ಜ್ಞಾನಪೀಠ ಪ್ರಶಸ್ತಿ ಭಾರತೀಯ ಸಾಹಿತ್ಯದಲ್ಲಿ ನೀಡಲಾಗುವ ಅತ್ಯುಚ್ಚ ಪ್ರಶಸ್ತಿಯಾಗಿದೆ. ಇದಕ್ಕೆ ಒಂದು ಘನತೆಯಿದೆ. ಪುರಸ್ಕೃತರ ನಿರ್ಣಯದಲ್ಲಿ ತನ್ನದೇ ಆದ ಮಾನದಂಡ, ಅರ್ಹತೆ, ಬಿಗಿಯನ್ನು ಇದು ಕಾಯ್ದುಕೊಂಡಿದೆ. ಕನ್ನಡದಲ್ಲಿ ಎಂಟು ಮಂದಿ ಸಾಹಿತಿಗಳಿಗೆ ಸಂದಿರುವ ಜ್ಞಾನಪೀಠ ಪುರಸ್ಕಾರವು, ಸಾಹಿತ್ಯದಲ್ಲಿ ಅವರು ನೀಡಿರುವ ಘನತರ ಕೊಡುಗೆಯನ್ನು ನೆನಪಿಸುತ್ತದೆ. ಈ ಸಾಲಿನ ಜ್ಞಾನಪೀಠವನ್ನು ಚಿತ್ರಸಾಹಿತಿ, ಉರ್ದು ಕವಿ ಗುಲ್ಜಾರ್ (Gulzar) ಹಾಗೂ ಖ್ಯಾತ ಸಂಸ್ಕೃತ ವಿದ್ವಾಂಸ, ಜಗದ್ಗುರು ರಾಮಭದ್ರಾಚಾರ್ಯ (Rambhadracharya) ಅವರಿಗೆ ಘೋಷಿಸಲಾಗಿದೆ. 58ನೇ ಜ್ಞಾನಪೀಠ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ ಎಂದು ಜ್ಞಾನಪೀಠ ಸಮಿತಿಯು ಮಾಹಿತಿ ನೀಡಿದೆ. ಇಬ್ಬರೂ ಈ ಪ್ರಶಸ್ತಿಯ ಘನತೆಯನ್ನು ಎತ್ತಿ ಹಿಡಿಯುವಂಥ ವ್ಯಕ್ತಿತ್ವಗಳು.
ಹಿಂದಿ ಸಿನಿಮಾ ರಂಗದಲ್ಲಿ ಗುಲ್ಜಾರ್ ಅವರು ಖ್ಯಾತಿ ಗಳಿಸಿದ್ದು, ಅವರ ಸಿನಿಮಾ ಸಾಹಿತ್ಯ ಎಲ್ಲರ ಮನಗೆದ್ದಿದೆ. ಅದರಲ್ಲೂ, ಗಜಲ್‌ಗಳ ಮೂಲಕ ಅವರು ಮನೆಮಾತಾಗಿದ್ದಾರೆ. ಇವರ ನಿಜವಾದ ಹೆಸರು ಸಂಪೂರಣ್ ಸಿಂಗ್ ಕಾಲ್ರಾ. ಅವಿಭಜಿತ ಭಾರತದ ಜೇಲಂ ಜಿಲ್ಲೆಯ ದೇನಾ ಗ್ರಾಮದಲ್ಲಿ 1934ರ ಆಗಸ್ಟ್ 18ರಂದು ಜನಿಸಿ, ದೇಶವಿಭಜನೆಯ ಕಾಲದಲ್ಲಿ ಹಲವು ಬಗೆಯ ನೋವುಗಳಿಗೆ ಒಳಪಟ್ಟವರು. 12ನೇ ತರಗತಿಯಲ್ಲಿ ಅನುತ್ತೀರ್ಣರಾದರೂ ತಮ್ಮ ಸಾಹಿತ್ಯದ ಮೂಲಕ ದೇಶ-ವಿದೇಶದಲ್ಲೂ ಖ್ಯಾತಿ ಗಳಿಸಿದ್ದಾರೆ. ನೂರಾರು ಸಿನಿಮಾಗಳಿಗೆ ಅವರು ಬರೆದ ಚಿತ್ರಗೀತೆಗಳು ಸದಾ ಚಿತ್ರಪ್ರೇಮಿಗಳ ಮನದಲ್ಲಿ ನಲಿದಾಡುವಂಥವು. ಜನಪ್ರಿಯ ಚಿತ್ರಗೀತೆಗಳನ್ನು ಬರೆದಂತೆಯೇ ಗಂಭೀರ ಕಾವ್ದದಲ್ಲೂ ಕೈಯಾಡಿಸಿ ಸೈ ಎನಿಸಿಕೊಂಡರು. ಉರ್ದು ಹಾಗೂ ಹಿಂದಿಯ ಹದವಾದ ಸಮ್ಮಿಶ್ರಣದ ಮೂಲಕ ಅವರು ಕಟ್ಟಿದ ಕವಿತೆಗಳು ಸಹೃದಯರ ಪಾಲಿಗೆ ಸದಾ ಆನಂದದ ನಿಧಿ. ಅವರು ಹತ್ತು ಹಲವು ಚಿತ್ರಗಳನ್ನೂ ನಿರ್ದೇಶಿಸಿದ್ದು, ವಿಮರ್ಶಕರ ಮೆಚ್ಚುಗೆಯನ್ನೂ ಗಳಿಸಿವೆ. ಅವರ ಆಂಧಿ ಚಿತ್ರ ಹಿಂದಿಯ ಸಾರ್ವಕಾಲಿಕ ಶ್ರೇಷ್ಠ ಚಿತ್ರಗಳಲ್ಲಿ ಒಂದು. ಯಾರನ್ನೂ ನೋಯಿಸದ ಸಹೃದಯತೆ, ಕೂಡುಬಾಳ್ವೆಯ ವಾತ್ಸಲ್ಯ, ಪ್ರೇಮದ ಚಿರಂತನ ಹಂಬಲ ಅವರ ಕಾವ್ಯದ ಜೀವಾಳಗಳಾಗಿವೆ.
ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ತುಳಸಿ ಪೀಠದ ಸಂಸ್ಥಾಪಕರೂ ಆಗಿರುವ, ಸಂಸ್ಕೃತದಲ್ಲಿ ಪಾರಂಗತರಾದ ಜಗದ್ಗುರು ರಾಮಭದ್ರಾಚಾರ್ಯ ಅವರೂ 58ನೇ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಮಭದ್ರಾಚಾರ್ಯರು ದೃಷ್ಟಿಹೀನರಾಗಿದ್ದರೂ ಸಂಸ್ಕೃತ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಅವರು 22 ಭಾಷೆಗಳನ್ನು ಮಾತನಾಡಬಲ್ಲ ಬಹುಭಾಷಾಪಂಡಿತ. ರಾಮಭದ್ರಾಚಾರ್ಯ ಅವರು ರಮಾನಂದ ಪಂಥದ ಪ್ರಸ್ತುತ ನಾಲ್ವರು ಜಗದ್ಗುರುಗಳಲ್ಲಿ ಒಬ್ಬರು ಮತ್ತು 1982ರಿಂದ ಈ ಸ್ಥಾನವನ್ನು ಹೊಂದಿದ್ದಾರೆ. ಸಂಸ್ಕೃತ, ಹಿಂದಿ, ಅವಧಿ ಮತ್ತು ಮೈಥಿಲಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ ಬರೆದವರು. 2015ರಲ್ಲಿ ಪದ್ಮವಿಭೂಷಣ ಪಡೆದರು. ಉತ್ತರ ಪ್ರದೇಶದ ಜಾನ್‌ಪುರದಲ್ಲಿ 1950ರಲ್ಲಿ ಜನಿಸಿದವರು. ಶಿಕ್ಷಣ ತಜ್ಞರಾಗಿಯೂ ಗುರುತಿಸಿಕೊಂಡಿರುವ ಇವರು 100ಕ್ಕೂ ಅಧಿಕ ಕೃತಿಗಳ ಮೂಲಕ ಸಾಹಿತ್ಯ ಪ್ರೇಮಿಗಳ ಮನದಲ್ಲಿ ಜಾಗ ಪಡೆದಿದ್ದಾರೆ.
ಇದನ್ನೂ ಓದಿ: Jnanpith Award: ಗುಲ್ಜಾರ್, ಸಂಸ್ಕೃತ ವಿದ್ವಾಂಸ ರಾಮಭದ್ರಾಚಾರ್ಯರಿಗೆ ಜ್ಞಾನಪೀಠ ಪ್ರಶಸ್ತಿ
ಗುಲ್ಜಾರ್ ಹಾಗೂ ರಾಮಭದ್ರಾಚಾರ್ಯರ ಆಯ್ಕೆಯು ಎರಡು ವಿಭಿನ್ನ ಬಗೆಯ ಆಯ್ಕೆಗಳನ್ನು ನಮ್ಮ ಮುಂದಿಟ್ಟಿದೆ ಎನ್ನಬಹುದು. ಗುಲ್ಜಾರ್ ಅವರು ಅತ್ಯಂತ ಆಧುನಿಕ ಮನಸ್ಸಿನವರು, ಚಿತ್ರರಂಗಕ್ಕೆ ಸೇರಿದವರು. ಹಿಂದಿ ಹಾಗೂ ಉರ್ದು ಕೃತಿಕಾರರು. ರಾಮಭದ್ರಾಚಾರ್ಯರು ಸಂಸ್ಕೃತ ಪಂಡಿತರು ಹಾಗೂ ತುಸು ಸಾಂಪ್ರದಾಯಿಕ ಹಿನ್ನೆಲೆ ಉಳ್ಳವರು. ಇಬ್ಬರ ಸಾಹಿತ್ಯದ ಪ್ರಕಾರಗಳು, ಭಾಷೆ, ರೀತಿ ನೀತಿ, ನೀಡಿದ ಕೊಡುಗೆಯ ಸ್ವರೂಪವೂ ಬೇರೆ ಬೇರೆ. ಆದರೆ ಆಧುನಿಕ ಭಾರತ ಎರಡು ಬಗೆಯ ಸಾಹಿತ್ಯವನ್ನೂ ಸಮಾನವಾಗಿ ತಬ್ಬಿಕೊಂಡಿದೆ. ಎರಡೂ ಸಮಾನವಾಗಿ ಮುಖ್ಯವಾಗಿವೆ. ಅಕ್ಷರ ಸರಸ್ವತಿಗೆ ಭೇದಗಳಿಲ್ಲ. ಇದು ಈ ಬಾರಿಯ ಜ್ಞಾನಪೀಠ ನೀಡಿರುವ ಸಂದೇಶ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