Site icon Vistara News

ವಿಸ್ತಾರ ಸಂಪಾದಕೀಯ: ಪರೀಕ್ಷಾ ಅಕ್ರಮ ತಡೆಯಲು ಕಠಿಣ ಕಾಯಿದೆ ಸ್ವಾಗತಾರ್ಹ

exam malpractices

ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ (exam malpractices) ನಡೆಸುವವರ ವಿರುದ್ಧ ಇನ್ನು ಮುಂದೆ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ. ಈ ಬಗ್ಗೆ ಕಾಯ್ದೆ ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ವಿವಿಧ ಅಕ್ರಮಗಳಲ್ಲಿ ತೊಡಗಿರುವವರಿಗೆ ಗರಿಷ್ಠ 10 ವರ್ಷ ಸಜೆ ಮತ್ತು ಕನಿಷ್ಠ 1 ಕೋಟಿ ರೂ. ದಂಡ ವಿಧಿಸಲು ಅವಕಾಶವಿರುವ ಕಾಯಿದೆ ರೂಪಿಸಲು ಕೇಂದ್ರ ಚಿಂತನೆ ನಡೆಸಿದೆ. ಈ ಸಂಬಂಧ ಇಂದು ಸಾರ್ವಜನಿಕ ಪರೀಕ್ಷೆ ಅಕ್ರಮ ತಡೆ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಿದೆ. ಈ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಭಾಷಣದಲ್ಲಿ ಪರೀಕ್ಷೆ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡಿದ್ದರು. ನೇಮಕಾತಿ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣಗಳ ವಿರುದ್ಧ ಇತ್ತೀಚೆಗೆ ರಾಜಸ್ಥಾನ, ಗುಜರಾತ್‌, ತೆಲಂಗಾಣ ಮತ್ತು ಮಧ್ಯಪ್ರದೇಶಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಕರ್ನಾಟಕದ ಪಿಎಸ್‌ಐ ಸೇರಿದಂತೆ ಹಲವು ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ. ಈ ಅಕ್ರಮಗಳಿಂದಾಗಿ, ಮರುಪರೀಕ್ಷೆಗಳನ್ನು ನಡೆಸಬೇಕಾಗಿ ಬಂದಿದೆ. ಇಂಥ ಸನ್ನಿವೇಶ ಮತ್ತೆ ಮತ್ತೆ ಒದಗಬಾರದು ಎಂದಿದ್ದರೆ ಪರೀಕ್ಷಾ ವ್ಯವಸ್ಥೆಯ ಬಗೆಗೊಂದು ಕಠಿಣ ಕಾಯಿದೆ ಅಗತ್ಯವಾಗಿದೆ.

ನಕಲಿ ಅಭ್ಯರ್ಥಿಗಳ ಹಾಜರಿ, ಉತ್ತರ ಪತ್ರಿಕೆಗಳ ನಕಲು, ದಾಖಲೆಗಳನ್ನು ತಿರುಚುವುದು, ಮೆರಿಟ್‌ ಪಟ್ಟಿ ಸಿದ್ಧ ಪಡಿಸುವಲ್ಲಿನ ಅಕ್ರಮ, ಉದ್ದೇಶಪೂರ್ವಕ ಭದ್ರತಾ ವ್ಯವಸ್ಥೆ ಉಲ್ಲಂಘನೆ, ಪರೀಕ್ಷಾರ್ಥಿಗಳ ಸೀಟ್‌ ನಿಗದಿಪಡಿಸುವಲ್ಲಿ ಅಕ್ರಮ, ಉದ್ದೇಶಪೂರ್ವಕ ನಿಯಮ ಉಲ್ಲಂಘಿಸುವುದನ್ನು ಪರೀಕ್ಷಾ ಅಕ್ರಮವೆಂದು ಹೊಸ ಕಾಯಿದೆಯಡಿ ಪರಿಗಣಿಸಲಾಗುತ್ತದೆ. ಪ್ರಸ್ತಾವಿತ ಕಾಯಿದೆಯು ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡುವವರಿಗೆ ಕನಿಷ್ಠ 3-5 ವರ್ಷಗಳ ಜೈಲು ಶಿಕ್ಷೆ, 10 ಲಕ್ಷ ರೂ. ದಂಡ ಸೇರಿದಂತೆ ಕಠಿಣ ಕ್ರಮಗಳನ್ನು ಸೂಚಿಸುತ್ತದೆ. ಸಂಘಟಿತ ಅಪರಾಧ ಪ್ರಕರಣಗಳಲ್ಲಿ 5-10 ವರ್ಷಗಳ ಸಜೆ, 1 ಕೋಟಿ ರೂ. ದಂಡ ದೊರೆಯಲಿದೆ. ಈ ಕಾನೂನಿನ ವ್ಯಾಪ್ತಿಯು ಕೇಂದ್ರ ಮತ್ತು ರಾಜ್ಯ ಲೋಕಸೇವಾ ಆಯೋಗಗಳು, ರೈಲ್ವೆ ಮತ್ತು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಸೇರಿ ವಿವಿಧ ಸಾರ್ವಜನಿಕ ಪರೀಕ್ಷೆಗಳನ್ನು ಒಳಗೊಂಡಿದೆ. ಶಿಕ್ಷಣ ಸಂಸ್ಥೆಗಳು ಅಕ್ರಮಗಳಲ್ಲಿ ತೊಡಗಿದ್ದರೆ ಆಸ್ತಿಯ ಜಪ್ತಿಯ ಜತೆಗೆ ಪರೀಕ್ಷಾ ವೆಚ್ಚ ವಸೂಲಿ ಮಾಡಲಾಗುವುದು ಮುಂತಾದ ಅಂಶಗಳು ಇದರಲ್ಲಿವೆ.

