ಬೆಂಗಳೂರು: ಅಡುಗೆ ಮಾಡುವುದೆಂದರೆ ಬೋರು ಎಂದು ಈಗಿನವರು ಹೋಟೆಲ್‌ಗಳಿಂದ ಆರ್ಡರ್ ಮಾಡಿ ತಿಂದು ಕೊನೆಗೆ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಈ ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು ಇದರ ಸಹವಾಸವೇ ಬೇಡ ಎಂದು ರೆಡಿ ಟು ಈಟ್ ಫುಡ್‌ನ ಮೊರೆ ಹೋಗುತ್ತಿದ್ದಾರೆ. ಆದರೆ ಇಲ್ಲೊಬ್ಬರು ಅಜ್ಜಿ (Viral News) ಮಾತ್ರ ಹರೆಯದ ಹುಡುಗಿಯಂತೆ ಪಟಪಟನೇ ರುಚಿಕರವಾದ ಅಡುಗೆ ತಯಾರಿಸಿ ನೆಟ್ಟಿಗರಿಂದ ಶಬ್ಬಾಸ್ ಗಿರಿ ಪಡೆದುಕೊಂಡಿದ್ದಾರೆ.
ರುಚಿಕರವಾದ ಅಡುಗೆ ಇದ್ದರೆ ಯಾರು ಬೇಡ ಅನ್ನುತ್ತಾರೆ ಹೇಳಿ? ಮೊಬೈಲ್‌ನಲ್ಲಿ ಏನಾದರೂ ಹುಡುಕುತ್ತಿರುವಾಗ ಅಡುಗೆ ವಿಡಿಯೊಂದು ಕಾಣಿಸಿಕೊಂಡರೆ ಒಂದು ನಿಮಿಷವಾದರೂ ಅದನ್ನು ನೋಡೋಣ ಎಂಬ ಆಸೆ ಹುಟ್ಟುವುದು ಸಹಜ. ಅಡುಗೆಗೆ ಎಲ್ಲರ ಗಮನ ಸೆಳೆಯುವ ತಾಕತ್ತು ಅಷ್ಟಿದೆ ಎಂದರೆ ತಪ್ಪಾಗಲಾರದೇನೋ! ಅದರಲ್ಲೂ ಅಜ್ಜಿಯ ಕೈ ರುಚಿಯ ಬಗ್ಗೆ ಕೇಳಬೇಕೆ…? ಸೋಷಿಯಲ್ ಮೀಡಿಯಾದಲ್ಲಿ ಅಜ್ಜಿಯೊಬ್ಬರು ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಿದ ನುಗ್ಗೆಕಾಯಿ ಬಾರ್ಬೆಕ್ಯೂ ಸಖತ್ ವೈರಲ್ ಆಗಿದೆ. ಸಾಂಪ್ರದಾಯಿಕ ವಿಧಾನಗಳನ್ನು ಬಳಸಿಕೊಂಡು ತನ್ನದೇ ಕೌಶಲ್ಯವನ್ನು ಸೇರಿಸಿ ಮಾಡಿದ ‘ನುಗ್ಗೆಕಾಯಿ ಬಾರ್ಬೆಕ್ಯೂ’ ನೆಟ್ಟಿಗರ ಗಮನ ಸೆಳೆದಿದೆ.
