Site icon Vistara News

ವಿಸ್ತಾರ ಸಂಪಾದಕೀಯ: ಗ್ರಾಮಾಂತರ ಜನರ ಮತೋತ್ಸಾಹ ನಗರದ ‘ಬುದ್ಧಿವಂತ’ ಮತದಾರರಲ್ಲಿ ಏಕಿಲ್ಲ?

lok sabha election

ದೇಶದಲ್ಲಿ ಎರಡನೇ ಹಂತದ ಹಾಗೂ ಕರ್ನಾಟಕದಲ್ಲಿ (lok sabha Election) ಮೊದಲ ಹಂತದ ಚುನಾವಣೆ (Lok Sabha Election) ಶುಕ್ರವಾರ ಸಂಜೆ (ಏಪ್ರಿಲ್​ 26) 6 ಗಂಟೆಗೆ ಮುಕ್ತಾಯಗೊಂಡಿದೆ. ರಾಜ್ಯದ ಮೊದಲ ಹಂತದ ಒಟ್ಟಾರೆ ಮತದಾನ 69.23% ದಾಖಲಾಗಿದೆ. ರಾಜ್ಯದ 14 ಕ್ಷೇತ್ರಗಳ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಮತದಾನಕ್ಕೆ ಮುಂಜಾನೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಮಧ್ಯಾಹ್ನದ ನಂತರ ಮತದಾನ ಪ್ರಮಾಣ ಕಡಿಮೆಯಾಯಿತು. ಮಂಡ್ಯ ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚಿನ ಪ್ರಮಾಣದ (81.48%) ಮತದಾನವಾಗಿದ್ದು, ಬೆಂಗಳೂರು ಸೆಂಟ್ರಲ್‌ ಕ್ಷೇತ್ರದಲ್ಲಿ ಅತಿ ಕಡಿಮೆ (52.81%) ವೋಟಿಂಗ್ ದಾಖಲಾಗಿದೆ. ಮತದಾನದ ಸಮಯ ಮುಕ್ತಾಯಗೊಳ್ಳುತ್ತಿದ್ದಂತೆ ಅಧಿಕಾರಿಗಳು ಇವಿಎಂ ಯಂತ್ರಗಳಿಗೆ ಸೀಲ್ ಮಾಡಿದ್ದು, ಭಾರೀ ಭದ್ರತೆಯೊಂದಿಗೆ ನಿಗದಿತ ಸ್ಟ್ರಾಂಗ್ ರೂಮ್​ಗೆ ರವಾನೆಯಾಗಿವೆ. ಸಂಸದ ಸ್ಥಾನದ ಆಕಾಂಕ್ಷಿಗಳು ಫಲಿತಾಂಶಕ್ಕೆ ಇನ್ನೂ ಒಂದು ತಿಂಗಳು ಕಾಯಬೇಕಿದೆ.

ಮತದಾನ ಪ್ರಮಾಣವನ್ನು ಗಮನಿಸಿದರೆ ಕೆಲವು ಅಂಶಗಳನ್ನು ಹೇಳಬಹುದಾಗಿದೆ. ನಗರಕ್ಕೆ ಹೋಲಿಸಿದರೆ ಗ್ರಾಮಾಂತರ ಪ್ರದೇಶಗಳೇ ಮತದಾನದ ಪ್ರಮಾಣದಲ್ಲಿ ವಾಸಿ. ಬೆಂಗಳೂರು ಗ್ರಾಮಾಂತರದಲ್ಲಿ 67.29% ಮತದಾನವಾಗಿದೆ. ಬೆಂಗಳೂರು ದಕ್ಷಿಣ ಹಾಗೂ ಉತ್ತರಗಳಲ್ಲಿ 53.15% ಹಾಗೂ 54.42% ಮತದಾನವಾಗಿದೆ. ಮಂಡ್ಯದಲ್ಲಿ ಅತ್ಯಧಿಕ ಮತದಾನವಾಗಿರುವುದು ಈ ಪ್ರದೇಶದ ಜನತೆಯ ರಾಜಕೀಯ ಪ್ರಜ್ಞೆಯಿಂದಾಗಿಯೇ ಇರಬಹುದು. ಕೋಲಾರ (78.07%) ಹಾಗೂ ತುಮಕೂರು (77.70%) ಕೂಡ ಹೆಚ್ಚಿನ ಮತದಾನ ದಾಖಲಿಸಿವೆ. ಬೆಂಗಳೂರು ಕೇಂದ್ರ ಕ್ಷೇತ್ರದ ನೀರಸ ಮತದಾನ (52.81%) ಚಿಂತೆಗೆ ಕಾರಣವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಟ್ಟಾರೆ ಮತದಾನ ಶೇಕಡಾವಾರು 68.81% ಆಗಿತ್ತು. ಈ ಬಾರಿ ಮೊದಲ ಹಂತದಲ್ಲಿ ಅದಕ್ಕಿಂತ ಸ್ವಲ್ಪ ಹೆಚ್ಚಿಗೆ (69.23%) ಮತದಾನವಾಗಿದೆ. ಆದರೆ ಎರಡನೇ ಹಂತದಲ್ಲಿ ಎಷ್ಟಾಗಲಿದೆ ಎಂಬುದರ ಮೇಲೆ ಒಟ್ಟಾರೆ ಸರಾಸರಿ ನಿರ್ಧಾರವಾಗಲಿದೆ.

