ಪಂಜಾಬ್‌ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದ ಖಲಿಸ್ತಾನಿ ಪ್ರತ್ಯೇಕತಾವಾದಿ ಗುಂಪಿನ ಉಗ್ರ ನಾಯಕ ಅಮೃತ್ಪಾಲ್ ಸಿಂಗ್ನನ್ನು ಪಂಜಾಬ್ ಪೊಲೀಸರು ಭಾನುವಾರ ಬೆಳಗ್ಗೆ ಬಂಧಿಸಿದ್ದಾರೆ. ಮಾರ್ಚ್ 18ರಿಂದ ತಲೆಮರೆಸಿಕೊಂಡಿದ್ದ, ʼವಾರಿಸ್ ಪಂಜಾಬ್ ದೇʼ ಸಂಘಟನೆ ಮುಖ್ಯಸ್ಥನಾಗಿರುವ ಈತನ ಸೆರೆಗೆ ಪಂಜಾಬ್ ಪೊಲೀಸರು ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು. ಐದು ವರ್ಷಗಳಿಂದಲೂ ಪಂಜಾಬ್‌ನಲ್ಲಿ ಸಕ್ರಿಯನಾಗಿದ್ದ ಈತನನ್ನು ಭಾರತ ಸರ್ಕಾರವು ಖಲಿಸ್ತಾನಿ-ಪಾಕಿಸ್ತಾನಿ ಏಜೆಂಟ್ ಎಂದು ಪರಿಗಣಿಸಿತ್ತು. ಈ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಅಸ್ಸಾಂನ ದಿಬ್ರುಗಢ್ ಜೈಲಿಗೆ ಕರೆದೊಯ್ಯಲಾಗಿದೆ. ರಾ ಮತ್ತು ಎನ್ಎಸ್‌ಎ ಅಧಿಕಾರಿಗಳು ಆತನ ತೀವ್ರ ವಿಚಾರಣೆ ನಡೆಸಲು ಸಜ್ಜಾಗಿದ್ದಾರೆ. ಅಮೃತ್ ಪಾಲ್ ಸಿಂಗ್ ಬಂಧನದೊಂದಿಗೆ ಖಲಿಸ್ತಾನ್ ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ಒಂದು ಹಂತದ ಬ್ರೇಕ್ ಬೀಳಲಿದೆ. ಆದರೆ, ನಮ್ಮ ಭದ್ರತಾ ಸಂಸ್ಥೆಗಳ ಕೆಲಸ ಇಷ್ಟಕ್ಕೆ ನಿಲ್ಲುವುದಿಲ್ಲ. ಯಾಕೆಂದರೆ, ಈ ವಿಷಯದಲ್ಲಿ ಸ್ವಲ್ಪವೇ ನಿರ್ಲಕ್ಷ್ಯ ತೋರಿದರೂ ಎಂಥ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಇತಿಹಾಸದ ಪುಟಗಳಲ್ಲಿ ಸಾಕ್ಷ್ಯವಿದೆ.