ಅಕ್ರಮಗಳು ಕಂಡುಬಂದರೆ ಪರೀಕ್ಷೆಗಳನ್ನು ನಡೆಸುವ ಸೇವಾ ಪೂರೈಕೆದಾರ ಸಂಸ್ಥೆಗಳಿಗೆ 1 ಕೋಟಿ ರೂ.ಗಳವರೆಗೆ ದಂಡ ವಿಧಿಸುವ ಬಗ್ಗೆ ಪ್ರಸ್ತಾವವಿದೆ. ಅಂತಹ ಸಂಸ್ಥೆಗಳು ಅಕ್ರಮ ಎಸಗಿರುವುದು ಸಾಬೀತಾದರೆ ನಾಲ್ಕು ವರ್ಷಗಳವರೆಗೆ ಸಾರ್ವಜನಿಕ ಪರೀಕ್ಷೆಗಳನ್ನು ಆಯೋಜಿಸುವುದನ್ನು ನಿರ್ಬಂಧಿಸಲಾಗುವುದು. ಪರೀಕ್ಷಾ ಅಕ್ರಮಗಳಲ್ಲಿ ತೊಡಗುವ ಸಂಘಟಿತ ಗ್ಯಾಂಗ್‌, ಮಾಫಿಯಾಗಳನ್ನು ನಿಯಂತ್ರಿಸುವ ಉದ್ದೇಶವನ್ನು ಮಸೂದೆ ಹೊಂದಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯ ತನಿಖೆಯನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಅಥವಾ ಸಹಾಯಕ ಪೊಲೀಸ್ ಆಯುಕ್ತರ ಶ್ರೇಣಿಗಿಂತ ಕಡಿಮೆಯಿಲ್ಲದ ಅಧಿಕಾರಿ ನಡೆಸಲಿದ್ದಾರೆ. ತನಿಖೆಯನ್ನು ಯಾವುದೇ ಕೇಂದ್ರ ಸಂಸ್ಥೆಗೆ ಒಪ್ಪಿಸುವ ಅಧಿಕಾರ ಕೇಂದ್ರ ಸರ್ಕಾರದ ಬಳಿಯೇ ಇರಲಿದೆ. ಈ ಕಾಯಿದೆ ಅಭ್ಯರ್ಥಿಯ ರಕ್ಷಣೆಗೂ ಒತ್ತು ನೀಡುತ್ತದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ಟ್ಯಾಕ್ಸಿಗಳಿಗೆ ಏಕರೂಪ ದರ ಜಾರಿ ಸ್ವಾಗತಾರ್ಹ ನಿರ್ಧಾರ

