ಮಕ್ಕಳಿಗೆ ನಿದ್ದೆ ಬರುವ ಔಷಧಿ ನೀಡಿ ಭಿಕ್ಷಾಟನೆಯಲ್ಲಿ ತೊಡಗಿಸುತ್ತಿರುವುದು ಬೆಳಕಿಗೆ ಬಂದಿದೆ. ಸಿಸಿಬಿ ಮಹಿಳಾ ಸಂರಕ್ಷಣಾ ದಳ (CCB police) ಬೆಂಗಳೂರಿನಲ್ಲಿ ಬುಧವಾರ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ, ಭಿಕ್ಷಾಟನೆಯಲ್ಲಿ ತೊಡಗಿಸಲಾಗಿದ್ದ ಸುಮಾರು 50ಕ್ಕೂ ಹೆಚ್ಚು ಮಂದಿಯನ್ನು ರಕ್ಷಣೆ ಮಾಡಿದೆ. ಕಾರ್ಯಾಚರಣೆಯಲ್ಲಿ ಹಲವು ಆಘಾತಕಾರಿ ವಿಚಾರಗಳು ಬಹಿರಂಗವಾಗಿವೆ. ಕೆಲವು ಮಕ್ಕಳನ್ನು ಬಾಡಿಗೆಗೆ ಅಥವಾ ಕಳ್ಳಸಾಗಾಣಿಕೆ ಮೂಲಕ ತಂದಿರಬಹುದು ಎಂದು ತಿಳಿದುಬಂದಿದೆ. ಮಕ್ಕಳಿಗೆ ನಿದ್ದೆ ಔಷಧಿ ನೀಡಿ ಅವರನ್ನು ತೋರಿಸಿ ಭಿಕ್ಷಾಟನೆ ಮಾಡಲಾಗುತ್ತಿತ್ತು. ರಕ್ಷಿಸಲ್ಪಟ್ಟವರನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಾಂತ್ವನ ಕೇಂದ್ರಕ್ಕೆ ಬಿಡಲಾಗಿದೆ. ಮಕ್ಕಳ ಭಿಕ್ಷಾಟನೆ ಹಾಗೂ ಭಿಕ್ಷಾಟನೆಗಾಗಿ ಮಕ್ಕಳನ್ನು ಬಳಸುವುದು ಎರಡೂ ಸಭ್ಯ ನಾಗರಿಕ ಸಮಾಜಕ್ಕೆ ಕಪ್ಪು ಚುಕ್ಕೆ. ಇದನ್ನು ತಡೆಯುವುದು ಸರ್ಕಾರದ ಹಾಗೂ ಪ್ರಜ್ಞಾವಂತ ನಾಗರಿಕರ ಕರ್ತವ್ಯವಾಗಿದೆ.
ಮಕ್ಕಳನ್ನು ಭಿಕ್ಷೆ ಬೇಡಲು ಒತ್ತಾಯ ಮಾಡುವುದು, ಅದಕ್ಕಾಗಿ ಬಳಸುವುದು ಬಾಲಾಪರಾಧ ನ್ಯಾಯ ಕಾಯಿದೆ- 2000ರ ಸೆಕ್ಷನ್ 24 ಹಾಗೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 363A ಪ್ರಕಾರ ಶಿಕ್ಷಾರ್ಹ ಅಪರಾಧ. ಇದಕ್ಕಾಗಿ ಮಕ್ಕಳ ಅಂಗ ಊನ ಮಾಡುವುದು ಇನ್ನಷ್ಟು ಕಠಿಣ ಶಿಕ್ಷೆಯನ್ನು ಬೇಡುವ ಅಪರಾಧ. ಹೀಗೆ ಭಿಕ್ಷಾಟನೆಯಲ್ಲಿ ತೊಡಗಿಕೊಂಡ ಮಕ್ಕಳಿಗೆ ಬಾಲಾಪರಾಧ ಕಾನೂನಿನ ಪ್ರಕಾರ ಶಿಕ್ಷೆಯಿಂದ ರಕ್ಷಣೆಯಿದೆ. ಮತ್ತು ಇವರಿಗೆ ಪುನರ್ವಸತಿಯ ಅಗತ್ಯವಿದೆ ಹಾಗೂ ಸರ್ಕಾರದಿಂದ ಅದನ್ನು ಕಲ್ಪಿಸಲಾಗುತ್ತದೆ. ಇವರಿಗೆ ಅವರ ವಯೋಮಾನಕ್ಕೆ ತಕ್ಕ ಆರೈಕೆ, ಆರೋಗ್ಯ ಸೇವೆ, ಶಿಕ್ಷಣ ದೊರೆಯಬೇಕು. ಆದರೆ ಹೀಗೆ ಮಕ್ಕಳನ್ನು ಭಿಕ್ಷಾಟನೆಗೆ ತೊಡಗಿಸುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸುವುದನ್ನು ತನಿಖಾ ಸಂಸ್ಥೆಗಳು ಖಾತ್ರಿಪಡಿಸಬೇಕು.
