Site icon Vistara News

ವಿಸ್ತಾರ ಸಂಪಾದಕೀಯ: ಚೀನಾ ನಂಟಿನ ಬೆಟ್ಟಿಂಗ್, ಸಾಲದ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ಸೂಕ್ತ

chaina app

#image_title

ಭಾರತದ ಸಾರ್ವಭೌಮತ್ವ ಮತ್ತು ಭದ್ರತೆಗೆ ಧಕ್ಕೆ ತರುವ ಅಪಾಯಕಾರಿ ಮೊಬೈಲ್ ಅಪ್ಲಿಕೇಷನ್(ಆ್ಯಪ್)‌ಗಳ ವಿರುದ್ಧ (betting apps) ಭಾರತ ಸರ್ಕಾರ ಪ್ರದರ್ಶಿಸುತ್ತಿರುವ ಕಠಿಣ ಕ್ರಮ ಮುಂದುವರಿದಿದೆ. 2022ರ ಫೆಬ್ರುವರಿವರೆಗೆ ಒಟ್ಟು 273 ಚೀನಾ ಮೂಲದ ಆ್ಯಪ್‌ಗಳನ್ನು ನಿಷೇಧಿಸಿದ್ದ ಕೇಂದ್ರ ಸರ್ಕಾರವು ಈಗ ಮತ್ತೆ 232 ಆ್ಯಪ್‌ಗಳನ್ನು ಬ್ಯಾನ್ ಮಾಡಿದೆ. ಈ ಪೈಕಿ 138 ಬೆಟ್ಟಿಂಗ್ ಹಾಗೂ 94 ಸಾಲ ನೀಡುವ ಆ್ಯಪ್‌ಗಳಾಗಿವೆ. ಕೇಂಗ್ರ ಗೃಹ ಇಲಾಖೆಯ ಶಿಫಾರಸಿನ ಅನುಸಾರ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫಾರ್ಮೇಷನ್‌ ಟೆಕ್ನಾಲಜಿ ಸಚಿವಾಲಯವು ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ, ಭಾರತ ಸರ್ಕಾರವು ಚೀನಾಗೆ ಮತ್ತೆ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ನೆಲದ ಕಾನೂನು ಪಾಲಿಸದ, ದೇಶದ ಭದ್ರತೆ ಅಪಾಯ ತರುವ ಯಾವುದೇ ಶಕ್ತಿಗಳನ್ನು ಭಾರತವು ಉಗ್ರವಾಗಿ ಶಿಕ್ಷಿಸುತ್ತದೆ ಎಂಬುದನ್ನು ಮತ್ತೆ ಸಾರಿದೆ.

ಭಾರತದಲ್ಲಿ ಬೆಟ್ಟಿಂಗ್ ಹಾಗೂ ಸಾಲ ನೀಡುವ ಆ್ಯಪ್‌‌ಗಳ ಬೃಹತ್ ಜಾಲವೇ ಹರಡಿಕೊಂಡಿದೆ. ಈಗಾಗಲೇ ಬೆಟ್ಟಿಂಗ್ ಆ್ಯಪ್‌ಗಳ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿವೆ. ಇನ್ನು, ಸಾಲ ನೀಡುವ ಆ್ಯಪ್‌ಗಳ ಜಾಲ ದೇಶಾದ್ಯಂತ ವ್ಯಾಪಕವಾಗಿದೆ. ಯಾವುದೇ ಭದ್ರತೆ ಇಲ್ಲದೇ ಸಾಲ ಒದಗಿಸುವ ಈ ಆ್ಯಪ್‌ಗಳು, ಬಳಿಕ ಸಾಲ ಮರುಪಾವತಿಗೆ ಅನುಸರಿಸುವ ಮಾರ್ಗಗಳು ಮಾತ್ರ ಭಯಂಕರವಾಗಿರುತ್ತವೆ. ಅತಿಯಾದ ಬಡ್ಡಿಯನ್ನು ವಸೂಲಿ ಮಾಡುವ ಆ್ಯಪ್‌ಗಳು, ಸಾಲ ಪಾವತಿಸಲು ವಿಫಲವಾಗುವ ಗ್ರಾಹಕರನ್ನು ಸೋಷಿಯಲ್ ಮೀಡಿಯಾದಲ್ಲಿ ಅವಮಾನ ಮಾಡುತ್ತವೆ. ಸಾಲಗಾರರ ಬೆತ್ತಲೆ ಚಿತ್ರಗಳನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತವೆ. ಈ ಆ್ಯಪ್‌ಗಳ ಕಬಂಧಬಾಹುವಿಗೆ ಸಿಲುಕಿ 2022ರವರೆಗೆ ಅಧಿಕೃತ ಲೆಕ್ಕಾಚಾರದ ಪ್ರಕಾರವೇ 64 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೂರು ದಾಖಲಾಗದ ಪ್ರಕರಣಗಳು ಸಾಕಷ್ಟಿವೆ.

