ಬೆಂಗಳೂರು : ಮಾಂಸಾಹಾರ ಶ್ರೇಷ್ಠವೇ, ಸಸ್ಯಾಹಾರ ಉತ್ತಮವೇ (veg vs non veg) ಎಂಬ ಚರ್ಚೆ ಭಾರತೀಯರಲ್ಲಿ ಮಾಮೂಲು. ಇದಕ್ಕೆ ಕಾರಣ ಇಲ್ಲಿನ ವೈವಿಧ್ಯಮಯ ಆಹಾರ ಶೈಲಿ. ಅಪ್ಪಟ ಸಸ್ಯಾಹಾರಿಗಳು ಇದ್ದಷ್ಟೇ. ನಾನ್ವೆಜ್ ಇಲ್ಲದೇ ಊಟ ಸೇರುವುದೇ ಇಲ್ಲ ಎಂದು ಹೇಳುವ ಮಂದಿಯೂ ಇದ್ದಾರೆ. ಇಲ್ಲಿ ಯಾವುದೇ ಉತ್ತಮ ಎಂಬ ಚರ್ಚೆಗೆ ತುದಿ, ಮೊದಲಿಲ್ಲ. ಹೀಗಾಗಿ ಈ ಕುರಿತ ಸಣ್ಣ ಹೇಳಿಕೆಯೂ ವಿವಾದಕ್ಕೆ ಕಾರಣವಾಗುತ್ತವೆ. ಎಲ್ಲವೂ ವಾದಕ್ಕೆ ಸೀಮಿತವಾಗುವುದೇ ಹೊರತು ಅದಕ್ಕೊಂದು ತಾರ್ಕಿಕ ಅಂತ್ಯ ತರಲು ಸಾಧ್ಯವೇ ಇಲ್ಲ. ಅಂತೆಯೇ ಖಾಸಗಿ ಶಾಲೆಯೊಂದರ ಮುಖ್ಯಸ್ಥರು ಮಕ್ಕಳ ಬುತ್ತಿಯಲ್ಲಿ ಮಾಂಸಾಹಾರದ ಅಡುಗೆಯನ್ನು ಕಳುಹಿಸಬಾರದು ಎಂದು ಪೋಷಕರಿಗೆ ಕಳುಹಿಸಿದ ಸಂದೇಶವೊಂದು ವಿವಾದಕ್ಕೆ ಕಾರಣವಾಗಿದೆ.
ಘಟನೆ ನಡೆದಿರುವುದು ನೋಯ್ಡಾದ ಖಾಸಗಿ ಶಾಲೆಯೊಂದರಲ್ಲಿ, ಮಕ್ಕಳ ಟಿಫಿನ್ ಬಾಕ್ಸ್ಗಳಲ್ಲಿ ಮಾಂಸಾಹಾರಿ ಆಹಾರವನ್ನು ಪ್ಯಾಕ್ ಮಾಡಬೇಡಿ ಎಂದು ವಾಟ್ಸಾಪ್ ಮೂಲಕ ಪೋಷಕರಿಗೆ ಸುತ್ತೋಲೆ ಕಳುಹಿಸಲಾಗಿದೆ. ನೋಯ್ಡಾದ ಸೆಕ್ಟರ್ 132 ರಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ (ಡಿಪಿಎಸ್) ಪ್ರಾಂಶುಪಾಲರು ಈ ಸುತ್ತೋಲೆ ಹೊರಡಿಸಿದ್ದಾರೆ. ಇದು ಬಿಸಿ ಚರ್ಚೆ ಕಾರಣವಾಗಿದ್ದು, ವಿವಾದ ಭುಗಿಲೆದ್ದ ನಂತರ ಇದು ಕೇವಲ “ವಿನಂತಿ” ಎಂದು ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಸುತ್ತೋಲೆಯು ಬಗ್ಗೆ ಶಾಲೆಯ ಆಡಳಿತ ಮಂಡಳಿ ಎರಡು ಕಾರಣಗಳನ್ನು ಉಲ್ಲೇಖಿಸಿದೆ. ಆರೋಗ್ಯ ಮತ್ತು ಸುರಕ್ಷತೆ ಪ್ರಾಥಮಿಕ ಕಾಳಜಿ ಎಂದು ಹೇಳಿದೆ. ಮಧ್ಯಾಹ್ನದ ಊಟಕ್ಕಾಗಿ ಬೆಳಗ್ಗೆ ತಯಾರಿಸಿದ ಮಾಂಸಾಹಾರವನ್ನು ಕೊಟ್ಟರೆ ಅದು ಹಾಳಾಗಬಹುದು. ಅದು ಆರೋಗ್ಯಕ್ಕೆ ಅಪಾಯವಾಗಬಹುದು ಎಂದು ಹೇಳಿದೆ. ಅದೇ ರಿತಿ ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಗೌರವ”ದ ಮಹತ್ವ ಎಂದು ಹೇಳಿದೆ. ಪ್ರತಿಯೊಬ್ಬರೂ ಆರಾಮದಾಯಕ ವಾತಾವರಣವನ್ನು ಒದಗಿಸುವತ್ತ ಗಮನ ಹರಿಸಲಾಗಿದೆ. ಇದರಿಂದಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಆಹಾರ ಆದ್ಯತೆಗಳನ್ನು ಲೆಕ್ಕಿಸದೆ ಒಟ್ಟಿಗೆ ಕುಳಿತು ತಮ್ಮ ಊಟ ತಿನ್ನಲು ಸಾಧ್ಯ ಎಂದು ಹೇಳಲಾಗಿದೆ.
ಇದನ್ನೂ ಓದಿ: Claudia Mancinelli : ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಡ ಈ ಸುಂದರಿ ಜಿಮ್ನಾಸ್ಟಿಕ್ ಕೋಚ್ ಈಗ ಇಂಟರ್ನೆಟ್ ಸೆನ್ಷೇಷನ್
ಈ ಸುತ್ತೋಲೆಯು ಪೋಷಕರಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ, ಕೆಲವರು ಸಾಂಸ್ಕೃತಿಕ ಮತ್ತು ಆರೋಗ್ಯ ಪರಿಗಣನೆಗಳನ್ನು ಉಲ್ಲೇಖಿಸಿ ಇದರ ಪರವಾಗಿದ್ದಾರೆ, ಇತರರು ಇದು ತಮ್ಮ ಸ್ವಾತಂತ್ರ್ಯವನ್ನು ಉಲ್ಲಂಘಿಸಲಾಗಿದೆ ಎಂದು ವಾದಿಸಿದ್ದಾರೆ.