Site icon Vistara News

ವಿಸ್ತಾರ ಸಂಪಾದಕೀಯ: ಬಾಲಿಯಲ್ಲಿ ಭಾರತದ ರಾಜತಾಂತ್ರಿಕ ವಿವೇಕ

Joe-Biden

ಇಂಡೋನೇಷ್ಯಾದ ಬಾಲಿಯಲ್ಲಿ ಇಂದಿನಿಂದ ಆರಂಭವಾಗಿ ಎರಡು ದಿನಗಳ ಕಾಲ ನಡೆಯುತ್ತಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು ಆಹಾರ ಸರಪಳಿ ಕಾಯ್ದುಕೊಳ್ಳುವುದರ ಅಗತ್ಯ, ಸಿರಿಧಾನ್ಯಗಳ ಮಹತ್ವ, ರಷ್ಯಾ- ಉಕ್ರೇನ್‌ ಯುದ್ಧವಿರಾಮದ ಅಗತ್ಯಗಳು ಕುರಿತು ಮಾತನಾಡಿದ್ದಾರೆ. ಹಲವು ವಿಶ್ವನಾಯಕರು ಭಾಗವಹಿಸಿದ್ದ ಶೃಂಗಸಭೆಯಲ್ಲಿ ಅವರ ಮಾತುಗಳು ಅಂತಾರಾಷ್ಟ್ರೀಯ ವಲಯದ ಗಮನ ಸೆಳೆದಿವೆ. ‘ಉಕ್ರೇನ್​​ನಲ್ಲಿ ಕದನ ವಿರಾಮ ಸೃಷ್ಟಿಸಿ, ರಾಜತಾಂತ್ರಿಕತೆ ಮರುಸ್ಥಾಪಿಸಲು ನಾವೆಲ್ಲ ಸೇರಿ ಹಾದಿ ಕಂಡುಕೊಳ್ಳಬೇಕು. ಈ ಹಿಂದೆ ವಿಶ್ವಯುದ್ಧಗಳು ಜಗತ್ತನ್ನು ಅಲ್ಲೋಲಕಲ್ಲೋಲ ಮಾಡಿವೆʼ ಎಂದು ಬುದ್ಧಿ ಹೇಳಿದ್ದಾರೆ. ಗೊಬ್ಬರ ಮತ್ತು ಆಹಾರ ಧಾನ್ಯಗಳ ಪೂರೈಕೆ ಸರಪಳಿಯನ್ನು ಸ್ಥಿರವಾಗಿ ನಿರ್ವಹಿಸಲು ನಾವು ಪರಸ್ಪರ ಒಪ್ಪಂದ ಮಾಡಿಕೊಳ್ಳಬೇಕು ಎಂದಿದ್ದಾರೆ. ಶೃಂಗಸಭೆಯಲ್ಲಿ ಭಾಗವಹಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಮೋದಿಯವರನ್ನು ಕಾಣುತ್ತಿದ್ದಂತೆ ಬಂದು ಆತ್ಮೀಯತೆಯಿಂದ ಅಪ್ಪಿಕೊಂಡಿದ್ದನ್ನೂ ಕಾಣಬಹುದು. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರ ಜತೆಗೂ ಮೋದಿ ಕೆಲಕಾಲ ಮಾತನಾಡಿದ್ದು ವರದಿಯಾಗಿದೆ.

