Site icon Vistara News

ವಿಸ್ತಾರ ಸಂಪಾದಕೀಯ: ಸಂಸದರ ನಾಚಿಕೆಗೇಡಿನ ವರ್ತನೆ ಖಂಡನೀಯ

Vistara Editorial, Shameful behavior of MPs is condemnable

ರಾಜ್ಯಸಭೆಯ ಸ್ಪೀಕರ್‌, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ (Vice President Jagdeep Dhankhar) ಅವರನ್ನು ಟಿಎಂಸಿ ಸಂಸದರೊಬ್ಬರು (TMC MP) ಅಣಕಿಸಿ ಮಿಮಿಕ್ರಿ ಮಾಡಿದ, ಅದನ್ನು ಕಾಂಗ್ರೆಸ್‌ ಹೈಕಮಾಂಡ್‌ ನಾಯಕ ಹಾಗೂ ಸಂಸದ ರಾಹುಲ್ ಗಾಂಧಿ (Rahul Gandhi) ‌ʼಎಂಜಾಯ್‌ʼ ಮಾಡುತ್ತಾ ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡ ಘಟನೆ ನಡೆದಿತ್ತು. ಲೋಕಸಭೆ ಭದ್ರತೆ ಲೋಪದ ಕುರಿತು ಗೃಹ ಸಚಿವ ಅಮಿತ್‌ ಶಾ (Amit Shah) ಹೇಳಿಕೆಗೆ ಆಗ್ರಹಿಸಿ ವಿಪಕ್ಷ ಸದಸ್ಯರು ಎಬ್ಬಿಸಿದ ಗದ್ದಲದ ಸಂದರ್ಭ ಅಶಿಸ್ತಿನ ವರ್ತನೆಗಾಗಿ ಸಂಸತ್ತಿನಿಂದ 49 ಸದಸ್ಯರನ್ನು ಹೊರಹಾಕಲಾಗಿತ್ತು. ಇದನ್ನು ವಿರೋಧಿಸಿ ಸಂಸತ್ತಿನ ಹೊರಗೆ ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷ ಸದಸ್ಯರು ಧರಣಿ ನಡೆಸಿದ್ದರು. ಈ ಸಂದರ್ಭದಲ್ಲಿ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ರಾಜ್ಯಸಭೆ ಅಧ್ಯಕ್ಷರನ್ನು ಅಣಕಿಸಿ ತೋರಿಸಿದ್ದು, ಇದನ್ನು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಸ್ಮಾರ್ಟ್‌ಫೋನ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದರು. ಈ ವಿಡಿಯೋವನ್ನು ಕಾಂಗ್ರೆಸ್‌ನ ಇನ್‌ಸ್ಟಗ್ರಾಂ ಅಕೌಂಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಬಳಿಕ ಅದನ್ನು ಡಿಲೀಟ್‌ ಮಾಡಲಾಗಿದೆ. ಇದು ಅಸಭ್ಯ ಎಂದು ಅರ್ಥವಾಯಿತೋ, ಅಥವಾ ಕಾನೂನು ಕ್ರಮದ ಹೆದರಿಕೆಯಿಂದ ಡಿಲೀಟ್ ಮಾಡಲಾಯಿತೋ ತಿಳಿಯದು(Vistara Editorial). ‌

