Site icon Vistara News

Paytm Crisis: ಪೇಟಿಎಂ ಬಿಕ್ಕಟ್ಟಿನ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ವಿಜಯ್‌ ಶೇಖರ್‌ ಶರ್ಮಾ ವಿದಾಯ

vijay shekhar sharma

Vijay Shekhar Sharma Steps Down From Paytm Payments Bank Board Amid Crisis

ನವದೆಹಲಿ: ಮಾರ್ಚ್‌ 15ರಿಂದ ಪೇಟಿಎಂ ಬಳಕೆದಾರರ ಪ್ರಿಪೇಯ್ಡ್‌ ಪೇಮೆಂಟ್‌, ಫಾಸ್ಟ್‌ಟ್ಯಾಗ್‌ಗಳಿಗೆ ಠೇವಣಿ ಸ್ವೀಕರಿಸದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (Paytm Payments Bank Ltd) ಭಾರತೀಯ ರಿಸರ್ವ್‌ ಬ್ಯಾಂಕ್‌ (Reserve Bank Of India) ನಿರ್ಬಂಧ ವಿಧಿಸಿದ ಬೆನ್ನಲ್ಲೇ ಚೇರ್ಮನ್‌ ಹುದ್ದೆಯಿಂದ ವಿಜಯ್‌ ಶೇಖರ್‌ ಶರ್ಮಾ ಅವರು ಕೆಳಗಿಳಿದಿದ್ದಾರೆ. ಪೇಟಿಎಂಗೆ ಆರ್‌ಬಿಐ ನಿರ್ಬಂಧ ವಿಧಿಸಿರುವುದು ತೀವ್ರ ಹಿನ್ನಡೆಗೆ ಕಾರಣವಾಗಿದೆ. ಇದರಿಂದಾಗಿ ವಿಜಯ್‌ ಶೇಖರ್‌ ಶರ್ಮಾ ಅವರು ರಾಜೀನಾಮೆ ನೀಡಿದ್ದಾರೆ ಎಂದು ಕಂಪನಿ ತಿಳಿಸಿದೆ.

“ಪೇಟಿಎಂ ಪೇಮೆಂಟ್ಸ್‌ ಬ್ಯಾಂಕ್‌ ಚೇರ್ಮನ್‌ ಜತೆಗೆ ಮಂಡಳಿಯಿಂದಲೂ ವಿಜಯ್‌ ಶೇಖರ್‌ ಶರ್ಮಾ ಅವರು ರಾಜೀನಾಮೆ ನೀಡಿದ್ದಾರೆ. ಈಗ ಇಡೀ ಮಂಡಳಿಯನ್ನು ಹೊಸದಾಗಿ ರಚಿಸಲು ತೀರ್ಮಾನಿಸಲಾಗಿದ್ದು, ಹೊಸ ಚೇರ್ಮನ್‌ ಆಯ್ಕೆ ಪ್ರಕ್ರಿಯೆ ಆರಂಭವಾಗಿದೆ” ಎಂದು ಕಂಪನಿ ತಿಳಿಸಿದೆ. ಗ್ರಾಹಕರ ಖಾತೆಗಳಲ್ಲಿ ಠೇವಣಿ, ಸಾಲ ವಹಿವಾಟು ಮತ್ತು ಟಾಪ್-ಅಪ್​ಗಳನ್ನು ನಿಲ್ಲಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ಗೆ ನೀಡಿದ್ದ ಗಡುವನ್ನು ಮಾರ್ಚ್‌ 15ಕ್ಕೆ ವಿಸ್ತರಿಸಲಾಗಿದೆ. ಈ ಹಿಂದೆ ಫೆಬ್ರವರಿ 29ರ ಗಡುವು ನೀಡಲಾಗಿತ್ತು.

ಆರ್‌ಬಿಐ ನಿರ್ಬಂಧಕ್ಕೆ ಕಾರಣವೇನು?