ಇವೆಲ್ಲವೂ, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತದ ನಾಯಕತ್ವವನ್ನು ಎಂದಿಗೂ ಕಡೆಗಣಿಸಲಾಗದು; ವಿಶ್ವವನ್ನು ಮುನ್ನಡೆಸಬಲ್ಲ ವಿವೇಕದ ಹಾದಿ ನಮ್ಮದಾಗಿದೆ ಎಂಬುದನ್ನು ಜಗತ್ತಿಗೆ ಸ್ಪಷ್ಟಪಡಿಸಲು ನಡೆದಂತಿವೆ. ರಷ್ಯ ನಮ್ಮ ಮಿತ್ರ ದೇಶವೇ ಆಗಿದ್ದರೂ, ಉಕ್ರೇನ್‌ ಮೇಲಿನ ಅದರ ದಾಳಿಯನ್ನು ನಿಲ್ಲಿಸಬೇಕು ಎಂದು ಮೋದಿಯವರು ಸ್ಪಷ್ಟ ಮಾತುಗಳಲ್ಲಿ ಹೇಳಿರುವುದು ವಿಶ್ವಶಾಂತಿಯ ಬಗ್ಗೆ ನಮ್ಮ ಆದ್ಯತೆಯನ್ನು ಸ್ಪಷ್ಟಪಡಿಸಿದೆ. ಹಾಗೆಯೇ ರಸಗೊಬ್ಬರದ ಕೊರತೆಯ ಬಗ್ಗೆ, ಅದರಿಂದ ಆಗಬಹುದಾದ ಆಹಾರದ ಬಿಕ್ಕಟ್ಟಿನ ಬಗ್ಗೆ ಅವರು ಹೇಳಿರುವುದು ಶ್ರೀಲಂಕಾದ ಆರ್ಥಿಕ ಪತನದ ಹಿನ್ನೆಲೆಯಲ್ಲಿ ಹೆಚ್ಚು ಅರ್ಥಪೂರ್ಣವಾಗಿದೆ. ಭಾರತದಲ್ಲಿ ಸುಸ್ಥಿರ ಆಹಾರ ಭದ್ರತೆಗಾಗಿ ನೈಸರ್ಗಿಕ ಕೃಷಿಗೆ ನೀಡುತ್ತಿರುವ ಉತ್ತೇಜನ, ಸಿರಿಧಾನ್ಯಗಳಂಥ ಪೌಷ್ಟಿಕ ಮತ್ತು ಸಾಂಪ್ರದಾಯಿಕ ಆಹಾರ ಧಾನ್ಯಗಳಿಗೆ ಜನಪ್ರಿಯತೆ ತಂದುಕೊಡುವ ಕ್ರಮಗಳ ಬಗ್ಗೆ ಹೇಳಿರುವ ಅವರು ಬರುವ ವರ್ಷದಿಂದ ಎಲ್ಲರೂ ಅಂತಾರಾಷ್ಟ್ರೀಯ ಸಿರಿಧಾನ್ಯ ದಿನವನ್ನು ಆಚರಿಸಬೇಕು ಎಂದಿರುವುದು ವಿಶಿಷ್ಟವಾಗಿದೆ; ಹಾಗೆಯೇ ಬೇರೊಂದು ಕೋನದಿಂದ ಸಮಸ್ಯೆಯನ್ನು ಪರಿಶೀಲಿಸಿ ಪರಿಹಾರವನ್ನು ಹೊಳೆಯಿಸಬಲ್ಲ ಮುತ್ಸದ್ಧಿಯ ನಡೆಯೂ ಇದರಲ್ಲಿದೆ.

ಭಾರತದ ವಿದೇಶಾಂಗ ನೀತಿಯೂ ಇತ್ತೀಚೆಗೆ ಹಲವು ದೇಶಗಳ ಶ್ಲಾಘನೆಗೆ ಪಾತ್ರವಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ʼಭಾರತ ಮತ್ತು ರಷ್ಯಾಗಳು ಅತ್ಯುತ್ತಮ ಸಂಬಂಧ ಹೊಂದಿವೆ. ನಮ್ಮ ರಾಷ್ಟ್ರಗಳ ಮಧ್ಯೆ ಯಾವುದೇ ವಿಚಾರದಲ್ಲಿ, ಯಾವುದೇ ಸಮಸ್ಯೆಗಳೂ ಇಲ್ಲʼ ಎಂದು ರಷ್ಯಾ ಅಧ್ಯಕ್ಷ ಪುಟಿನ್‌ ಅವರು ಇತ್ತೀಚೆಗೆ ಹೇಳಿದ್ದರು. “ಭಾರತವು ಸ್ವತಂತ್ರ ವಿದೇಶಾಂಗ ನೀತಿ ಹೊಂದಿದೆ. ಇದರಿಂದಾಗಿಯೇ ರಷ್ಯಾ-ಉಕ್ರೇನ್‌ ಬಿಕ್ಕಟ್ಟಿನಿಂದ ಭಾರತಕ್ಕೆ ಹೆಚ್ಚಿನ ಸಮಸ್ಯೆ ಉಂಟಾಗಿಲ್ಲʼ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ನುಡಿದಿದ್ದರು. ಇದೇ ವೇಳೆಗೆ, ʼಯಾವುದೇ ಕಾರಣಕ್ಕೂ ನ್ಯೂಕ್ಲಿಯರ್‌ ಬಾಂಬ್‌ ಅನ್ನು ಪ್ರಯೋಗಿಸುವ ಯೋಚನೆ ಮಾಡಬಾರದುʼ ಎಂದು ರಷ್ಯಾಕ್ಕೆ ಭಾರತ ತಾಕೀತು ಮಾಡಿದ್ದೂ ಉಂಟು. ಭಾರತವು ವಿದೇಶಾಂಗ ನೀತಿಯ ಜಾರಿಯಲ್ಲಿ ತಿಳಿಯಾದ, ಸ್ಪಷ್ಟ ನಿಲುವು ಹೊಂದಿದೆ. ಯಾವುದೇ ಜಾಗತಿಕ ಒತ್ತಡಕ್ಕೂ ಸಿಲುಕದೆ ನಿರ್ಧಾರ ತೆಗೆದುಕೊಳ್ಳುವ, ದ್ವಿಪಕ್ಷೀಯ ಸಂಬಂಧ ಕೆಡದಂತೆ ಅದನ್ನು ದಿಟ್ಟವಾದ ಮಾತುಗಳಲ್ಲಿ ವ್ಯಕ್ತಪಡಿಸುವ ಸ್ಪಷ್ಟತೆ ಭಾರತದ್ದಾಗಿದೆ. ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ ಕೂಡ ಒಂದು ಹಂತದಲ್ಲಿ, ʼಭಾರತ ಮಧ್ಯಪ್ರವೇಶಿಸಬೇಕುʼ ಎಂದಿದ್ದರು.

