Site icon Vistara News

Valmiki Corporation Scam: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ ಫಿಕ್ಸ್; ನಾಗೇಂದ್ರ ವಿರುದ್ಧ ಕ್ರಮಕ್ಕೆ ಖರ್ಗೆ ಸೂಚನೆ

Valmiki Corporation Scam

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ (Valmiki Corporation Scam) ಸಚಿವ ಬಿ.ನಾಗೇಂದ್ರ ತಲೆ ದಂಡಕ್ಕೆ ಒತ್ತಾಯಗಳು ಕೇಳಿಬರುತ್ತಿವೆ. ಹೀಗಾಗಿ ಪ್ರಕರಣದ ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದೆ. ಆದರೆ, ಎಸ್‌ಐಟಿ ವರದಿ ಬಳಿಕವೂ ಕೇಸ್‌ನಲ್ಲಿ ಸಿಬಿಐ ಎಂಟ್ರಿ ಬಹುತೇಕ ಫೀಕ್ಸ್ ಎನ್ನಲಾಗಿದೆ. ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಎಂಟ್ರಿ ಸಾಧ್ಯತೆ ಇದ್ದು, ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯೂ ಇಂಬು ನೀಡಿದೆ. ಇನ್ನು ಪ್ರಕರಣದಲ್ಲಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಸಚಿವ ನಾಗೇಂದ್ರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ, ಡಿಸಿಎಂಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಯೂನಿಯನ್ ಬ್ಯಾಂಕ್ ಆಫ್‌ ಇಂಡಿಯಾ, ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿತ್ತು. 50 ಕೋಟಿ ಅಧಿಕ ಹಣ ಅಕ್ರಮವಾಗಿದ್ದರೆ ಬ್ಯಾಂಕ್ ಅಧಿಕಾರಿಗಳು ದೂರು ನೀಡಬೇಕು ಎಂಬ ಕೇಂದ್ರ ಹಣಕಾಸು ಸಚಿವಾಲಯದ ಸುತ್ತೋಲೆ ಹಿನ್ನೆಲೆಯಲ್ಲಿ ಸಿಬಿಐ ತನಿಖೆಗೆ ವಹಿಸುವಂತೆ ಯೂನಿಯನ್ ಬ್ಯಾಂಕ್ ದೂರು ಮನವಿ ಪತ್ರ ಸಲ್ಲಿಸಿದೆ. ಹಾಗಾಗಿ ಪ್ರಕರಣದಲ್ಲಿ ಬಹುತೇಕ ಸಿಬಿಐ ಎಂಟ್ರಿಯಾಗುವ ಸಾಧ್ಯತೆಗಳಿವೆ.

ಇದನ್ನೂ ಓದಿ | ವಾಲ್ಮೀಕಿ ನಿಗಮದ ಚಂದ್ರಶೇಖರ್‌ ಆತ್ಮಹತ್ಯೆ, 87 ಕೋಟಿ ರೂ. ಹಗರಣ; ತನಿಖೆಗೆ ಎಸ್‌ಐಟಿ ರಚಿಸಿದ ರಾಜ್ಯ ಸರ್ಕಾರ

