ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023ರ ಸಾಲಿನ (Union Budget 2023) ಬಜೆಟ್ ಮಂಡಿಸಿದ್ದಾರೆ. ಈ ವರ್ಷ ಹಲವು ರಾಜ್ಯಗಳ ಚುನಾವಣೆ ಇರುವುದರಿಂದ ಆಕರ್ಷಕ ಯೋಜನೆಗಳ ಧಮಾಕಾ ಇರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಂಥ ಯುದ್ಧಕಾಲದ ಯಾವುದೇ ಜನಪ್ರಿಯ ಗಿಮಿಕ್‌ಗಳಿಗೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ಆದ್ದರಿಂದ ಇದು ಭಾರಿ ಸಂಚಲನ ಮೂಡಿಸುವ ಬಜೆಟ್ ಏನೂ ಆಗಿಲ್ಲ. ಆದರೆ ಎಲ್ಲ ವರ್ಗಗಳಿಗೂ ಆದ್ಯತೆ ನೀಡುವ ಒಂದು ಸಮತೋಲಿತ ಆಯವ್ಯಯ ರೂಪಿಸಲು ಯತ್ನಿಸಿರುವುದು ಎದ್ದು ಕಾಣಿಸುತ್ತದೆ. ವಿತ್ತೀಯ ಕೊರತೆಯ ಮಿತಿಯನ್ನು ಹೆಚ್ಚಿಸಿಲ್ಲ. ಕ್ರೋಡೀಕೃತ ಆದಾಯವನ್ನು ವಿವೇಚನೆಯಿಂದ ವೆಚ್ಚ ಮಾಡುವ ಯೋಜನೆಗಳನ್ನು ಮಂಡಿಸಲಾಗಿದೆ. ಆರ್ಥಿಕ ಶಿಸ್ತನ್ನು ಉಳಿಸಿಕೊಂಡು ಅಭಿವೃದ್ಧಿಯ ದಾರಿಯಲ್ಲಿ ಸಾಗುವ ಪ್ರಯತ್ನವಿದೆ. ಆದರೆ ಸಂಚಲನ ಸೃಷ್ಟಿಸಿಲ್ಲ ಎಂಬುದು ಷೇರು ಮಾರುಕಟ್ಟೆಯಲ್ಲಿ ಸೃಷ್ಟಿಯಾದ ನೀರಸ ಪ್ರತಿಕ್ರಿಯೆಯಿಂದಲೇ ಗೊತ್ತಾಗಿದೆ.
ಎಲ್ಲವನ್ನೂ ಒಳಗೊಳ್ಳುವ ಅಂತರ್ಗತ ಅಭಿವೃದ್ಧಿ, ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಯೋಜನೆಗಳು, ಮೂಲಸೌಕರ್ಯ ಮತ್ತು ಹೂಡಿಕೆ, ಸಾಮರ್ಥ್ಯದ ಸದ್ಬಳಕೆ, ಹಸಿರು ಅಭಿವೃದ್ಧಿ, ಯುವಜನ ಸಬಲೀಕರಣ ಮತ್ತು ಹಣಕಾಸು ವಲಯವನ್ನು ಆದ್ಯತಾ ಕ್ಷೇತ್ರವಾಗಿಟ್ಟುಕೊಂಡು ರೂಪಿಸಿರುವ ಬಜೆಟ್ ಇದೆಂದು, ʼಸಪ್ತರ್ಷಿ ಘೋಷಣೆʼಯನ್ನು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಅದಕ್ಕೆ ಪೂರಕವಾದ ಕೆಲವು ಅಂಶಗಳನ್ನು ಬಜೆಟ್‌ನಲ್ಲಿ ಅಡಕಗೊಳಿಸಲಾಗಿದೆ. ಮಧ್ಯಮ ವರ್ಗಕ್ಕೆ ಹಿತವಾಗಿರುವ ಘೋಷಣೆ ಎಂದರೆ ಆದಾತ ತೆರಿಗೆ ಸ್ಲ್ಯಾಬ್‌ನಲ್ಲಿ ಪರಿಷ್ಕರಣೆ. ಏಳು ಲಕ್ಷ ರೂ.ವರೆಗೆ ಆದಾಯ ಹೊಂದಿದವರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ ಎಂಬುದು ಇದರ ಮುಖ್ಯಾಂಶ. ಆದರೆ ಹೊಸ ಪದ್ಧತಿಯಲ್ಲಿ ಉಳಿತಾಯದ ಯಾವ ಮಾರ್ಗವೂ ಬಳಕೆಯಾಗದೇ ಇರುವುದರಿಂದ, ಜನತೆಗೆ ಹೊಸ- ಹಳೆಯ ಪದ್ಧತಿಗಳ ನಡುವೆ ಆಯ್ಕೆಯ ಗೊಂದಲ ಉಂಟಾಗುವ ಸಂಭವವಿದೆ.
