Site icon Vistara News

Lok Sabha Election : ಕಾಂಗ್ರೆಸ್​ಗೆ ಆಘಾತ; ಉತ್ತರಾಖಂಡ ಕಾಂಗ್ರೆಸ್​ ಶಾಸಕ ಬಿಜೆಪಿಗೆ ಸೇರ್ಪಡೆ

Rajendra Singh Bhandari

ನವದೆಹಲಿ: ಲೋಕಸಭಾ ಚುನಾವಣೆಗೆ (Lok Sabha Election ) ಮುಂಚಿತವಾಗಿ ಕಾಂಗ್ರೆಸ್​ಗೆ ಹಿನ್ನಡೆಯಾಗಿದ್ದು, ಉತ್ತರಾಖಂಡದ ಶಾಸಕ ರಾಜೇಂದ್ರ ಸಿಂಗ್ ಭಂಡಾರಿ ಭಾನುವಾರ ಬಿಜೆಪಿಗೆ ಸೇರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ಪ್ರಭಾವಿತನಾಗಿ ಬಿಜೆಪಿ ಸೇರಿದ್ದೇನೆ ಎಂದು ಅವರು ಹೇಳಿದ್ದಾರೆ. ಮೂರು ಬಾರಿ ಕಾಂಗ್ರೆಸ್ ಶಾಸಕರಾಗಿದ್ದ ಭಂಡಾರಿ ಈ ಹಿಂದೆ ರಾಜ್ಯದಲ್ಲಿ ಸಚಿವರಾಗಿದ್ದರು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಸೇರಿದಂತೆ ಪಕ್ಷದ ಹಿರಿಯ ನಾಯಕರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಗೌತಮ್ ಉತ್ತರಾಖಂಡದ ಬಿಜೆಪಿ ಉಸ್ತುವಾರಿಯೂ ಆಗಿದ್ದಾರೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಉತ್ತರಾಖಂಡದ ಗರ್ವಾಲ್ ಕ್ಷೇತ್ರದಿಂದ ತಮ್ಮ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲೂನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಿಜೆಪಿಗೆ ಸೇರುವ ಮೊದಲು ಕಾಂಗ್ರೆಸ್​​ಗೆ ರಾಜೀನಾಮೆ ನೀಡಿದ್ದ ಭಂಡಾರಿ, ಉತ್ತರಾಖಂಡ ವಿಧಾನಸಭೆಯ ಬದರೀನಾಥ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2022 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಉತ್ತರಾಖಂಡ ಘಟಕದ ಮುಖ್ಯಸ್ಥ ಮಹೇಂದ್ರ ಭಟ್ ಅವರನ್ನು ಸಣ್ಣ ಅಂತರದಿಂದ ಸೋಲಿಸಿದ್ದರು.

ಇದನ್ನೂ ಓದಿ : Narendra Modi : ತಮ್ಮನ್ನು ನೋಡಲು ವಿದ್ಯುತ್ ಟವರ್​ ಏರಿದ್ದವರನ್ನು ಕೆಳಗಿಳಿಸಿ ಪ್ರಾಣ ಉಳಿಸಿದ ಮೋದಿ; ಇಲ್ಲಿದೆ ವಿಡಿಯೊ

ಗರ್ವಾಲ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 14 ವಿಧಾನಸಭಾ ಕ್ಷೇತ್ರಗಳಲ್ಲಿ ಬದರೀನಾಥ್ ಕೂಡ ಒಂದು, ಈ ಬಾರಿ ಬಿಜೆಪಿಯ ಅನಿಲ್ ಬಲೂನಿ ಇಲ್ಲಿನ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಈ 14 ವಿಧಾನಸಭಾ ಕ್ಷೇತ್ರಗಳ ಪೈಕಿ ಬದರೀನಾಥ್ ಕ್ಷೇತ್ರ ಮಾತ್ರ ಕಾಂಗ್ರೆಸ್ ವಶದಲ್ಲಿದೆ. ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ.

ಪ್ರಗತಿಗಾಗಿ ಬಿಜೆಪಿ ಸೇರ್ಪಡೆ

ಬಿಜೆಪಿ ನಾಯಕರೊಂದಿಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಭಂಡಾರಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಮತ್ತು ಕಳೆದ 10 ವರ್ಷಗಳಲ್ಲಿ ದೇಶದ ಪ್ರಗತಿಗಾಗಿ ಅವರ ಸರ್ಕಾರ ಮಾಡಿದ ಕೆಲಸಗಳಿಂದ ಪ್ರಭಾವಿತರಾದ ನಂತರ ಆಡಳಿತ ಪಕ್ಷಕ್ಕೆ ಸೇರಲು ನಿರ್ಧರಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ. “ಬಡ ಜನರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ನೀತಿಯಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ. ಅವರ ನಾಯಕತ್ವದಲ್ಲಿ ದೇಶಾದ್ಯಂತ ಅಭಿವೃದ್ಧಿಯ ನಿರಂತರ ಪಯಣ ನಡೆಯುತ್ತಿದೆ. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲು ನಾನು ಕೊಡುಗೆ ನೀಡಲು ಬಯಸುತ್ತೇನೆ. ” ಎಂದು ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತನಾಗಿ ದೇಶಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಭಂಡಾರಿ ಕೃತಜ್ಞತೆ ಸಲ್ಲಿಸಿದರು.

Exit mobile version