ಒಂದೇ ಒಂದು ಪರ್ಮನೆಂಟ್​​ ಅಕೌಂಟ್​ ನಂಬರ್​ (ಪ್ಯಾನ್) ಮೂಲಕ 1,000 ಕ್ಕೂ ಹೆಚ್ಚು ಖಾತೆಗಳನ್ನು ಲಿಂಕ್ ಮಾಡಿರುವುದು ಕಂಡುಬಂದಿದೆ. ಆರ್​​ಬಿಐ ಮತ್ತು ಲೆಕ್ಕಪರಿಶೋಧಕರು ನಡೆಸಿದ ಪರಿಶೀಲನಾ ಪ್ರಕ್ರಿಯೆಗಳಲ್ಲಿ ಬ್ಯಾಂಕ್ ಸಲ್ಲಿಸಿದ ಮಾಹಿತಿ ತಪ್ಪಾಗಿದೆ ಎಂದು ತಿಳಿದುಬಂದಿತ್ತು. ಕೆಲವು ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಗೆ ಬಳಸಿರಬಹುದು ಎಂದು ಆರ್​​ಬಿಐ ಕಳವಳ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡುವುದರ ಜೊತೆಗೆ, ಆರ್​​ಬಿಐ ತನ್ನ ಸಂಶೋಧನೆಗಳನ್ನು ಗೃಹ ಸಚಿವಾಲಯ ಮತ್ತು ಪ್ರಧಾನಿ ಕಚೇರಿಗೆ ಕಳುಹಿಸಿದೆ.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನ ಮಾತೃಸಂಸ್ಥೆಯಾದ ಒನ್97 ಕಮ್ಯುನಿಕೇಷನ್ಸ್ ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿ.‌ಗಳ ನೋಡೆಲ್ ಖ್ಯಾತೆಗಳನ್ನು ರಿಸರ್ವ್ ಬ್ಯಾಂಕ್ ರದ್ದು ಮಾಡಿದೆ. ಬ್ಯಾಂಕಿನಲ್ಲಿನ ನಿಯಮಗಳ ನಿರಂತರ ಉಲ್ಲಂಘನೆ ಮತ್ತು ನಿರಂತರ ಮೇಲ್ವಿಚಾರಣೆಯ ಕೊರತೆಯ ಬಗ್ಗೆ ಹೊರಗಿನ ಆಡಿಟ್‌ಗಳ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ರಿಸರ್ವ್ ಬ್ಯಾಂಕ್ ತನ್ನ ಆದೇಶದಲ್ಲಿ ತಿಳಿಸಿದೆ. ಹಾಗೆಯೇ, ಈಗ ಆರ್‌ಬಿಐ ಆದೇಶವು ಪೇಟಿಎಂನ ಏಕೀಕೃತ ಪಾವತಿ ವ್ಯವಸ್ಥೆ ಅಥವಾ ಯುಪಿಐ ವಿಭಾಗಕ್ಕೆ ಯಾವುದೇ ತೊಂದರೆಯುಂಟು ಮಾಡುವುದಿಲ್ಲ. ಯುಪಿಐ ವ್ಯವಹಾರವು ಮುಂದುವರಿಯಲಿದೆ.

ಇದನ್ನೂ ಓದಿ: Paytm Crisis: ಪೇಟಿಎಂನ ಥರ್ಡ್ ಪಾರ್ಟಿ ಆ್ಯಪ್ ಮನವಿಯನ್ನು ಎನ್‌ಪಿಸಿಐ ಪರಿಶೀಲಿಸಲಿ ಎಂದ ಆರ್‌ಬಿಐ

ಆರ್​ಬಿಐ ನಿರ್ದೇಶನದಿಂದಾಗಿ ತನ್ನ ವಾರ್ಷಿಕ ಗಳಿಕೆಯ ಮೇಲೆ 300ರಿಂದ 500 ಕೋಟಿ ರೂ.ಗಳವರೆಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಪೇಟಿಎಂ ಹೇಳಿದೆ. ಒನ್ 97 ಭಾರತದ ಅತಿದೊಡ್ಡ ಪಾವತಿ ಸಂಸ್ಥೆಗಳಲ್ಲಿ ಒಂದಾಗಿದೆ. ಸಾಫ್ಟ್ ಬ್ಯಾಂಕ್ ಮತ್ತು ಆಂಟ್ ಫೈನಾನ್ಶಿಯಲ್‌ನ ಆರಂಭಿಕ ಹೂಡಿಕೆಗಳೊಂದಿಗೆ ಕಂಪನಿಯ 2022-23ರ ವಾರ್ಷಿಕ ವರದಿಯ ಪ್ರಕಾರ ಪೇಟಿಎಂ ಪೇಮೆಂಟ್ಸ್ ಬ್ಯಾಂಕಿನಲ್ಲಿ ಶೇ.49ರಷ್ಟು ಪಾಲು ಹೊಂದಿದೆ. ಸಿಇಒ ವಿಜಯ್ ಶೇಖರ್ ಶರ್ಮಾ ಉಳಿದ ಶೇ.51 ರಷ್ಟು ಪಾಲನ್ನು ಹೊಂದಿದ್ದಾರೆ. ಬ್ಯಾಂಕ್ 2015ರಲ್ಲಿ ಪರವಾನಗಿ ಪಡೆದಿತ್ತು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version