ಸಣ್ಣ ಹಾಗೂ ಕಿರು ಉದ್ಯಮಗಳ ವಲಯಕ್ಕೆ ಪುನಶ್ಚೇತನ ನೀಡಲು ಅಲ್ಲೂ ತೆರಿಗೆ ವಿನಾಯಿತಿಯನ್ನು ವಿಸ್ತರಿಸಲಾಗಿದೆ. ಕೊರೊನಾ ಸಾಂಕ್ರಾಮಿಕದ ನಂತರ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡಿದ ವಲಯವೆಂದರೆ ಎಂಎಸ್‌ಎಂಇ. ಈ ವಲಯಕ್ಕೆ 9000 ಕೋಟಿ ರೂ. ನೀಡಿರುವುದಲ್ಲದೆ 3 ಕೋಟಿ ರೂ.ಗಳವರೆಗಿನ ವ್ಯವಹಾರಕ್ಕೆ ತೆರಿಗೆ ಮಿತಿ ಒದಗಿಸಿರುವುದು ಸ್ವಾಗತಾರ್ಹ ಕ್ರಮ. ಇದು ಆತ್ಮನಿರ್ಭರ ಭಾರತ ಮುಂತಾದ ಆದರ್ಶಗಳಿಂದ ಹೊಸ ಉದ್ಯಮಗಳನ್ನು ಕಟ್ಟಲು ಮುಂದಾಗಿರುವ ಯುವಜನತೆಗೆ ಪ್ರೋತ್ಸಾಹಕರವಾಗಿದೆ. ಇನ್ನು ದಿನದಿಂದ ದಿನಕ್ಕೆ ಹಣದುಬ್ಬರ ಹೆಚ್ಚಾಗುತ್ತಿದೆ, ಜೀವನ ವೆಚ್ಚ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳ ಗರಿಷ್ಠ ಠೇವಣಿ ಮಿತಿಯನ್ನು 15 ಕೋಟಿ ರೂ.ಗಳಿಂದ 30 ಲಕ್ಷಕ್ಕೆ ಏರಿಸಿರುವುದು, ಮಹಿಳಾ ಸಮ್ಮಾನ್ ಉಳಿತಾಯ ಸರ್ಟಿಫಿಕೇಟ್ ಘೋಷಿಸಿರುವುದು ಒಳ್ಳೆಯ ಕ್ರಮವಾಗಿದೆ.