ಸಂಸತ್ತಿನ ಹೊರಗೆ ತಮ್ಮನ್ನು ಅಣಕಿಸಿದ ಟಿಎಂಸಿ ಸಂಸದನ ಕೃತ್ಯ ಹಾಗೂ ಅದನ್ನು ತಮ್ಮ ಫೋನ್ ಕ್ಯಾಮೆರಾದಲ್ಲಿ ರೆಕಾರ್ಡ್‌ ಮಾಡಿಕೊಂಡ ರಾಹುಲ್ ಗಾಂಧಿಯವರ ನಡತೆಯನ್ನು ಜಗದೀಪ್‌ ಧನ್‌ಕರ್‌ ಕಟುವಾಗಿ ಟೀಕಿಸಿದ್ದು, ʼನಾಚಿಕೆಗೇಡಿನ ಕೃತ್ಯʼ ಎಂದು ಕರೆದಿದ್ದಾರೆ. ಎನ್‌ಡಿಎ ಸಂಸದರು ಮಾತ್ರವಲ್ಲ, ಕಾಂಗ್ರೆಸ್‌ನ ಕೆಲವು ಸಂಸದರು ಕೂಡ ಇದನ್ನು ಟೀಕಿಸಿದ್ದಾರೆ. ಧನ್‌ಕರ್‌ ಅವರು ಹೇಳಿರುವಂತೆಯೇ, ರಾಜ್ಯಸಭಾ ಅಧ್ಯಕ್ಷರ ಸ್ಥಾನ ವಿಶಿಷ್ಟ ಹಾಗೂ ವಿಭಿನ್ನವಾದುದು. ಉಪ ರಾಷ್ಟ್ರಪತಿ ಸ್ಥಾನ ದೇಶದ ಅತ್ಯುನ್ನತ ಹುದ್ದೆಗಳಲ್ಲಿ ಒಂದು. ಅವರು ರಾಜ್ಯಸಭೆಯ ಅಧ್ಯಕ್ಷರ ಸ್ಥಾನದಲ್ಲಿ ಕುಳಿತಿರುವಾಗ ಎಲ್ಲ ಸಂಸದರೂ ಅವರ ನಿರ್ದೇಶನದ ಅಡಿಯಲ್ಲಿ ಸಂಸದೀಯ ನಡವಳಿಕೆಯನ್ನು ತೋರಬೇಕು. ಪ್ರಥಮತಃ, ಅಧ್ಯಕ್ಷರ ನಿರ್ದೇಶನಗಳನ್ನು ಉಲ್ಲಂಘಿಸಿ ಸದನದಲ್ಲಿ ದುರ್ವರ್ತನೆ ತೋರಿದ ಪರಿಣಾಮ ರಾಜ್ಯಸಭೆಯಿಂದ ಈ ಸಂಸದರು ಅಮಾನತಾಗಿದ್ದಾರೆ. ಅದರ ಮೇಲಿನಿಂದ, ಸಂಸತ್ತಿನ ಹೊರಗೆ ನಿಂತು ಸಭಾಧ್ಯಕ್ಷರ ವರ್ತನೆಗಳನ್ನು ಅಣಕಿಸಿ ತೋರಿಸುವ ದುರ್ನಡತೆ ಇನ್ನೊಂದು. ಇದು ಸ್ಪಷ್ಟವಾಗಿ ರಾಜ್ಯಸಭಾಧ್ಯಕ್ಷರಿಗೆ, ಉಪ ರಾಷ್ಟ್ರಪತಿಗೆ, ಸದನಕ್ಕೆ ತೋರಿದ ಅಗೌರವ. ಸದನದ ಬಗ್ಗೆ, ಅಲ್ಲಿನ ಅಧ್ಯಕ್ಷ ಪೀಠದ ಬಗ್ಗೆ ದೇಶದ ಜನತೆಗೆ ಪೂಜನೀಯ ಎಂಬಂಥ ಭಾವ ಇದೆ. ಅದು ದೇಶದ ನೂರಾರು ಜನಪ್ರತಿನಿಧಿಗಳನ್ನು ಸಂಸದೀಯ ನಡವಳಿಕೆಗಳ ಸನ್ನಡತೆಯ ಹಾದಿಯಲ್ಲಿ ಕೊಂಡೊಯ್ದು ಚರ್ಚೆಗಳನ್ನು ತುದಿ ಮುಟ್ಟಿಸುವ ಘನತರ ಹುದ್ದೆ. ಸುಪ್ರೀಂ ಕೋರ್ಟ್‌ ನ್ಯಾಯಾಧೀಶರಿಗೆ ಇರುವ ಕೆಲವು ಅಧಿಕಾರಗಳು ಇವರಿಗೂ ಇವೆ. ಈ ಅಣಕವಾಡುವ ವರ್ತನೆ ಸಂಸದರು ತಲುಪಬಾರದ ಅಧಃಪತನವನ್ನು ಸೂಚಿಸುತ್ತಿದೆ.

