Site icon Vistara News

Uttara Kannada Rain: ಭಾರಿ ಮಳೆಗೆ ತತ್ತರಿಸಿದ ಉತ್ತರ ಕನ್ನಡ; ಭೂಕುಸಿತಕ್ಕೆ 11 ಸಾವು, ರಸ್ತೆಗಳೇ ಮಾಯ, ತೋಟ ಗದ್ದೆ ಮುಳುಗಡೆ

ಕಾರವಾರ: ಸದ್ಯದ ವರ್ಷಗಳಲ್ಲಿ ಕಂಡು ಕೇಳರಿಯದ ಮಳೆ (Rain news) ಹಾಗೂ ಭೂಕುಸಿತಕ್ಕೆ ಉತ್ತರ ಕನ್ನಡ (Uttara Kannada Rain) ಜಿಲ್ಲೆ ತತ್ತರಿಸಿದೆ. ಹಲವು ಕಡೆ ಭೂಕುಸಿತ (Land slide) ಮುಖ್ಯವಾಗಿ ಹಾನಿಯೆಸಗಿದೆ. ಇಂದು ಒಂದೇ ಕಡೆ ಭೂಕುಸಿತ ಉಂಟಾಗಿ 10 ಮಂದಿ ಸತ್ತಿದ್ದಾರೆ. ಇದುವರೆಗೂ ನಾನಾ ಕಡೆ ಭೂಕುಸಿತದಿಂದ ಮೃತಪಟ್ಟವರ ಸಂಖ್ಯೆ 11 ದಾಟಿದೆ. ಜಿಲ್ಲೆಯ ನಾನಾ ಕಡೆ ನದಿಗಳು ಉಕ್ಕೇರಿ ಹರಿದು ಆಸ್ತಿಪಾಸ್ತಿ ಹಾನಿಯಾಗಿದೆ; ರಸ್ತೆಗಳು ಮುಳುಗಿವೆ. ಜನ ತತ್ತರಿಸಿಹೋಗಿದ್ದು, ಪರಿಹಾರ ಶಿಬಿರಗಳಲ್ಲೂ ನೂರಾರು ಮಂದಿ ಆಶ್ರಯ ಪಡೆದಿದ್ದಾರೆ.

ಭಾರಿ ಮಳೆಗೆ (Karnataka Rain Effect) ರಾಷ್ಟ್ರೀಯ ಹೆದ್ದಾರಿ 66ರ ಶಿರೂರು ಬಳಿ ಭಾರೀ ಗುಡ್ಡಕುಸಿತ (Karnataka Rain) ಉಂಟಾಗಿದೆ. ಗುಡ್ಡದ ಮಣ್ಣಿನಡಿ 10ಕ್ಕೂ ಅಧಿಕ ಮಂದಿ ಸಿಲುಕಿರುವ ಶಂಕೆ ಇದ್ದು, ಒಂದೇ ಕುಟುಂಬದ ಐವರು ಸೇರಿ ಹತ್ತಕ್ಕೂ ಅಧಿಕ ಮಂದಿ ಕಣ್ಮರೆಯಾಗಿದ್ದಾರೆ. ಗುಡ್ಡ ಕುಸಿದ ರಭಸಕ್ಕೆ ನದಿಗೆ 2 ಗ್ಯಾಸ್ ಟ್ಯಾಂಕರ್‌ಗಳು ಕೊಚ್ಚಿ ಹೋಗಿದೆ. ಗುಡ್ಡದ ಕೆಳಗಿದ್ದ ಲಾರಿ, ಮತ್ತೊಂದು ಟ್ಯಾಂಕರ್‌ ಹಾಗೂ ಚಾಲಕರು ಪಾರಾಗಿದ್ದಾರೆ. ತುರ್ತು ಕಾರ್ಯಾಚರಣೆಗೆ ಪೊಲೀಸರು ಧಾವಿಸಿದ್ದಾರೆ. ಸ್ಥಳದ ಪರಿಸ್ಥಿತಿ ಭೀಕರವಾಗಿದ್ದು, ಹೆದ್ದಾರಿ ಸಂಪೂರ್ಣ ಕತ್ತರಿಸಿಹೋಗಿ ಈ ರಸ್ತೆಯಲ್ಲಿ ವಾಹನ ಸಂಚಾರ ನಿಂತೇ ಹೋಗಿದೆ, ಇದನ್ನು ಸರಿಪಡಿಸಲು ವಾರವಾದರೂ ಬೇಕು ಎಂದು ಕಾರ್ಯಾಚರಣೆ ನಿರತರ ಅಭಿಪ್ರಾಯ. ಎಡೆಬಿಡದೆ ಸುರಿಯುತ್ತಿರುವ ಮಳೆ, ಕಾರ್ಯಾಚರಣೆಯನ್ನು ಇನ್ನಷ್ಟು ಕಷ್ಟಗೊಳಿಸಿದೆ.

ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಭಾರಿ ಮಳೆಗೆ ಮನೆ ಮೇಲೆ ಗುಡ್ಡ ಬಿದ್ದ ಪರಿಣಾಮ ಗೋಡೆ ಕುಸಿದಿದೆ. ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾರವಾರ-ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾದ ಪರಿಣಾಮ ಚಿಕಿತ್ಸೆಗೆ ಹೊರಟಿದ್ದ ಪಾಶ್ವವಾಯು ಪೀಡಿತರೊಬ್ಬರು ರಸ್ತೆಯಲ್ಲೇ ಲಾಕ್ ಆದರು. ಕಾರವಾರ-ಕೈಗಾ ರಸ್ತೆಯ ಮಂದ್ರಾಳಿ ಬಳಿ ರಸ್ತೆಗೆ ಗುಡ್ಡ ಕುಸಿದಿದ್ದು, ಮನೆಗಳಿಗೂ ಹಾನಿಯಾಗಿತ್ತು. ಸದ್ಯ 2 ದಿನ ಕಾರವಾರ-ಕೈಗಾ ರಸ್ತೆ ಸಂಚಾರ ಬಂದ್ ಆಗಿದೆ. ಅನೇಕ ಕಡೆ ಭೂಕುಸಿತದ ಪರಿಣಾಮ ರಸ್ತೆಗಳು ಅಂಚು ಕುಸಿದು ವಾಹನ ಓಡಾಟಕ್ಕೆ ದುಸ್ತರವಾಗಿವೆ. ಹಲವು ಕಡೆ ಸೇತುವೆಗಳ ಮೇಲೆ ನೀರು ಹರಿಯುತ್ತಿದೆ. ಇನ್ನೂ ಹಲವು ಕಡೆ ತೋಟಗಳು ಮುಳುಗಡೆಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಶಾಲೆ ಕಾಲೇಜುಗಳಿಗೆ ರಜೆ

ಕಳೆದೆರಡು ದಿನಗಳಿಂದ ಜಿಲ್ಲೆಯ 10 ತಾಲೂಕುಗಳ ಎಲ್ಲ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ರಜೆ ಘೋಷಿಸಿದ್ದಾರೆ. ಮಳೆಯ ಭೀಕರತೆ ಇನ್ನೂ ಮುಂದುವರಿಯುತ್ತಿದ್ದು, ಗುಡ್ಡಗಾಡು ಪ್ರದೇಶಗಳ ಜನತೆ ಮಕ್ಕಳನ್ನು ಶಾಲೆಗೆ ಕಳಿಸಲು ತಾವೇ ಅಂಜುತ್ತಿದ್ದಾರೆ. ಹೆಚ್ಚಿನ ಕಡೆ ಹೊಳೆ ಹಳ್ಳಗಳನ್ನು ದಾಟಿಕೊಂಡು ಮಕ್ಕಳು ಬರಬೇಕಿದ್ದು, ಸೇತುವೆಗಳು ಇಲ್ಲದ ಕಡೆಯಲ್ಲಿ ರಿಸ್ಕ್‌ ತೆಗೆದುಕೊಳ್ಳಲು ಮಕ್ಕಳ ಪೋಷಕರು ಮುಂದಾಗುತ್ತಿಲ್ಲ.

ರೆಡ್‌ ಅಲರ್ಟ್‌

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಜುಲೈ 18ರ ವರೆಗೆ ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಅವಧಿಯಲ್ಲಿ ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಸಮಸ್ಯೆಯಾಗದಂತೆ ಜಿಲ್ಲೆಯ ಸಾರ್ವಜನಿಕರ ರಕ್ಷಣೆಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ 24×7 ಕಾರ್ಯ ನಿರ್ವಹಿಸುವ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಳೆಯಿಂದಾಗಿ 2 ಮನೆಗಳು ಸಂಪೂರ್ಣ ನಾಶ, 2 ಮನೆಗಳಿಗೆ ತೀವ್ರ ಹಾನಿ ಮತ್ತು 18 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಕಾರವಾರದಲ್ಲಿ 2, ಕುಮಟಾದಲ್ಲಿ 1 ಹಾಗೂ ಹೊನ್ನಾವರದಲ್ಲಿ 2 ಸೇರಿದಂತೆ ಒಟ್ಟು 5 ಕಾಳಜಿ ಕೇಂದ್ರಗಳನ್ನು ತೆರೆದಿದ್ದು ಒಟ್ಟು 93 ಜನರಿಗೆ ಆಶ್ರಯ ಒದಗಿಸಿ ಅಗತ್ಯ ಉಟೋಪಚಾರ ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಗತ್ಯ ಮಾಹಿತಿ