ರೈಲ್ವೇ ವಲಯಕ್ಕೆ 2.4 ಲಕ್ಷ ಕೋಟಿ ರೂ. ಯೋಜನೆಗಳನ್ನು ನೀಡಿರುವುದು ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ರಕ್ಷಣಾ ಬಜೆಟ್ ಮೊತ್ತವನ್ನು ಕಳೆದ ಬಾರಿಯ 5.25 ಲಕ್ಷದಿಂದ 5.94 ಲಕ್ಷ ಕೋಟಿಗೇರಿಸಲಾಗಿದೆ. ಇನ್ನು ಶಿಕ್ಷಣದಲ್ಲಿ 157 ನರ್ಸಿಂಗ್ ಕಾಲೇಜುಗಳ ಸ್ಥಾಪನೆ, ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆಯ ಘೋಷಣೆ ಮಾಡಲಾಗಿದೆ. ಯುವಜನರನ್ನು ಉದ್ಯೋಗಕ್ಕೆ ಸಿದ್ಧಗೊಳಿಸಲು ಹಲವಾರು ರಾಜ್ಯಗಳಲ್ಲಿ 30 ಸ್ಕಿಲ್ ಇಂಡಿಯಾದ ಅಂತಾರಾಷ್ಟ್ರೀಯ ಕೇಂದ್ರಗಳ ಸ್ಥಾಪನೆ, ರಾಷ್ಟ್ರೀಯ ಅಪ್ರೆಂಟಿಸ್‌ಷಿಪ್ ಉತ್ತೇಜನಾ ಯೋಜನೆಯಡಿ 47 ಲಕ್ಷ ಯುವಜನರಿಗೆ ಮೂರು ವರ್ಷಗಳ ಕಾಲ ಸ್ಟೈಪೆಂಡ್ ನೀಡಲು ನಿರ್ಧರಿಸಿರುವುದು, ಕೃಷಿ ಕ್ಷೇತ್ರದಲ್ಲಿ ಯುವಜನರಿಗೆ ಉತ್ತೇಜನ ನೀಡುವುದಕ್ಕಾಗಿ ಕೃಷಿ ಸ್ಟಾರ್ಟಪ್ ಸ್ಥಾಪನೆಗೆ ಅಕ್ಸಿಲರೇಟರ್ ಫಂಡ್ ನಿಗದಿ ಮಾಡಿರುವುದು, 50 ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿ ಪ್ರವಾಸೋದ್ಯಮದ ಪುನಶ್ಚೇತನ- ಇವು ಸರ್ಕಾರ ತನ್ನ ಆದ್ಯತಾ ವಲಯಗಳನ್ನು ಗುರುತಿಸಿಕೊಂಡಿರುವುದರ ದ್ಯೋತಕವಾಗಿವೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಈ ವರ್ಷ ಭಾರತ ಜಗತ್ತಿನ ಪ್ರಬಲ ಆರ್ಥಿಕ ಶಕ್ತಿ, ಐಎಂಎಫ್ ಭವಿಷ್ಯ ಆಶಾದಾಯಕ
ಒಟ್ಟಿನಲ್ಲಿ ಇದು, ಯಾವುದೇ ಭಾರಿ ಯೋಜನೆಗಳಿಲ್ಲದಿದ್ಯಾಗ್ಯೂ, ಸಂತುಲಿತ ಬಜೆಟ್ ಎನ್ನಬಹುದು. ದೇಶದ ಎಲ್ಲ ಆದ್ಯತಾ ವಲಯಗಳನ್ನೂ ಗುರುತಿಸಿ, ತಕ್ಕಮಟ್ಟಿಗೆ ಹಣಕಾಸು ನೆರವು ಒದಗಿಸಿ ಸಂತೃಪ್ತಿಪಡಿಸುವ ಕಾಯಕವನ್ನು ಇದರಲ್ಲಿ ಮಾಡಲಾಗಿದೆ. ಆರ್ಥಿಕ ಸಮೀಕ್ಷೆ ಹಾಗೂ ಐಎಂಎಫ್ ವರದಿಗಳು ತಿಳಿಸಿರುವಂತೆ ಜಿಡಿಪಿಯೂ 6.8- 7ರ ಆಸುಪಾಸಿನಲ್ಲಿದ್ದು, ಆರ್ಥಿಕ ಕುಸಿತದ ಭೀತಿಯೂ ಇಲ್ಲ. ದಾಖಲೆ ಜಿಎಸ್‌ಟಿ ಸಂಗ್ರಹವೂ ಇದೆ. ಇದರಿಂದಾಗಿ ಇದೊಂದು ಆತ್ಮವಿಶ್ವಾಸದ- ಸಮತೋಲನದ ಬಜೆಟ್ ಆಗಿದೆ.