ಪಂಜಾಬ್‌ನಲ್ಲಿ, ಈ ಹಿಂದೆ ಭಿಂದ್ರನ್ ವಾಲೆ ಎಂಬ ಉಗ್ರ ನಾಯಕನ ಪ್ರತ್ಯೇಕತಾವಾದದ ಚಟುವಟಿಕೆಗಳನ್ನು ಮಟ್ಟ ಹಾಕದೆ ಬೆಳೆಯಲು ಬಿಟ್ಟ ಕಾರಣ ಸಿಖ್ ಪ್ರತ್ಯೇಕ ದೇಶದ ಹೋರಾಟ ತೀವ್ರವಾಗುವಂತಾಗಿತ್ತು. ‘ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ?’ ಎಂಬಂತೆ, ಪಂಜಾಬ್‌ನಲ್ಲಿ ತೀವ್ರವಾಗಿ ಬೆಳೆದ ಖಲಿಸ್ತಾನ್ ಪ್ರತ್ಯೇಕತಾವಾದ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರುವುದು ಭಾರೀ ಕಷ್ಟವಾಯಿತು. ಅಂತಿಮವಾಗಿ ‘ಆಪರೇಷನ್ ಬ್ಲೂ ಸ್ಟಾರ್’ ಎಂಬ ಅತ್ಯಂತ ಕ್ಲಿಷ್ಟ ಸೇನಾ ಕಾರ್ಯಾಚರಣೆಯನ್ನು ನಡೆಸಬೇಕಾದ ಅನಿವಾರ್ಯತೆ ಎದುರಾಯಿತು. ಈ ಕಾರ್ಯಾಚರಣೆಯಿಂದಾಗಿ ಪ್ರಾಣ ಹಾನಿ ಮತ್ತು ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಯಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆ ನಡೆಯಿತು. ಆ ಬಳಿಕ ಪಂಜಾಬ್ ಮುಖ್ಯಮಂತ್ರಿ ಬೇ ಅಂತ್ ಸಿಂಗ್ ಅವರನ್ನೂ ಹತ್ಯೆಗೈಯಲಾಯಿತು. ಅಂದಿನ ಸೇನಾ ಮುಖ್ಯಸ್ಥರಾಗಿ ನಿವೃತ್ತರಾಗಿದ್ದ ಜ. ಎ ಎಸ್ ವೈದ್ಯ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಇವೆಲ್ಲ ಪ್ರಮುಖವಾಗಿ ಎದ್ದು ಕಾಣುವ ಘಟನೆಗಳು. ಪಂಜಾಬ್‌ನಲ್ಲಿ ಈ ರೀತಿಯ ಉಗ್ರ ಘಟನೆಗಳು ಸಾಲು ಸಾಲಾಗಿ ನಡೆದು ಹೋದವು. ಸುಮಾರು 12,000 ನಾಗರಿಕರು, 10,000 ಉಗ್ರರು ಆಗ ಬಲಿಯಾಗಿದ್ದರು. ಇದಕ್ಕೆಲ್ಲ ಕಾರಣವಾಗಿದ್ದು ಖಲಿಸ್ತಾನ್ ಪ್ರತ್ಯೇಕತಾವಾದ ಕುರಿತು ತೋರಿದ ನಿರ್ಲಕ್ಷ್ಯ. ಹಾಗಾಗಿ, ಈ ಅಮೃತ್ ಪಾಲ್ ಸಿಂಗ್ ವಿಷಯದಲ್ಲೂ ನಾವು ಸಾಕಷ್ಟು ಎಚ್ಚರಿಕೆಯನ್ನು ಕೈಗೊಳ್ಳಬೇಕಾದ ಅಗತ್ಯವಿದೆ.
ಸಮಾಧಾನಕರ ಸಂಗತಿ ಎಂದರೆ ಸಿಖ್ ಪ್ರತ್ಯೇಕತಾವಾದಿಗಳನ್ನು ದಮನಿಸುವ ವಿಚಾರದಲ್ಲಿ ಪಂಜಾಬ್ ನ ಆಮ್ ಆದ್ಮಿ ಪಾರ್ಟಿ(ಆಪ್) ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯತೆ ಕಂಡು ಬಂದಿದೆ. ಶಾಂತಿ ಕದಡಿದರೆ ಅತ್ಯಂತ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೂ ಎಚ್ಚರಿಸಿದ್ದಾರೆ. ಈ ಸಮನ್ವಯತೆಯೊಂದಿಗೆ ಕೇಂದ್ರ ಮತ್ತು ಪಂಜಾಬ್ ಸರ್ಕಾರಗಳು ಸಿಖ್ ಪ್ರತ್ಯೇಕತಾವಾದವನ್ನು ಚಿವುಟಿ ಹಾಕಬೇಕು. ಖಲಿಸ್ತಾನಿ ಪ್ರತ್ಯೇಕವಾದ ಮರು ಹುಟ್ಟು ಪಡೆದುಕೊಳ್ಳಲು ಪಾಕಿಸ್ತಾನದ ನೀಚ ಬುದ್ಧಿಯೇ ಕಾರಣ ಎಂಬುದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಆದರೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪಾಕಿಸ್ತಾನದ ಈ ಕುತಂತ್ರವನ್ನು ಬಯಲು ಮಾಡುವತ್ತ ಭಾರತ ಸರ್ಕಾರ ಆದ್ಯತೆ ವಹಿಸಬೇಕಾಗಿದೆ. ಅಮೃತ್ ಪಾಲ್ ಸಿಂಗ್ ಬಂಧನದೊಂದಿಗೆ ಪಾಕಿಸ್ತಾನದ ಕೈವಾಡ ಹೊರ ಜಗತ್ತಿಗೆ ಗೊತ್ತಾಗಲಿದೆ.
