Site icon Vistara News

Valentines week 2023: ಪ್ರೀತಿ ಎಂಬ ಮಾಯೆ: ಪ್ರೀತಿ ಕಲಿಸುವ ಐದು ಗುಣಗಳಿವು!

Valentines Week Dresscode

Valentines Week Dresscode

ಪ್ರೀತಿಯಲ್ಲಿ ಬೀಳುವುದು ಯಾರಿಗೆ ಬೇಕಿಲ್ಲ ಹೇಳಿ. ಪ್ರೀತಿಯಲ್ಲಿ ಬಿದ್ದಾಗಲೇ ಅದರ ಸುಖದುಃಖಗಳು ಅರಿವಿಗೆ ಬರುವುದು. ಹೃದಯದ ಮಾತಿಗೆ ಜಗತ್ತನ್ನೇ ಬದಲಾಯಿಸುವ ಶಕ್ತಿ ಇದೆ ಎಂದು ಅರಿವಾಗುವುದು. ಹೃದಯ ಮೆದುವಾಗಿ, ಅದರ ತುಂಬ ಪ್ರೀತಿ, ಪ್ರೇಮ, ಕರುಣೆ, ದಯೆ, ಮಮತೆ, ತ್ಯಾಗವೇ ತುಂಬಿಕೊಂಡಿದೆಯೆಂದು ಅರಿವಾಗುವುದು. ಹೃದಯ ಇಷ್ಟು ಕೋಮಲವಾಗಿದೆ ಎಂದು ಅನಿಸಬೇಕಿದ್ದರೆ ಪ್ರೀತಿಯಲ್ಲಿ ಬೀಳಲೇಬೇಕು. ಫೆಬ್ರವರಿ ಬಂದ ಕೂಡಲೇ ಹಾಗೆ ಪ್ರೀತಿಯಲ್ಲಿರುವ ಜೀವಗಳಿಗೆಲ್ಲ ಹಬ್ಬ.

ಪ್ರೀತಿಗೆ ಎಂಥಾ ತಾಕತ್ತಿದೆ ಎಂದರೆ, ಇದು ನಮ್ಮೊಳಗಿನ, ನಮ್ಮಲ್ಲಿ ನಮಗೇ ಗೊತ್ತಾಗದ ಹಾಗೆ ಅಡಗಿ ಕುಳಿತಿರುವ ನಮ್ಮ ಒಳ್ಳೆಯ ಗುಣಗಳನ್ನೆಲ್ಲ ಹೆಕ್ಕಿ ಹೊರಗೆ ತಂದು ನಮ್ಮ ಮುಂದೆಯೇ ಹರವಿ ನಮಗೇ ಆಶ್ಚರ್ಯವಾಗುವಂತೆ ಮಾಡುತ್ತದೆ. ಪ್ರೀತಿಯ ಜೊತೆ ಜೊತೆಗೇ ಪ್ರೀತಿಪಾತ್ರರಿಗೆ ವ್ಯಕ್ತಪಡಿಸಬಹುದಾದ ಎಲ್ಲ ಭಾವನೆಗಳೂ ಮತ್ತಷ್ಟು ಚಿಗುರುತ್ತವೆ. ನಮಗೇ ಗೊತ್ತಿಲ್ಲದ ಹಾಗೆ ಪ್ರೀತಿಸುವವರನ್ನು ಕಾಳಜಿ ಮಾಡಲಾರಂಭಿಸುತ್ತೇವೆ. ಅವರು ಸದಾ ಖುಷಿಯಾಗಿರಲಿ ಎಂದು ಬಯಸುತ್ತೇವೆ. ಅವರಿಂದ ಯಾವ ನಿರೀಕ್ಷೆ ಇಲ್ಲದಿದ್ದರೂ ಅವರಿಗೆ ಸಹಾ ಮಾಡಿ ಖುಷಿ ಪಡುತ್ತೇವೆ. ಅವರ ತಪ್ಪುಗಳು ನಮ್ಮ ಪ್ರೀತಿಯ ಮುಂದೆ ಸಣ್ಣದೆನಿಸಿ, ಅವನ್ನೆಲ್ಲ ಮಾಫಿ ಮಾಡುತ್ತೇವೆ. ಸಿಟ್ಟು ಬಂದರೂ ಕ್ಷಣಾರ್ಧದಲ್ಲಿ ಮಾಯವಾಗುತ್ತದೆ. ಹೀಗೆ ಪ್ರೀತಿಯ ಜೊತೆಜೊತೆಗೇ ಬರುವ ಭಾವನೆಗಳು ಅನೇಕ. ಪ್ರೀತಿ ಕಲಿಸುವ ಬದುಕಿಗೆ ಅಗತ್ಯವಾದ ಐದು ಗುಣಗಳು ಯಾವುವು ಎಂಬುದನ್ನಿಲ್ಲಿ ನೋಡೋಣ.