ಮಕ್ಕಳ ಮೂಲಕ ಭಿಕ್ಷಾಟನೆ ಎಂಬದೊಂದು ಕಳಂಕ, ಸಾಮಾಜಿಕ ಪಿಡುಗು. ಮಕ್ಕಳನ್ನು ತೋರಿಸಿ ಜನರಲ್ಲಿ ಕನಿಕರ ಮೂಡಿಸಬಹುದು ಎಂಬ ದುರ್ಭಾವನೆ ಇದರ ಹಿಂದೆ ಕೆಲಸ ಮಾಡುತ್ತದೆ. ಇದಕ್ಕಾಗಿ ಮಕ್ಕಳಿಗೆ ನಿದ್ದೆ ಔಷಧ ತಿನ್ನಿಸುವುದು, ಅಮಲು ಪದಾರ್ಥ ತಿನ್ನಿಸುವುದು ನಡೆಯುತ್ತದೆ. ಇದರಿಂದ ಆಗುವ ಹಾನಿ ಊಹಾತೀತ. ಇಂಥ ಮಕ್ಕಳು ತಮಗೆ ದೊರೆಯಬೇಕಾದ ಶಿಕ್ಷಣದಿಂದ ವಂಚಿತರಾಗುತ್ತವೆ; ಸಭ್ಯ ಪ್ರಜೆಯಾಗಿ ಬಾಳುವ ಅವಕಾಶದಿಂದಲೇ ವಂಚಿತವಾಗುತ್ತವೆ. ಅಮಲು ಪದಾರ್ಥ ವ್ಯಸನಿಗಳಾಗುವ ಸಾಧ್ಯತೆ ಹೆಚ್ಚಿದೆ. ಮುಂದೆ ದೊಡ್ಡವರಾದಂತೆ, ಸಮಾಜದ ಮೇಲೆ ಸೇಡು ತೀರಿಸಿಕೊಳ್ಳುವ ವ್ಯಗ್ರತೆ, ಮಾನಸಿಕ ವಿಕಲ್ಪ ಹೆಚ್ಚಬಹುದು; ಅಪರಾಧ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆ ಅಧಿಕ. ಇದೆಲ್ಲವನ್ನೂ ಪರಿಗಣಿಸಿ ಇಂಥ ಮಕ್ಕಳನ್ನು ಪಾರು ಮಾಡಬೇಕಾದುದು ಅಗತ್ಯ. ಹೀಗಾಗಿ ಇಂಥ ಮಕ್ಕಳನ್ನು ಬಳಸಿ ಭಿಕ್ಷಾಟನೆ ಮಾಡುವುದು ಕಂಡರೆ ಮಕ್ಕಳ ಸಹಾಯವಾಣಿಗೆ ಅಥವಾ ಪೊಲೀಸರಿಗೆ ತಿಳಿಸುವ ಕರ್ತವ್ಯವನ್ನು ನಾಗರಿಕರು ನಿಭಾಯಿಸಬೇಕು. ಇಂಥವರಿಗೆ ಭಿಕ್ಷೆ ನೀಡದೆ ನಿರುತ್ಸಾಹಪಡಿಸುವುದೂ ಅಗತ್ಯ.
