ಕಾರವಾರ: ಉತ್ತರ ಕನ್ನಡದ ಅಂಕೋಲಾ ಶಿರೂರು ಗುಡ್ಡಕುಸಿತ (Uattara Kannada Landslide, Ankola Landslide) ಸ್ಥಳಕ್ಕೆ ಉಡುಪಿಯ ದ್ವಾರಕಾಮಯಿ ಮಠದ ಸಾಯಿ ಈಶ್ವರ ಗುರೂಜಿ ಭೇಟಿ ನೀಡಿದ್ದು, ಸ್ಥಳದ ಪರಿಶೀಲನೆ ನಡೆಸಿದ ಬಳಿಕ ʼನೀರಿನಡಿಯಲ್ಲಿ ಇನ್ನೂ 9 ದೇಹಗಳಿರಬಹುದುʼ ಎಂದಿದ್ದಾರೆ.
ಈ ನಡುವೆ, ಗುಡ್ಡ ಕುಸಿತ ಜಾಗದಲ್ಲಿ ಕಾರ್ಯಾಚರಣೆ 15ನೇ ದಿನವೂ ಮುಂದುವರಿದಿದೆ. ಲಾರಿ ಮುಳುಗಿದ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಕೇರಳದಿಂದ ಬಾರ್ಜ್ ಮೌಂಟೆಡ್ ಹಿಟಾಚಿ (Barge Mounted Hitachi) ತರಿಸಲು ಚಿಂತಿಸಲಾಗಿದೆ.
ದ್ವಾರಕಾಮಯಿ ಮಠದ ಸಾಯಿ ಈಶ್ವರ ಗುರೂಜಿ ನಿನ್ನೆ ಸ್ಥಳಕ್ಕೆ ಆಗಮಿಸಿ, ತಮ್ಮ ಪೆಂಡುಲಮ್ ಮೂಲಕ ಮತ್ತು ಎಲೆಕ್ಟ್ರಾನಿಕ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಿದರು. ಈ ಗುಡ್ಡಕುಸಿತದಲ್ಲಿ 17 ದೇಹಗಳು ಕಾಣಬರುತ್ತಿವೆ. ಸದ್ಯ 8 ಮೃತದೇಹಗಳು ಪತ್ತೆಯಾಗಿದೆ, ಇನ್ನೂ 9 ದೇಹಗಳಿವೆ ಎಂದು ಸ್ವಾಮೀಜಿ ಹೇಳಿದ್ದಾರೆ. ಕೇರಳದ ಟ್ರಕ್ ಗಂಗಾವಳಿ ನದಿಯ 24 ಅಡಿ ಆಳದಲ್ಲಿದೆ. ಟ್ರಕ್ ಇರೋ ಜಾಗದ ಬಳಿ ಒಂದು ದೇಹ ಇದೆ. ಉಳಿದವರ ದೇಹಗಳು ಗಂಗಾವಳಿ ನದಿಯಲ್ಲಿ ಹೋಗಿದೆ ಎಂದಿದ್ದಾರೆ.
ಕೇರಳದಿಂದ ಬಾರ್ಜ್
ಶಿರೂರು ಗುಡ್ಡ ಕುಸಿದಲ್ಲಿ ನಾಪತ್ತೆಯಾದವರಿಗಾಗಿ ಇಂದೂ ಶೋಧ ಮುಂದುವರಿದಿದ್ದು, ಕಾರ್ಯಾಚರಣೆ 15ನೇ ದಿನಕ್ಕೆ ಕಾಲಿಟ್ಟಿದೆ. ಬೋಟ್‌ಗಳ ಮೂಲಕ ಗಂಗಾವಳಿ ನದಿಯಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಬ್ರಿಡ್ಜ್ ಮೌಂಟೆಡ್ ಡ್ರೆಜ್ಜಿಂಗ್ ಮೂಲಕ ಕಾರ್ಯಾಚರಣೆ ವಿಚಾರದಲ್ಲಿ ತ್ರಿಶೂರ್‌ನ ತಾಂತ್ರಿಕ ತಜ್ಞರಿಂದ ಜಿಲ್ಲಾಡಳಿತ ಲಿಖಿತ ವರದಿ ಕೋರಿದೆ. ವರದಿ ಆಧರಿಸಿ ನೌಕಾಪಡೆ, ಕೋಸ್ಟ್‌ಗಾರ್ಡ್, NDRF, SDRF, ಅಗ್ನಿಶಾಮಕ ದಳ ವತಿಯಿಂದ ಕಾರ್ಯಾಚರಣೆ ನಡೆಸಲು ಚಿಂತಿಸಲಾಗಿದೆ.
