Site icon Vistara News

ವಿಸ್ತಾರ ಸಂಪಾದಕೀಯ: ಸಮಾಜಘಾತುಕರ ಕೇಸ್‌ ವಾಪಸ್‌ ತೆಗೆದುಕೊಳ್ಳಬೇಡಿ

DK Shivakumar and Siddaramaiah

ಪ್ರತಿಭಟನೆ, ಹೋರಾಟ ಇತ್ಯಾದಿಗಳಲ್ಲಿ ಭಾಗಿಯಾಗಿದ್ದವರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲು ರಾಜ್ಯದ ಕಾಂಗ್ರೆಸ್‌ ಸರ್ಕಾರ ಸಂಪುಟ ಉಪ ಸಮಿತಿಯನ್ನು ರಚಿಸಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ದಾಖಲಾದ ಕೇಸುಗಳನ್ನು ಹಿಂತೆಗೆದುಕೊಳ್ಳುವುದು ಇದರ ಹಿಂದಿನ ಅಜೆಂಡಾ. ಮುಖ್ಯವಾಗಿ ಮೇಕೆದಾಟು ಪಾದಯಾತ್ರೆ ಸೇರಿದಂತೆ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್‌ ಪಕ್ಷದ ಮುಖಂಡರ ಮೇಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ದಾಖಲಾದ ಸಾರ್ವಜನಿಕ ಶಾಂತಿಭಂಗ ಪ್ರಯತ್ನದ ಕೇಸುಗಳನ್ನು ಈಗ ಹಿಂಪಡೆಯಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಆದರೆ ಇದರಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು, ಹೋರಾಟಗಾರರ ಮೇಲಿನ ಪ್ರಕರಣಗಳನ್ನಷ್ಟೇ ಹಿಂಪಡೆಯಲಾಗುತ್ತಿದೆಯೇ ಅಥವಾ ಸಮಾಜಘಾತುಕರ ಮೇಲಿನ ಪ್ರಕರಣಗಳನ್ನೂ ಹಿಂತೆಗೆದುಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಹೀಗಾಗಿ ಈ ಬಗ್ಗೆ ಇನ್ನಷ್ಟು ವಿವೇಚಿಸಬೇಕಿದೆ.

ಇದೇ ಮೊದಲ ಬಾರಿಯಲ್ಲ, ಈ ಹಿಂದೆಯೂ ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಪಿಎಫ್‌ಐ, ಕೆಎಫ್‌ಡಿ ಮುಂತಾದ ಸಮಾಜಘಾತುಕ ಸಂಘಟನೆಗಳ ಸದಸ್ಯರ ಮೇಲಿನ ಪ್ರಕರಣಗಳನ್ನು ವಾಪಸ್‌ ಪಡೆಯಲಾಗಿತ್ತು. 2009ರಲ್ಲಿ ನಡೆದ ಮೈಸೂರಿನ ಉದಯಗಿರಿ ಕೋಮು ಗಲಭೆ ಪ್ರಕರಣದ ಆರೋಪಿಗಳ ಮೇಲಿನ ಪ್ರಕರಣ ಕೈಬಿಡಲಾಗಿತ್ತು. 2010ರಲ್ಲಿ ಶಿವಮೊಗ್ಗ ಗಲಭೆಗಳಲ್ಲಿ ಭಾಗಿಯಾಗಿದ್ದವರ ಮೇಲಿನ 114 ಕೇಸುಗಳು, ಹಾಸನದಲ್ಲಿ ದಾಖಲಾಗಿದ್ದ 21 ಪ್ರಕರಣಗಳನ್ನು ಕೂಡ ಕೈಬಿಡಲಾಗಿತ್ತು. ಇವರಲ್ಲಿ ಹೆಚ್ಚಿನವರು ರೌಡಿಶೀಟರ್‌ಗಳು, ಗೂಂಡಾಗಳು ಆಗಿದ್ದು, ನಂತರವೂ ಮತ್ತಷ್ಟು ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗಿದ್ದುದು ಕಂಡುಬಂದಿದೆ. ಇದಕ್ಕೆ ಪೊಲೀಸ್‌ ಅಧಿಕಾರಿಗಳ, ನ್ಯಾಯಾಂಗ ವಲಯದ ಪ್ರತಿರೋಧ ಕೇಳಿಬಂದಿತ್ತು. ಮತ್ತೆ ಅಂಥದೇ ತಪ್ಪನ್ನು ಮಾಡುವ ಮುನ್ನ ವಿವೇಚನೆ ಬಳಸುವುದು ಅಗತ್ಯವಾಗಿದೆ.

