Site icon Vistara News

Vijayapura News : ಪ್ರೀತಿಸಿದವಳನ್ನೇ ಮದುವೆಯಾಗಲು ಯುವಕನ ಹಠ; ಪರಸ್ಪರ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿಕೊಂಡು ಆಸ್ಪತ್ರೆ ಸೇರಿದರು!

Vijayapura news

ವಿಜಯಪುರ : ತಮ್ಮ ಮಗಳನ್ನು ಮದುವೆಯಾಗಲು ಬಂದ ಆಕೆಯ ಪ್ರಿಯಕರನ ಮೇಲೆ ಪೋಷಕರೇ ಪೆಟ್ರೋಲ್​ ಹಾಕಿ ಸುಟ್ಟಿರುವ ಪ್ರಕರಣವೊಂದು ವಿಜಯಪುರ ಜಿಲ್ಲೆಯ (Vijayapura News) ಮುದ್ದೇಬಿಹಾಳ ಪಟ್ಟಣದಲ್ಲಿ ನಡೆದಿದೆ. ಅದರೆ, ಯುವತಿಯ ಪೋಷಕರು ಇದನ್ನು ನಿರಾಕರಿಸಿದ್ದು ಮಗಳನ್ನು ಕೊಡದಿರಲು ನಿರ್ಧರಿಸಿದ ನಮ್ಮನ್ನು ಸುಡಲು ಯುವಕ ಪೆಟ್ರೋಲ್ ತಂದಿದ್ದ ಎಂದು ಆರೋಪಿಸಿದ್ದಾರೆ. ಘಟನೆಯಲ್ಲಿ ಪ್ರಿಯಕರ ರಾಹುಲ್​ ರಾಮನಗೌಡ ಬಿರಾದಾರ ಸುಟ್ಟ ಗಾಯಗಳು ಹಾಗೂ ಮಾರಕಾಸ್ತ್ರಗಳ ಪೆಟ್ಟಿನಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಯುವತಿಯ ಮನೆಯ ನಾಲ್ವರು ಆಸ್ಪತ್ರೆ ಸೇರಿದ್ದಾರೆ. ಘಟನೆ ಬಗ್ಗೆ ಎರಡೂ ಕಡೆಯಿಂದ ದೂರು ಹಾಗೂ ಪ್ರತಿದೂರು ದಾಖಲಾಗಿದೆ.

ಆಸ್ಪತ್ರೆ ಸೇರಿರುವ ಢವಳಗಿ ಗ್ರಾಮದ ರಾಹುಲ್ ರಾಮನಗೌಡ ಬಿರಾದಾರ ಅವರ ಕುಟುಂಬಸ್ಥರು ಆತನ ಪ್ರಿಯತಮೆ ಐಶ್ವರ್ಯ ಮದರಿ ಅವರ ಚಿಕ್ಕಪ್ಪ ಮುತ್ತು ಮದರಿ, ಚಿಕ್ಕಮ್ಮ ಸೀಮಾ ಮದರಿ ಎಂಬುವರ ಮೇಲೆ ದೂರು ದಾಖಲಿಸಿದ್ದಾರೆ. ಕನ್ಯೆ ಕೇಳಲು ಹೋದ ನಮ್ಮಣ್ಣನಿಗೆ ಬೆಂಕಿ ಹಾಕಿ ಸುಟ್ಟು ರಾಡ್​ನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ಐಶ್ವರ್ಯ ಸೇರಿದಂತೆ ಅವರ ಕುಟುಂಬಸ್ಥರು ಮದುವೆಗೆ ಒಪ್ಪದ ನಮ್ಮನ್ನು ಸುಡಲು ರಾಹುಲ್ ಯತ್ನಿಸಿದ್ದಾನೆ ಎಂದು ದೂರು ನೀಡಿದ್ದಾರೆ. ಶೇಕಡಾ 70ರಷ್ಟು ಸುಟ್ಟ ಗಾಯಗಳಿಗೆ ಒಳಗಾಗಿರುವ ರಾಹುಲ್​ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ?

ರಾಹುಲ್ ರಾಮನಗೌಡ ಬಿರಾದಾರ ಅವರು ಐಶ್ವರ್ಯ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಮೂರು ವರ್ಷದಿಂದ ಪರಸ್ಪರ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಅಂತೆಯೇ ಅವರು ಮದುವೆಯಾಗಲು ನಿರ್ಧರಿಸಿದ್ದರು. ಇಬ್ಬರ ಪ್ರೀತಿ ವಿಚಾರ ತಿಳಿದ ಯುವತಿಯ ಪೋಷಕರು ಹುಡುಗನ ಮನೆಯವರಿಗೆ ಬರಲು ಹೇಳಿದ್ದರು. ಅವರು ಅಲ್ಲಿಗೆ ಹೋಗಿದ್ದಾಗ ಯುವತಿ ಮದುವೆ ನಿರಾಕರಿಸಿದ್ದಳು. ಆತನ ಗುಣ ಸರಿ ಇಲ್ಲ, ಹೀಗಾಗಿ ನಾನು ಮದ್ವೆಯಾಗಲ್ಲ ಎಂದು ಹೇಳಿದ್ದಳು. ಹುಡುಗಿ ಮದುವೆ ನಿರಾಕರಣೆ ಮಾಡಿದ್ದಾಳೆ ಎಂದು ರಾಹುಲ್ ಮನೆಯವರು ವಾಪಸ್ ಹೋಗಿದ್ದರು.