೧. ತ್ಯಾಗ: ʻಪ್ರೀತಿ ಮಧುರ, ತ್ಯಾಗ ಅಮರʼ ಎಂಬ ನಾಣ್ಣುಡಿಯಿದೆ. ಇದು ಸತ್ಯ. ಯಾಕೆಂದರೆ, ತ್ಯಾಗ ಪ್ರೀತಿಯ ಅತ್ಯುನ್ನತ ಸ್ಥಾನ. ಇದರ ಶಕ್ತಿ ಪ್ರೀತಿಯಲ್ಲಿದ್ದಾಗ ದೊಡ್ಡದು. ನಮ್ಮದ ಆಸೆ, ಆಸಕ್ತಿಗಳನ್ನು ಬದಿಗಿಟ್ಟು ನಮ್ಮದಕ್ಕಿಂತ ಬೇರೆಯವರ ಆಸೆಗಳನ್ನು ಮುಂದಿಡುವುದೂ ತ್ಯಾಗವೇ. ಅದರಲ್ಲೊಂದು ಸುಖವಿದೆ. ಪ್ರೀತಿಸುವವರಿಗಷ್ಟೇ ಗೊತ್ತು ಈ ತ್ಯಾಗದ ರುಚಿ. ಈ ತ್ಯಾಗದಿಂದ ತನಗೇನೋ ಮುಂದೆ ದಕ್ಕೀತು ಎಂಬ ಕಿಂಚಿತ್‌ ಆಸೆಯೂ ಇಲ್ಲದ ಈ ಭಾವನೆ ಅಮೂಲ್ಯವಾದದ್ದು.

೨. ನಿರೀಕ್ಷೆಯಿಲ್ಲದ ಪ್ರೀತಿ: ಪ್ರೀತಿಸಿದ ವ್ಯಕ್ತಿಯಿಂದ ನಿರೀಕ್ಷೆ ಮಾಡುವುದು ತಪ್ಪಲ್ಲ. ಅದು ಮಾನವ ಸಹಜ ಗುಣ. ನಾವು ಪ್ರೀತಿಸಿದವರು ನಮ್ಮನ್ನೂ ಹಾಗೆಯೇ ಪ್ರೀತಿಸಲಿ ಎಂದುಕೊಳ್ಳುವುದು ಕೂಡಾ ಪ್ರೀತಿಯಲ್ಲಿ ಇರುವಂಥದ್ದೇ. ಆದರೂ, ಅವರು ನಮ್ಮನ್ನು ಪ್ರೀತಿಸಲಿ ಎಂಬುದೂ ಸೇರಿದಂತೆ, ಯಾವ ಬಗೆಯ ನಿರೀಕ್ಷೆಯನ್ನೂ ಇಟ್ಟುಕೊಳ್ಳದೆ ಪ್ರೀತಿಸುವುದು ಪ್ರೀತಿಯ ಅತ್ಯುನ್ನತ ಸ್ಥಿತಿ. ಅಂಥವರ ಪ್ರೀತಿ ಎಲ್ಲಕ್ಕಿಂತ ದೊಡ್ಡದು.