ಮೂಲ ಸೌಕರ್ಯ ಸೇರಿದಂತೆ ನಾನಾ ಕಾರಣಗಳಿಗೋಸ್ಕರ ಹಲವೆಡೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು ಹಾಗೂ ಮತದಾನ ಬಹಿಷ್ಕಾರ ಮಾಡಿದ್ದು ಕೂಡ ನಡೆದಿವೆ. ಸಮಾಧಾನ ಮಾಡಲು ಬಂದ ಅಧಿಕಾರಿಗಳ ಮೇಲೆಯೆ ಗ್ರಾಮಸ್ಥರು ಮುಗಿಬಿದ್ದು ಪೊಲೀಸರ ಲಾಠಿ ಏಟು ತಿನ್ನಬೇಕಾದ ಪ್ರಸಂಗವೂ ಎದುರಾಯಿತು. ಸ್ವಾತಂತ್ರ್ಯ ದೊರೆತು ಎಂಟು ದಶಕ ಕಳೆದರೂ ಇನ್ನೂ ಮೂಲಸೌಕರ್ಯ ಕಲ್ಪಿಸದ ನಮ್ಮ ಆಡಳಿತಗಳಿಗೆ ಮತದಾನ ಬಹಿಷ್ಕಾರವೇ ಸೂಕ್ತ ಉತ್ತರ ಎಂದು ಗ್ರಾಮೀಣ ಜನತೆ ಕಂಡುಕೊಂಡರೋ ಗೊತ್ತಿಲ್ಲ. ಇದು ಮೊದಲೇ ಸಾರಿ, ಕಾರಣ ಹೇಳಿ ಮಾಡುವ ಬಹಿಷ್ಕಾರ. ಆದರೆ ವಿದ್ಯಾವಂತ ನಗರವಾಸಿಗಳ ʼಮತದಾನ ಬಹಿಷ್ಕಾರʼಕ್ಕೆ ಕಾರಣವಾದರೂ ಏನು? ನಗರದಲ್ಲಿ ಮತದಾನ ಹೆಚ್ಚಳ ಮಾಡಲು ಚುನಾವಣಾ ಆಯೋಗ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಹೊಸ ಮತದಾರರಿಗಾಗಿಯೇ ಉತ್ತೇಜನದ ಉಪಕ್ರಮಗಳು, ಮಹಿಳೆಯರಿಗಾಗಿಯೇ ಸಖಿ ಮತಗಟ್ಟೆಗಳು, ಸಾರ್ವತ್ರಿಕ ರಜೆ ಎಲ್ಲವನ್ನೂ ಘೋಷಿಸಲಾಗಿದೆ. ಯಾವುದೇ ಕಷ್ಟವಿಲ್ಲದೆ ಮತದಾರರ ಗುರುತಿನ ಚೀಟಿ ಅಪ್‌ಡೇಟ್‌ ಮಾಡುವ, ತಮ್ಮ ಮತಗಟ್ಟೆ ಎಲ್ಲಿ ಎಂದು ತಿಳಿಯಲು ಕ್ಯುಆರ್‌ ಕೋಡ್‌ ಒದಗಿಸುವ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಎಷ್ಟೋ ಮಂದಿ ಶತಾಯುಷಿಗಳು, ದುರ್ಬಲರು, ಅಂಗವಿಕಲರು, ಇನ್ನೇನು ಸರ್ಜರಿಗೆ ಒಳಗಾಗಲಿದ್ದವರು ಬಂದು ಮತ ಹಾಕಿದ್ದಾರೆ. ಮುಂಜಾನೆಯೇ ಬಂದು ಮತಹಾಕಿ ಸೀದಾ ಮಂಟಪಕ್ಕೇ ತೆರಳಿದ ಮದುಮಗಳೂ ಕಂಡುಬಂದಿದ್ದಾಳೆ. ಎಲ್ಲ ಸರಿ ಇದ್ದೂ ಮತ ಹಾಕದ ಮಂದಿಗೆ ಏನೆನ್ನೋಣ?

