Site icon Vistara News

Valmiki Corporation Scam: ಮೃತ ಅಧೀಕ್ಷಕ ಚಂದ್ರಶೇಖರನ್‌ ಕುಟುಂಬಕ್ಕೆ 25 ಲಕ್ಷ ಪರಿಹಾರ ಘೋಷಿಸಿದ ಸಿಎಂ

Valmiki Corporation Scam

ಬೆಂಗಳೂರು: ವಾಲ್ಮೀಕಿ ನಿಗಮ ಅಕ್ರಮಕ್ಕೆ (Valmiki Corporation Scam) ಸಂಬಂಧಿಸಿದಂತೆ ಆತ್ಮಹತ್ಯೆ ಮಾಡಿಕೊಂಡಿದ್ದ ಅಧೀಕ್ಷಕ ಚಂದ್ರಶೇಖರನ್‌ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಅಧಿಕಾರಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು ಪರಿಹಾರ ನೀಡಲಾಗುತ್ತದೆ, ಈ ಬಗ್ಗೆ ಅಧಿವೇಶನದಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಮಸಿ ಬಳಿಯಬೇಕು ಎಂದು ವಿಪಕ್ಷದವರು ಪ್ರಯತ್ನಿಸುತ್ತಿದ್ದಾರೆ. ದಲಿತರ ಪರವಾಗಿ ಮಾತನಾಡಬೇಕು, ಸಿಂಪತಿ ಗಿಟ್ಟಿಸಿಕೊಳ್ಳಬೇಕು ಅಂತ ಮಾಡುತ್ತಿದ್ದಾರೆ. ನಾವು ದಲಿತರ ಪರವಾಗಿದ್ದೀವಿ, ನಮ್ಮ ಗ್ಯಾರಂಟಿ ಯೋಜನೆಗಳು ಹಿಂದುಳಿದವರ ಪರ ಇವೆ. ನಮ್ಮ ಗ್ಯಾರಂಟಿ ಯೋಜನೆಗೆ ಜಾತಿ, ಧರ್ಮ ಇಲ್ಲ. ಕಾನೂನಿಗೆ ವಿರುದ್ಧ ಯಾರಿದ್ದರೂ, ನಾವು ಅವರ ವಿರುದ್ಧ ಫೈಟ್ ಮಾಡುತ್ತೇವೆ ಎಂದು ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡಿರುವ ಚಂದ್ರಶೇಖರನ್‌ ಪತ್ನಿ ಮಕ್ಕಳ ಶಿಕ್ಷಣಕ್ಕೆ ತೊಂದರೆ ಆಗುತ್ತಿದೆ ಎಂದು ಹೇಳಿದ್ದಾರೆ. ಅದಕ್ಕೆ ಆ ಕುಟುಂಬಕ್ಕೆ 25 ಲಕ್ಷ ಹಣ ಪರಿಹಾರ ಘೋಷಣೆ ಮಾಡುತ್ತಿದ್ದೇವೆ. ಈಗ ಪರಿಹಾರ ಘೋಷಣೆ ಮಾಡಬಾರದಿತ್ತು, ಅಧಿವೇಶನದಲ್ಲಿ ಪರಿಹಾರ ಘೋಷಣೆ ಮಾಡುತ್ತೇನೆ ಎಂದು ತಿಳಿಸಿದರು.

ಅಧಿಕಾರಿಗಳೇ ಚಂದ್ರಶೇಖರನ್‌ ಆತ್ಮಹತ್ಯೆಗೆ ಕಾರಣ

ಆತ್ಮಹತ್ಯೆ ಮಾಡಿಕೊಂಡ ನಿಗಮದ ಅಧೀಕ್ಷಕ ಚಂದ್ರಶೇಖರನ್‌ ಡೆತ್ ನೋಟ್‌ನಲ್ಲಿ ಹೇಳಿದ್ದಾರೆ. ವಾಲ್ಮೀಕಿ ನಿಗಮದ ಎಂಡಿ ಪದ್ಮನಾಭ, ಚೀಪ್ ಅಕೌಂಟ್ ಅಫೀಸರ್ ಪರಶುರಾಮ, ಎಂಜಿ ರಸ್ತೆ ಯೂನಿಯನ್‌ ಬ್ಯಾಂಕ್‌ ಚೀಫ್‌ ಮ್ಯಾನೇಜರ್ ಸುಚಿಸ್ಮಿತಾ ಕಾರಣ ಅಂತ ಬರೆದಿದ್ದಾರೆ.