ಇದನ್ನೂ ಓದಿ: Amritpal Singh: ‘ಅಮೃತ್ಪಾಲ್ ಸಿಂಗ್ ಶರಣಾಗಿಲ್ಲ’; ಕಾರ್ಯಾಚರಣೆಯ ಸಂಪೂರ್ಣ ವಿವರ ಬಿಚ್ಚಿಟ್ಟ ಪಂಜಾಬ್ ಪೊಲೀಸ್
ಸಿಖ್ಖರಲ್ಲಿ ರಾಜಕೀಯ ನಾಯಕತ್ವದ ಕೊರತೆಯನ್ನೇ ಬಂಡವಾಳವಾಗಿಸಿಕೊಂಡು ಖಲಿಸ್ತಾನ ಚಳವಳಿ ಮತ್ತೆ ಬೆಳೆಯುತ್ತಿದೆ. ಕೆನಡಾ, ಆಸ್ಟ್ರೇಲಿಯಾಗಳಲ್ಲೂ ಇತ್ತೀಚೆಗೆ ಹಿಂದೂ ದೇವಾಲಯಗಳ ಮೇಲೆ ಪ್ರತ್ಯೇಕತಾವಾದಿಗಳು ದಾಳಿ ನಡೆಸುತ್ತಿದ್ದಾರೆ. ಇಂಗ್ಲೆಂಡ್, ಅಮೆರಿಕಗಳಲ್ಲಿರುವ ಭಾರತೀಯ ದೂತಾವಾಸ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಇದೆಲ್ಲವನ್ನು ಗಂಭಿರವಾಗಿ ತೆಗೆದುಕೊಳ್ಳಬೇಕಾದ ಸನ್ನಿವೇಶ ಈಗ ಎದುರಾಗಿದೆ. ದೇಶದ ಒಳಗೆ ಖಲಿಸ್ತಾನಿಗಳನ್ನು ಮಟ್ಟ ಹಾಕಲು ನಮ್ಮ ಭದ್ರತಾ ಸಂಸ್ಥೆಗಳು ಸಮರ್ಥವಾಗಿವೆ; ಆ ಕೆಲಸವನ್ನು ಮಾಡುತ್ತಿವೆ. ಹಾಗೆಯೇ, ವಿದೇಶಗಳಲ್ಲಿ ಸಕ್ರಿಯವಾಗಿರುವ ಜಾಲವನ್ನು ತುಂಡರಿಸಲು ಭಾರತ ಸರ್ಕಾರವು ತನ್ನ ರಾಜತಾಂತ್ರಿಕ ಸಾಧನಗಳನ್ನು ಬಳಸಿಕೊಳ್ಳಬೇಕು. ಅಲ್ಲಿನ ಸರ್ಕಾರಗಳ ಮೇಲೆ ಒತ್ತಡ ಹೇರುವ ಕೆಲಸವಾಗಬೇಕು. ಈಗ ಭಾರತವು ಅಂತಾರಾಷ್ಟ್ರೀಯವಾಗಿ ತನ್ನದೇ ಆದ ನಿರ್ಧಾರಗಳನ್ನು ಕೈಗೊಳ್ಳುವ ಸ್ಥಿತಿಯಲ್ಲಿದೆ. ಹಾಗಾಗಿ, ಖಲಿಸ್ತಾನಿ ವಿಷಯದಲ್ಲೂ ಕಠಿಣವಾಗಿ ವರ್ತಿಸಬೇಕಾದ ಅಗತ್ಯವಿದೆ.