ಇತ್ತೀಚೆಗೆ ಕರ್ನಾಟಕದಲ್ಲೂ ಈ ಬಗೆಯ ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ವಿಧೇಯಕವೊಂದನ್ನು ಮಂಡಿಸಲಾಗಿತ್ತು. ಕರ್ನಾಟಕ ಸಾರ್ವಜನಿಕ ಪರೀಕ್ಷೆ (Karnataka Public Examination) (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಸೂಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ವಿಧೇಯಕ 2023 ಅನ್ನು ಕಳೆದ ಬಾರಿ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಲಾಗಿತ್ತು. ಈ ಮೂಲಕ ನೇಮಕಾತಿ ಪರೀಕ್ಷೆ ವೇಳೆ ಆಗುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಲು ಕಠಿಣ ಕಾನೂನನ್ನು ರಾಜ್ಯ ಸರ್ಕಾರ ರೂಪಿಸಿತ್ತು. ಆದರೆ ಇದು ಇನ್ನೂ ಕಾನೂನಾಗಿ ಬಂದಿಲ್ಲ. ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಪಿಎಸ್‌ಐ, ಸಹಾಯಕ ಪ್ರಾಧ್ಯಾಪಕರ ಹುದ್ದೆ, ಎಫ್.ಡಿ.ಎ ಸೇರಿದಂತೆ ಸರ್ಕಾರದ ಹಲವು ನೇಮಕಾತಿಗಳಲ್ಲಿ ವ್ಯಾಪಕವಾಗಿ ಅಕ್ರಮಗಳು ನಡೆದಿದ್ದವು. ಇದರಿಂದ ವರ್ಷಾನುಗಟ್ಟಲೆಯಿಂದ ಪರೀಕ್ಷೆಗೆ ತಯಾರಿ ನಡೆಸಿ, ಪ್ರಾಮಾಣಿಕವಾಗಿ ಪರೀಕ್ಷೆ ಎದುರಿಸಿದ್ದ ಸಾವಿರಾರು ಅಭ್ಯರ್ಥಿಗಳು ಉದ್ಯೋಗದಿಂದ ವಂಚಿತರಾಗಿದ್ದರು. ಇಂತಹ ಅಕ್ರಮ, ಅವ್ಯವಹಾರವನ್ನು ತಡೆಗಡ್ಡಿ, ಅರ್ಹರಿಗೆ ಸರ್ಕಾರಿ ಉದ್ಯೋಗಗಳು ದೊರಕುವಂತೆ ಮಾಡಲು ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆಯ ಅಳವಡಿಕೆ ಮಾಡಲು ಇಂಥ ಕಾಯಿದೆಗಳು ಅಗತ್ಯವಾಗಿವೆ.

ಪರೀಕ್ಷಾ ಅಕ್ರಮದಿಂದ ಆಗುವ ಅನ್ಯಾಯಗಳು ಹಲವು. ಮೊದಲನೆಯದಾಗಿ ಅನರ್ಹರು ಉತ್ತೀರ್ಣರಾಗಿ, ಉನ್ನತ ಸ್ಥಾನಗಳನ್ನು ಪಡೆದರೆ ಅನಾಹುತಗಳೇ ಆಗಬಹುದು. ಸಾರ್ವಜನಿಕ ಬದುಕಿನಲ್ಲಿ, ಆಡಳಿತದಲ್ಲಿ ಅಕ್ರಮವೇ ಮುಂದುವರಿಯುತ್ತದೆ. ಅಕ್ರಮಗಳ ಸರಣಿಯು ಸಾಮಾನ್ಯರ ಬದುಕಿನ ಮೇಲೆ ದುಷ್ಪ್ರಭಾವ ಬೀರುತ್ತದೆ. ಅಕ್ರಮಗಳಿಂದಾಗಿ, ಅರ್ಹರು ಹಿಂದುಳಿಯಬಹುದು. ಅರ್ಹರಿಗೆ ಅನ್ಯಾಯ ಆಗಬಹುದು. ಇದು ವಂಚಿತ ಅರ್ಹರಲ್ಲಿ ಅನ್ಯಾಯಕ್ಕೊಳಗಾದ ಭಾವನೆಯನ್ನು ಮೂಡಿಸಬಹುದು, ಸಮಾಜದ ಬಗ್ಗೆ ಆಕ್ರೋಶವನ್ನು ಹೆಚ್ಚಿಸಬಹುದು. ಪರೀಕ್ಷಾ ವ್ಯವಸ್ಥೆಯನ್ನು ಸಾಕಷ್ಟು ಬಿಗಿ ಮಾಡಲಾಗಿದೆ, ಮಾಡಲಾಗುತ್ತಿದೆ. ಆದರೆ ಅಕ್ರಮ ಎಸಗಿದವರಿಗೆ ಶಿಕ್ಷೆಯನ್ನು ಕಠಿಣ ಮಾಡುವ ಮೂಲಕ ಇನ್ನಷ್ಟು ಉತ್ತರದಾಯಿತ್ವವನ್ನು ವ್ಯವಸ್ಥೆಗೆ ಜೋಡಿಸಬೇಕಿದೆ. ರಾಜ್ಯದಲ್ಲೂ ಇದು ಜಾರಿಯಾಗಬೇಕಿದೆ.

Exit mobile version