Site icon Vistara News

ವಿಸ್ತಾರ ಸಂಪಾದಕೀಯ: ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿಗಳ ದಾಳಿ ಖಂಡನೀಯ

temple

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿರುವ ಶಿವ ವಿಷ್ಣು ದೇವಸ್ಥಾನಕ್ಕೆ ದಾಳಿ ಮಾಡಿರುವ ಖಲಿಸ್ತಾನವಾದಿಗಳು, ಹಿಂದೂ ವಿರೋಧಿ- ಭಾರತ ವಿರೋಧಿ ಬರಹಗಳನ್ನು ಬರೆದು ದೇವಸ್ಥಾನವನ್ನು ಹಾನಿಗೊಳಿಸಿದ್ದಾರೆ. ಇದು ಒಂದೇ ತಿಂಗಳಲ್ಲಿ ನಡೆಯುತ್ತಿರುವ ಮೂರನೇ ಇಂಥ ದಾಳಿ. ಈ ಹಿಂದೆ ಇಸ್ಕಾನ್‌, ಸ್ವಾಮಿನಾರಾಯಣ ಪಂಥದ ದೇವಾಲಯಗಳು ಇಲ್ಲಿ ದಾಳಿಗೀಡಾಗಿವೆ. ಮುಖ್ಯವಾಗಿ ಹಿಂದೂ ದೇವಾಲಯಗಳೇ ಈ ಪ್ರತ್ಯೇಕತಾವಾದಿಗಳ ಟಾರ್ಗೆಟ್‌ ಆಗಿವೆ. ಈ ಹಿಂದೆ ಕೆನಡಾದಿಂದ ಸತತವಾಗಿ ಇಂಥ ದಾಳಿಯ ಸುದ್ದಿಗಳು ಬರುತ್ತಿದ್ದವು. ಕೆನಡಾದಲ್ಲಿ ಬೇರು ಬಿಟ್ಟಿರುವ ಪ್ರತ್ಯೇಕತಾವಾದಿ ಖಲಿಸ್ತಾನಿಗಳು ಈಗ ಆಸ್ಟ್ರೇಲಿಯಾದಲ್ಲೂ ಬಾಲ ಬಿಚ್ಚುತ್ತಿದ್ದಾರೆ. ಭಾರತ ವಿರೋಧಿ ಸಿಖ್ ಭಯೋತ್ಪಾದಕ ಶಕ್ತಿಗಳು ಕೆನಡಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಭಾರತ ವಿರೋಧಿ, ಹಿಂದೂ ವಿರೋಧಿ ಚಟುವಟಿಕೆಗಳನ್ನು ಹೆಚ್ಚಿಸಿವೆ. ಕೆನಡಾದಲ್ಲಿ ಕಳೆದ ವರ್ಷ ಇಂಥ ಹತ್ತಕ್ಕೂ ಹೆಚ್ಚು ಘಟನೆಗಳು ನಡೆದಿವೆ. ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸುತ್ತಿರುವುದು ಆಘಾತಕಾರಿಯಾಗಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತ ಆಗ್ರಹಿಸಿದೆ. ದೇವಾಲಯಗಳು ಮಾತ್ರವೇ ಇವರ ಗುರಿಯಲ್ಲ, ಕೆನಡಾದ ರಿಚ್ಮಂಡ್‌ ಹಿಲ್‌ ಎಂಬಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನೂ ಇವರು ವಿರೂಪಗೊಳಿಸಿದ್ದರು.