ಬೆಂಗಳೂರಿನಲ್ಲಿ ಮಕ್ಕಳ ಭಿಕ್ಷಾಟನೆ, ಕಳ್ಳಸಾಗಣೆ ಕುರಿತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಇತ್ತೀಚೆಗೆ ಒಂದು ವರದಿಯನ್ನು ಸಲ್ಲಿಸಿತ್ತು. ಈ ವರದಿಯಲ್ಲಿ ಉಲ್ಲೇಖಿತವಾದ ಅಂಶಗಳಂತೆ, ಮಕ್ಕಳನ್ನು ಕಳ್ಳಸಾಗಣೆ ಸೇರಿದಂತೆ ಹಲವು ಕೃತ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಬೆಂಗಳೂರು ಮಹಾನಗರದ ಎಂಟು ವಲಯಗಳ ವ್ಯಾಪ್ತಿಯಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ, ಭಿಕ್ಷಾಟನೆಯಲ್ಲಿ ತೊಡಗಿರುವ 534 ಮಕ್ಕಳು ಪತ್ತೆಯಾಗಿದ್ದರು. ಕೆಲವು ಕುಟುಂಬದವರೇ ಮಗುವನ್ನು ಸೆರಗಲ್ಲಿ ಹಾಕಿಕೊಂಡು ಭಿಕ್ಷಾಟನೆ ಮಾಡುತ್ತಿದ್ದರೆ, ಇನ್ನು ಹಲವಾರು ಮಕ್ಕಳು ಮಾಫಿಯಾದ ಕೈಯಲ್ಲಿ ಸಿಕ್ಕಿ ಭಿಕ್ಷಾಟನೆಗೆ ಇಳಿದುದೂ ಕಂಡುಬಂದಿತ್ತು. ಈ ದತ್ತಾಂಶ ಸಂಗ್ರಹಿಸಲು ಹೈಕೋರ್ಟೇ ನಿರ್ದೇಶನ ನೀಡಿದ್ದುದಲ್ಲದೆ, ಸಲ್ಲಿಸಿರುವ ವರದಿಗೆ ಸಂಬಂಧಿಸಿ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಲೂ ಸರ್ಕಾರಕ್ಕೆ ಆದೇಶಿಸಿತ್ತು. ಈ ಬಗ್ಗೆ ವರದಿಯಲ್ಲಿ ಹಲವು ಶಿಫಾರಸುಗಳನ್ನೂ ಮಾಡಲಾಗಿದೆ. ಅವುಗಳ ಜಾರಿಗೆ ಸರ್ಕಾರ ಕೂಡಲೇ ಮನ ಮಾಡಬೇಕಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: 7ನೇ ವೇತನ ಆಯೋಗ ಬೇಡಿಕೆ: ಸರ್ಕಾರಿ ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ
ಮಕ್ಕಳ ಕಳ್ಳಸಾಗಣೆ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಕುರಿತು ಗೃಹ ಇಲಾಖೆಯು ಪೊಲೀಸರ ಮೂಲಕ ವಿಸ್ತೃತ ತನಿಖೆ ನಡೆಸಬೇಕು. ಮಕ್ಕಳಿಗೆ ಹಣ ನೀಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಭಿಕ್ಷಾಟನೆಗೆ ದೂಡಲ್ಪಟ್ಟಿರುವ ಅಂಗವಿಕಲ ಮಕ್ಕಳು ಮತ್ತು ಅವರ ಪೋಷಕರಿಗೆ ಸರಿಯಾದ ಕೌನ್ಸೆಲಿಂಗ್ ಮಾಡಬೇಕು. ಮಕ್ಕಳನ್ನು ಯಾವುದೇ ಮಾಫಿಯಾ ಭಿಕ್ಷಾಟನೆಗೆ ದೂಡಿರುವುದು ಕಂಡುಬಂದರೆ ಅವರನ್ನು ತಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪೊಲೀಸರ ನೆರವಿನೊಂದಿಗೆ ರಕ್ಷಿಸಬೇಕು ಹಾಗೂ ಮಕ್ಕಳ ಕಳ್ಳಸಾಗಣೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಕ್ಕಳ ಸಹಾಯವಾಣಿಯನ್ನು ಮತ್ತಷ್ಟು ಬಲಪಡಿಸಬೇಕು ಮುಂತಾದ ಶಿಫಾರಸುಗಳು ಈ ವರದಿಯಲ್ಲಿವೆ.