ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ, ನವ ದೆಹಲಿಯ ರಾಷ್ಟ್ರಪತಿ ಭವನದ ಆವರಣದಲ್ಲಿರುವ ʼಮೊಘಲ್ ಗಾರ್ಡನ್ʼ ಅನ್ನು ʼಅಮೃತ ಉದ್ಯಾನʼ ಎಂದು ಮರು ನಾಮಕರಣ ಮಾಡಲಾಗಿದೆ. ಇತ್ತೀಚೆಗೆ ʼರಾಜಪಥʼವನ್ನು ʼಕರ್ತವ್ಯಪಥʼ ಎಂದು ಮರುನಾಮಕರಣ ಮಾಡಲಾಗಿತ್ತು. ಹಲವು ಕಾರಣಗಳಿಗಾಗಿ ಇದೊಂದು ಸ್ವಾಗತಾರ್ಹ ಬೆಳವಣಿಗೆ.
ಮೊಘಲ್ ಹಾಗೂ ಪರ್ಷಿಯನ್ ಉದ್ಯಾನಗಳ ಮಾದರಿಯಲ್ಲಿ ರಾಷ್ಟ್ರಪತಿ ಭವನದ ಮುಂದಿನ ಉದ್ಯಾನವನವನ್ನು ರೂಪಿಸಲಾಗಿದ್ದರಿಂದ ಅದಕ್ಕೆ ಮೊಘಲ್ ಗಾರ್ಡನ್ ಎಂದು ಹೆಸರಿಡಲಾಗಿತ್ತು. ಆದರೆ ಈ ಹೆಸರನ್ನು ಇಟ್ಟವರು ಬ್ರಿಟಿಷರು. ಬ್ರಿಟಿಷರು ಹಾಗೂ ಮೊಘಲರು ಇಬ್ಬರೂ ಹಲವು ಶತಮಾನಗಳ ಕಾಲ ಭಾರತವನ್ನು ಆಳಿದವರು. ರಾಜಪಥವೂ ಹೀಗೆಯೇ, ಹಿಂದೆ ಬ್ರಿಟಿಷ್ ವೈಸರಾಯ್ ತಂಗುತ್ತಿದ್ದ ತಾಣದಲ್ಲಿದ್ದುದರಿಂದ ಕಿಂಗ್ಸ್‌ವೇ ಎಂದು ಇಡಲಾಗಿತ್ತು. ಸ್ವಾತಂತ್ರ್ಯಾನಂತರ ರಾಜಪಥವೆಂಬ ಹೆಸರು ಅದಕ್ಕಿಡಲಾಗಿತ್ತು. ಆದರೆ ಈಗ ಮೊಘಲರೂ ಇಲ್ಲ, ಬ್ರಿಟಿಷರೂ ಇಲ್ಲ. ಬದಲಾಗಿ ಪ್ರಜಾಪ್ರಭುತ್ವ ಇದೆ. ಆದರೆ ವಸಾಹತುಶಾಹಿಯನ್ನು ನೆನಪಿಸುವ ಈ ಹೆಸರುಗಳು ಬದಲಾಗಿ, ನಮ್ಮದೇ ಹೆಸರುಗಳು ಅಲ್ಲಿ ಕಾಣಿಸಿಕೊಂಡರೆ ಹೆಚ್ಚು ಹೆಮ್ಮೆಯ ಭಾವ ಮೂಡುತ್ತದೆ. ಯುದ್ಧದಲ್ಲಿ ಮಡಿದ ಯೋಧರ ಸ್ಮಾರಕ ಕರ್ತವ್ಯಪಥದ ಮಧ್ಯದಲ್ಲಿದೆ. ಹೀಗೆ ಇದು ನಾವು ದೇಶಕ್ಕಾಗಿ ಮಾಡಬೇಕಾದ ಕರ್ತವ್ಯವನ್ನು ನೆನಪಿಸುವಂತಿದೆ. ಅಮೃತ ಉದ್ಯಾನ ಎಂಬುದು ಕೂಡ ನಮ್ಮ ದೇಶಕ್ಕೆ ನಾವು ಹೋರಾಡಿ ಪಡೆದ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಸದಾ ನೆನಪಿಸುವಂತಿರುತ್ತದೆ. ʼಕ್ವೀನ್ಸ್‌ವೇʼ ಕೂಡ ಇದೇ ರೀತಿಯಲ್ಲಿ ʼಜನಪಥʼವಾಗಿದೆ.