ಇದೀಗ ಕೇಂದ್ರ ಸರ್ಕಾರ ಈ ಬೆಟ್ಟಿಂಗ್ ಮತ್ತು ಸಾಲ ನೀಡುವ ಆ್ಯಪ್‌ಗಳನ್ನು ನಿಷೇಧಿಸುವ ಮೂಲಕ ಒಂದೇ ಏಟಿಗೆ ಎರಡು ಹಕ್ಕಿಗಳನ್ನು ಹೊಡೆದಿದೆ. ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸುವ ಜತೆಗೆ, ಭಾರತೀಯ ಬಳಕೆದಾರರ ಹಿತವನ್ನು ಕಾಪಾಡುವತ್ತ ಮುಂದಡಿ ಇಟ್ಟಿದೆ. ಈ ಹಿಂದೆ ಇಂಥ ಆ್ಯಪ್‌ಗಳನನ್ನು ಶಾಶ್ವತವಾಗಿ ಬ್ಯಾನ್ ಮಾಡಲು ಸಾಧ್ಯವಾಗಿರಲಿಲ್ಲ. ರಿಸರ್ವ್ ಬ್ಯಾಂಕ್ ಇಂಡಿಯಾ (ಆರ್‌ಬಿಐ) ಸೇರಿದಂತೆ ಪೊಲೀಸ್ ಇಲಾಖೆಗಳು ಸಂಶಯಾಸ್ಪದ ಆ್ಯಪ್‌ಗಳ ವಿರುದ್ಧ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದವು ಅಷ್ಟೆ. ಆದರೆ, ಈಗ ಅಂಥ ಆ್ಯಪ್‌ಗಳನ್ನು ಬ್ಯಾನ್ ಮಾಡುವ ಮೂಲಕ ಕೇಂದ್ರ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ.

ದೇಶದ ಸಾರ್ವಭೌಮತೆಗೆ ಬೆದರಿಕೆಯೊಡ್ಡುವ ಇತರ ಚೀನಿ ಆ್ಯಪ್‌ಗಳನ್ನು ಕೇಂದ್ರ ಸರ್ಕಾರವು ಇತ್ತೀಚಿನ ಕೆಲವು ವರ್ಷಗಳಿಂದ ನಿಷೇಧಿಸುತ್ತಾ ಬಂದಿದೆ. ಈ ಹಿಂದೆ ಕೇಂದ್ರ ಸರ್ಕಾರವು, ಭಾರತದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದ್ದ ಟಿಕ್ ಟಾಕ್, ಕ್ಯಾಮ್‌ಸ್ಕ್ಯಾನರ್‌ ಸೇರಿದಂತೆ ಪ್ರಮುಖ ಆ್ಯಪ್‌ಗಳನ್ನು ನಿಷೇಧಿಸಿತ್ತು. 2020ರಿಂದ ಚೀನಾ ಮೂಲದ ಅಥವಾ ಚೀನಾ ನಂಟು ಹೊಂದಿರುವ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ, ಬೇರೆ ಬೇರೆ ಹೆಸರಿನಲ್ಲಿ ಈ ಆ್ಯಪ್‌ಗಳು ಭಾರತದಲ್ಲಿ ಕಾರ್ಯಾಚರಣೆ ಮಾಡುತ್ತಿವೆ ಎಂಬುದೂ ಅಷ್ಟೇ ಸತ್ಯ.

ಜನರ ಜೀವನದ ಚೆಲ್ಲಾಟವಾಡುವ, ದೇಶದ ಭದ್ರತೆಗೆ ಅಪಾಯಕಾರಿಯಾಗುವ ಆ್ಯಪ್‌ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದು ಸ್ವಾಗತಾರ್ಹವಾಗಿದೆ. ಆದರೆ, ಇದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ. ಪ್ರಜ್ಞಾವಂತ ನಾಗರಿಕರಾಗಿಯೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಈ ಬೆಟ್ಟಿಂಗ್ ಮತ್ತು ಸಾಲ ನೀಡುವ ಆ್ಯಪ್‌ಗಳನ್ನು ಬಳಸಲು ಹೋಗಬಾರದು. ಇಂಥ ಯಾವುದೇ ಆ್ಯಪ್‌ಗಳ ಬಗ್ಗೆ ಮಾಹಿತಿ ಗೊತ್ತಾದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಗಮನಕ್ಕೆ ತರಬೇಕು. ಇಂಥ ಅಪಾಯಕಾರಿ ವಿದೇಶಿ ಆ್ಯಪ್ ಗಳನ್ನು ದಮನಿಸುವ ಸರ್ಕಾರದ ಪ್ರಯತ್ನಕ್ಕೆ ನಾವು ಕೈಜೋಡಿಸಬೇಕು. ಆಗ ಮಾತ್ರ ಬೆಟ್ಟಿಂಗ್ ಹಾಗೂ ಸಾಲ ನೀಡುವ ಆ್ಯಪ್‌ಗಳಿಂದ ಮುಕ್ತಿ ಪಡೆಯಲು ಸಾಧ್ಯ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಮುಜರಾಯಿ ದೇವಸ್ಥಾನಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್ ಸ್ವಾಗತಾರ್ಹ

ಹಾಗೆಯೇ, ಕೇಂದ್ರ ಸರ್ಕಾರ ಕೇವಲ ಆ್ಯಪ್ ಬ್ಯಾನ್ ಮಾಡುವುದಕ್ಕಷ್ಟೇ ಸೀಮಿತವಾಗದೆ, ಅವುಗಳ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕೆಲಸವನ್ನು ಮಾಡಬೇಕು. ಏಕೆಂದರೆ, ಇಂತಹ ಆ್ಯಪ್ ಗಳ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇರುವ ಸಾಧ್ಯತೆ ಇದೆ ಎಂದು ರಕ್ಷಣಾ ಪರಿಣತರು ಈ ಹಿಂದೆಯೇ ಎಚ್ಚರಿಕೆ ನೀಡಿದ್ದಾರೆ. ನಿಷೇಧಿತ ಆ್ಯಪ್ ಗಳು ಬೇರೊಂದು ಹೆಸರಿನಲ್ಲಿ ಮತ್ತೆ ಭಾರತದೊಳಗೆ ಜಾಲ ಹೆಣೆಯದಂತೆಯೂ ಎಚ್ಚರ ವಹಿಸಬೇಕಿದೆ.

Exit mobile version