ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆ. ಈ ಬಗ್ಗೆ ಜಿಲ್ಲೆಯ ಜನ ನಿರಂತರವಾಗಿ ದನಿ ಎತ್ತುತ್ತಿದ್ದಾರೆ, ಪ್ರತಿಭಟನೆ-ಅಭಿಯಾನ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಸ್ಪಷ್ಟ ಭರವಸೆ ನೀಡಿತ್ತು. ಜಿಲ್ಲೆಯ ಎಲ್ಲ ಪ್ರದೇಶಗಳಿಗೂ ಕೇಂದ್ರವಾಗುವಂತೆ ಕುಮಟಾದಲ್ಲಿ ಅತ್ಯಾಧುನಿಕ ಆಸ್ಪತ್ರೆ ಸ್ಥಾಪಿಸುವ ನಿಟ್ಟಿನಲ್ಲಿ ಆಗಿನ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಕುಮಟಾದಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಬಜೆಟ್ ಭಾಷಣದಲ್ಲಿ ಪ್ರಕಟಿಸಿದ್ದರು. ಆದರೆ ಈಗ ಸಿದ್ದರಾಮಯ್ಯ ಸರ್ಕಾರ ಹೊಸ ಆಸ್ಪತ್ರೆ ಸ್ಥಾಪನೆಯ ಪ್ರಸ್ತಾಪ ಕೈಬಿಟ್ಟಿದೆ. ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆಯ ಘೋಷಣೆ ಆಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನರಿಗೆ ಭಾರಿ ನಿರಾಸೆಯಾಗಿದೆ. ಈಗ ಕಾರವಾರದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ಹಾಸಿಗೆಗಳನ್ನು ಹೆಚ್ಚಿಸುವ ಘೋಷಣೆ ಮಾತ್ರ ಮಾಡಲಾಗಿದೆ.
ಉತ್ತರ ಕನ್ನಡ ಜಿಲ್ಲೆ ಕರಾವಳಿ, ಬಯಲುಸೀಮೆ, ಗುಡ್ಡಗಾಡು ಪ್ರದೇಶಗಳನ್ನು ಒಳಗೊಂಡಂತೆ ವಿಶಿಷ್ಟ ಭೌಗೋಳಿಕ ಚಹರೆಯನ್ನು ಹೊಂದಿದೆ. ಜಿಲ್ಲೆಯ ಜನ ಅಪಘಾತ, ತುರ್ತು ಚಿಕಿತ್ಸೆ ಇತ್ಯಾದಿ ಸಂದರ್ಭಗಳಲ್ಲಿ ಸುಮಾರು 350 ಕಿ.ಮೀ ದೂರದ ಮಂಗಳೂರು ಅಥವಾ ಉಡುಪಿಯ ಸುಸಜ್ಜಿತ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾಗಿದೆ. ಇದರಿಂದಾಗಿ ಸಾವು ನೋವಿನ ಪ್ರಮಾಣ ಹೆಚ್ಚುತ್ತಿದೆ. ಮುಖ್ಯವಾಗಿ ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನವೂ ಹತ್ತಾರು ಅಪಘಾತಗಳು ಸಂಭವಿಸುತ್ತವೆ. ರಸ್ತೆ ಅಗಲೀಕರಣದ ಅವೈಜ್ಞಾನಿಕ ಕಾಮಗಾರಿಯಿಂದಲೂ ಅಪಘಾತಗಳ ಪ್ರಮಾಣ ಹೆಚ್ಚುತ್ತಿದೆ. ವಾಹನ ಸವಾರರು ತಮ್ಮದಲ್ಲದ ತಪ್ಪಿಗೆ ನಿತ್ಯವೂ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ. ಆದರೆ ಸ್ಥಳೀಯವಾಗಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೃದಯಾಘಾತ, ಹಾವು ಕಡಿತದಂಥ ತುರ್ತು ಸಂದರ್ಭದಲ್ಲೂ ಜಿಲ್ಲೆಯ ಜನ ನೆರೆಯ ಜಿಲ್ಲೆಯ ಬಹುದೂರದ ಆಸ್ಪತ್ರೆಗೆ ಹೋಗುವಷ್ಟರಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಆದಷ್ಟು ಬೇಗ ಸಕಲ ಚಿಕಿತ್ಸೆ ಸೌಲಭ್ಯ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿ ಎನ್ನುವುದು ಉತ್ತರ ಕನ್ನಡ ಜಿಲ್ಲೆಯ ಜನರ ಒಕ್ಕೊರಲ ಆಗ್ರಹವಾಗಿದೆ.