ಬಾರ್ಜ್ ಮೌಂಟೆಡ್ ಹಿಟಾಚಿ ತರಿಸಲು ಶಾಸಕ ಸತೀಶ್ ಸೈಲ್ ಚಿಂತಿಸಿದ್ದಾರೆ. ಇದು ನದಿಯಲ್ಲೇ ನಿಂತು ಆಳದಲ್ಲಿನ ಮಣ್ಣು, ಕಲ್ಲು ತೆಗೆಯುತ್ತದೆ. ಕೇರಳದ ಕೃಷಿ ಇಲಾಖೆಯ ಬಳಿ ಬಾರ್ಜ್ ಮೌಂಟೆಡ್ ಬೂಮ್ ಕ್ರಾಲಿಂಗ್ ಎಕ್ಸಕ್ಯಾವೇಟರ್ ಇದ್ದು, ಈ ಬಗ್ಗೆ ಕೇರಳ ಸರ್ಕಾರದೊಂದಿಗೆ ಸೈಲ್ ಮಾತುಕತೆ ನಡೆಸಿದ್ದಾರೆ. ಬಾರ್ಜ್ ಮೌಂಟೆಡ್ ಹಿಟಾಚಿಯ ಆಪರೇಟರ್, ಎಂಜಿನಿಯರ್‌ರಿಂದ ಇಂದು ಸ್ಥಳ ಪರಿಶೀಲನೆ ಸಾಧ್ಯತೆ ಇದೆ.
ನೀರಿನ ಪ್ರವಾಹ ಅಡ್ಡಿ
ಜುಲೈ 16 ರಂದು ಶಿರೂರು ಬಳಿ ನಡೆದ ಗುಡ್ಡಕುಸಿತ ದುರಂತದಲ್ಲಿ 11 ಮಂದಿ ನಾಪತ್ತೆಯಾಗಿದ್ದರು. ಅವರಲ್ಲಿ 8 ಮಂದಿ ಶವವಾಗಿ ಸಿಕ್ಕಿದ್ದರು. ನಾಪತ್ತೆಯಾಗಿದ್ದ ಜಗನ್ನಾಥ ನಾಯ್ಕ, ಲೋಕೇಶ, ಅರ್ಜುನ್ ಸೇರಿ ಮೂವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಹಲವರು ಮಣ್ಣಿನಡಿ ಸಿಲುಕಿದ್ದರು, ಇನ್ನೂ ಕೆಲವರು ಗಂಗಾವಳಿ ನದಿಗೆ ಬಿದ್ದ ಹಿನ್ನೆಲೆಯಲ್ಲಿ ನದಿಯಲ್ಲೂ ಹುಡುಕಾಟ ನಡೆಸಲಾಗುತ್ತಿದೆ. ನೀರಿನ ವೇಗ ಹೆಚ್ಚಿರುವುದು ಹಾಗೂ ನದಿಯಲ್ಲಿರುವ ಮಣ್ಣು, ಕಲ್ಲು ಬಂಡೆ ಹಾಗೂ ಮರದ ದಿಮ್ಮಿಗಳಿಂದಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಅಲ್ಲದೇ ಕಾರ್ಯಾಚರಣೆಯಲ್ಲಿ ಲಾರಿಯನ್ನು ಮೇಲಕ್ಕೆ ಎತ್ತಲೂ ಸಾಧ್ಯವಾಗಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ, ಒಂದು ಕಡೆ ಮಣ್ಣಿನಡಿ ಲಾರಿ ಇದೆ ಎಂದಿದ್ದರು, ಒಂದು ವಾರದಲ್ಲಿ ಕಾರ್ಯಾಚರಣೆ ನಡೆಸಿ ಮಣ್ಣು ತೆಗೆದೆವು. ಈಗ ನೀರಿನಲ್ಲಿ ಇದೆ ಎಂದಾಗ ನದಿಯಲ್ಲಿ ಕಾರ್ಯಾಚರಣೆ ಮಾಡಿದ್ದೇವೆ. ಎಲ್ಲಾ ಪ್ರಯತ್ನ ಮಾಡಿದರೂ ಮೂವರ ಮೃತ ದೇಹ ಸಿಗದಿರುವುದು ಬೇಸರ ತಂದಿದೆ. ದೇಹ ಸಿಗದೇ ಇದ್ದವರಿಗೂ ಅವರ ಅವಲಂಬಿತರ ಬಳಿ ಅಗ್ರಿಮೆಂಟ್ ಮಾಡಿಕೊಂಡು ಪರಿಹಾರ ನೀಡುತ್ತೇವೆ. ಮೃತರ ಮಕ್ಕಳ ಶಿಕ್ಷಣಕ್ಕೆ ಸಮಸ್ಯೆಯಾದರೆ ಅವರ ಜೊತೆ ನಾವು ಇರುತ್ತೇವೆ. ಕಾರ್ಯಾಚರಣೆ ಸ್ಥಗಿತ ಆಗಿಲ್ಲ, ಆದರೆ ಮಾಡಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ ಕಡಿಮೆಯಾದ ನಂತರ ಕಾರ್ಯಾಚರಣೆ ಮಾಡುತ್ತೇವೆ. ಮುಳುಗಿರುವ ಟ್ರಕ್ ಮೇಲಕ್ಕೆ ಎತ್ತುವ ಪ್ರಯತ್ನ ಮಾಡುತ್ತೇವೆ. ಗುಡ್ಡ ಕುಸಿತದ ಬಗ್ಗೆ ಮಾಹಿತಿ ಪಡೆದು ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