ಅಕೌಂಟ್ ಸೂಪರಿಂಟೆಂಡೆಂಟ್ ಚಂದ್ರಶೇಖರ್ ತಮಿಳುನಾಡಿನ ಭೋವಿ ಜನಾಂಗದವರು. ಶಿವಮೊಗ್ಗದ ವಿನೋಬಾ ನಗರದಲ್ಲಿ ವಾಸವಾಗಿದ್ದಾರೆ. ಹೆಂಡತಿ ದೊಡ್ಡಪ್ಪನ ಅಂತ್ಯಕ್ರಿಯೆಗೆ ಹೋದಾಗ ಈತ ಮೇ 26 ನೇಣಿಗೆ ಶರಣಾಗಿದ್ದ. ಆ‌ಮೇಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಟಿವಿ ಹಿಂಭಾಗದಲ್ಲಿ ಒಂದು ನೋಟ್ ಬುಕ್ ಸಿಗುತ್ತೆ, ಅದರಲ್ಲಿ ಡೆತ್‌ಗೆ ಕಾರಣ ಬರೆದಿದ್ದ. ಅದರಲ್ಲಿ ಸ್ಪಷ್ಟವಾಗಿ ಎಂಡಿ ಪದ್ಮನಾಭ, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ, ಎಂಜಿ ರೋಡ್ ಶಾಖೆ ಮ್ಯಾನೇಜರ್ ಸುಚಿಸ್ಮಿತಾ ನನ್ನ ಸಾವಿಗೆ ಕಾರಣ ಅಂತ ಎಂದು ಸ್ಪಷ್ಟವಾಗಿ ಬರೆದಿದ್ದ ಎಂದು ಸಿಎಂ ತಿಳಿಸಿದರು.

ಆತ್ಮಹತ್ಯೆ ಮಾಡಿಕೊಂಡ ಮೇಲೆ ಅವನ ಹೆಂಡತಿ ಕವಿತಾ, ಮೇ 27 ತಾರೀಖು ಕಂಪ್ಲೆಂಟ್ ಕೊಟ್ಟಿದ್ದರು. ಎಫ್‌ಐಆರ್‌ ಆದಮೇಲೆ ಕೇಸ್‌ ಕೋರ್ಟ್‌ಗೆ ಹೋಗುತ್ತದೆ. 3 ಜನರ ಮೇಲೆ ಎಫ್‌ಐಆರ್‌ ಆಗಿತ್ತು. ಮೇ 28ರಂದು ನಿಗಮದ ಎಂಡಿ ರಾಜಶೇಖರ್ ಕಂಪ್ಲೆಂಟ್ ಕೊಟ್ಟಿದ್ದರು. ಬ್ಯಾಂಕ್ ಅಧಿಕಾರಿಗಳು ಸುಚಿಸ್ಮಿತಾ ಮೇಲೆ ಕಂಪ್ಲೆಂಟ್ ಕೊಟ್ಟಿದ್ದರು. ಇದೆಲ್ಲಾ ಆದಮೇಲೆ ನನಗೆ ಪೋಲೀಸರು ಮಾಹಿತಿ ನೀಡಿದ್ದರು. ಹೀಗಾಗಿ ತನಿಖೆಗಾಗ ನಾನು ಎಸ್‌ಐಟಿ ರಚನೆ ಮಾಡಿದ್ದೆ ಎಂದು ತಿಳಿಸಿದರು.

ಇನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಶಿವಕುಮಾರ್ ಹೆಸರೇ ಇಲ್ಲ. ಸಾಯಿತೇಜ ಎಂಬಾತನನ್ನು ಕರೆಸಿ ಶಿವಕುಮಾರ್ ಎಂದು ಹೆಸರಿಟ್ಟಿದ್ದರು. ಇವನು ಯಾರು ಎಂದು ಪರಿಶೀಲನೆ ಮಾಡಲ್ಲ. ಅಧಿಕಾರಿ ದೀಪಾ ನೋಡಿಲ್ಲ, ಕೃಷ್ಣಮೂರ್ತಿಯೂ ನೋಡಿಲ್ಲ. ಬ್ಯಾಂಕಿನವರೇ ಅವರ ಬ್ಯಾಂಕಿನ ಅಧಿಕಾರಿಗಳ ಮೇಲೆ ದೂರು ಕೊಟ್ಟಿದ್ದಾರೆ. ಇವರ ಮೇಲೆ ತನಿಖೆ ನಡೆಸಲು ಅನುಮತಿ ನೀಡಿದ್ದರು ಎಂದು ತಿಳಿಸಿದರು.

CM Siddaramaiah: ವಾಲ್ಮೀಕಿ ನಿಗಮ ಅಕ್ರಮಕ್ಕೆ ಸರ್ಕಾರ ಹೊಣೆಯಲ್ಲ; ಚಂದ್ರಶೇಖರನ್‌ ಆತ್ಮಹತ್ಯೆಗೆ ಅಧಿಕಾರಿಗಳು ಕಾರಣ ಎಂದ ಸಿಎಂ!

ಈ ಹಗರಣದಲ್ಲಿ ಎಸ್‌ಐಟಿ, ಸಿಬಿಐ ತನಿಖೆ ಮಾಡುತ್ತಿವೆ. ಇಡಿ ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿವೆ. ನಾಗೇಂದ್ರ ಬಂಧನವಾಗಿದೆ, ದದ್ದಲ್ ಮನೆ ಮೇಲೆ ದಾಳಿ ಮಾಡಿ ತನಿಖೆ ನಡೆಸಿದ್ದಾರೆ. ಎಸ್‌ಐಟಿ 12 ಮಂದಿಯನ್ನು ವಶಕ್ಕೆ ಪಡೆದು, ಈ ಪೈಕಿ 9 ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ, ಮೂವರು ಕಸ್ಟಡಿಯಲ್ಲಿ ಇದ್ದಾರೆ. ತನಿಖೆ ವೇಳೆ 85 ಕೋಟಿ ರೂ.ಗಳಲ್ಲಿ 34 ಕೋಟಿ ಕೋಟಿ ವಾಪಾಸ್ ಬಂದಿದೆ ಎಂದರು.

Exit mobile version