ಒಂದು ಕಾಲದಲ್ಲಿ ಅಬ್ಬರಿಸಿ ತಣ್ಣಗಾಗಿದ್ದ ಖಲಿಸ್ತಾನ ಉಗ್ರವಾದ ಮತ್ತೆ ತಲೆ ಎತ್ತುತ್ತಿರುವುದರ ಸೂಚನೆ ಇದು. 1980-90ರ ದಶಕದಲ್ಲಿ ಹುಟ್ಟಿಕೊಂಡ ಈ ಪ್ರತ್ಯೇಕತಾವಾದ ಮುಂದೆ ಭದ್ರತೆಗೆ ತಲೆನೋವಾಗಿ ಪರಿಣಮಿಸಿದ್ದು ನಮಗೆ ಗೊತ್ತಿದೆ. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಪ್ರಧಾನಮಂತ್ರಿಯ ಕಗ್ಗೊಲೆ ನಡೆಸುವ ಮಟ್ಟಕ್ಕೂ ಆ ಭಯೋತ್ಪಾದಕರು ಹೋಗಿದ್ದರು. ಈಗ ಮತ್ತೆ ಖಲಿಸ್ತಾನಿಗಳು ಬಾಲ ಬಿಚ್ಚುತ್ತಿದ್ದಾರೆ. ಇತ್ತೀಚೆಗೆ ಪಂಜಾಬ್‌ಗೆ ಅಕ್ರಮವಾಗಿ ಪಾಕಿಸ್ತಾನ ಗಡಿಯಾಚೆಯಿಂದ ಒಳನುಸುಳುತ್ತಿರುವ ಡ್ರಗ್ಸ್‌ ಜಾಲದಲ್ಲೂ ಖಲಿಸ್ತಾನ್ ಶಕ್ತಿಗಳು ಕ್ರಿಯಾಶೀಲವಾಗಿರುವುದು ಗೊತ್ತಾಗಿದೆ. ‌ಕಳೆದ ಜುಲೈನಲ್ಲಿ ಪಂಜಾಬ್‌ನ ಪೊಲೀಸ್ ಠಾಣೆಗಳ ಮೇಲೆಯೇ ರಾಕೆಟ್ ಲಾಂಚರ್ ಬಳಸಿ ಈ ದುರುಳರು ದಾಳಿ ಮಾಡಿದ್ದರು.

ಸಿಖ್ ಪ್ರತ್ಯೇಕತಾವಾದಿ ಖಲಿಸ್ತಾನಿಗಳಿಗೆ ಪಾಕಿಸ್ತಾನ ನೇರವಾಗಿ ಬೆಂಬಲ ನೀಡುತ್ತಿದೆ ಎನ್ನುವುದಕ್ಕೆ ಗಡಿಯಾಚೆಯಿಂದ ಬಂದ ಈ ರಾಕೆಟ್‌ ಲಾಂಚರ್‌ ದಾಳಿಯೇ ಸಾಕ್ಷಿ. ಪಂಜಾಬ್‌ಗೆ ಪಾಕಿಸ್ತಾನದಿಂದ ಭಾರಿ ಪ್ರಮಾಣದಲ್ಲಿ ಮಾದಕ ವಸ್ತುಗಳೂ ಹರಿದುಬರುತ್ತಿವೆ. ಖಲಿಸ್ತಾನಿಗಳ ಕೈವಾಡ ಈ ಕೃತ್ಯಗಳಲ್ಲಿ ಇರುವುದನ್ನು ಭಾರತದ ತನಿಖಾ ಸಂಸ್ಥೆಗಳು ಖಚಿತಪಡಿಸಿವೆ. ಇದನ್ನು ಸೂಕ್ತ ರೀತಿಯಲ್ಲಿ ಸರ್ಕಾರ, ಸೈನ್ಯ ನಿಭಾಯಿಸಬೇಕಿದೆ.

