Site icon Vistara News

ವಿಸ್ತಾರ ಸಂಪಾದಕೀಯ: ಷೇರು ಮಾರುಕಟ್ಟೆಯ ಸ್ಥಿರತೆ ಕಾಪಾಡಿ

Stock market

ಷೇರು ಮಾರುಕಟ್ಟೆ (Stock Market) ಅಸ್ಥಿರವೆಂಬುದು ನಿಜ, ಆದರೆ ಅಸಹಜ ಬೆಳವಣಿಗೆಯೂ ಆಗಿರಬಹುದಾದ ಅಲ್ಲೋಕಲ್ಲೋಲ ದೇಶದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಸಂಭವಿಸಿದೆ. ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ ಬೆಳಗ್ಗೆ 1,034 ಅಂಕ ಕುಸಿತಕ್ಕೀಡಾಗಿದ್ದು, ಅದಾನಿ ಗ್ರೂಪ್‌ ಕಂಪನಿಗಳ ಷೇರು ದರ 20%ಕ್ಕೂ ಹೆಚ್ಚು ನಷ್ಟಕ್ಕೀಡಾಯಿತು. ಹೂಡಿಕೆದಾರರಿಗೆ 8.1 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟವಾಗಿದೆ. ಬಿಎಸ್‌ಇ ನೋಂದಾಯಿತ ಷೇರುಗಳ ಒಟ್ಟು ಮಾರುಕಟ್ಟೆ ಬಂಡವಾಳ ಮೌಲ್ಯ 2,76,495 ಲಕ್ಷ ಕೋಟಿ ರೂ.ಗೆ ಇಳಿಕೆಯಾಗಿದೆ. ಇದಕ್ಕೂ ಮುನ್ನ ಅಮೆರಿಕ ಮೂಲದ ಹಿಂಡೆನ್‌ಬರ್ಗ್‌ ಸಂಸ್ಥೆಯು ಅದಾನಿ ಗ್ರೂಪ್‌ ವಿರುದ್ಧ ಅವ್ಯವಹಾರಗಳ ವರದಿಯನ್ನು ಪ್ರಕಟಿಸಿತ್ತು. ಇದಾದ ಬಳಿಕ, ಅದಾನಿ ಸಮೂಹದ 10 ಕಂಪನಿಗಳ ಷೇರುಗಳ ದರಗಳು ಕುಸಿಯಿತು. ವಿಶ್ವದಲ್ಲಿ ನಂ.3ನೇ ಸ್ಥಾನದಲ್ಲಿದ್ದ ಅದಾನಿ ರಾತ್ರಿ ಬೆಳಗಾಗುವಷ್ಟರಲ್ಲಿ ನಂ.7ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಇಂಥದೊಂದು ಬೆಳವಣಿಗೆ ಷೇರು ಮಾರ್ಕೆಟ್‌ನಲ್ಲಿ ಸಂಭವಿಸಿದರೆ ಅದರ ಕಂಪನಗಳು ಹಲವು ರೀತಿಯ ಋಣಾತ್ಮಕ ಪರಿಣಾಮ ಬೀರುತ್ತವೆ. ಉದಾಹರಣೆಗೆ, ಅದಾನಿ ಗ್ರೂಪ್‌ಗೆ ಸಾಲ ನೀಡಿರುವ ಹಲವು ಭಾರತೀಯ ಬ್ಯಾಂಕ್‌ಗಳು ಭಾರಿ ನಷ್ಟಕ್ಕೀಡಾಗಿವೆ. ಅನೇಕ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಬುಧವಾರ ಒಂದೇ ದಿನ 2,394 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಭಾರತದಿಂದ ಚೀನಾಕ್ಕೆ ಷೇರು ಹೂಡಿಕೆಯನ್ನು ವರ್ಗಾಯಿಸುತ್ತಿದ್ದಾರೆ. ಸ್ವಲ್ಪ ಮಟ್ಟಿಗೆ ಕಚ್ಚಾ ತೈಲ ದರ ಏರಿಕೆಯಿಂದ ಉಂಟಾಗಿರುವ ಪ್ರತಿಕೂಲ ಪರಿಣಾಮವೂ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಇರಬಹುದು. ಆದರೆ ದೊಡ್ಡ ಪ್ರಮಾಣದ ಮಾರುಕಟ್ಟೆ ಕುಸಿತ ಮಾತ್ರ ಅಸಹಜ ಎನ್ನಬೇಕಿದೆ. ಯಾಕೆಂದರೆ, ಹಾಗಾಗಬಹುದಾದ ಯಾವುದೇ ಅಂತಾರಾಷ್ಟ್ರೀಯ ಮಹತ್ವದ ಬೆಳವಣಿಗೆ ಆಗಿಲ್ಲ. ಅಂದರೆ ಈ ಹಿಂಡೆನ್‌ಬರ್ಗ್‌ ವರದಿಯ ಹಿಂದೆ ಉದ್ದೇಶಪೂರ್ವಕ ಕೃತ್ಯವಿದೆಯೇ ಎಂಬ ಅನುಮೂನ ಮೂಡಿದರೆ ಆಶ್ಚರ್ಯವಿಲ್ಲ.