ಭಾರತದ, ಮುಖ್ಯವಾಗಿ ಮೋದಿಯವರ ನೇತೃತ್ವದ ವಿದೇಶಾಂಗ ನೀತಿ ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳು ಎಲ್ಲರ ಮೆಚ್ಚುಗೆಗೆ ಅರ್ಹವಾಗುವಂತೆ ಇದೆ. ದೇಶ ವಿಶ್ವದ ಐದನೇ ಬೃಹತ್‌ ಎಕಾನಮಿಯಾಗಿ ಬೆಳೆದು ನಿಂತಿರುವಿಕೆ, ಮೋದಿ ಸರ್ಕಾರದ ಚಾರಿತ್ರಿಕ ನಿರ್ಧಾರಗಳು ಹಾಗೂ ನೀತಿಗಳು, ಚೀನಾದಂಥ ಬಲಿಷ್ಠ ಎದುರಾಳಿಗೂ ಮಣಿಯದೆ ಸೆಡ್ಡು ಹೊಡೆದು ನಿಲ್ಲುವ ಗುಂಡಿಗೆ, ವಿಶ್ವಸಂಸ್ಥೆಯನ್ನು ಸದಾ ತನ್ನ ಮಾತಿಗೆ ಮನ್ನಣೆ ದೊರಕಿಸಿಕೊಳ್ಳಬಲ್ಲ ಪ್ರೌಢಿಮೆ ಹಾಗೂ ಮುತ್ಸದ್ದಿತನ, ʼಲುಕ್‌ ಈಸ್ಟ್‌ ಪಾಲಿಸಿʼಯ ಮೂಲಕ ಪೂರ್ವ ಏಷ್ಯಾ ದೇಶಗಳೊಂದಿಗೆ ಮಧುರ ಬಾಂಧವ್ಯ, ಅಮೆರಿಕದ ಮಿತ್ರನಾಗಿದ್ದೂ ಅದರ ರಷ್ಯಾದಿಂದ ತೈಲ ಆಮದಿನಂಥ ವಿಚಾರದಲ್ಲಿ ಅದರ ಒತ್ತಡವನ್ನೊಪ್ಪದ ದಿಟ್ಟತನ, ಪಾಕ್‌ ಜತೆ ಶತ್ರುತ್ವ ಹೊಂದಿದ್ದರೂ ಅರಬ್‌ ದೇಶಗಳ ಜತೆಗಿನ ಆತ್ಮೀಯ ಬಾಂಧವ್ಯ, ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ಉಂಟಾದಾಗ ತನ್ನ ಪ್ರಜೆಗಳಿಗೆ ಅದರಿಂದ ಸಂಕಷ್ಟ ಉಂಟಾಗದಂತೆ ನೋಡಿಕೊಳ್ಳುವ ಜಾಣ್ಮೆ, ಜೊತೆಗೇ ಬಲಿಷ್ಠ ಮಿಲಿಟರಿಯನ್ನೂ ಕಟ್ಟಿಕೊಳ್ಳುವ ವಿವೇಕ ಮುಂತಾದವುಗಳನ್ನೆಲ್ಲ ಇದರ ಮುಂದುವರಿಕೆಯಾಗಿ ನೋಡಬಹುದು. ಜಾಗತಿಕ ಸಂಬಂಧಗಳಲ್ಲಿ ಪಾರದರ್ಶಕತೆ, ಜನಹಿತ ನೀತಿ, ನೈತಿಕತೆ, ಪ್ರಾಮಾಣಿಕತೆ, ಪಂಚಶೀಲ ತತ್ವಗಳನ್ನು ಕಾಪಾಡಿಕೊಂಡು ಬಂದಿರುವ ವಿವೇಕಗಳಿಂದ ಇದು ಸಾಧ್ಯವಾಗಿದೆ.

ಇದನ್ನೂ ಓದಿ | ವಿಸ್ತಾರ ಸಂಪಾದಕೀಯ: ಬಲವಂತದ ಮತಾಂತರದಿಂದ ದೇಶದ ಭದ್ರತೆಗೆ ಅಪಾಯ

Exit mobile version