ವಿಪತ್ತು ನಿರ್ವಹಣೆ, ಪೊಲೀಸ್, ಅರಣ್ಯ, ಅಗ್ನಿಶಾಮಕ, ಹೆಸ್ಕಾಂ ಇಲಾಖೆಯಿಂದ ಒಬ್ಬೊಬ್ಬ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ತುರ್ತು ಸಂದರ್ಭದಲ್ಲಿ ಎಲ್ಲಾ ಇಲಾಖೆಯೊಂದಿಗೆ ಸಂಪರ್ಕ ಸಾಧಿಸಲು ಎಮರ್ಜೆನ್ಸಿ ಆಪರೇಷನ್ ಸೆಂಟರ್ ಮಾಡಲಾಗಿದೆ. ಎಲ್ಲೇ ಸಹಾಯ ಅಗತ್ಯವಿದ್ದರೂ ತುರ್ತು ಸ್ಪಂದನೆಗೆ ಕ್ರಮವಹಿಸಲಾಗುತ್ತದೆ. ಎಲ್ಲಾ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೂ ಕೇಂದ್ರಸ್ಥಾನ ಬಿಡದಂತೆ ಸೂಚನೆ ನೀಡಲಾಗಿದೆ. ಸಾರ್ವಜನಿಕರು ಮಳೆಯಿಂದಾಗಿ ಯಾವುದೇ ಅಪಾಯವಾದಲ್ಲಿ ಕೂಡಲೇ ಉಚಿತ ಸಹಾಯವಾಣಿ ಸಂಖ್ಯೆ 1077 ಗೆ ಅಥವಾ ಮೊ.ಸಂ. ಸಂಖ್ಯೆ. 9483511015 ಕರೆ, ವಾಟ್ಸಾಪ್ ಮೂಲಕ ಮಾಹಿತಿ ನೀಡಿದಲ್ಲಿ ತಕ್ಷಣ ನೆರವಿಗೆ ಧಾವಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಕದ್ರಾ ಜಲಾಶಯದಿಂದ ನೀರು ಬಿಡುಗಡೆ

ಕಾರವಾರದ‌ ಕದ್ರಾ ಜಲಾಶಯದಿಂದ ವಿದ್ಯುತ್ ಉತ್ಪಾದನೆ ಹಾಗೂ ಕ್ರಸ್ಟ್ ಗೇಟ್ ಸೇರಿ 31,000 ಕ್ಯೂಸೆಕ್ಸ್‌ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. ಜಲಾಶಯದ 4 ಗೇಟ್‌ಗಳಿಂದ 10,600 ಕ್ಯೂಸೆಕ್ಸ್ ನೀರು ಬಿಡುಗಡೆಯಾಗಿದ್ದು, 34.50 ಮೀ ಗರಿಷ್ಠ ಸಾಮರ್ಥ್ಯದ ಕದ್ರಾ ಜಲಾಶಯದಲ್ಲಿ 31 ಮೀ ತಲುಪಿದೆ ನೀರಿನ ಸಂಗ್ರಹ. ಧಾರಾಕಾರ ಮಳೆಯಿಂದ ಜಲಾಶಯದ ಒಳಹರಿವು ಹೆಚ್ಚಿದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಕೊಂಕಣ ರೈಲ್ವೇ ಸ್ಥಗಿತ

ಇತ್ತೀಚೆಗಷ್ಟೇ ಗೋವಾದ ಕೊಂಕಣ ರೈಲ್ವೆ ಹಳಿ ಮೇಲೆ ಮಣ್ಣು ಕುಸಿದು ಜುಲೈ 10ರಂದು ಹಲವು ರೈಲುಗಳ ಸಂಚಾರ ವ್ಯತ್ಯಯವಾಗಿತ್ತು. ಇದೀಗ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಸೇರಿದಂತೆ ಕೊಂಕಣದ ಹಲವು ಭಾಗಗಳಲ್ಲಿ ಭಾರಿ ಮಳೆಯಿಂದ ಸಮಸ್ಯೆಗಳು ಎದುರಾಗಿದ್ದು 14 ಗಂಟೆಗಳ ಕಾಲ ಹಲವು ರೈಲುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಕರ್ನಾಟಕ ರಾಜ್ಯದ ರೈಲು ಪ್ರಯಾಣಿಕರಿಗೂ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ: Karnataka Rain : ಕಾರವಾರದಲ್ಲಿ ಮಳೆ ಅವಾಂತರ; ಮನೆ ಮೇಲೆ ಗುಡ್ಡ ಕುಸಿದು ವೃದ್ಧ ಸಾವು

Exit mobile version