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಈ ದಿನ ನಮ್ಮದು, ನಮ್ಮ ಅಧಿಕಾರ ಚಲಾಯಿಸೋಣ

ಮತದಾನ ಕಡಿಮೆಯಾದರೆ ತಾಂತ್ರಿಕವಾಗಿ ನಾವು ಸಮರ್ಪಕವಾದ ಸರ್ಕಾರವನ್ನು ಚುನಾಯಿಸುತ್ತಿರುವುದಿಲ್ಲ. ದೇಶದ 60% ಜನ ಮಾತ್ರ ಮತ ಹಾಕಿ, ಅದರಲ್ಲಿ 30% ಮತ ಪಡೆದ ಪಕ್ಷ ಅಧಿಕಾರಕ್ಕೆ ಬಂದರೆ, ಒಟ್ಟಾರೆ ದೇಶದ ಜನತೆಯಲ್ಲಿ ಆ ಪಕ್ಷವನ್ನು ಆಯ್ಕೆ ಮಾಡಿದವರು ಮೂರನೇ ಒಂದು ಭಾಗ ಮಾತ್ರವೇ ಆಗಿರುತ್ತಾರೆ. ಉಳಿದ ಮೂರನೇ ಎರಡು ಭಾಗ ಜನತೆ ಆ ಪಕ್ಷದ ವಿರುದ್ಧ ಇದ್ದಾರೆ ಎಂದು ತಿಳಿಯಬೇಕಾಗುತ್ತದೆ. ವಾಸ್ತವ ಹಾಗಿರುವುದಿಲ್ಲ. ಮತ ಹಾಕದ ಮಂದಿಯಲ್ಲಿ ಎಷ್ಟು ಮತಗಳು ಯಾವ ಪಕ್ಷದ್ದು ಎಂದು ನಿರ್ಣಯಿಸುವ ಯಾವ ವಿಧಾನವೂ ಇಲ್ಲ. ಹೀಗಾಗಿ ಮತದಾನ ಪ್ರಮಾಣ ಕಡಿಮೆ ಬಂದಾಗ, ಬರುವ ಫಲಿತಾಂಶವೂ ಅಷ್ಟರ ಮಟ್ಟಿಗೆ ಅಸಮರ್ಪಕವೇ ಆಗಿರುತ್ತದೆ. ಇನ್ನು ವಿದ್ಯಾವಂತರು, ಪ್ರಜ್ಞಾವಂತರು ಮತದಾನದಿಂದ ಹಿಂದುಳಿದರೆ, ಪ್ರಜ್ಞಾವಂತಿಕೆಯ ಆಯ್ಕೆಯೂ ಇಲ್ಲದಾಗುತ್ತದೆ. ಇದರಿಂದ ನಷ್ಟ ಪ್ರಜೆಗಳಿಗೇ. ಮೂರ್ಖರು ಅಧಿಕಾರಕ್ಕೆ ಆರಿಸಿ ಬರಬಾರದು ಎಂದಿದ್ದರೆ, ಬುದ್ಧಿವಂತರು ಮತ ಹಾಕಬೇಕು. ಮೇ 7ರಂದು ನಡೆಯುವ ಎರಡನೇ ಹಂತದ ಮತದಾನದಲ್ಲಾದರೂ ಹೆಚ್ಚಿನ ಪ್ರಮಾಣದ ಮತದಾನವಾಗಲಿ ಎಂದು ಆಶಿಸೋಣ.

Exit mobile version