ಅಫ್ಘಾನಿಸ್ತಾನದಲ್ಲಿ ಅಮೆರಿಕ ಡ್ರೋನ್ ದಾಳಿಗೆ ತುತ್ತಾದ ಐಮಾನ್ ಅಲ್ ಜವಾಹಿರಿ (Ayman al-Zawahiri) ಉಗ್ರ ಸಂಘಟನೆ ಅಲ್ ಖೈದಾದ ಮುಖ್ಯ ಐಡಿಯಾಲಜಿಸ್ಟ್‌ಗಳಲ್ಲಿ ಪ್ರಮುಖ. ಈತ ಪೂರ್ವಾಶ್ರಮದಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸಕನಾಗಿದ್ದ ಎಂಬುದು ವಿಶೇಷ. ಮೇ 2011ರಲ್ಲಿ ಒಸಾಮಾ ಬಿನ್ ಲಾಡೆನ್‌ನನ್ನು US ಪಡೆಗಳು ಕೊಂದ ನಂತರ ಜವಾಹಿರಿ ಅಲ್ ಖೈದಾದ ನಾಯಕತ್ವ ವಹಿಸಿಕೊಂಡಿದ್ದ.
ಅದಕ್ಕೂ ಮೊದಲು ಜವಾಹಿರಿಯನ್ನು ಬಿನ್ ಲಾಡೆನ್‌ನ ಬಲಗೈ ಬಂಟ ಎಂದು ಪರಿಗಣಿಸಲಾಗಿತ್ತು. ಅಮೆರಿಕದ ಅವಳಿ ಗೋಪುರಗಳ ಮೇಲೆ 11 ಸೆಪ್ಟೆಂಬರ್ 2001ರಂದು ನಡೆದ ವಿಮಾನ ದಾಳಿಯ ಹಿಂದಿನ ಮೆದುಳು ಇವನು ಎಂದು ತಜ್ಞರು ನಂಬಿದ್ದಾರೆ. 2001ರಲ್ಲಿ US ಸರ್ಕಾರ ಘೋಷಿಸಿದ 22 “ಮೋಸ್ಟ್ ವಾಂಟೆಡ್ ಭಯೋತ್ಪಾದಕರ” ಪಟ್ಟಿಯಲ್ಲಿ ಜವಾಹಿರಿ ಎರಡನೇ ಸ್ಥಾನದಲ್ಲಿದ್ದ. ಮೊದಲಿಗ ಬಿನ್ ಲಾಡೆನ್. ಇವನ ಮೇಲಿದ್ದ ತಲೆದಂಡದ ಮೊತ್ತ $ 25 ಮಿಲಿಯ (196 ಕೋಟಿ ರೂ.)
ಅಮೆರಿಕ ದಾಳಿಯ ನಂತರದ ವರ್ಷಗಳಲ್ಲಿ ಜವಾಹಿರಿ ಅಲ್ ಖೈದಾದ ಪ್ರಮುಖ ವಕ್ತಾರನಾದ. 2007ರಲ್ಲಿ ಸುಮಾರು 16 ವಿಡಿಯೊಗಳು ಮತ್ತು ಆಡಿಯೊ ಟೇಪ್‌ಗಳಲ್ಲಿ, ಬಿನ್ ಲಾಡೆನ್‌ಗಿಂತಲೂ ನಾಲ್ಕು ಪಟ್ಟು ಹೆಚ್ಚು ಕಾಣಿಸಿಕೊಂಡ. ವಿಶ್ವದಾದ್ಯಂತ ಅಲ್ ಖೈದಾಗೆ ಜಿಹಾದಿಗಳನ್ನು ಸೇರಿಸಿಕೊಳ್ಳಲು ಯತ್ನಿಸಿದ.
ಸಾವಿನಿಂದ ಹಲವು ಬಾರಿ ಬಚಾವಾಗಿದ್ದ
ಜವಾಹಿರಿಯನ್ನು ಮುಗಿಸಲು ಅಮೆರಿಕ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. 2006ರ ಜನವರಿಯಲ್ಲಿ ಅಫ್ಘಾನಿಸ್ತಾನ- ಪಾಕಿಸ್ತಾನ ಗಡಿಯ ಬಳಿ ಕ್ಷಿಪಣಿ ದಾಳಿಗೆ ಗುರಿಯಾಗಿದ್ದ. ದಾಳಿಯಲ್ಲಿ ನಾಲ್ಕು ಅಲ್ ಖೈದಾ ಸದಸ್ಯರು ಸತ್ತರು. ಜವಾಹಿರಿ ಬದುಕುಳಿದ. ಎರಡು ವಾರ ಬಳಿಕ ವಿಡಿಯೊದಲ್ಲಿ ಕಾಣಿಸಿಕೊಂಡ. “ಭೂಮಿಯ ಮೇಲಿನ ಯಾವುದೇ ಶಕ್ತಿ ನನ್ನ ಸಾವನ್ನು ಒಂದು ಸೆಕೆಂಡ್ ಹತ್ತಿರ ತರಲೂ ಸಾಧ್ಯವಿಲ್ಲʼʼ ಎಂದ.