ಈ ತಪ್ಪನ್ನು ಬಿಜೆಪಿ ಸರ್ಕಾರವೂ ಮಾಡಿದೆ. 2020ರಲ್ಲಿ ಬಿಜೆಪಿ ಸರ್ಕಾರ, ತನ್ನ ಪಕ್ಷದ ಎಂಎಲ್‌ಎಗಳು ಹಾಗೂ ಎಂಪಿಗಳ ಮೇಲಿದ್ದ ಹಲವು ಕ್ರಿಮಿನಲ್‌ ಕೇಸುಗಳನ್ನು ಹಿಂಪಡೆದಿತ್ತು. ಆಗ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ʼʼಇಂಥ ನಡೆ ಸಾಧುವಲ್ಲʼʼ ಎಂದು ಹೇಳಿತ್ತು. ʼʼಆರೋಪಿಗಳ ಬಿಡುಗಡೆ ಹಾಗೂ ಪ್ರಕರಣಗಳ ವಾಪಸಾತಿಗೆ ಹೈಕೋರ್ಟ್‌ನ ಸಮ್ಮತಿ ಪಡೆಯುವುದು ಅಗತ್ಯʼʼ ಎಂದು ಹೇಳಿತ್ತು. ಈ ಹಿಂದಿನ ಹಲವು ಹಿಂತೆಗೆತ ಪ್ರಕರಣಗಳಲ್ಲಿಯೂ ಕೂಡ ಸುಪ್ರೀಂ ಕೋರ್ಟ್‌ ಇಂಥ ಆಶಯವನ್ನು ದಾಖಲಿಸಿದೆ. ʼʼಕೇಸ್‌ ಹಿಂತೆಗೆತ ಅರ್ಜಿಯನ್ನು ಉತ್ತಮ ಆಶಯದಿಂದ ಸಲ್ಲಿಸಲಾಗಿದೆ; ಇದು ಸಾರ್ವಜನಿಕ ಹಿತಾಸಕ್ತಿ ಮತ್ತು ನ್ಯಾಯದ ಹಿತಾಸಕ್ತಿಯನ್ನು ಹೊಂದಿದೆ ಎಂದು ನ್ಯಾಯಾಲಯ ಖಚಿತಪಡಿಸಿಕೊಳ್ಳಬೇಕು. ಹಿಂತೆಗೆತದ ಕಾರಣ ನ್ಯಾಯಬದ್ಧವಾಗಿದೆಯೇ ಎಂಬುದನ್ನು ಖಚಿಪಡಿಸಿಕೊಳ್ಳಬೇಕು. ಇಂಥ ಸಾಮೂಹಿಕ ಹಿಂತೆಗೆ ತಪ್ರಕ್ರಿಯೆಗಳು ಸಾರ್ವಜನಿಕರಲ್ಲಿ ತನಿಖಾ ವ್ಯವಸ್ಥೆ ಹಾಗೂ ನ್ಯಾಯಾಂಗ ವ್ಯವಸ್ಥೆಯ ಮೇಲಿರುವ ನಂಬಿಕೆಯನ್ನು ಕುಸಿಯುವಂತೆ ಮಾಡುತ್ತವೆʼʼ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ವಿಮಾನದಲ್ಲಿ ಸುಶಿಕ್ಷಿತರ ದುರ್ವರ್ತನೆ ನಾಚಿಕೆಗೇಡು

ಹೀಗಾಗಿ, ಹೋರಾಟಗಾರರನ್ನು ಕೇಸ್‌ನಿಂದ ಮುಕ್ತಗೊಳಿಸುವ ನೆಪದಲ್ಲಿ ದೇಶದ್ರೋಹಿಗಳು, ಮತಾಂತರಿಗಳು, ಉಗ್ರ ಕೃತ್ಯಗಳಲ್ಲಿ ಭಾಗಿಯಾದವರ ಪ್ರಕರಣಗಳನ್ನು ಸರ್ಕಾರ ವಾಪಸ್‌ ಪಡೆಯಬಾರದು. ಇಂದು ಸರ್ಕಾರದ ಕೃಪಾಪೋಷಣೆ ಪಡೆದು ಮುಕ್ತರಾಗುವ ಸಮಾಜಘಾತುಕರು, ಇನ್ನಷ್ಟು ಉದ್ಧಟರಾಗುತ್ತಾರೆ; ಸರ್ಕಾರದ ಬೆಂಬಲವೇ ತಮಗಿದೆ ಎಂದು ಭಾವಿಸಿ ಇನ್ನಷ್ಟು ಅಶಾಂತಿಗೆ, ಅಕೃತ್ಯಗಳಿಗೆ ಕಾರಣರಾಗುತ್ತಾರೆ ಎಂಬುದು ಖಚಿತ. ಆರೋಪಿಗಳು ಅಪರಾಧಿಗಳೋ ಅಲ್ಲವೋ ಎಂದು ನಿರ್ಧರಿಸುವುದು ಶಾಸಕಾಂಗದ ಕೆಲಸವಲ್ಲ; ಅದು ನ್ಯಾಯಾಂಗಕ್ಕೆ ಸೇರಿದ ವಿಷಯ. ಆರೋಪಿಗಳು ಯಾವುದೇ ಧರ್ಮಕ್ಕೆ ಸೇರಿರಲಿ. ದೇಶದ್ರೋಹ, ಸಮಾಜಘಾತುಕ ಕೃತ್ಯಗಳಲ್ಲಿ ಅವರು ಭಾಗಿಯಾಗಿದ್ದೇ ಆದಲ್ಲಿ ಯಾವ ಕಾರಣಕ್ಕೂ ಅವರನ್ನು ಪ್ರಕರಣದಿಂದ ಮುಕ್ತಗೊಳಿಸಬಾರದು. ರಾಜಕೀಯ ಲಾಭದ ಕಾರಣಕ್ಕಾಗಿ ಸರ್ಕಾರ ಕಿಡಿಗೇಡಿಗಳನ್ನು ಬೆಂಬಲಿಸಬಾರದು. ಇವರೇ ಮುಂದೆ ಸಮಾಜದಲ್ಲಿ ಅಶಾಂತಿ ಹರಡಲು ಕಾರಣರಾಗುತ್ತಾರೆ ಎನ್ನುವುದನ್ನು ಮರೆಯಬಾರದು.

ಇನ್ನಷ್ಟು ಸಂಪಾದಕೀಯಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Exit mobile version