Site icon Vistara News

Uttara Kannada landslide: ಈಶ್ವರ ಮಲ್ಪೆ ತಂಡಕ್ಕೂ ಸಿಗಲಿಲ್ಲ ಲಾರಿ ಸುಳಿವು; ಅರ್ಜುನನೂ ಕಣ್ಮರೆ

Uttara Kannada landslide

ಕಾರವಾರ: ಉತ್ತರ ಕನ್ನಡದ ಅಂಕೋಲಾ ಶಿರೂರು ಗುಡ್ಡಕುಸಿತ (Uttara Kannada landslide, Shiruru Landslide) ಪ್ರಕರಣದಲ್ಲಿ ಜಲಸಮಾಧಿಯಾಗಿರುವ ಲಾರಿ ಹಾಗೂ ಅದರ ಚಾಲಕ ಅರ್ಜುನ ಶೋಧ ಕಾರ್ಯ (Search Operation) ನಿನ್ನೆ ವಿಫಲಗೊಂಡಿದೆ. ಮುಳುಗುತಜ್ಞ ಈಶ್ವರ ಮಲ್ಪೆ ತಂಡಕ್ಕೂ ಇವರ ಪತ್ತೆ ಹಿಡಿಯುವುದು ಸಾಧ್ಯವಾಗಿಲ್ಲ.

ಮುಳುಗುತಜ್ಞರ ಕಾರ್ಯಾಚರಣೆ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ್ ನಿನ್ನೆ ಸಂಜೆ ಮಾಹಿತಿ ನೀಡಿದ್ದಾರೆ. ನೌಕಾಪಡೆ, ಸೇನೆ ಹಾಗೂ ದೆಹಲಿ ತಂಡ ನೀಡಿದ್ದ 4 ಜಾಗಗಳಲ್ಲಿ 3 ಜಾಗದಲ್ಲಿ ಮಲ್ಪೆಯ ಮುಳುಗುತಜ್ಞ ಈಶ್ವರ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. NDRF, SDRF, ಸ್ಥಳೀಯ ಮೀನುಗಾರರ ಸಹಾಯದಿಂದ ಕಾರ್ಯಾಚರಣೆ ನಡೆದಿದೆ. ಇನ್ನೊಂದು ಜಾಗದ ಪರಿಶೀಲನೆ ಬಾಕಿ ಇದೆ. ಸಂಜೆಯಾದ ಹಿನ್ನಲೆ‌ ನಾಳೆ ಉಳಿದ ಒಂದು ಪ್ರದೇಶದ ಪರಿಶೀಲನೆ ನಡೆಯಲಿದೆ ಎಂದಿದ್ದಾರೆ.

ಮೂರು ಜಾಗಗಳಲ್ಲಿ ಪರಿಶೀಲಿಸಿದಾಗ ಕಲ್ಲು, ಮಣ್ಣು, ಮರದ ತುಂಡು ಹೆಚ್ಚಾಗಿ ಪತ್ತೆಯಾಗಿದೆ. ಇವುಗಳನ್ನ ತೆರವುಗೊಳಿಸಿ ಆಳದಲ್ಲಿ ಪರಿಶೀಲನೆ ನಡೆಸಬೇಕಿದೆ. ನೀರಿನ ಹರಿವು 10 ನಾಟ್ಸ್‌ಗಿಂತ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ನಾಳೆ ಒಮ್ಮೆ ಕೊನೆಯ ಪ್ರಯತ್ನವನ್ನ ಮಾಡುತ್ತೇವೆ. ಇದುವರೆಗೆ ಪರಿಶೀಲಿಸಿದ ಜಾಗದಲ್ಲಿ ಯಾವುದೇ ಮೆಟಲ್ ಡಿಟೆಕ್ಟ್ ಆಗಿಲ್ಲ. ನಾಳೆ ಪ್ರಮುಖ ಒಂದು ಸ್ಥಳದ ಪರಿಶೀಲನೆ ಇದೆ. ಇದರೊಂದಿಗೆ ನೌಕಾಪಡೆ, ಸೇನೆಯವರು ಸೋನಾರ್ ಡಿಟೆಕ್ಷನ್ ಕೂಡಾ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಕಲ್ಲು, ಮಣ್ಣು ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಲಾರಿ ಇದೆ ಎನ್ನಲಾದ ಸ್ಥಳದಲ್ಲಿ ಬೃಹತ್ ಗಾತ್ರದ ಬಂಡೆಗಲ್ಲು ಕಂಡುಬಂದಿದೆ. ಬಂಡೆಗಲ್ಲಿನ ಕೆಳಗೆ ಲಾರಿ ಇರುವ ಸಾಧ್ಯತೆ ಇದೆ. ಈ ಕುರಿತು ಮತ್ತೊಮ್ಮೆ ಸಭೆ ನಡೆಸಿ ನಾಳೆ ಕಾರ್ಯಾಚರಣೆ ಮುಂದುವರೆಸುತ್ತೇವೆ. ನಾವು ಇದುವರೆಗೂ ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎಂದೇ ಶೋಧ ನಡೆಸುತ್ತಿದ್ದೇವೆ. ಯಾರೂ ಸಹ ಮೃತಪಟ್ಟಿದ್ದಾರೆ ಎಂದು ನಾವು ಪರಿಗಣನೆ ಮಾಡಿಲ್ಲ. ಸಾಧ್ಯವಾದ ಎಲ್ಲ ಕಡೆ ಕಣ್ಮರೆಯಾಗಿರುವವರಿಗೆ ಶೋಧ ನಡೆಸಲಾಗುತ್ತಿದೆ. ಸಾರ್ವಜನಿಕರು ಸಹ ಯಾವುದೇ ಮಾಹಿತಿ ಸಿಕ್ಕಲ್ಲಿ ಜಿಲ್ಲಾಡಳಿತಕ್ಕೆ ತಿಳಿಸಿ ಎಂದು ಶಿರೂರಿನಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ಹೇಳಿಕೆ ನೀಡಿದ್ದಾರೆ.