ಪ್ರಕರಣದ ಮಾಹಿತಿ ಪಡೆದ ಮಲ್ಲಿಕಾರ್ಜುನ ಖರ್ಗೆ

ರಾಜ್ಯ ಸರ್ಕಾರದ ವಾಲ್ಮೀಕಿ ನಿಗಮದ ಹಣ ತೆಲಂಗಾಣಕ್ಕೆ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಕರಣದ ಬಗ್ಗೆ ತೆಲಂಗಾಣ ಸಿಎಂ ಬಳಿ ಮಾಹಿತಿ ಪಡೆದಿದ್ದಾರೆ. ಇನ್ನು ಪ್ರಕರಣದ ಪ್ರಕರಣದ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ, ನಾಗೇಂದ್ರ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಸಿಎಂ, ಡಿಸಿಎಂಗೆ ಖರ್ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆ ಕೆಪಿಸಿಸಿ ಕಾರ್ಯಾಧ್ಯಕ್ಷರಿಂದ ಕೂಡ ಸಿಎಂ ಹಾಗೂ ಡಿಸಿಎಂಗೆ ಮನವಿ ಮಾಡಲಾಗಿದೆ.ಇದು ಪಕ್ಷ ಮತ್ತು ಸರ್ಕಾರಕ್ಕೆ ಡ್ಯಾಮೇಜ್. ಮೊದಲು ನಾಗೇಂದ್ರ ಅವರಿಂದ ರಾಜೀನಾಮೆ ಪಡೆದುಕೊಳ್ಳಿ. ತನಿಖೆಯಲ್ಲಿ ತಪ್ಪಿತಸ್ಥರಲ್ಲ ಅಂತ ಸಾಬೀತಾದ್ರೆ ಸಚಿವ ಸಂಪುಟಕ್ಕೆ ಮತ್ತೆ ಸೇರ್ಪಡೆ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಸಿಬಿಐ ತನಿಖೆ ಬಗ್ಗೆ ಡಿಕೆಶಿ ಏನು ಹೇಳಿದರು?

ವಾಲ್ಮೀಕಿ ನಿಗಮ ಹಗರಣದ ತನಿಖೆಗೆ ಯೂನಿಯನ್ ಬ್ಯಾಂಕ್ ಪತ್ರ ಬರೆದ ವಿಚಾರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿ, ಪತ್ರ ಬರೆಯಲಿ, ತಪ್ಪಿಲ್ಲ. ಅದಕ್ಕೆ ಒಂದು ವಿಧಾನ ಇದೆ. ಇಷ್ಟು ಕೋಟಿ ಅಕ್ರಮ ಇದ್ದಾಗ ನಾನು ಕೊಟ್ಟರೂ ಅಥವಾ ನೀವು ಕೊಡದೇ ಇದ್ದರೂ ಅದು ಸಿಬಿಐ ತನಿಖೆಗೆ ಹೋಗುತ್ತೆ. ನಮಗೆ ಗೊತ್ತಿಲ್ಲ ಅಂತ ತಿಳಿದುಕೊಳ್ಳಬೇಡಿ. ಯಾವುದಾದರೂ ಬ್ಯಾಂಕ್‌ನಲ್ಲಿ ಈ ರೀತಿಯಾದರೆ ಯಾವ ಸರ್ಕಾರವೂ ತನಿಖೆಗೆ ಕೊಡಬೇಕು ಅಂತಿಲ್ಲ. ಅವರು ತಗೋಬೇಕು ಅಂತೇನು ಇಲ್ಲ. ನ್ಯಾಚುರಲ್ ಆಗಿ ಅದು ಸಿಬಿಐ ತನಿಖೆಗೆ ಹೋಗುತ್ತೆ. ನಾವು ತನಿಖೆಗೆ ಸಹಕರಿಸುತ್ತೇವೆ, ರಾಜಕೀಯ ಇಲ್ಲದೇ ತನಿಖೆ ನಡೆಸಲಿ. ಸದ್ಯಕ್ಕೆ ಸಿಬಿಐ ಬರುವ ಸಂದರ್ಭ ಇಲ್ಲ, ನಾವೇ ತನಿಖೆ ಮಾಡ್ತೀವಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | Valmiki Corporation Scam: ವಾಲ್ಮೀಕಿ ನಿಗಮ ಅಕ್ರಮ ಕೇಸ್‌; 16 ಕಂಪನಿಗಳಿಗೆ 80 ಕೋಟಿ ವರ್ಗಾವಣೆ, ಯಾರಿಗೆ ಎಷ್ಟು ಹಣ?

ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದ ಸಿಎಂ

ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ತನಿಖೆಯಲ್ಲಿ ತಪ್ಪಿತಸ್ಥರು ಎಂದು ಗೊತ್ತಾದರೆ ಎಲ್ಲರ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು. ಪ್ರಕರಣಕ್ಕೆ ಸಂಬಂಧಪಟ್ಟಂತೆ SIT ರಚಿಸಲಾಗಿದ್ದು, ತನಿಖೆ ಚುರುಕಾಗಿ ನಡೆಯುತ್ತಿದೆ. ಹೀಗಾಗಿ ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ತಿಳಿಸಿದ್ದಾರೆ.

Exit mobile version