ಮಹಾರಾಷ್ಟ್ರ: ಎಲ್ಲಾ ಜನರಿಗೂ ಅವರ ಧರ್ಮ ಮತ್ತು ದೇವರ ಮೇಲೆ ಗೌರವವಿರುತ್ತದೆ. ಹಾಗಾಗಿ ಅವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ತಮ್ಮ ಧರ್ಮಕ್ಕೆ ಅನುಗುಣವಾಗಿ ದೇವರ ಹೆಸರನ್ನು ಇಡುತ್ತಾರೆ. ಆ ಧರ್ಮದವರನ್ನು ನೋಡಿದರೆ ಈ ಧರ್ಮದವರಿಗೆ ಆಗಲ್ಲ ಇತ್ಯಾದಿ ವೈರುದ್ಯಗಳೂ ಇವೆ. ಕೆಲವೊಮ್ಮೆ ಈ ಜಾತಿ, ಧರ್ಮಗಳನ್ನು ಮೀರಿದ ಭಾವವೊಂದು ಮೂಡುತ್ತದೆ. ಇಂತಹದ್ದೇ ಒಂದು ಘಟನೆ ನಡೆದಿದೆ. ಮುಸ್ಲಿಂ ದಂಪತಿ ತಮ್ಮ ಮಗಳಿಗೆ ಹಿಂದೂ ದೇವರ ಹೆಸರನ್ನು ಇಡುವ ಮೂಲಕ ಆಶ್ಚರ್ಯವನ್ನುಂಟು ಮಾಡಿದ್ದಾರೆ. ಈ ಸುದ್ದಿ ಎಲ್ಲೆಡೆ ವೈರಲ್ (Viral News)ಆಗಿದೆ.
ಮಹಾರಾಷ್ಟ್ರದಲ್ಲಿ ಚಲಿಸುತ್ತಿದ್ದ ರೈಲಿನಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗೆ ʼಮಹಾಲಕ್ಷ್ಮಿ ʼ ಎಂದು ನಾಮಕರಣ ಮಾಡಿದ್ದಾರಂತೆ. ಜೂನ್ 6ರಂದು ಕೋಲ್ಹಾಪುರ-ಮುಂಬೈ ಮಹಾಲಕ್ಷ್ಮಿ ಎಕ್ಸ್ ಪ್ರೆಸ್ ನಲ್ಲಿ ಮೀರಾ ರೋಡ್ ನ ಫಾತಿಮಾ ಖಾತುನ್ ಎಂಬ 31 ವರ್ಷದ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಆ ವೇಳೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವಿಚಾರ ಮಹಿಳೆ ತನ್ನ ಪತಿಗೆ ತಿಳಿಸಿದ್ದಾಳೆ ಮತ್ತು ನೋವು ಹೆಚ್ಚಾದ ಕಾರಣ ರೈಲಿನಲ್ಲಿರುವ ಶೌಚಾಲಯಕ್ಕೆ ತೆರಳಿದ್ದಾಳೆ. ಬಳಿಕ ರೈಲು ಲೋನಾವಾಲಾ ದಾಟಿದ ನಂತರ ಆಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ರೈಲಿನಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ಆಕೆಗೆ ಸಹಾಯ ಮಾಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಈ ಬಗ್ಗೆ ಮಹಿಳೆಯ ಪತಿ ತಯ್ಯಬ್ ಕರ್ಜಾತ್ ಸರ್ಕಾರಿ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ತಾಯಿ ಮಗುವನ್ನು ರೈಲಿನಿಂದ ಕೆಳಗಿಳಿಸಿ ಹತ್ತಿರವಿದ್ದ ಉಪಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿನ ಸಿಬ್ಬಂದಿಗಳು ತಾಯಿ, ಮಗುವಿಗೆ ಅಗತ್ಯವಿರುವ ಚಿಕಿತ್ಸೆ ನೀಡಿ ಮೂರು ದಿನಗಳ ನಂತರ ಡಿಸ್ಚಾರ್ಜ್ ಮಾಡಿದ್ದಾರೆ. ನಂತರ ಆ ಮುಸ್ಲಿಂ ದಂಪತಿ ಮಗುವಿಗೆ ‘ಮಹಾಲಕ್ಷ್ಮಿ’ ಎಂದು ಹಿಂದೂ ದೇವರ ಹೆಸರನ್ನು ಇಟ್ಟು ಕುತೂಹಲ ಮೂಡಿಸಿದ್ದಾರೆ.
ಈ ಬಗ್ಗೆ ಮಗುವಿನ ತಂದೆ ತಯ್ಯಬ್ ಕರ್ಜಾತ್ ಅವರನ್ನು ಕೇಳಿದಾಗ, ತಿರುಪತಿಯಿಂದ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಪ್ರಯಾಣಿಸಿದ ಕೆಲವು ಸಹ ಪ್ರಯಾಣಿಕರು ತನ್ನ ಮಗಳು ಈ ರೈಲಿನಲ್ಲಿ ಹುಟ್ಟಿದ್ದು, ದೇವಿಯ ದರ್ಶನ ಪಡೆದಂತೆ ಆಯಿತು ಎಂದು ಹೇಳಿದರಂತೆ. ಹಾಗಾಗಿ ತಾನು ಮಗುವಿಗೆ ಈ ಹೆಸರಿಟ್ಟೆ ಎಂದು ತಿಳಿಸಿದ್ದಾರೆ. ಹಾಗೇ ಈ ಘಟನೆಯ ವೇಳೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
ಈ ದಂಪತಿಗೆ ಈಗಾಗಲೇ ಮೂವರು ಗಂಡು ಮಕ್ಕಳಿದ್ದಾರೆ. ಫಾತಿಮಾ ಅವರಿಗೆ ಜೂನ್ 20ಕ್ಕೆ ಹೆರಿಗೆ ಡೇಟ್ ನೀಡಲಾಗಿತ್ತು, ಆದರೆ ಹೊಟ್ಟೆ ನೋವು ಕಾಣಿಸಿಕೊಂಡ ಪರಿಣಾಮ ಆಕೆಗೆ ಜೂನ್ 6ಕ್ಕೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಹೆರಿಗೆ ಆಗಿದೆ ಎನ್ನಲಾಗಿದೆ.
ಇದನ್ನೂ ಓದಿ:Murder Case: 300 ಕೋಟಿಯ ಆಸ್ತಿಗಾಗಿ ಮಾವನ ಕೊಲೆಗೆ ಸುಪಾರಿ ಕೊಟ್ಟ ಸೊಸೆ!
ಒಟ್ಟಾರೆ ಮುಸ್ಲಿಂ ದಂಪತಿ ತಮ್ಮ ಮಗಳಿಗೆ ಹಿಂದೂ ದೇವರ ಹೆಸರನ್ನಿಟ್ಟಿದ್ದು ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದ್ದಂತು ಖಂಡಿತ. ಈ ಮೂಲಕವಾದರೂ ಹಿಂದೂ ಮತ್ತು ಮುಸ್ಲಿಂ ಧರ್ಮದವರು ಸಹಬಾಳ್ವೆಯಿಂದ ಬಾಳುವಂತಾಗಲಿ.