ಬೆಂಗಳೂರು: ತಾನು ಮದುವೆಯಾಗುವ ಹುಡುಗ ಹೀಗಿರಬೇಕು, ಹಾಗಿರಬೇಕು ಎಂದು ಹುಡುಗಿಯರು ಬಯಸುವುದು ಸಹಜ. ಒಳ್ಳೆಯ ಗುಣ ನಡತೆ ಇರುವ, ಶ್ರೀರಾಮ ಚಂದಿರನಂತೆ ಇರುವ ಹುಡುಗ ಸಿಕ್ಕರೆ ಕಣ್ಮುಚ್ಚಿ ಮದುವೆಯಾಗಿ ಬಿಡುತ್ತೇವೆ ಎಂಬ ಕಾಲ ಎಂದೋ ಹೊರಟು ಹೋಗಿದೆ. ಈಗ ಏನಿದ್ದರೂ ಅತ್ತೆ ಮಾವನಿರಬಾರದು, ಒಬ್ಬನೇ ಮಗನಿರಬೇಕು, ಕಾರು, ಬಂಗಲೆ ಇರಬೇಕು ಎಂಬ ದೊಡ್ಡ ಪಟ್ಟಿಯನ್ನೇ ಕೊಡುತ್ತಾರೆ. ಆದರೆ ಇಲ್ಲೊಬ್ಬಳು ಹುಡುಗಿ ತಾನು ಮದುವೆಯಾಗಲಿರುವ ಹುಡುಗ ಹೇಗಿರಬೇಕು ಎಂದು ಕಳುಹಿಸಿದ ವಾಟ್ಸಾಪ್ ಸಂದೇಶ ಎಲ್ಲೆಡೆ ಸಖತ್ ವೈರಲ್ (Viral News ) ಆಗಿದ್ದು ಹುಡುಗರ ಮಂಡೆ ಬಿಸಿ ಮಾಡಿದೆ ಎಂದರೆ ಸುಳ್ಳಲ್ಲ!
ವೈರಲ್ ಆಯ್ತು ವಾಟ್ಸಾಪ್ ಸಂದೇಶ
ತಾನು ಮದುವೆಯಾಗಬೇಕಾದ ಹುಡುಗನಲ್ಲಿ ನಿರ್ದಿಷ್ಟ ಗುಣಗಳಿರಬೇಕೆಂದು ಪ್ರತಿ ಹೆಣ್ಣು ಬಯಸುವುದು ಸಾಮಾನ್ಯ. ಭವಿಷ್ಯದ ದೃಷ್ಟಿಯಿಂದ ಸ್ಥಿತಿವಂತರಾಗಿರಬೇಕೆಂದು ಬಯಸುವುದೂ ವಿಶೇಷವೇನಲ್ಲ. ಆದರೆ ಈಕೆಯ ವಾಟ್ಸಾಪ್ ಸಂದೇಶದಲ್ಲಿ ಬರೆದಿರುವುದು ನೋಡಿದರೆ ಹುಡುಗರು ಜೀವನ ಮುಂದೆ ಭಾರೀ ಕಷ್ಟವಿದೆ ಅನಿಸುತ್ತದೆ! ತನ್ನನ್ನು ಮದುವೆಯಾಗಲಿರುವ ಹುಡುಗನ ವಾರ್ಷಿಕ ಆದಾಯ ಕನಿಷ್ಠ 1 ಕೋಟಿ ರೂ. ಇರಬೇಕು ಎಂದು ಕಡ್ಡಿ ತುಂಡುಮಾಡುವಂತೆ ಬರೆದಿದ್ದಾಳೆ. ಅಂದ ಹಾಗೇ ಈಕೆಯ ಆದಾಯ 4 ಲಕ್ಷ ರೂ. ಇದೆಯಂತೆ!
ಇನ್ನು ಈ ವಾಟ್ಸಾಪ್ ಸಂದೇಶ ಟ್ರೋಲ್ ಆಗಲು ಇದಿಷ್ಟೇ ಕಾರಣವಲ್ಲ. @Ambar_SIFF_MRA ಅವರು ‘X’ ಖಾತೆಯಲ್ಲಿ ಹಂಚಿಕೊಂಡ ಚಿತ್ರದಲ್ಲಿ, ಅನುವಾದಿಸಲಾದ ಮರಾಠಿ ವಾಟ್ಸಾಪ್ ಸಂದೇಶವು 37 ವರ್ಷದ ಮುಂಬೈ ಮೂಲದ ಮಹಿಳೆ ತನ್ನ ಸಂಗಾತಿಯ ಬಗ್ಗೆ ವಿಚಿತ್ರವಾದ ನಿರೀಕ್ಷೆಗಳನ್ನು ಇಟ್ಟುಕೊಂಡಿರುವುದನ್ನು ಬಹಿರಂಗಪಡಿಸಿದೆ.
