Site icon Vistara News

Vinesh Phogat: ವಿನೇಶ್‌ ಪೋಗಟ್‌ಗೆ ಭಾರೀ ಹಿನ್ನಡೆ; ಬೆಳ್ಳಿ ಪದಕ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

Vinesh Phogat

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌(Paris Olympics 2024)ನಲ್ಲಿ ಕೇವಲ 100ಗ್ರಾಂ ಹೆಚ್ಚು ತೂಕದಿಂದಾಗಿ ಫೈನಲ್‌ ಪಂದ್ಯಾಟದಿಂದ ಅನರ್ಹತೆಗೊಂಡಿದ್ದ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರಿಗೆ ಭಾರೀ ಹಿನ್ನಡೆಯಾಗಿದೆ. ತಮ್ಮ ಅನರ್ಹತೆ ಪ್ರಶ್ನಿಸಿ ಬೆಳ್ಳಿ ಪದಕ ನೀಡುವಂತೆ ಕೋರಿ ವಿನೇಶ್‌ ಸಲ್ಲಿಸಿದ್ದ ಅರ್ಜಿಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS) ತಿರಸ್ಕರಿಸಿದೆ. ಆಮೂಲಕ ರಜತ ಪದಕ(Silver Medal)ವೂ ವಿನೇಶ್‌ ಪೋಗಟ್‌ ಕೈತಪ್ಪಿದೆ.

ಪ್ಯಾರಿಸ್​ ಒಲಿಂಪಿಕ್ಸ್​ ಕುಸ್ತಿ ಫೈನಲ್​ ಪಂದ್ಯಕ್ಕೂ ಮುನ್ನ ದೇಹತೂಕ ಪರೀಕ್ಷೆಯಲ್ಲಿ 100 ಗ್ರಾಂ ಹೆಚ್ಚು ಕಂಡು ಬಂದ ಕಾರಣ ಅವರನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಗಿತ್ತು. ಇದರಿಂದ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವ ಅವಕಾಶ ಕೈಜಾರಿತ್ತು. ಅನರ್ಹ ಮಾಡಿದ್ದ ಬಗ್ಗೆ ಪ್ರಶ್ನಿಸಿ ವಿನೇಶ್ ಅವರು ತಮಗೆ ಜಂಟಿ ಬೆಳ್ಳಿ ಪದಕವನ್ನು ನೀಡಬೇಕು ಎಂದು ಮೇಲ್ಮನವಿ ಸಲ್ಲಿಸಿದ್ದರು.

ಇದನ್ನು ಒಲಿಂಪಿಕ್ಸ್‌ನಲ್ಲಿರುವ ಕ್ರೀಡಾ ನ್ಯಾಯಮಂಡಳಿಯ ಹಂಗಾಮಿ ಪೀಠವು ವಿಚಾರಣೆ ನಡೆಸಿ ಒಲಿಂಪಿಕ್ಸ್​ ಮುಕ್ತಾಯಕ್ಕೂ ಮುನ್ನ ತೀರ್ಪು ಪ್ರಕಟಿಸುವುದಾಗಿ ತಿಳಿಸಿತ್ತು. ಆದರೆ 2 ಬಾರಿ ಈ ತೀರ್ಪು ಪ್ರಕಟ ಮುಂದೂಡಿಕೆಯಾಗಿತ್ತು. ಇದೀಗ ಇಂದು ತೀರ್ಪು ಪ್ರಕಟಿಸಿರವ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ(CAS) ಪೋಗಟ್‌ ಅರ್ಜಿ ವಜಾಗೊಳಿಸಿದೆ.

ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ಸೇರಿದಂತೆ ವಿನೇಶ್ ಅವರ ವಕೀಲರು ವಿನೇಶ್​ ಪರ ವಾದ ಮಾಡಿದ್ದಾರೆ. ತೂಕ ಹೆಚ್ಚಳವು ದೇಹದ ನೈಸರ್ಗಿಕ ಚೇತರಿಕೆ ಪ್ರಕ್ರಿಯೆಯಿಂದಾಗಿ ಮತ್ತು ದೇಹ ನೋಡಿಕೊಳ್ಳುವುದು ಕ್ರೀಡಾಪಟುವಿನ ಮೂಲಭೂತ ಹಕ್ಕು ಎಂದು ವಾದಿಸಿದ್ದಾರೆ. ಸ್ಪರ್ಧೆಯ 1ನೇ ದಿನದಂದು ಆಕೆಯ ದೇಹದ ತೂಕವು ನಿಗದಿತ ಮಿತಿಗಿಂತ ಕಡಿಮೆಯಾಗಿತ್ತು. ಬಳಿಕ ಏಕಾಏಕಿ ಏರಿಕೆಯಾಗಿದೆ. ಅದು ವಂಚನೆಯಲ್ಲ ಎಂದು ಅವರು ವಾದಿಸಿದ್ದಾರೆ.

ಸೆಮಿಫೈನಲ್​ ವೇಳೆ ವಿನೇಶ್​ 49.9 ಕೆಜಿ ತೂಕವಿದ್ದರು. 3 ಬೌಟ್‌ಗಳು ಮುಗಿಯುವ ವೇಳೆಗೆ ಶಕ್ತಿ ಕಾಪಾಡಿಕೊಳ್ಳಲು ಹೈ ಎನರ್ಜಿ ಆಹಾರ ಸೇವಿಸಿದ ಕಾರಣ ಅವರ ತೂಕ 2.8 ಕೆಜಿ ಹೆಚ್ಚಳವಾಗಿತ್ತು. ಈ 2.8 ಕೆಜಿಯನ್ನು ಕಡಿಮೆ ಮಾಡಲು ವಿನೇಶ್‌ ರಾತ್ರಿಯಿಡೀ ಯಾವುದೇ ಆಹಾರ ಸೇವಿಸದೇ, ಸೈಕ್ಲಿಂಗ್‌ ನಡೆಸಿ, ಸ್ಕಿಪ್ಪಿಂಗ್‌ ಮಾಡಿದ್ದರು. ತೂಕ ಇಳಿಸಲು ಬೇಕಾಗುವ ಎಲ್ಲ ಕಸರತ್ತುಗಳನ್ನು ಕೈಗೊಂಡಿದ್ದರು. ಈ ಮೂಲಕ ಅವರು ಸಾಕಷ್ಟು ತೂಕ ಇಳಿಸಿದ್ದರು. ಕೊನೆ ಕ್ಷಣದಲ್ಲಿ ಅವರ ಕೂದಲು ಕತ್ತರಿಸಿ, ಬಟ್ಟೆಗಳ ಗಾತ್ರವನ್ನು ಕುಗ್ಗಿಸಿ ಪರೀಕ್ಷೆಗೆ ಕಳುಹಿಸಲಾಯಿತು. ಆದರೂ 100 ಗ್ರಾಂ ಹೆಚ್ಚಿದ್ದ ಕಾರಣ ಅನರ್ಹಗೊಂಡರು.

ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಮಹಿಳೆಯರ 50 ಕೆ.ಜಿ ಚಿನ್ನದ ಪದಕದಿಂದ ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿದ ಬೆನ್ನಲ್ಲೇ ವಿಶ್ವ ಕುಸ್ತಿ ಆಡಳಿತ ಮಂಡಳಿ ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ತಮ್ಮ ನಿಯಮದಲ್ಲಿ ಬದಲಾವಣೆ ಮಾಡಲು ಮುಂದಾಗಿದೆ. ತೂಕದ ನಿಯಮಗಳು ಸಂಪೂರ್ಣವಾಗಿ ಬದಲಾಗುವ ಸಾಧ್ಯತೆಯಿಲ್ಲವಾದರೂ, ಕ್ರೀಡಾಪಟುಗಳ ಸುರಕ್ಷತೆ ಮತ್ತು ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲವು ಸಣ್ಣ ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: Vinesh Phogat : ವಿನೇಶ್​ ಪೋಗಟ್​ ಅನರ್ಹತೆ ತೀರ್ಪು ಆಗಸ್ಟ್​​​ 16ಕ್ಕೆ ಮುಂದೂಡಿಕೆ

Exit mobile version