ಪ್ರೀತಿಸಿದ ಹುಡುಗಿಯೇ ಸಿಗಬೇಕು ಹಠ ಹಿಡಿದು ರಾಹುಲ್​ ಮತ್ತೆ ಹುಡುಗಿ ಮನೆಗೆ ಹೋಗಿದ್ದ. ಅಲ್ಲದೆ, ಮದುವೆಯಾಗದೇ ಹೋದರೆ ತಾವಿಬ್ಬರು ಜತೆಗಿದ್ದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದ. ಫೋಟೋ ಬೆದರಿಕೆಗೆ ತಣ್ಣಾಗಾದ ಯುವತಿಯ ಕುಟುಂಬಸ್ಥರು ಆಕೆ ಒಪ್ಪಿದರೆ ಲಗ್ನ ಮಾಡಿ ಕೊಡುವುದಾಗಿ ರಾಜಿ ಮಾಡಿ ಕಳುಹಿಸಿದ್ದರು. ಆ ಬಳಿಕವೂ ವಿವಾದ ಮುಂದುವರಿದಿತ್ತು. ಅಲ್ಲದೆ, ಹಲವು ಬಾರಿ ರಾಜಿ ಪಂಚಾಯತಿ ಕೂಡಾ ಮಾಡಲಾಗಿತ್ತು.

ಇದನ್ನೂ ಓದಿ: Mandya News : ಬೆಳ್ಳೂರಿನಲ್ಲಿ ಮುಸ್ಲಿಮ್ ಯುವಕರ ಗುಂಪಿನಿಂದ ಅಭಿಲಾಷ್​ ಎಂಬುವರ ಮೇಲೆ ಮಾರಕ ಹಲ್ಲೆ

ಸೋಮವಾರ ಮತ್ತೆ ರಾಹುಲ್ ಬಿರಾದಾರ ಐಶ್ವರ್ಯಾ ಮನೆಗೆ ಮತ್ತೆ ಹೋಗಿದ್ದ. ಈ ವೇಳೆ ಮತ್ತೆ ಮಾತುಕತೆ ನಡೆದಿದೆ. ಐಶ್ವರ್ಯಾ ಪೋಷಕರ ಪ್ರಕಾರ ಆತ ಮಾತುಕತೆಗೆ ಬರುವಾಗ ಪೆಟ್ರೋಲ್ ತಂದಿದ್ದ. ಅದನ್ನು ನಮ್ಮ ಮೇಲೆ ಹಾಕಿ ಸುಡಲು ಯತ್ನಿಸಿದ್ದ. ಆದರೆ, ಯುವಕನ ಪೋಷಕರು ಹೇಳುವ ಪ್ರಕಾರ ಐಶ್ವರ್ಯಾ ಅವರ ಪೋಷಕರು ರಾಹುಲ್ ಕೈಯಲ್ಲಿದ್ದ ಮೊಬೈಲ್ ಕಸಿಯಲು ಯತ್ನಿಸಿದ್ದಾರೆ. ಕೊಡದೇ ಹೋದಾಗ ರಾಡ್​ನಿಂದ ತಲೆಗೆ ಹಲ್ಲೆ ಮಾಡಿದ್ದಾರೆ. ಬಳಿಕ ಮೊದಲೇ ತಂದಿಟ್ಟಿದ್ದ ಪೆಟ್ರೋಲ್​ನಿಂದ ಸುಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬಸವನ ಬಾಗೇವಾಡಿ ಡಿಎಸ್ಪಿ ಬಾಳಪ್ಪ ನಂದಗಾಂವ, ಸಿಪಿಐ ಮಲ್ಲಿಕಾರ್ಜುನ ತುಳಸೀಗೇರಿ, ಪಿಎಸೈಗಳಾದ ಸಂಜಯ್ ತಿಪ್ಪರಡ್ಡಿ, ಎಸ್.ಆರ್.ನಾಯಕ ಅವರು ಭೇಟಿ ನೀಡಿ ತನಿಖೆ ಕೈಕೊಂಡಿದ್ದಾರೆ. ವಿಜಯಪುರದಿಂದ ಆಗಮಿಸಿದ್ದ ವಿಶೇಷ ತಂಡ ಘಟನಾ ಸ್ಥಳದಲ್ಲಿನ ಬೆರಳಚ್ಚು ಸೇರಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ.

ಘಟನೆಯಲ್ಲಿ ಯಾರು ಯಾರಿಗೆ ಪೆಟ್ರೋಲ್ ಎರಚಿ ಹತ್ಯೆಗೆ ಯತ್ನಿಸಿದರು ಅನ್ನೋದು ತನಿಖೆಯಿಂದ ಹೊರಬರಬೇಕಿದೆ. ತಮ್ಮ ಪ್ರೀತಿಗೆ ಮೋಸವಾಗಿದ್ದು ರಾಹುಲ್ ಸಿಟ್ಟಿಗೆ ಕಾರಣವಾಗಿತ್ತು. ಇನ್ನೊಂದು ಕಡೆಗೆ ರಾಹುಲ್​ ಕಿರುಕುಳದಿಂದ ಯುವತಿ ಮನೆಯವರು ಬೇಸತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Exit mobile version