Site icon Vistara News

Idol found: ಬಾಲಕ ರಾಮ ಹೋಲುವ 11ನೇ ಶತಮಾನದ ವಿಗ್ರಹ ಕೃಷ್ಣಾ ನದಿಯಲ್ಲಿ ಪತ್ತೆ!

vishnu idol found in krishna river

ರಾಯಚೂರು: ರಾಯಚೂರಿನ ಕೃಷ್ಣಾ ನದಿಯಲ್ಲಿ (Krishna river) ಅಯೋಧ್ಯೆಯ ಬಾಲಕ ರಾಮನ (Ayodhya Balak Ram) ಮೂರ್ತಿಯನ್ನು ಹೋಲುವ ವಿಷ್ಣುವಿನ ವಿಗ್ರಹ (Vishnu Idol found) ಸೇರಿದಂತೆ ಹಲವು ಪುರಾತನ ವಿಗ್ರಹಗಳು ಪತ್ತೆಯಾಗಿವೆ. ದಶಾವತಾರಗಳಿಂದ ಕೂಡಿದ ವಿಷ್ಣುವಿನ ವಿಗ್ರಹ ಮತ್ತು ಪುರಾತನ ಶಿವಲಿಂಗ ಪತ್ತೆಯಾಗಿವೆ.

ಸೇತುವೆ ಕಾಮಗಾರಿ ವೇಳೆ ಪುರಾತನವಾದ ಈ ವಿಗ್ರಹಗಳು ಪತ್ತೆಯಾಗಿದ್ದು, 12-16ನೇ ಶತಮಾನದ ವಿಗ್ರಹಗಳಾಗಿರಬಹುದು ಎನ್ನಲಾಗಿದೆ. ವಿಷ್ಣುವಿನ ವಿಗ್ರಹ 11ನೇ ಶತಮಾನಕ್ಕೆ ಸೇರಿರುವ ಸಾಧ್ಯತೆ ಇದೆ. ನೀರಿಲ್ಲದೆ ನದಿ ಬತ್ತಿರುವುದರಿಂದ ನದಿಯ ಆಳದಲ್ಲಿ ಈ ವಿಗ್ರಹಗಳು ಕಂಡುಬಂದಿವೆ.

ಶಂಖ, ಚಕ್ರ, ಪದ್ಮಗಳನ್ನು ಹಿಡಿದ ಹಾಗೂ ಕಟಿಹಸ್ತನಾದ ವಿಷ್ಣುವಿನ ವಿಗ್ರಹವು ಪ್ರಭಾವಳಿಯಲ್ಲಿ ವೆಂಕಟೇಶನ ಶಿಲ್ಪ ಹಾಗೂ ದಶಾವತಾರ ಶಿಲ್ಪಗಳನ್ನು ಹೊಂದಿದೆ. ಇದು ಯಾವುದೋ ವೈಷ್ಣವ ದೇವಾಲಯಕ್ಕೆ ಸಂಬಂಧಿಸಿದ ವಿಷ್ಣುವಿನ ಮೂಲ ಮೂರ್ತಿ ಆಗಿರಬಹುದು. ಆಗಮ ಶಾಸ್ತ್ರದ ರೀತಿಯಲ್ಲೇ ವಿಷ್ಣುವಿನ ಮೂರ್ತಿಯ ರಚನೆ ಆಗಿದೆ. ಸದ್ಯ ವಿಗ್ರಹಗಳನ್ನು ನದಿಯಿಂದ ಮೇಲಕ್ಕೆ ಎತ್ತಿ ಸ್ಥಳೀಯರು ತಾತ್ಕಾಲಿಕ ರಕ್ಷಣೆ ವ್ಯವಸ್ಥೆ ಮಾಡಿದ್ದಾರೆ.

