ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ವರ್ಷ ಸತತ ಐದನೇ ಬಾರಿಗೆ ತನ್ನ ರೆಪೊ ದರವನ್ನು 0.35%ರಷ್ಟು ಏರಿಕೆ ಮಾಡಿದೆ. ಇದರೊಂದಿಗೆ ರೆಪೊ ದರ 5.9%ರಿಂದ 6.25%ಕ್ಕೆ ಏರಿಕೆಯಾಗಿದೆ. ಕಳೆದ ಮೇ ತಿಂಗಳಿನಿಂದ ಒಟ್ಟು 2.25% ಹೆಚ್ಚಳವಾಗಿದೆ. ರೆಪೊ ದರ ಎಂದರೆ ಬ್ಯಾಂಕ್‌ಗಳು ತಮ್ಮ ಸಾಲದ ವಹಿವಾಟು ನಡೆಸಲು ಆರ್‌ಬಿಐನಿಂದ ಪಡೆಯುವ ಹಣಕ್ಕೆ ನೀಡುವ ಬಡ್ಡಿ ದರವಾಗಿದ್ದು, ಇದರ ಏರಿಕೆಯ ಪರಿಣಾಮ ಬ್ಯಾಂಕ್‌ಗಳಿಗೆ ಸಾಲ ವಿತರಣೆಯ ವೆಚ್ಚ ಹೆಚ್ಚಲಿದೆ. ಇದನ್ನು ಬ್ಯಾಂಕ್‌ಗಳು ಸಾಲಗಾರರಿಗೆ ವರ್ಗಾಯಿಸುವುದರಿಂದ, ರೆಪೊ ದರ ಆಧಾರಿತ ಗೃಹ ಸಾಲ, ವಾಹನ ಸಾಲ, ಕಾರ್ಪೊರೇಟ್ ಸಾಲದ ಬಡ್ಡಿ ದರಗಳು ಏರಿಕೆಯಾಗುತ್ತವೆ.
ಈಗಾಗಲೇ ಸಾಲದ ಬಡ್ಡಿ ದರ ಏರಿಕೆಯಿಂದ ಕಂಗಾಲಾಗಿರುವ ಸಾಲಗಾರರಿಗೆ ಪ್ರಹಾರ ಬಿದ್ದಂತಾಗಿದೆ. ಅದರಲ್ಲೂ ಇತ್ತೀಚೆಗೆ ಗೃಹ ಸಾಲ ಪಡೆದವರು ನಿರಂತರ ಬಡ್ಡಿ ದರ ಏರಿಕೆಯ ಪರಿಣಾಮ ಹೌಹಾರುವಂತಾಗಿದೆ. ಆದರೆ ರಿಸರ್ವ್ ಬ್ಯಾಂಕ್ ಮತ್ತು ಸರ್ಕಾರ ಹಣದುಬ್ಬರವನ್ನು ನಿಯಂತ್ರಿಸಲು, ಅಂದರೆ 6% ಗಿಂತ ಕೆಳಕ್ಕೆ ತರುವ ನಿಟ್ಟಿನಲ್ಲಿ ರೆಪೊ ದರ ಅನಿವಾರ್ಯ ಎಂದಿವೆ. ಆದರೆ ಇದರ ಹೊರೆಯನ್ನು ಅಸಂಖ್ಯಾತ ಮಧ್ಯಮ ವರ್ಗದ ಜನತೆ, ಗೃಹ ಸಾಲ, ವಾಹನ ಸಾಲ ಪಡೆದವರು, ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಹೊತ್ತುಕೊಳ್ಳಬೇಕಾಗಿದೆ. ಆರ್‌ಬಿಐ ಹಣಕಾಸು ನೀತಿ ಫಲಿತಾಂಶ ಪ್ರಕಟವಾದ ಬಳಿಕ ಷೇರು ಪೇಟೆಯಲ್ಲೂ ಸೂಚ್ಯಂಕ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿದಿತ್ತು. ಆರ್‌ಬಿಐ ರೆಪೊ ದರದ ಏರಿಕೆಯ ಪ್ರಮಾಣವನ್ನು 0.50%ರಿಂದ ೦.೩೫%ಕ್ಕೆ ಇಳಿಸಿದ್ದರೂ, ಈ ಬಡ್ಡಿ ದರ ಏರಿಕೆಯ ಟ್ರೆಂಡ್ ಯಾವಾಗ ಅಂತ್ಯವಾಗಲಿದೆ ಎಂಬ ಸುಳಿವನ್ನೂ ನೀಡಿಲ್ಲ. ಈ ಅನಿಶ್ಚಿತತೆ ಷೇರು ಹೂಡಿಕೆದಾರರಲ್ಲಿ ಚಿಂತೆ ಮೂಡಿಸಿದೆ. ಹೀಗಾಗಿ ಷೇರು ಪೇಟೆ, ಆರ್‌ಬಿಐ ಹಣಕಾಸು ನೀತಿ ಪರಾಮರ್ಶೆ ಬಳಿಕ ಕುಸಿತಕ್ಕೀಡಾಯಿತು. ಆರ್‌ಬಿಐ ಮತ್ತೊಂದು ಸುತ್ತಿನಲ್ಲಿ ರೆಪೊ ದರ ಏರಿಕೆ ಮಾಡಬಹುದೇ ಎಂಬ ಅನಿಶ್ಚಿತತೆ ದಟ್ಟವಾಗಿದೆ. ಇಂಥ ಸನ್ನಿವೇಶದಲ್ಲಿ ಸರ್ಕಾರ ಮತ್ತು ಆರ್‌ಬಿಐ, ಬೆಲೆ ಏರಿಕೆಯನ್ನು ನಿಯಂತ್ರಿಸುವುದರ ಜತೆಗೆ ಆರ್ಥಿಕ ಚಟುವಟಿಕೆಗೆ ಧಕ್ಕೆಯಾಗದಂತೆ ಸಮತೋಲನ ಕಾಯ್ದುಕೊಳ್ಳುವುದು ಕೂಡ ಮುಖ್ಯ. ಈಗಾಗಲೇ ವಿಶ್ವಾದ್ಯಂತ ಸೆಂಟ್ರಲ್ ಬ್ಯಾಂಕ್‌ಗಳು, ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿ ದರವನ್ನು ಮತ್ತಷ್ಟು ಏರಿಸುವುದರಿಂದ ಹೊಸ ವರ್ಷ ಆರ್ಥಿಕ ಚಟುವಟಿಕೆಗಳೇ ಮುಗ್ಗರಿಸಿ, ಹಿಂಜರಿತ ಸಂಭವಿಸಬಹುದೇ ಎಂಬ ಆತಂಕದಲ್ಲಿವೆ. ಭಾರತವೂ ಇದರಿಂದ ಹೊರತಾಗಿಲ್ಲ. ಹಣದುಬ್ಬರ ಇಳಿಸುವ ನಿಟ್ಟಿನಲ್ಲಿ ರೆಪೊ ದರ ಏರಿಕೆಯೊಂದೇ ಪರಿಹಾರವಲ್ಲ, ಅದು ಎರಡು ಅಲಗಿನ ಕತ್ತಿಯಂತೆ ಅಪಾಯಕಾರಿಯೂ ಹೌದು. ಆದ್ದರಿಂದ ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸಲು, ಬೇಡಿಕೆಯನ್ನು ಸೃಷ್ಟಿಸಲು ಸರ್ಕಾರ ಆದ್ಯತೆ ನೀಡಬೇಕು.
ಕೋವಿಡ್ ಬಿಕ್ಕಟ್ಟಿನ ಸಂದರ್ಭ ತೀವ್ರ ಕುಸಿತಕ್ಕೀಡಾಗಿದ್ದ ಆರ್ಥಿಕತೆ ಇತ್ತೀಚಿನ ತಿಂಗಳುಗಳಲ್ಲಿ ಕೋವಿಡ್ ಪೂರ್ವ ಮಟ್ಟಕ್ಕೆ ಚೇತರಿಸುತ್ತಿದೆ. ಈ ಹಂತದಲ್ಲಿ ಈ ಬೆಳವಣಿಗೆ ಹಳಿ ತಪ್ಪದಂತೆ ನೋಡಿಕೊಳ್ಳುವುದು ಅತ್ಯಂತ ನಿರ್ಣಾಯಕ. ಸಾಲದ ಬಡ್ಡಿ ದರಗಳು ಕೈಗೆಟಕುವಂತಿದ್ದಾಗ ಜನತೆ ಸಾಲವನ್ನು ಖರೀದಿಸುತ್ತಾರೆ. ಅದರೊಂದಿಗೆ ರಿಟೇಲ್, ರಿಯಾಲ್ಟಿ ಸೇರಿದಂತೆ ಹಲವಾರು ವಲಯಗಳಲ್ಲಿ ಆರ್ಥಿಕ ಚಟುವಟಿಕೆಗಳು ಚುರುಕಾಗುತ್ತವೆ. ಉದ್ಯೋಗ ಸೃಷ್ಟಿಯಾಗುತ್ತವೆ. ಆದರೆ ಬೆಲೆ ಏರಿಕೆಯಾದಾಗ, ಬೇಡಿಕೆಯನ್ನು ಪೂರೈಸಲು ಉತ್ಪಾದನೆ ಮತ್ತು ಪೂರೈಕೆಯನ್ನು ಹೆಚ್ಚಿಸುವುದು ಎಲ್ಲಕ್ಕಿಂತ ಪರಿಣಾಮಕಾರಿ ಪರಿಹಾರವಾಗುತ್ತದೆ. ಇದು ಕೇವಲ ಆರ್‌ಬಿಐ ಒಂದರಿಂದಲೇ ಸಾಧ್ಯವಾಗುವ ಕೆಲಸವಲ್ಲ. ಇದಕ್ಕಾಗಿ ಕೇಂದ್ರ, ರಾಜ್ಯ ಸರ್ಕಾರಗಳು, ಆರ್‌ಬಿಐ ಹಾಗೂ ಇತರ ಎಲ್ಲ ಇಲಾಖೆಗಳು ಒಟ್ಟಾಗಿ ಆರ್ಥಿಕ ಪ್ರಗತಿಗೆ ಕೈಜೋಡಿಸಬೇಕಾಗುತ್ತದೆ. ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರದ ನಡುವೆ ಸಮತೋಲನ ಕಂಡುಕೊಳ್ಳುವುದು ಈಗ ನಿರ್ಣಾಯಕವಾಗಿದೆ.