ಹಾಗಿದ್ದರೆ ಈಗ ಏನಾಗಬೇಕು? ಷೇರು ಮಾರುಕಟ್ಟೆ ಇನ್ನಷ್ಟು ಕುಸಿಯದಂತೆ ನೋಡಿಕೊಳ್ಳಬೇಕಾಗಿರುವುದು ಅತ್ಯಂತ ಮುಖ್ಯವಾದುದು. ಅದಾನಿ ಗುಂಪು ಸಾರ್ವಜನಿಕ ವಲಯದಲ್ಲಿ ದೊಡ್ಡ ಪ್ರಮಾಣದ ಷೇರುಗಳನ್ನು ಹೊಂದಿರುವುದರಿಂದ, ಅದರ ಮೇಲೆ ಆಗುವ ಯಾವುದೇ ಪರಿಣಾಮ ಭಾರತೀಯ ಮಾರುಕಟ್ಟೆಯ ಮೇಲೆ ಆಗಿಯೇ ಆಗುತ್ತದೆ. ಇದು ಇನ್ನಷ್ಟು ಋಣಾತ್ಮಕವೆನಿಸದಂತೆ ನೋಡಿಕೊಳ್ಳಬೇಕು. ದೇಶದ ಒಟ್ಟಾರೆ ಆರ್ಥಿಕತೆ ಮೇಲೆ ಇದು ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಿದೆ. ಯಾವುದೋ ಒಂದು ಭಾರಿ ಕಂಪನಿಯ ಬಗ್ಗೆ ಅಪಪ್ರಚಾರ ಶುರುಮಾಡಿದರೆ ಅದರ ಷೇರು ಮೌಲ್ಯಗಳು ಕುಸಿಯತೊಡಗುತ್ತವೆ. ಇಂದು ಯಾವುದೇ ಒಂದು ದೇಶವನ್ನು ಮೊಣಕಾಲೂರುವಂತೆ ಮಾಡಬೇಕಿದ್ದರೆ ಅಲ್ಲಿನ ಷೇರು ಮಾರುಕಟ್ಟೆಯನ್ನು ಅಸ್ತವ್ಯಸ್ತಗೊಳಿಸಿದರೆ ಸಾಕಾಗುತ್ತದೆ. ಇದೊಂದು ಆಧುನಿಕ ಸಮರಕ್ರಮವೂ ಇರಬಹುದು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಸಾಕ್ಷ್ಯಚಿತ್ರವನ್ನೂ ಇದೇ ಸಮಯದಲ್ಲಿ ಹೊರಬಿಟ್ಟಿರುವುದು ಕೂಡ ಇದರದೇ ಇನ್ನೊಂದು ಭಾಗದಂತಿದೆ. ಹೀಗಾಗಿಯೇ ಇಲ್ಲಿ ಭಾರತವನ್ನು ಅಸ್ಥಿರಗೊಳಿಸಲು ವಿದೇಶಿ ಶಕ್ತಿಗಳು ಮುಂದಾಗಿವೆಯೇ ಎಂಬುದರ ಬಗ್ಗೆ ಒಂದು ಗಮನ ಇಡುವುದು ಅಗತ್ಯವಾಗಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಹಿಂದೂ ದೇಗುಲಗಳ ಮೇಲೆ ಖಲಿಸ್ತಾನಿಗಳ ದಾಳಿ ಖಂಡನೀಯ