ಈ ಸಂಸದರ ಕೃತ್ಯ ಒಂದಾದರೆ, ಅದನ್ನು ನಗುತ್ತಾ ಸವಿದ, ರೆಕಾರ್ಡ್‌ ಮಾಡಿಕೊಂಡ ರಾಹುಲ್‌ ಗಾಂಧಿಯವರ ವರ್ತನೆ ಇನ್ನಷ್ಟು ನಾಚಿಕೆಗೇಡಿನದ್ದು. ಅವರ ಈ ನಡತೆಯನ್ನು ಕ್ಷಮಿಸೋಣ ಎನ್ನಲು ಅವರು ʼಲೋಕಲ್‌ ಪುಢಾರಿʼಯಲ್ಲ. ರಾಷ್ಟ್ರೀಯ ಪಕ್ಷವೊಂದರ ಹೈಕಮಾಂಡ್‌ ನಾಯಕ. ಲೋಕಸಭೆಯ ಸಂಸದ. ಭವಿಷ್ಯದಲ್ಲಿ ಇಂಡಿಯಾ ಮೈತ್ರಿಕೂಟ ಗೆದ್ದು ಅಧಿಕಾರ ಹಿಡಿದರೆ ಪ್ರಧಾನಿಯೂ ಆಗಬಹುದಾದ ಪ್ರಭಾವವನ್ನು ಹೊಂದಿದವರು. ಈ ದೇಶವನ್ನು ಹಲವು ಕಾಲ ಆಳಿದ ಪ್ರಭಾವೀ ಕುಟುಂಬದ ಕುಡಿ. ಭವಿಷ್ಯದ ಪ್ರಧಾನಿ ಎಂದೇ ಕಾಂಗ್ರೆಸ್‌ನಿಂದ ಬಿಂಬಿತರಾದವರು. ಇದು ಭವಿಷ್ಯದ ಪ್ರಧಾನಿಯ ಲಕ್ಷಣವೇ? ಹಾಗಿದ್ದರೆ ಇಂಥವರು ಪ್ರಧಾನಿ ಆಗದಿರುವುದೇ ಒಳ್ಳೆಯದು ಎಂದು ದೇಶದ ಪ್ರಜ್ಞಾವಂತರು ಹೇಳುವಂತಿದೆ ಅವರ ವರ್ತನೆ. ಟಿಎಂಸಿ ಸಂಸದರು ಮಾಡಿದ್ದು ರಾಜ್ಯಸಭೆಯ ಅಧ್ಯಕ್ಷರ ವೈಯಕ್ತಿಕ ಅಣಕ ಮಾತ್ರವಲ್ಲ, ʼಬಾಡಿ ಶೇಮಿಂಗ್‌ʼ ಕೂಡ. ಅಂದರೆ ಧನ್‌ಕರ್‌ ಅವರ ದೇಹದ ಸ್ವರೂಪವನ್ನು ವಿಲಕ್ಷಣವಾಗಿ ಆಡಿಕೊಂಡಿರುವ ನಡತೆಯನ್ನು ರಾಹುಲ್‌ ನಕ್ಕು ಸಮ್ಮತಿಸುವವರಂತೆ ರೆಕಾರ್ಡ್‌ ಮಾಡಿಕೊಂಡಿರುವುದು ಈ ಹೀನ ವರ್ತನೆಯಲ್ಲಿ ಅವರೂ ಪಾಲದಾರರು ಎಂಬುದನ್ನು ಸೂಚಿಸುವಂತಿದೆ. ಇದು ಆಘಾತಕಾರಿ; ಇದು ನಾಚಿಕೆಗೇಡಿತನ ಮಾತ್ರವಲ್ಲ, ಬುದ್ಧಿಗೇಡಿತನ ಕೂಡ. ಹೀಗೆ ಅಣಕಿಸಿದವನಿಗೆ ರಾಹುಲ್ ಗಾಂಧಿ ಬುದ್ಧಿ ಹೇಳುವುದನ್ನು ಬಿಟ್ಟು ಇದನ್ನೆಲ್ಲ ತಾವೇ ಮೊಬೈಲ್‌ನಲ್ಲಿ ಚಿತ್ರಿಸಿದ್ದು ಆಶ್ಚರ್ಯಕರ.

ಸಂಸದರು ಪ್ರಬುದ್ಧತೆ ಕಳೆದುಕೊಂಡವರಂತೆ ವರ್ತಿಸತೊಡಗಿದರೆ ಪ್ರಜೆಗಳು ಇನ್ನಷ್ಟು ದಾರಿ ತಪ್ಪುತ್ತಾರೆ. ಅವರ ಪಕ್ಷದ ಕಾರ್ಯಕರ್ತರಂತೂ ದುರ್ನಡತೆಗೆ ಸಿಕ್ಕಿದ ಒಪ್ಪಿಗೆ ಎಂದೇ ತಿಳಿಯುತ್ತಾರೆ. ಆದ್ದರಿಂದ ಇನ್ನಾದರೂ ಸಂಸದರು ಇಂಥ ದುರ್ನಡತೆಗಳನ್ನು ಬಿಟ್ಟು ಸದನಕ್ಕೆ ಸೂಕ್ತವಾದ ಘನತೆಯನ್ನು ತೋರಿಸಲಿ. ಸದನದಲ್ಲೂ ಹೊರಗೂ ಅನಗತ್ಯ ಪುಂಡಾಟಿಕೆಗಳನ್ನು ಬಿಟ್ಟು, ತಮ್ಮ ಪ್ರತಿಭೆಯನ್ನು ತಮ್ಮ ಕ್ಷೇತ್ರದ ಜನತೆಗೆ ಉಪಯುಕ್ತವಾಗುವಂತೆ ವಿನಿಯೋಗಿಸುವತ್ತ ಗಮನ ಕೊಡಲಿ.

ಈ ಸಂಪಾದಕೀಯವನ್ನೂ ಓದಿ: ವಿಸ್ತಾರ ಸಂಪಾದಕೀಯ: ಸಿಎಂ-ಪಿಎಂ ಭೇಟಿ ಸಹಕಾರದ ಹೊಸ ಅಧ್ಯಾಯವಾಗಲಿ

Exit mobile version