1951ರ ಜೂನ್ 19ರಂದು ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಜನಿಸಿದ ಜವಾಹಿರಿ, ವೈದ್ಯರು ಮತ್ತು ವಿದ್ವಾಂಸರಿದ್ದ ಗೌರವಾನ್ವಿತ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ಈತನ ಅಜ್ಜ, ರಬಿಯಾ ಅಲ್ ಜವಾಹಿರಿ, ಮಧ್ಯಪ್ರಾಚ್ಯದಲ್ಲಿ ಸುನ್ನಿ ಇಸ್ಲಾಮಿಕ್ ಕಲಿಕೆಯ ಕೇಂದ್ರವಾದ ಅಲ್ ಅಜರ್‌ನ ಹಿರಿಯ ಇಮಾಮ್ ಆಗಿದ್ದರೆ, ಚಿಕ್ಕಪ್ಪ ಅರಬ್ ಲೀಗ್‌ನ ಮೊದಲ ಸೆಕ್ರೆಟರಿ ಜನರಲ್ ಆಗಿದ್ದರು. ತಂದೆ ಮೊಹಮ್ಮದ್ ಔಷಧಶಾಸ್ತ್ರ ಪ್ರಾಧ್ಯಾಪಕರಾಗಿದ್ದರು.
ಜವಾಹಿರಿ ಶಾಲೆಯಲ್ಲಿದ್ದಾಗಲೇ ರಾಜಕೀಯದಲ್ಲಿ ತೊಡಗಿಸಿಕೊಂಡ. ಈಜಿಪ್ಟ್‌ನ ಅತ್ಯಂತ ಹಳೆಯ ಮತ್ತು ದೊಡ್ಡ ಇಸ್ಲಾಮಿಸ್ಟ್ ಸಂಘಟನೆ, ಬಹಿಷ್ಕೃತ ಮುಸ್ಲಿಂ ಬ್ರದರ್‌ಹುಡ್‌ನ ಸದಸ್ಯನಾದ. ಇದಕ್ಕಾಗಿ 15ನೇ ವಯಸ್ಸಿನಲ್ಲಿ ಬಂಧಿಸಲಾಯಿತು. ಆದರೂ ಹೇಗೋ ಕೈರೋ ವಿಶ್ವವಿದ್ಯಾಲಯದ ವೈದ್ಯಕೀಯ ಶಾಲೆಯಲ್ಲಿ ವೈದ್ಯಕೀಯ ವ್ಯಾಸಂಗ ಮಾಡಿದ. 1974ರಲ್ಲಿ ಪದವಿ ಪಡೆದ. ನಾಲ್ಕು ವರ್ಷ ನಂತರ ಶಸ್ತ್ರಚಿಕಿತ್ಸೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ.
ಈಜಿಪ್ಟ್ ಅಧ್ಯಕ್ಷರ ಹತ್ಯೆ, ಖುಲಾಸೆ
ಜವಾಹಿರಿ ಆರಂಭದಲ್ಲಿ ಕೌಟುಂಬಿಕ ಸಂಪ್ರದಾಯ ಮುಂದುವರೆಸಿದ. ಕೈರೋದಲ್ಲಿ ಕ್ಲಿನಿಕ್ ಆರಂಭಿಸಿದ. ಆದರೆ ಈಜಿಪ್ಟ್ ಸರ್ಕಾರವನ್ನು ಉರುಳಿಸಲು ಕರೆ ನೀಡುತ್ತಿದ್ದ ತೀವ್ರಗಾಮಿ ಇಸ್ಲಾಮಿಸ್ಟ್ ಗುಂಪುಗಳತ್ತ ಆಕರ್ಷಿತನಾದ. 1973ರಲ್ಲಿ ಈಜಿಪ್ಟ್ ಇಸ್ಲಾಮಿಕ್ ಜಿಹಾದ್ ಸಂಘಟನೆ ಸ್ಥಾಪಿತಗೊಂಡಾಗ, ಅದನ್ನು ಸೇರಿದ. 1981ರಲ್ಲಿ, ಕೈರೋದಲ್ಲಿ ಮಿಲಿಟರಿ ಪರೇಡ್‌ನಲ್ಲಿ ಅಧ್ಯಕ್ಷ ಅನ್ವರ್ ಸಾದತ್ ಅವರನ್ನು ಈ ಸಂಘಟನೆ ಉಗ್ರರು ಹತ್ಯೆ ಮಾಡಿದರು. ಇಸ್ರೇಲ್‌ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದರಿಂದ ಸಾದತ್ ಮೇಲೆ ಉಗ್ರರಿಗೆ ಸಿಟ್ಟು ಬಂದಿತ್ತು. ಶಂಕೆಯಲ್ಲಿ ಜವಾಹಿರಿಯನ್ನೂ ಬಂಧಿಸಲಾಯಿತು.
