Site icon Vistara News

Vande Bharat Express: ಇನ್ನು ಮುಂದೆ ತುಮಕೂರಿನಲ್ಲೂ ನಿಲ್ಲಲಿದೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು; ಟಿಕೆಟ್‌ ದರ ಎಷ್ಟು?

ತುಮಕೂರು: ನಗರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು (Vande Bharat Express) ಅಧಿಕೃತ ನಿಲುಗಡೆಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಶುಕ್ರವಾರ ಹಸಿರು ನಿಶಾನೆ ತೋರಿದರು. ತುಮಕೂರು ರೈಲು ನಿಲ್ದಾಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ರೈಲು ನಿಲುಗಡೆಗೆ ಸಚಿವರು ಗ್ರೀನ್ ಸಿಗ್ನಲ್ ನೀಡಿದರು. ಇದರಿಂದ ಇನ್ನು ಮುಂದೆ‌ ನಗರದಲ್ಲಿ ಪ್ರತಿ ದಿನ ಬೆಳಗ್ಗೆ ಹಾಗೂ ಸಂಜೆ ಹೊತ್ತು 2 ನಿಮಿಷಗಳ‌ ಕಾಲ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆ ನೀಡಲಿದೆ.

ಧಾರವಾಡ-ಬೆಂಗಳೂರು, ಬೆಂಗಳೂರು- ಧಾರವಾಡಕ್ಕೆ ಸಂಚರಿಸುವ ವಂದೇ ಭಾರತ್ ರೈಲು, ಪ್ರತಿದಿನ ಬೆಳಗ್ಗೆ 6.32ಕ್ಕೆ ಬೆಂಗಳೂರಿನಿಂದ ತುಮಕೂರಿಗೆ ಬರಲಿದೆ. ಸಂಜೆ 6.18ಕ್ಕೆ ಧಾರವಾಡದಿಂದ ತುಮಕೂರಿಗೆ ಆಗಮಿಸಲಿದೆ. ಎರಡರಿಂದ ಮೂರು ನಿಮಿಷಗಳ ಕಾಲ‌ ನಿಲುಗಡೆ ನೀಡಿ ಮುಂದೆ ಸಾಗಲಿದೆ. ಎಸಿ ಚೇರ್ ತುಮಕೂರಿನಿಂದ ಬೆಂಗಳೂರಿಗೆ 440‌ ರೂ, ಎಕ್ಸಿಕ್ಯುಟಿವ್ ಕ್ಲಾಸ್ 825 ರೂ. ಟಿಕೆಟ್ ದರ ಇದೆ.

ಧಾರವಾಡದಿಂದ ತುಮಕೂರಿಗೆ ಬಂದ ರೈಲಿಗೆ ವಿ.ಸೋಮಣ್ಣ ಅವರು ಹಸಿರು ನಿಶಾನೆ ತೋರಿದರು. ಶಾಸಕರಾದ ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ಸುರೇಶ್ ಗೌಡ, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಮಾಜಿ ಸಂಸದ ಜಿ. ಎಸ್. ಬಸವರಾಜು ಹಾಗೂ ರೈಲ್ವೆ ಅಧಿಕಾರಿಗಳ ಉಪಸ್ಥಿತರಿದ್ದರು.

ನಗರದಲ್ಲಿ ವಂದೇ ಭಾರತ್ ರೈಲು ನಿಲುಗಡೆಯಿಂದ ತುಮಕೂರಿನಿಂದ ಬೆಂಗಳೂರು ಹಾಗೂ ಧಾರವಾಡಕ್ಕೆ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯೋಜನವಾಗಲಿದೆ. ಯಾತ್ರಿಕರು ಹಾಗೂ ಪ್ರವಾಸಿಗರು ಸಿದ್ಧಗಂಗಾ ಮಠ ಸೇರಿ ಇನ್ನಿತರ ಸ್ಥಳಗಳನ್ನು ತಲುಪಲು ಪ್ರಯೋಜನವಾಗಲಿದೆ ಎಂದು ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Village Administrative Officer: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಪ್ಲೈ ಮಾಡಿದವರು ಗಮನಿಸಿ; ಅರ್ಜಿ, ಶುಲ್ಕ ಸ್ಥಿತಿ ಪರಿಶೀಲಿಸುವ ವಿಧಾನ ಇಲ್ಲಿದೆ

Exit mobile version