ತಮ್ಮ ಕಂಪನಿಯ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿ ನಷ್ಟ ಉಂಟುಮಾಡಲಾಗಿದೆ ಎಂದು ಗೌತಮ್‌ ಅದಾನಿ ಆಪಾದಿಸಿದ್ದಾರೆ. ಆದರೆ ತಮ್ಮ ವರದಿ ಪೂರ್ಣ ಸತ್ಯ ಎಂದು ಹಿಂಡೆನ್‌ಬರ್ಗ್‌ ಪ್ರತಿಪಾದಿಸಿದೆ. ಅದಾನಿ ಕಂಪನಿ ಹುಸಿ ಲಾಭ ತೋರಿಸಿ ಕೃತಕವಾಗಿ ಹವಾ ಸೃಷ್ಟಿಸಿತ್ತು ಎಂದು ಹಿಂಡೆನ್‌ಬರ್ಗ್ ವರದಿ ಹೇಳಿದೆ. ಅದಾನಿ ಸಮೂಹ ವಿರುದ್ಧದ ಹಣಕಾಸು ಅಕ್ರಮಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ. ಅದಾನಿ ಗುಂಪಿನ ಆಸ್ತಿ ಮೌಲ್ಯ, ಆದಾಯ, ಷೇರು ಬೆಲೆಗಳು ಸಕಾರಣವಾಗಿದೆಯೇ ಎಂದು ಪರಿಶೀಲಿಸುವುದರಲ್ಲಿ ತಪ್ಪಿಲ್ಲ. ಹಿಂದೆ ಕೆಲವು ಸಂಸ್ಥೆಗಳು ತಮ್ಮ ಆದಾಯಪ್ರಮಾಣದಲ್ಲಿ ಭಾರಿ ಏರುಪೇರು ತೋರಿಸಿ, ಬಳಿಕ ಸತ್ಯ ಹೊರಬಿದ್ದಾಗ ಮಾರುಕಟ್ಟೆ ಕುಸಿದು ಪಾತಾಳ ಕಂಡ ಕಹಿ ಅನುಭವ ನಮಗೆ ಇದ್ದೇ ಇದೆ. ಹೀಗಾಗಿ ಒಂದು ಸಂಸ್ಥೆ ದಿಢೀರನೆ ಸಂಪತ್ತಿನ ತುತ್ತ ತುದಿಯನ್ನು ಮುಟ್ಟುವುದು ಅನುಮಾನಕ್ಕೆ ಆಸ್ಪದ ನೀಡಿದರೆ ಅಸಹಜವೇನೂ ಇಲ್ಲ. ಅದಾನಿ ಕಂಪನಿಯಲ್ಲಿ ಎಲ್‌ಐಸಿ ಮತ್ತು ಇತರ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕೂಡ ಹೂಡಿಕೆ ಮಾಡಿವೆ. ಹೀಗಾಗಿ ಇದರಲ್ಲಿ ತೆರಿಗೆದಾರರಾದ ನಮ್ಮ ಹಣ ಕೂಡ ನಷ್ಟ ಕಂಡಿದೆ. ಹೀಗಾಗಿ ದೇಶದ ಎಲ್ಲ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಬಗ್ಗೆ ಸರ್ಕಾರ ಹೆಚ್ಚಿನ ಗಮನ ಹರಿಸಿ, ತನಿಖೆ ನಡೆಸಬೇಕಿದೆ. ಕಂಪನಿ ಅಕ್ರಮವಾಗಲೀ ಅಥವಾ ಅಪಪ್ರಚಾರವಾಗಲೀ ಷೇರು ಮಾರುಕಟ್ಟೆಯ ಮೇಲೆ ದುಷ್ಪರಿಣಾಮ ಬೀರದಂತೆ ಆರ್‌ಬಿಐ ಮತ್ತು ಸೆಬಿ ಕ್ರಮ ಕೈಗೊಳ್ಳಬೇಕಿವೆ. ದೇಶದ ಆರ್ಥಿಕತೆಯ ಸ್ಥಿರತೆಯನ್ನು ಕೇಂದ್ರೀಯ ಹಣಕಾಸು ಸಂಸ್ಥೆಗಳು ಖಾತ್ರಿಪಡಿಸಿ, ಹೂಡಿಕೆದಾರರ ಹಿತಾಸಕ್ತಿ ರಕ್ಷಿಸಬೇಕಿದೆ

Exit mobile version