Site icon Vistara News

Budget 2024: ಬಜೆಟ್‌ನಲ್ಲಿ ಬಾಲಕಿಯರಿಗೆ ಲಸಿಕೆ ಕೊಡುಗೆ; ಏನಿದು ಸರ್ವಿಕಲ್ ಕ್ಯಾನ್ಸರ್?

cervical cancer

Cervical cancer

ನವದೆಹಲಿ: ‌ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ಕೇಂದ್ರ ಸರ್ಕಾರವು ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದೆ. ಗರ್ಭಕಂಠ ಕ್ಯಾನ್ಸರ್‌ ತಡೆಗಾಗಿ ದೇಶಾದ್ಯಂತ 9-14 ವರ್ಷದೊಳಗಿನ ಬಾಲಕಿಯರಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು (Cervical Cancer Vaccine) ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಬಜೆಟ್‌ (Budget 2024) ಮಂಡಿಸುವ ವೇಳೆ ಘೋಷಣೆ ಮಾಡಿದ್ದಾರೆ.

ಈಗ ಗರ್ಭಕಂಠ ಕ್ಯಾನ್ಸರ್‌ ನಿರೋಧಕ ವ್ಯಾಕ್ಸಿನ್‌ಗೆ 3 ಸಾವಿರ ರೂ. ಇದೆ. ಇನ್ನುಮುಂದೆ ಶಾಲೆಗಳ ಮೂಲಕವೇ ಬಾಲಕಿಯರಿಗೆ ಉಚಿತವಾಗಿ ಕ್ಯಾನ್ಸರ್‌ ನಿರೋಧಕ ಲಸಿಕೆ ನೀಡಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರ ನೀಡುವ ಲಸಿಕೆಯು ಶೇ.70ರಷ್ಟು ಪರಿಣಾಮಕಾರಿಯಾಗಿದ್ದು, ಹೆಣ್ಣುಮಕ್ಕಳು ಗರ್ಭಕಂಠ ಕ್ಯಾನ್ಸರ್‌ಗೆ ತುತ್ತಾಗುವುದರಿಂದ ತಡೆಗಟ್ಟುತ್ತದೆ. ಹಾಗಾದರೆ, ಏನಿದು ಗರ್ಭಕಂಠ ಕ್ಯಾನ್ಸರ್?‌ ಇದರ ಲಕ್ಷಣಗಳೇನು ಎಂಬುದರ ಮಾಹಿತಿ ಇಲ್ಲಿದೆ.

ಏನಿದು ಗರ್ಭಕಂಠದ ಕ್ಯಾನ್ಸರ್?‌

ಗರ್ಭಕಂಠದ ಕ್ಯಾನ್ಸರ್‌ ಮಹಿಳೆಯರನ್ನು ಅತಿ ಹೆಚ್ಚು ಕಾಡುವ ಮಾರಣಾಂತಿಕ ಕಾಯಿಲೆಯಾಗಿದೆ. ಇದು ಹ್ಯೂಮನ್‌ ಪ್ಯಾಪಿಲೋಮಾ ವೈರಸ್‌ನಿಂದ (HPV) ಮಹಿಳೆಯರಿಗೆ ಹರಡುತ್ತದೆ. ಯೋನಿಯಿಂದ ಗರ್ಭಾಶಯದವರೆಗೆ ಇದು ವ್ಯಾಪಿಸುತ್ತದೆ. 40-45 ವರ್ಷದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಸರಾಸರಿ ಐವರು ಗರ್ಭಕಂಠ ಕ್ಯಾನ್ಸರ್‌ನಿಂದ ಬಳಲುತ್ತಿದ್ದರೆ, ಅವರಲ್ಲಿ ಭಾರತದವರು ಒಬ್ಬರಿರುತ್ತಾರೆ. ಭಾರತದಲ್ಲಿ ಪ್ರತಿ 53 ಮಹಿಳೆಯರಲ್ಲಿ ಒಬ್ಬರು ಗರ್ಭಕಂಠದ ಕ್ಯಾನ್ಸರ್‌ನಿಂದ ಬಳಲುತ್ತಿರುತ್ತಾರೆ ಎಂದು ವರದಿಗಳಿಂದ ತಿಳಿದುಬಂದಿದೆ.

ಮುಂಜಾಗ್ರತಾ ಕ್ರಮಗಳು ಏನೇನು?

ಹೆಣ್ಣುಮಕ್ಕಳು 9 ವರ್ಷದಿಂದ 22 ವರ್ಷದೊಳಗೆ ಮುನ್ನೆಚ್ಚರಿಕೆ ವಹಿಸಿದರೆ ಗರ್ಭಕಂಠದ ಕ್ಯಾನ್ಸರ್‌ಅನ್ನು ತಡೆಗಟ್ಟಬಹುದು. ಇದಕ್ಕೆ ಎಚ್‌ಪಿವಿ ಲಸಿಕೆ ಇದ್ದು, ಅದರನ್ನು ಪಡೆಯಬೇಕು. ಮಹಿಳೆಯರು ರಕ್ತಸ್ರಾವದ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಹೆಣ್ಣುಮಕ್ಕಳು 21ನೇ ವಯಸ್ಸಿನಲ್ಲಿ ಪ್ಯಾಪ್‌ ಸ್ಮೀಯರ್‌ ಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. 26ನೇ ವಯಸ್ಸಿನಲ್ಲಿ ಕೂಡ ಹೆಣ್ಣುಮಕ್ಕಳು ಎಚ್‌ಪಿವಿ ಲಸಿಕೆ ಪಡೆಯಬಹುದಾಗಿದೆ. ಸುರಕ್ಷಿತ ಲೈಂಗಿಕ ಸಂಪರ್ಕ, ಅತಿಯಾದ ಜನನ ನಿಯಂತ್ರಣ ಮಾತ್ರೆ ಸೇವಿಸದಿರುವುದು ಮುಂಜಾಗ್ರತಾ ಕ್ರಮಗಳಾಗಿವೆ.

ಇದನ್ನೂ ಓದಿ: Budget 2024: ಬಡವರು ಸೇರಿ ಎಲ್ಲರ ಏಳಿಗೆಗೆ ಬಜೆಟ್‌ ಏಣಿ; ಪ್ರಧಾನಿ ಮೋದಿ ಬಣ್ಣನೆ

ಹಣ್ಣು, ತರಕಾರಿಗಳ ಸೇವನೆ, ನಿಯಮಿತ ವ್ಯಾಯಾಮ ಮಾಡಬೇಕು. ರೇಡಿಯೇಷನ್‌ ಥೆರಪಿ ಮೂಲಕ ಕಾಯಿಲೆಯನ್ನು ಗುಣಪಡಿಸಬಹುದು. ಆದರೆ, ಅದು ಯಾವ ಹಂತದಲ್ಲಿದೆ ಎಂಬುದು ಮುಖ್ಯವಾಗುತ್ತದೆ. ಸಂಭೋಗದ ಸಮಯದಲ್ಲಿ ಅತಿಯಾದ ನೋವು, ಅತಿಯಾದ ರಕ್ತಸ್ರಾವ, ಮೂತ್ರ ವಿಸರ್ಜನೆ ವೇಳೆ ಅಸಹನೀಯ ನೋವು, ಬೆನ್ನು ನೋವು, ಅತಿಸಾರ ಇದರ ಲಕ್ಷಣಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version