ವಾರ್ಷಿಕ ಆದಾಯ ಕನಿಷ್ಠ 1 ಕೋಟಿ ರೂ. ಇರಬೇಕು
ಮುಂಬೈನಲ್ಲಿ ಸ್ವಂತ ಮನೆ ಇರಬೇಕು, ಇದು ಅವನಿಗೆ ಎರಡನೇ ಮದುವೆಯಾಗಿರಬಾರದು, ಹುಡುಗ ಎಂಬಿಬಿಎಸ್ ಅಥವಾ ಚಾರ್ಟೆಡ್ ಅಕೌಂಟೆಂಟ್ ಆಗಿ ಸ್ವಂತ ಕಂಪೆನಿ ಹೊಂದಿರಬೇಕು. ಇಲ್ಲವಾದರೆ ಯಾವುದೇ ಶೈಕ್ಷಿಣಿಕ ಹಿನ್ನೆಲೆಯಿಂದಾದರೂ ಉನ್ನತ ಹುದ್ದೆ ಹೊಂದಿರಬೇಕು, ಒಟ್ಟಾಗಿ ಆತನ ವಾರ್ಷಿಕ ಆದಾಯ ಕನಿಷ್ಠ 1 ಕೋಟಿ ರೂ. ಆಗಿರಬೇಕು ಎಂದು ಸ್ಪಷ್ಟವಾಗಿ ಸಂದೇಶದಲ್ಲಿ ಹೇಳಿದ್ದಾಳೆ.
ಇಷ್ಟೇ ಅಲ್ಲಾ, ಇನ್ನಷ್ಟು ಡಿಮ್ಯಾಂಡ್ ಆ ಸಂದೇಶದಲ್ಲಿ ಇದೆ. ಈಕೆಗೆ ವಿದೇಶದಲ್ಲಿ ವಾಸಿಸುವ ಆಸೆ ಕೂಡ ಇದೆಯಂತೆ. ಅದರಲ್ಲೂ ಯುರೋಪ್ ಅಥವಾ ಇಟಲಿಯಲ್ಲಿ ವಾಸಿಸಲು ಇಷ್ಟಪಡುವುದಾಗಿ ತಿಳಿಸಿದ್ದಾಳೆ.
ಟೀಕೆಗಳ ಸುರಿಮಳೆ
ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಕೆಲವರು ಕಟುವಾಗಿ ಟೀಕಿಸಿದ್ದಾರೆ. “ಇದರಲ್ಲಿ ತಪ್ಪೇನಿಲ್ಲ. ಪ್ರತಿಯೊಬ್ಬರಿಗೂ ಆಯ್ಕೆ ಮಾಡುವ ಹಕ್ಕಿದೆ. ಅವಳಿಗೆ ತನ್ನ ವರನನ್ನು ಆಯ್ಕೆ ಮಾಡುವ ಹಕ್ಕಿದೆ. ಅಂತೆಯೇ ಆಕೆಯನ್ನು ತಿರಸ್ಕರಿಸುವ ಹಕ್ಕು ಪುರುಷರಿಗೂ ಇದೆ” ಎಂದು ಬಳಕೆದಾರರೊಬ್ಬರು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: Madhuri Dixit: ಲೈಂಗಿಕ ಕಿರುಕುಳ ದೃಶ್ಯದಲ್ಲಿ ನಟಿಸಲಾರೆ ಎಂದು ಗೋಳೋ ಎಂದು ಅತ್ತಿದ್ದ ಮಾಧುರಿ ದೀಕ್ಷಿತ್!
ಐಟಿ ಡೇಟಾ ಪ್ರಕಾರ, ಭಾರತದಲ್ಲಿ ಕೇವಲ 1.7 ಲಕ್ಷ ಜನರು 1 ಕೋಟಿಗಿಂತ ಹೆಚ್ಚಿನ ಆದಾಯವನ್ನು ಹೊಂದಿದ್ದಾರೆ. ಆದ್ದರಿಂದ 37 ವರ್ಷ ವಯಸ್ಸಿನಲ್ಲಿ ತನ್ನ ‘ಡ್ರೀಂ ಬಾಯ್’ ಹುಡುಕುವ ಅವಕಾಶವು ಶೇ.0.01 ಆಗಿದೆ” ಎಂದು ಮತ್ತೊಬ್ಬರು ವಾಸ್ತವತೆಯ ಪ್ರಮಾಣದ ಬಗ್ಗೆ ಚುಚ್ಚಿ ಮಾತನಾಡಿದ್ದಾರೆ. ಇನ್ನೊಬ್ಬರು “ಶಾಪಿಂಗ್ ಅಮಲಿನಲ್ಲಿದೆ”ಎಂದು ತೋರುತ್ತದೆ. ವರನ ಗುಣಗಳಾದ ತಿಳುವಳಿಕೆ, ನಡವಳಿಕೆ, ಕುಟುಂಬ ಇತ್ಯಾದಿ ಗುಣಗಳನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಕೇವಲ ಹಣದ ಬಗ್ಗೆ ಮಾತ್ರ ಹೇಳಲಾಗಿದೆ” ಎಂದು ವ್ಯಂಗ್ಯವಾಡಿದ್ದಾರೆ.