ಮಲ್ಟಿ ಸ್ಪೆಷಾಲಿಟಿ ಅಥವಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿ ಉತ್ತರ ಕನ್ನಡದ ಜನ ನಾನಾ ಸಂಘಟನೆಗಳ ಆಶ್ರಯದಲ್ಲಿ ಈಗಾಗಲೇ ತೀವ್ರ ಹೋರಾಟವನ್ನೂ ನಡೆಸಿದ್ದಾರೆ. 2019ರಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಪ್ರಧಾನಿ, ಮುಖ್ಯಮಂತ್ರಿಗಳ ಮಟ್ಟದಲ್ಲಿ ಗಮನ ಸೆಳೆಯಲು ಅಭಿಯಾನಗಳನ್ನು ನಡೆಸಿದ್ದರು. ಎಲ್ಲ ಪಕ್ಷಗಳ ಮುಖಂಡರೂ ಈ ನ್ಯಾಯಯುತ ಬೇಡಿಕೆಯನ್ನು ಬೆಂಬಲಿಸಿದ್ದರು. ಟ್ವಿಟರ್, ಫೇಸ್‌ಬುಕ್ ಇತ್ಯಾದಿ ಜಾಲತಾಣಗಳಲ್ಲಿ ಅಭಿಯಾನದ ಜತೆಗೆ ಬೆಂಗಳೂರಿನಲ್ಲಿಯೂ 2022 ಜುಲೈ 30ರಂದು ಬೃಹತ್ ಪ್ರತಿಭಟನೆ ನಡೆದಿತ್ತು. ಅಕ್ಟೋಬರ್ ವೇಳೆಗೆ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿತ್ತು.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಚಂದ್ರಯಾನ 3, ಮನುಕುಲದ ಇನ್ನೊಂದು ಮಹಾ ಜಿಗಿತ
ಕಾರವಾರದಲ್ಲಿ ಈಗಿರುವ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿನ ಹಾಸಿಗೆ ಹೆಚ್ಚಿಸಿದ ಮಾತ್ರಕ್ಕೆ ಜಿಲ್ಲೆಯ ಜನರ ಸಮಸ್ಯೆ ಪರಿಹಾರ ಆಗುವುದಿಲ್ಲ, ಬೇಡಿಕೆ ಈಡೇರಿದಂತೆ ಆಗುವುದಿಲ್ಲ. ಏಕೆಂದರೆ ಕಾರವಾರ ಜಿಲ್ಲೆಯ ಕೇಂದ್ರ ಭಾಗದಲ್ಲಿಲ್ಲ. ಜಿಲ್ಲೆಯ ಭೌಗೋಳಿಕ ವ್ಯಾಪ್ತಿಯನ್ನು ಗಮನಿಸಿದಾಗ ಕುಮಟಾವನ್ನು ಹೃದಯಭಾಗವೆಂದು ಪರಿಗಣಿಸಬಹುದಾಗಿದೆ. ಹಾಗಾಗಿ ಕುಮಟಾ ಸುತ್ತಮುತ್ತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಿದರೆ ಜಿಲ್ಲೆಯ ಎಲ್ಲ ಭಾಗದ ಜನರಿಗೆ ಹೆಚ್ಚು ಉಪಯುಕ್ತವಾಗುತ್ತದೆ. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ಆದಷ್ಟು ಬೇಗ ಉತ್ತರ ಕನ್ನಡ ಜಿಲ್ಲೆಯ ಜನರ ಈ ಬೇಡಿಕೆಯನ್ನು ಈಡೇರಿಸಬೇಕು. ಸಕಾಲಿಕ ತುರ್ತು ಚಿಕಿತ್ಸೆ ಸಿಗದೆ ಆಗುತ್ತಿರುವ ಜಿಲ್ಲೆಯ ಜನರ ಪ್ರಾಣ ಹಾನಿಯನ್ನು ತಪ್ಪಿಸಬೇಕು.