ಅಯೋಧ್ಯೆಯ ರಾಮಲಲ್ಲಾ ಮೂರ್ತಿಗೂ ಈ ವಿಷ್ಣುವಿನ ‌ಮೂರ್ತಿಗೂ ಸಾಮ್ಯತೆಯಿದೆ. ಹಸಿರು ಮಿಶ್ರಿತ ಗ್ರಾನೈಟ್ ಶಿಲೆಯಲ್ಲಿ ವಿಷ್ಣುವಿನ ಮೂರ್ತಿ ರಚನೆಯಾಗಿದೆ. ಈ ವಿಷ್ಣು ಮೂರ್ತಿ ವಿಶೇಷವಾದ ಪ್ರತಿಮಾ ಲಕ್ಷಣವನ್ನು ಹೊಂದಿದೆ ಎಂದು ಇತಿಹಾಸ & ಪುರಾತತ್ವ ಅಧ್ಯಯನ ಉಪನ್ಯಾಸಕಿ ಡಾ.ಪದ್ಮಾಜ್ ದೇಸಾಯಿ ಹೇಳಿದ್ದಾರೆ.

ರಾಯಚೂರು ಭೂಪ್ರದೇಶ ಈ ಹಿಂದೆ ವಿಜಯನಗರದ ಕೃಷ್ಣದೇವರಾಯರ ಆಳ್ವಿಕೆಗೆ ಒಳಪಟ್ಟಿತ್ತು. ಅದಕ್ಕೂ ಮೊದಲು ಮೌರ್ಯರು, ಶಾತವಾಹನರು, ಕದಂಬರ ಆಳ್ವಿಕೆಗೆ ಈ ಪ್ರದೇಶ ಒಳಪಟ್ಟಿತ್ತು. ವಿಜಯನಗರ ಸಾಮ್ರಾಜ್ಯದ ಬಳಿಕ ಬಳಿಕ ನಿಜಾಮರು ಮತ್ತು ಆದಿಲ್ ಷಾಹಿಗಳ ದಾಳಿಗೆ ಒಳಗಾಗಿತ್ತು. ನಿಜಾಮರು, ಆದಿಲ್ ಷಾಹಿ ದಾಳಿಗಳ ಸಂದರ್ಭದಲ್ಲಿ ಧ್ವಂಸಗೊಂಡ ದೇವಾಲಯದ ಶಿಲ್ಪಗಳಾಗಿರಬಹುದು ಎಂದು ದೇಸಾಯಿ ತಿಳಿಸಿದ್ದಾರೆ.

ಇದು 11ನೇ ಶತಮಾನಕ್ಕೆ ಸೇರಿದ ವಿಷ್ಣುವಿನ ವಿಗ್ರಹವಾಗಿರುವ ಸಾಧ್ಯತೆ ಇದೆ. ಸುಲ್ತಾನರ ದಾಳಿಯ ವೇಳೆ ‌ಮೂಲ ಮೂರ್ತಿ ಭಗ್ನವಾಗಿದ್ದರೆ ಅದನ್ನು ನೀರಿಗೆ ಬಿಟ್ಟಿರುವ ಸಾಧ್ಯತೆ ಇದೆ. ರಾಯಚೂರು ಭಾಗದಲ್ಲಿ ಸುಮಾರು 163ಕ್ಕೂ ಹೆಚ್ಚು ದಾಳಿಗಳು ಆಗಿವೆ. ಈ ಭಾಗದಲ್ಲಿ ಸತತವಾಗಿ ಶಾಹಿ ಮನೆತನಗಳು ದಾಳಿ ನಡೆಸಿವೆ. ಕೃಷ್ಣದೇವರಾಯನ ಕಾಲದ ನಂತರ ಮುಸಲ್ಮಾನ ಅರಸರು ಸ್ಥಳೀಯ ಅರಸರ ಮೇಲೆ ದಾಳಿ ಮಾಡಿದ್ದರು. ಈ ಹಿಂದೆ ಇಲ್ಲಿ ಎಷ್ಟೋ ನರಮೇಧಗಳು ನಡೆದ ಉದಾಹರಣೆ ಕೂಡ ಇವೆ. ಶೈವ, ವೈಷ್ಣವ ದೇವಾಲಯಗಳು ಕೂಡ ಮಸೀದಿಗಳಾಗಿ ಬದಲಾಗಿವೆ. ಧಾರ್ಮಿಕ ಸಂಘರ್ಷದಿಂದಲೂ ಮೂರ್ತಿಗಳನ್ನು ನೀರಿಗೆ ಹಾಕಿರಬಹುದು ಎಂದಿದ್ದಾರೆ.

Exit mobile version