ಆರಂಭದಲ್ಲೇ ಸಿಖ್ ಭಯೋತ್ಪಾದನೆಯನ್ನು ಚಿವುಟಿ ಹಾಕಬೇಕು. ಭಿಂದ್ರನ್‌ವಾಲೆ ಎಂಬ ಖಲಿಸ್ತಾನಿ ಭಯೋತ್ಪಾದಕನನ್ನು ಆರಂಭದಲ್ಲಿ ಬೆಳೆಯಲು ಬಿಟ್ಟದ್ದು ನಮ್ಮ ಕೆಲವು ರಾಜಕಾರಣಿಗಳೇ. ಮುಂದೆ ಆತನೇ ಪರಮ ಅನಾಹುತಕಾರಿಯಾದ. ಚಿಗುರಿನಲ್ಲಿ ಚಿವುಟದೇ ಬಿಟ್ಟ ಉಗ್ರಗಾಮಿ ಚಟುವಟಿಕೆಯಿಂದ ಮುಂದೆ ಎಂಥ ಭಾರಿ ಅನಾಹುತವಾಯಿತೆಂಬುದು ಗೊತ್ತೇ ಇದೆ. ಪಾಕಿಸ್ತಾನ- ಚೀನಾ ದೇಶಗಳು ಇಂಥ ದೇಶದದ್ರೋಹಿಗಳ ಸಿಟ್ಟಿನ ಲಾಭ ಮಾಡಿಕೊಳ್ಳಲು ಸದಾ ಕಾಯುತ್ತಿವೆ. ಖಲಿಸ್ತಾನಿಗಳಿಗೆ ಆಯುಧ- ಹಣಕಾಸು ಒದಗಿಸಲು ಅವು ಹಿಂದೆ ಮುಂದೆ ನೋಡವು. ಉಗ್ರರನ್ನು ಪ್ರೋತ್ಸಾಹಿಸದಂತೆ ಕೆನಡಾ ಸರಕಾರಕ್ಕೂ ಖಡಕ್ ಎಚ್ಚರಿಕೆ ನೀಡಬೇಕು.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಅರ್ಹರಿಗೆ ಸಂದ ಪದ್ಮ ಪ್ರಶಸ್ತಿ, ತೆರೆಮರೆಯ ಸಾಧಕರಿಗೂ ಗೌರವ

ಕೆನಡಾದಲ್ಲಿ ಮಿತಿ ಮೀರಿರುವ ಸಿಖ್ ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಅಲ್ಲಿನ ಆಡಳಿತವಾಗಲೀ, ರಾಜಕೀಯ ಪಕ್ಷಗಳಾಗಲೀ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆಂದರೆ ಅಲ್ಲಿ ಗಣನೀಯವಾಗಿರುವ ಸಿಖ್ಖರು ಹಾಗೂ ಅವರ ಮತ ಬ್ಯಾಂಕ್.‌ ಸಿಖ್ ಫಾರ್ ಜಸ್ಟಿಸ್ ಸಂಘಟನೆ ಕೆನಡಾದಿಂದಲೇ ಸಕ್ರಿಯವಾಗಿದ್ದುಕೊಂಡು ಪಂಜಾಬಿನಲ್ಲಿ ಮತ್ತೆ ಭಯೋತ್ಪಾದನೆ ಬಿತ್ತುತ್ತಿದೆ. ಇದು ಆತಂಕದ ವಿಷಯ. ಸಾವಿರಾರು ಹಿಂದೂ ಕುಟುಂಬಗಳು ಕೆನಡಾ, ಆಸ್ಟ್ರೇಲಿಯಾದಲ್ಲಿ ವೃತ್ತಿ ಕಾರಣ ನೆಲೆಸಿವೆ. ಸಿಖ್ ಪ್ರತ್ಯೇಕತಾವಾದಿಗಳಿಂದ ಅಲ್ಲಿಯ ಹಿಂದೂಗಳಿಗೆ ರಕ್ಷಣೆ ನೀಡುವಂತೆ ಕೆನಡಾ ಮತ್ತು ಆಸ್ಟ್ರೇಲಿಯಾಗಳ ಮೇಲೆ ಕೇಂದ್ರ ಸರ್ಕಾರ ಮತ್ತಷ್ಟು ಒತ್ತಡ ಹೇರಬೇಕು

Exit mobile version