ಇದನ್ನೂ ಓದಿ: Valentine’s Day 2023 : ವಾಲೈಂಟೈನ್ಸ್ ಡೇ ಸ್ಪೆಷಲ್‌ ರೋಸ್‌‌ಗಳು, ಇವುಗಳ ಸಂಕೇತಗಳೇನು?

೩. ಕ್ಷಮೆ: ಕ್ಷಮೆ ಎಂಬುದು ಪ್ರೀತಿ ಹಾಗೂ ವೈವಾಹಿಕ ಸಂಬಂಧವನ್ನು ಗಟ್ಟಿಯಾಗಿ ಉಳಿಸುವ ಕೀಲಿಕೈಗಳಲ್ಲಿ ಒಂದು. ಕೋಪ, ಸಿಟ್ಟಿನಲ್ಲಿ ಮಾಡಿದ ತಪ್ಪುಗಳು, ಪ್ರೀತಿಸುವವರನ್ನು ನೋಯಿಸಿದ ಕ್ಷಣಗಳು ಇದ್ದೇ ಇದ್ದರೂ, ಪ್ರೀತಿಸುತ್ತಿದ್ದೇವೆ ಹಾಗೂ ಮುಂದೆಯೂ ಹೀಗೇ ಪ್ರೀತಿಸುವೆವು ಎಂಬ ಭಾವನೆಯಿಂದ ಕ್ಷಮಿಸುವುದು ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸುತ್ತದೆ. ಯಾಕೆಂದರೆ, ಪ್ರೀತಿಸುವ ಜೀವ ಕ್ಷಮೆ ಪ್ರೀತಿಪಾತ್ರರ ತಪ್ಪುಗಳನ್ನು ಕ್ಷಮಿಸುವ ದೊಡ್ಡ ಗುಣ ಹೊಂದಿದೆ.

೪. ಸಹಾನುಭೂತಿ: ಪ್ರೀತಿಯಲ್ಲಿ ಒಬ್ಬರ ಬಗೆಗೆ ಮತ್ತೊಬ್ಬರಿಗೆ ಕಾಳಜಿ ಇರುತ್ತದೆ. ಪ್ರೀತಿಸುವ ವ್ಯಕ್ತಿ ಕಷ್ಟದಲ್ಲಿದ್ದಾಗ, ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಂಡಾಗ, ದುಃಖದಲ್ಲಿದ್ದಾಗ ಸಹಾಯ ಮಾಡುವುದು ಹಾಗೂ ಜೊತೆಗಿರುವುದು ಸಹಾನುಭೂತಿ. ಇದಕ್ಕೊಂದು ಅತ್ಯುನ್ನತ ಮಟ್ಟದ ಅರ್ಥ ಮಾಡಿಕೊಳ್ಳುವಿಕೆ ಬೇಕಾಗುತ್ತದೆ. ಮತ್ತೊಂದು ಜೀವಕ್ಕೆ ಸಹಾನುಭೂತಿ ತೋರಿಸುವುದು ಸುಲಭವಲ್ಲ, ಅದು ಪ್ರೀತಿ ಇದ್ದಲ್ಲಿ ಮಾತ್ರ ಸಾಧ್ಯವಾಗುತ್ತದೆ.

೫. ಸೇವೆ: ತಮಗೇನೂ ಬೇಕೆಂದು ಅಂದುಕೊಳ್ಳದೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಬಹಳಷ್ಟು ಕಡಿಮೆ ಮಂದಿಯಲ್ಲಿರುತ್ತದೆ. ಇನ್ನೊಬ್ಬರಿಗೆ ಅವರ ಕೆಲಸಗಳಲ್ಲಿ ಸಹಾಯ ಮಾಡುವುದು, ಮಾಡಿಕೊಡುವುದು ಸೇವೆಯ ಮುಖಗಳೇ. 

ಇದನ್ನೂ ಓದಿ: Valentines week : ಮನಸ್ಸನ್ನು ಹಗುರಾಗಿಸುವ ಹಗ್‌ ಡೇ; ಏನಿದರ ಮಹತ್ವ? ಆಚರಣೆ ಹೇಗೆ?

Exit mobile version