ಹೃದಯಾಘಾತಗಳಿಗೆ ಯುವಜನರೇ ಬಲಿಯಾಗುತ್ತಿರುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಅದರಲ್ಲೂ, ಕೊರೊನಾ ವೈರಸ್ ಬಳಿಕ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಲಸಿಕೆಯಿಂದಲೇ ಹಾರ್ಟ್ ಅಟ್ಯಾಕ್, ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿವೆ ಎಂಬ ದೂರುಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರವು ಮಹತ್ವದ ಸೂಚನೆ ನೀಡಿದೆ. “ಕೊರೊನಾ ವೇಳೆ ಸಾವು ಗೆದ್ದು ಬಂದವರು ಜಾಸ್ತಿ ಕೆಲಸ ಮಾಡಬಾರದು” ಎಂದು ಸೂಚಿಸಿದೆ. “ಕೊರೊನಾ ಸೋಂಕು ತಗುಲಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುವುದು ಸೇರಿ ಆರೋಗ್ಯ ಸ್ಥಿತಿ ಗಂಭೀರವಾಗಿ, ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ದಣಿಯುವ ಕೆಲಸ ಮಾಡಬಾರದು. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಅಧ್ಯಯನ ವರದಿ ಪ್ರಕಾರ, ಹೃದಯಾಘಾತದ ಭೀತಿ ಇರುವ ಕಾರಣ ಒಂದಷ್ಟು ಸಮಯದವರೆಗೆ ಕೊರೊನಾ ಸೋಂಕಿತರು ಹೆಚ್ಚು ಸಮಯದವರೆಗೆ ಅಥವಾ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್‌ನಲ್ಲಿ ವರ್ಕೌಟ್ ಕೂಡ ಮಾಡಬಾರದು” ಎಂದು ಅಧ್ಯಯನ ವರದಿ ಉಲ್ಲೇಖಿಸಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ತಿಳಿಸಿದ್ದಾರೆ. ಇದು ನಿಜಕ್ಕೂ ಚಿಂತಿಸಬೇಕಾದ ಸಂಗತಿ.
ಗುಜರಾತ್‌ನಲ್ಲಿ ಇತ್ತೀಚೆಗೆ ನವರಾತ್ರಿ ಹಿನ್ನೆಲೆಯಲ್ಲಿ ಗರ್ಬಾ ನೃತ್ಯ ಮಾಡುವ ವೇಳೆ ಹೃದಯಾಘಾತದಿಂದ 10 ಜನ ಮೃತಪಟ್ಟಿದ್ದು ಗಂಭೀರ ಸಂಗತಿ. ಕುರಿತು ಪ್ರತಿಕ್ರಿಯಿಸುವ ವೇಳೆ ಮಾಂಡವೀಯ ಈ ವಿಷಯ ಹೇಳಿದ್ದಾರೆ. ಕೊರೊನಾ ನಂತರ ಹೃದಯಾಘಾತಕ್ಕೀಡಾಗುವವರ ಸಂಖ್ಯೆ ಹೆಚ್ಚಾಗುತ್ತಿರುವ ಕುರಿತು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ICMR) ಈಗಾಗಲೇ ಸಂಶೋಧನೆ ಆರಂಭಿಸಿದೆ. ಕೊರೊನಾ ಪಿಡುಗಿನ ನಂತರ ಹೃದಯಾಘಾತಕ್ಕೀಡಾಗುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ ಎಂದು ಐಸಿಎಂಆರ್ ತಜ್ಞರೇ ಒಪ್ಪಿಕೊಂಡಿದ್ದಾರೆ. ಕೊರೊನಾ ಸೋಂಕು ತಗುಲಿ, ಅದು ತೀವ್ರಗೊಂಡ ನಂತರ ಗುಣಮುಖರಾದವರಲ್ಲಿ ಈ ಪ್ರಮಾಣ ಜಾಸ್ತಿ ಇದೆ ಎಂದಿದ್ದಾರೆ. ಕೊರೊನಾ ಲಸಿಕೆಯಿಂದಲೂ ಹೃದಯಾಘಾತ ಆಗುತ್ತಿದೆಯೇ ಎಂಬ ಕುರಿತು ಕೂಡ ಐಸಿಎಂಆರ್ ತಜ್ಞರು ಸಂಶೋಧನೆ, ಅಧ್ಯಯನ ಆರಂಭಿಸಿದ್ದಾರೆ. ಅಧ್ಯಯನಕ್ಕೂ ಮುಂಚಿತವಾಗಿಯೇ ಏನನ್ನಾದರೂ ಹೇಳುವುದು ತಪ್ಪಾದರೂ, ಕೆಲವು ಅಂಕಿ ಅಂಶಗಳನ್ನು ನೋಡಬಹುದು.