ಇದನ್ನೂ ಓದಿ:Viral News: ನೀರಿನ ಕೊಳಕ್ಕೆ ಬಿದ್ದ ಯಜಮಾನನನ್ನು ರಕ್ಷಿಸಿದ ನಾಯಿ; ಸಖತ್ ವೈರಲ್ ಈ ವಿಡಿಯೊ
‘ನುಗ್ಗೆಕಾಯಿ ಬಾರ್ಬೆಕ್ಯೂ’ ರೆಸಿಪಿ
ಅಜ್ಜಿ ಮಾಡುತ್ತಿರುವ ಈ ನುಗ್ಗೆಕಾಯಿ ಬಾರ್ಬೆಕ್ಯೂ ನೋಡಿದರೆ ಬಾಯಲ್ಲಿ ನೀರು ಬರುತ್ತದೆ. ನೆಲದಲ್ಲಿ ಹೊಂಡ ಮಾಡಿಕೊಂಡು ಇಟ್ಟಿಗೆ ಕಟ್ಟಿದ ಒಲೆಯಲ್ಲಿ ಬೆಂಕಿ ಹಾಕಿ ನುಗ್ಗೆಕಾಯಿಗಳನ್ನು ಸುಡುತ್ತಾಳೆ. ಬಳಿಕ ನುಗ್ಗೆಕಾಯಿ ಸಿಪ್ಪೆ ತೆಗೆದು ಚಮಚದ ಸಹಾಯದಿಂದ ಒಳಗಿನ ತಿರುಳನ್ನು ತೆಗೆದಿಟ್ಟುಕೊಳ್ಳುತ್ತಾಳೆ. ನಂತರ ಒಲೆಯಲ್ಲಿ ಮಡಕೆಯೊಂದನ್ನು ಇಟ್ಟು ಅದಕ್ಕೆ ಸಾಸಿವೆ ಎಣ್ಣೆ, ಸಾಸಿವೆ ಕಾಳು, ಉದ್ದಿನಬೇಳೆ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ತಯಾರಿಸಿಕೊಳ್ಳುತ್ತಾಳೆ. ನಂತರ ಕತ್ತರಿಸಿದ ಟೊಮ್ಯಾಟೊ, ಈರುಳ್ಳಿ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಬಳಿಕ ಈ ಮಿಶ್ರಣಕ್ಕೆ ನುಗ್ಗೆಕಾಯಿಯ ತಿರುಳನ್ನು ಸೇರಿಸಿಕೊಳ್ಳುತ್ತಾಳೆ. ನಿರಂತರವಾಗಿ ಕೈಯಾಡಿಸಿ ರುಚಿಕರವಾದ ನುಗ್ಗೆಕಾಯಿ ಬಾರ್ಬೆಕ್ಯೂ ಫ್ರೈ ತಯಾರಿಸುತ್ತಾಳೆ. ಅಜ್ಜಿ ಮಾಡಿದ ಈ ಖಾದ್ಯ ನೋಡುಗರ ಬಾಯಲ್ಲಿ ನೀರು ಬರಿಸುವುದರ ಜೊತೆಗೆ ಎಲ್ಲರ ಮೆಚ್ಚುಗೆ ಗಳಿಸಿದೆ. ಅಜ್ಜಿಯ ಈ ಅಡುಗೆಯ ವಿಡಿಯೋ 6 ಮಿಲಿಯನ್ ವೀವ್ಸ್ ಪಡೆದಿದೆ.
ಓಲ್ಡ್ ಇಸ್ ಗೋಲ್ಡ್; ನೆಟ್ಟಿಗರ ಮೆಚ್ಚುಗೆ
ಅಂದ ಹಾಗೇ ಈ ಅಜ್ಜಿಯ ಹೆಸರು ಈಶ್ವರಿ. ಇವರು ತಮಿಳುನಾಡಿನವರು. ಸೋಷಿಯಲ್ ಮೀಡಿಯಾದಲ್ಲಿ ವೈವಿಧ್ಯ ಪಾಕ ಶೈಲಿಗೆ ಈ ಅಜ್ಜಿ ಹೆಸರುವಾಸಿಯಾಗಿದ್ದಾರೆ. ತಮ್ಮ ಹಳ್ಳಿಯ ರುಚಿಕರವಾದ ಪಾಕವಿಧಾನಗಳನ್ನು ಅಜ್ಜಿಯೂ ಆಗಾಗ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಅವರ @countryfoodcooking ಪುಟದಲ್ಲಿ ಈ ವಿಡೀಯೋ ಹಾಕಲಾಗಿದೆ. ಈ ವಿಡಿಯೋ ಸಾಕಷ್ಟು ಮೆಚ್ಚುಗೆ ಪಡೆದಿದ್ದು, ಅನೇಕರು ಅಜ್ಜಿಯ ಪಾಕ ಜಾಣ್ಮೆಗೆ ತಲೆಬಾಗಿದ್ದಾರೆ. ಒಬ್ಬರು ಕಮೆಂಟ್ ನಲ್ಲಿ ಓಲ್ಡ್ ಇಸ್ ಗೋಲ್ಡ್ ಎಂದಿದ್ದಾರೆ. ಇನ್ನೊಬ್ಬರು ಇದು ರುಚಿಕರವಷ್ಟೇ ಅಲ್ಲ ಪ್ರೋಟಿನ್ಯುಕ್ತ ಆಹಾರವೆಂದು ಕಮೆಂಟ್ ಗಳ ಮೂಲಕ ಶ್ಲಾಘಿಸಿದ್ದಾರೆ.