾದಕ ಗುಂಪುಗಳನ್ನು ಪ್ರಸ್ತುತ ದಾಳಿಗಳು ಗುರಿಯಾಗಿಸಿಕೊಂಡಿವೆ. ಅಮೇರಿಕನ್ ಪಡೆಗಳು 85ಕ್ಕೂ ಹೆಚ್ಚು ಗುರಿಗಳನ್ನು ಘಾತಿಸಿದವು. ಅಮೆರಿಕದಿಂದಲೇ ಹಾರಿಸಲಾದ ದೀರ್ಘ-ಶ್ರೇಣಿಯ ಬಾಂಬರ್ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ.
ವೈಮಾನಿಕ ದಾಳಿಗಳು 125ಕ್ಕೂ ಹೆಚ್ಚು ನಿಖರವಾದ ಯುದ್ಧಸಾಮಗ್ರಿಗಳನ್ನು ಬಳಸಿಕೊಂಡಿವೆ. ಇರಾನಿ ಮಿಲಿಟರಿ ಹಾಗೂ ಉಗ್ರರ ಗುಂಪುಗಳ ಕಮಾಂಡ್ ಮತ್ತು ಕಂಟ್ರೋಲ್, ಗುಪ್ತಚರ ಕೇಂದ್ರಗಳು, ರಾಕೆಟ್, ಕ್ಷಿಪಣಿ ಮತ್ತು ಡ್ರೋನ್ ಶೇಖರಣಾ ಸೌಲಭ್ಯಗಳು ಈ ದಾಳಿಗಳಿಗೆ ಗುರಿಯಾಗಿವೆ. ಅಮೆರಿಕದಿಂದ ಹಾರಿದ B-1 ಬಾಂಬರ್‌ಗಳು ಸುಮಾರು 30 ನಿಮಿಷಗಳ ಕಾಲ ಗುರಿಗಳನ್ನು ಘಾತಿಸಿದವು. ರಕ್ಷಣಾ ಇಲಾಖೆಯು ಇನ್ನೂ ದಾಳಿಗಳಿಂದಾದ ಹಾನಿಯನ್ನು ಅಂದಾಜಿಸುಸುತ್ತಿದೆ. ಏಳು ಪ್ರತ್ಯೇಕ ಕಡೆಗಳಲ್ಲಿ ಡಜನ್‌ಗಟ್ಟಲೆ ಗುರಿಗಳನ್ನು ನಾಶ ಮಾಡಿದೆ.
ಬಾಗ್ದಾದ್‌ನಲ್ಲಿ ಹಿಂದಿನ ಅಮೆರಿಕ ದಾಳಿಯ ನಂತರ ಅಂತಾರಾಷ್ಟ್ರೀಯ ಪಡೆಗಳ ನಿರ್ಗಮನಕ್ಕೆ ಇರಾಕ್ ಕರೆ ನೀಡಿತ್ತು. ಈಗಿನ ಮಿಲಿಟರಿ ಕ್ರಮವನ್ನು, ʼಇದು ತನ್ನ ಸಾರ್ವಭೌಮತ್ವದ ಉಲ್ಲಂಘನೆʼ ಎಂದು ಖಂಡಿಸಿದೆ. ಆದರೆ ದಾಳಿಯ ಕುರಿತು ಇರಾಕ್‌ಗೆ ಈ ಮೊದಲೇ ತಿಳಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.