ಕೊರೊನಾ ಸೋಂಕಿನ ನಂತರ ಹೃದಯಾಘಾತ ಪ್ರಮಾಣ ಏರಿಕೆಯಾಗಿರುವುದನ್ನು ಜಾಗತಿಕ ವರದಿಗಳೇ ದೃಢಪಡಿಸಿವೆ. ಜಾಗತಿಕ ವರದಿಯೊಂದರ ಪ್ರಕಾರ, ಸಾಂಕ್ರಾಮಿಕದ ನಂತರ 24-45 ವರ್ಷದೊಳಗಿನವರಲ್ಲಿ ಹೃದಯಾಘಾತ ಪ್ರಮಾಣ ಶೇ.30ರಷ್ಟು ಏರಿಕೆಯಾಗಿದೆ. ಆ ಮೂಲಕ ಅಂತಾರಾಷ್ಟ್ರೀಯವಾಗಿಯೂ ಕೊರೊನಾ ನಂತರ ಹೃದಯಾಘಾತ ಪ್ರಮಾಣ ಹೆಚ್ಚಾಗಿದೆ ಎಂಬುದು ದೃಢಪಟ್ಟಿದೆ. ಕೊರೊನಾ ನಂತರ ಹೃದಯಾಘಾತ ಪ್ರಮಾಣ ಶೇ.3ರಿಂದ ಶೇ.5ರಷ್ಟು ಏರಿಕೆಯಾಗಿದೆ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಕೂಡ ಹೇಳಿದ್ದರು. ಈಗ ಯುವಕರಿಗೂ ಹೃದಯಾಘಾತ ಹೆಚ್ಚುತ್ತಿದೆ. ಅಧಿಕ ಒತ್ತಡ, ಜೀವನ ಶೈಲಿ, ಆಹಾರ ಶೈಲಿ ಇದಕ್ಕೆ ಕಾರಣವಾಗಿದೆ ಎಂದಿದ್ದಾರೆ. ಈ ಬಗ್ಗೆ ಸಮಗ್ರವಾದ ಅಧ್ಯಯನ ನಡೆಯುವುದು ಅಗತ್ಯವಾಗಿದೆ. ಕೋವಿಡ್ ಸೋಂಕು ಒಂದು ಸಾರ್ವಜನಿಕ ತುರ್ತುಸ್ಥಿತಿ. ಅದರಿಂದ ಉಂಟಾಗಿರಬಹುದಾದ ಹೃದಯ ಸಮಸ್ಯೆಗಳನ್ನೂ ಇನ್ನೊಂದು ತುರ್ತುಸ್ಥಿತಿ ಎಂದೇ ತಿಳಿದು ಸರ್ಕಾರ ಕಾರ್ಯಪ್ರವೃತ್ತವಾಗಬೇಕು. ದುಡಿದು ದೇಶದ ಅಮೂಲ್ಯ ಸೊತ್ತಾಗಬೇಕಾದ ಯುವಜನ ಮಾಗುವ ಮೊದಲೇ ಬಿದ್ದುಹೋಗುವುದು ಅನ್ಯಾಯ.
ಇದನ್ನೂ ಓದಿ: ಹೃದಯಾಘಾತ ಭೀತಿ; ಕೊರೊನಾದಿಂದ ಪಾರಾದವರು ಹೆಚ್ಚು ಕೆಲಸ ಮಾಡದಂತೆ ಕೇಂದ್ರ ಸೂಚನೆ!
ಕೊರೊನಾದಿಂದಾಗಿ ತುಂಬಾ ಪೀಡಿತರಾದವರಂತೂ ಈ ಬಗ್ಗೆ ಅತೀವ ಎಚ್ಚರ ವಹಿಸಲೇಬೇಕಿದೆ. ಇತ್ತೀಚೆಗೆ 45 ವರ್ಷದ ಒಳಗಿನ ಮಹಿಳೆಯರು ಹಾಗೂ ಪುರುಷರಲ್ಲಿ ಕೂಡಾ ಸಡನ್ ಹಾರ್ಟ್ ಅಟ್ಯಾಕ್ ಕಂಡು ಬರುತ್ತಿದೆ. ಆಹಾರ ಪದ್ಧತಿಯಲ್ಲಿ ಬದಲಾವಣೆ ಹಾಗೂ ವೇಗವಾಗಿ ದೇಹ ತೂಕ ಇಳಿಸಿಕೊಳ್ಳಬೇಕು ಎನ್ನುವ ತವಕಗಳಿಂದಾಗಿ ಅಡ್ಡ ದಾರಿಗಳನ್ನು ಹಿಡಿಯುವ ಕಾರಣ ಹೃದಯ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಕುಟುಂಬದಲ್ಲಿ ಹೃದಯ ಸಮಸ್ಯೆಯ ಇತಿಹಾಸ ಇರುವವರಂತೂ ಹೆಚ್ಚಿನ ಎಚ್ಚರ ವಹಿಸಬೇಕು. ಜೀವನಶೈಲಿಯಿಂದಾಗಿಯೂ ಹೃದಯ ಸಮಸ್ಯೆಗಳು ಉಂಟಾಗುತ್ತವೆ. ಅತಿಯಾದ ಉಪ್ಪಿನ ಸೇವನೆ, ಜಂಕ್ ಫುಡ್ ಸೇವನೆ, ಧೂಮಪಾನಗಳು ಜೀವ ಹಿಂಡಬಹುದು. ಸೂಕ್ತ ಆಹಾರ ಸೇವನೆ, ವ್ಯಾಯಾಮ ಸೇರಿದಂತೆ ಆರೋಗ್ಯಕರ ಜೀವನಶೈಲಿಯನ್ನು ಬರಮಾಡಿಕೊಳ್ಳಬೇಕು. ಸರ್ಕಾರ ಎಷ್ಟೇ ಆರೋಗ್ಯಸೇವೆ ನೀಡಿದರೂ ವ್ಯಕ್ತಿ ತನ್ನ ಆರೋಗ್ಯವನ್ನು ನೋಡಿಕೊಳ್ಳದಿದ್ದರೆ ಯಾರೂ ಏನೂ ಮಾಡಲು ಸಾಧ್ಯವಿಲ್ಲ.