ಈಶ್ವರ ಮಲ್ಪೆ ತಂಡದ ಸದಸ್ಯನಿಗೆ ಗಾಯ

ಕಾರ್ಯಾಚರಣೆಗೆ ಆಗಮಿಸಿದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡದ ಓರ್ವ ಸದಸ್ಯನಿಗೆ ಗಾಯವಾಗಿದೆ. ಈಶ್ವರ ಮಲ್ಪೆ ತಂಡದ ದೀಪು ಎನ್ನುವವರು ಸ್ಥಳದಲ್ಲಿ ಡೈವಿಂಗ್ ಕಾರ್ಯಾಚರಣೆ ಮಾಡುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಗಾಯಾಳುವನ್ನು ಆಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದೆ.

ಈಶ್ವರ ಮಲ್ಪೆ ಯಾರು?

ಮೂಲತಃ ಈಶ್ವರ್ ಮಲ್ಪೆ ಆಂಬ್ಯುಲೆನ್ಸ್ ಡ್ರೈವರ್ ಆಗಿದ್ದು, ಸಾಕಷ್ಟು ಜನರ ಪ್ರಾಣ ಉಳಿಸಿದ್ದಾರೆ. ನದಿಯ ಆಳಕ್ಕೆ ಇಳಿದು ನಾಪತ್ತೆಯಾದ ಮೃತದೇಹಗಳನ್ನು ಪತ್ತೆ ಹಚ್ಚುವ ಸಾಹಸಿ ಇವರು. ಅದೆಷ್ಟೇ ಆಳವಿರಲಿ, ಅಪಾಯಕಾರಿ ಸ್ಥಳವಿರಲಿ ಅಲ್ಲಿಗೆ ಇಳಿದು ಮೃತದೇಹಗಳನ್ನು ತೆಗೆದಿದ್ದಾರೆ. ಎಂಥದ್ದೇ ಪರಿಸ್ಥಿತಿ ಇದ್ದರೂ ಕರೆ ಬಂದ ತಕ್ಷಣ ಓಡಿ ಬರುತ್ತಾರೆ. ಕಳೆದ ವರ್ಷ ಜುಲೈ 23ರಂದು ಅರಿಶಿನ ಗುಂಡಿ ಜಲಪಾತದಲ್ಲಿ ಭದ್ರಾವತಿ ಮೂಲದ ಶರತ್ ಎಂಬಾತ ಕಾಲು ಜಾರಿ ನೀರಿಗೆ ಬಿದ್ದು ಸೌಪರ್ಣಿಕಾ ನದಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿದ್ದ. ಮರದ ಬೇರಿಗೆ ಸಿಲುಕಿ ದೇಹ ಅಲ್ಲಿಯೇ ಇತ್ತು. ಆರು ದಿನಗಳ ಬಳಿಕ ಆ ಮೃತದೇಹವನ್ನು ಈಶ್ವರ್ ಮಲ್ಪೆ ಹೊರಕ್ಕೆ ತೆಗೆದಿದ್ದರು.

ಇದನ್ನೂ ಓದಿ: Uttara Kannada Landslide: ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಸಿಎಂ ಸಿದ್ದರಾಮಯ್ಯಗೆ ಪಿಣರಾಯಿ ಮೊರೆ

Exit mobile version