ಹೆಸರಲ್ಲೇನಿದೆ ಎನ್ನಬಹುದು. ಆದರೆ ಈ ಬದಲಾವಣೆ ಹಿಂದೆ ಹಲವಾರು ಸಂದೇಶಗಳಿವೆ. ಈಗಾಗಲೇ ಕೇಂದ್ರ ಸರ್ಕಾರ ದಾಸ್ಯ ಮತ್ತು ಪರಕೀಯ ಆಡಳಿತದ ಛಾಯೆಯುಳ್ಳ ಹಲವಾರು ಹೆಸರುಗಳನ್ನು ಬದಲಾಯಿಸಿದೆ. ಮತ್ತು ಇದು ಹೊಸ ಬೆಳವಣಿಗೆಯೂ ಅಲ್ಲ. 1956ರಷ್ಟು ಹಿಂದೆಯೇ, ಬ್ರಿಟಿಷ್ ಉಚ್ಚಾರಣೆಯಲ್ಲಿ ʼಬನಾರಸ್ʼ ಆಗಿದ್ದ, ಮೂಲತಃ ʼವಾರಾಣಸಿʼಯಾಗಿದ್ದ ಕಾಶಿಯ ಮೂಲ ಹೆಸರನ್ನೇ ಮತ್ತೆ ಇಡಲಾಯಿತು. 1995ರಲ್ಲೇ ಬಾಂಬೇಯನ್ನು ಮುಂಬಯಿ ಮಾಡಲಾಗಿದೆ. 1987ರಲ್ಲಿಯೇ ವಾಲ್ಟೇರ್ ಅನ್ನು ಮೊದಲಿನಂತೆ ವಿಶಾಖಪಟ್ಟಣಂ ಮಾಡಲಾಗಿದೆ. ಕೆಲವ ವರ್ಷಗಳ ಉತ್ತರ ಪ್ರದೇಶ ಸರ್ಕಾರ ಅಲಹಾಬಾದ್ ಅನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸಿತು. ಪಾಂಡಿಚೆರಿ- ಪುದುಚೆರಿಯಾದುದು ಹಾಗೂ ಮದ್ರಾಸ್- ಚೆನ್ನೈ ಆದುದೂ ಹೀಗೆಯೇ. ನಗರಗಳ ಹೆಸರು ಬದಲಾಯಿಸುವುದು ಬರಿಯ ಹೆಸರಷ್ಟೇ ಅಲ್ಲ. ಅದರ ಹಿಂದೆ ಒಂದು ಸಾಂಸ್ಕೃತಿಕ ಕಾರಣ ಹಾಗೂ ಸಂದೇಶವಿರುತ್ತದೆ. ನಾವು ಮರೆತುಹೋದ, ಆದರೆ ಮರೆಯಬಾರದ ನಮ್ಮ ಪಾರಂಪರಿಕ ಸ್ಮರಣೆಯನ್ನು ಜೀವಂತವಾಗಿಡುವುದು ಈ ಮರುನಾಮಕರಣದ ಉದ್ದೇಶವಾಗಿದೆ. ವಸಾಹತುಶಾಹಿಯಿಂದಾಗಿ ನಮ್ಮ ಹಲವು ಸ್ಮೃತಿಗಳಿಗೆ ಧಕ್ಕೆ ಒದಗಿದೆ. ಈ ಸ್ಮೃತಿಗಳನ್ನು ಮತ್ತೆ ಜೀವಂತಗೊಳಿಸುವುದು ಇದರ ಆಶಯವಾಗಿದೆ. ಉದಾಹರಣೆಗೆ, ಪ್ರಯಾಗ ಎಂದರೆ ಪುರಾತನ ಕುಂಭಮೇಳದ ನೆನಪು ಜೀವಂತವಾಗಿ ಎದ್ದುಬರುತ್ತದೆ. ʼವಿಕ್ಟೋರಿಯಾ ಟರ್ಮಿನಸ್ʼ ಎಂಬುದು ʼಛತ್ರಪತಿ ಶಿವಾಜಿ ಟರ್ಮಿನಸ್ʼ ಆಗುವುದು ಸ್ವಾಗತಾರ್ಹವೇ ತಾನೆ?
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಷೇರು ಮಾರುಕಟ್ಟೆಯ ಸ್ಥಿರತೆ ಕಾಪಾಡಿ
ಆದರೆ ಕೇವಲ ಹೆಸರು ಬದಲಿಸಿದರಷ್ಟೇ ಸಾಕೆ? ಹೊಸ ಹೆಸರಿಗೂ ಘನತೆ ಬರುವಂತೆ ನೋಡಿಕೊಳ್ಳಬೇಕು. ಅದು ನಮ್ಮ ದೇಶೀಯರ ಬದುಕಿನ ಹೆಮ್ಮೆಯನ್ನು ಎತ್ತಿ ಹಿಡಿಯುವಂತಿರಬೇಕು. ಅಮೃತ ಉದ್ಯಾನ ಎಂದು ಬದಲಿಸಿದರೆ ಸಾಲದು, ಅದು ಹೆಸರಿಗೆ ತಕ್ಕಂತೆ ನಳನಳಿಸಿ ದೇಶದ ಚೆಲುವನ್ನು ಎತ್ತಿ ಹಿಡಿಯುವಂತೆ ನೋಡಿಕೊಳ್ಳಬೇಕು. ಇತರ ಹೆಸರುಗಳಿಗೂ ಇದೇ ಅನ್ವಯ. ಹೆಸರು ಬದಲಿಸುವುದರಿಂದಷ್ಟೇ ಒಂದು ನಗರದ ಅಥವಾ ತಾಣದ ಹಣೆಬರಹ ಬದಲಾಗುವುದಿಲ್ಲ. ಅಲ್ಲಿಯ ಸೌಂದರ್ಯ, ಸ್ವಚ್ಛತೆ, ಘನತೆ, ಅದು ಎತ್ತಿ ಹಿಡಿಯುವ ಆಶಯಗಳು, ಅದು ನಮ್ಮಲ್ಲಿ ಉಂಟುಮಾಡುವ ನೆನಪುಗಳು, ಅದು ನಮ್ಮ ದೇಶದ ಸಂಸ್ಕೃತಿ ಹಾಗೂ ವಿವಿಧತೆಯಲ್ಲಿ ಏಕತೆಯ ತತ್ವಕ್ಕೆ ಪೂರಕವಾಗಿದೆಯೇ- ಹೀಗೆ ಎಲ್ಲವೂ ಮುಖ್ಯವಾಗುತ್ತವೆ. ಹೀಗಾಗಿ ಹೆಸರು ಬದಲಿಸಿದರೆ ಸಾಲದು, ಬದಲಿಸಿದ ನಂತರ ಏನು ಎಂಬುದೂ ಮುಖ್ಯವಾಗುತ್ತದೆ.