ಸಾಮೂಹಿಕ ವಿಚಾರಣೆಯ ಸಮಯದಲ್ಲಿ, ಜವಾಹಿರಿ ಪ್ರತಿವಾದಿಗಳ ನಾಯಕನಾಗಿ ಹೊರಹೊಮ್ಮಿದ. “ನಾವು ನಮ್ಮ ಧರ್ಮವನ್ನು ನಂಬುತ್ತೇವೆ. ಇಸ್ಲಾಮಿಕ್ ರಾಜ್ಯ ಮತ್ತು ಇಸ್ಲಾಮಿಕ್ ಸಮಾಜವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ.” ಎಂದು ಹೇಳಿಕೆ ನೀಡಿದ. ಆದರೆ ಸಾದತ್ ಹತ್ಯೆಯಲ್ಲಿ ಸಾಕ್ಷಿಗಳಿಲ್ಲದೆ ಖುಲಾಸೆಯಾದ. ಆದರೂ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದಕ್ಕಾಗಿ ಮೂರು ವರ್ಷಗಳ ಶಿಕ್ಷೆ ಅನುಭವಿಸಿದ. ಜವಾಹಿರಿ ಈಜಿಪ್ಟ್ ಜೈಲಿನಲ್ಲಿದ್ದಾಗ ದೊರೆತ ನಿಯಮಿತ ಆತನನ್ನು ಇನ್ನಷ್ಟು ಮತಾಂಧ ಮತ್ತು ಹಿಂಸಾತ್ಮಕ ಉಗ್ರಗಾಮಿಯಾಗಿ ಪರಿವರ್ತಿಸಿತು.
1985ರಲ್ಲಿ ಬಿಡುಗಡೆಯಾದ ನಂತರ ಜವಾಹಿರಿ ಸೌದಿ ಅರೇಬಿಯಾಕ್ಕೆ ತೆರಳಿದ. ಅಲ್ಲಿಂದ ಪಾಕಿಸ್ತಾನದ ಪೇಶಾವರ್ ಮತ್ತು ನೆರೆಯ ಅಫ್ಘಾನಿಸ್ತಾನಕ್ಕೂ ಹೋದ. ಅಲ್ಲಿ ಸೋವಿಯತ್ ಆಕ್ರಮಣದ ಸಮಯದಲ್ಲಿ ವೈದ್ಯನಾಗಿ ಕೆಲಸ ಮಾಡಿದ. ಅದೇ ವೇಳೆ ಈಜಿಪ್ಟ್ ಇಸ್ಲಾಮಿಕ್ ಜಿಹಾದ್‌ನ ಇನ್ನೊಂದು ಬಣವನ್ನು ಸ್ಥಾಪಿಸಿದ. 1993ರಲ್ಲಿ ಇದರ ಚಟುವಟಿಕೆ ಜೋರಾಯಿತು. ಪ್ರಧಾನ ಮಂತ್ರಿ ಅತೀಫ್ ಸಿಡ್ಕಿ ಸೇರಿದಂತೆ ಈಜಿಪ್ಟ್ ಸರ್ಕಾರದ ಮಂತ್ರಿಗಳ ಮೇಲೆ ಸರಣಿ ದಾಳಿಗಳನ್ನು ನಡೆಸಿದ.
ಇನ್ನಷ್ಟು ವಿವರಗಳು: ವಿಸ್ತಾರ Explainer | ಜವಾಹಿರಿಯನ್ನು ಕತ್ತರಿಸಿ ಹಾಕಿದ ಆ ಹೆಲ್‌ಫೈರ್ ಕ್ಷಿಪಣಿ ಸಾಮರ್ಥ್ಯ ಅನೂಹ್ಯ!
1990ರ ದಶಕದ ಮಧ್ಯಭಾಗದಲ್ಲಿ ಈಜಿಪ್ಟ್ ಸರ್ಕಾರ ಉರುಳಿಸಲು ಮತ್ತು ದೇಶದಲ್ಲಿ ಇಸ್ಲಾಮಿಕ್ ರಾಜ್ಯ ಸ್ಥಾಪಿಸಲು ಈತ ನಡೆಸಿದ ಅಭಿಯಾನ 1,200ಕ್ಕೂ ಹೆಚ್ಚು ಈಜಿಪ್ಟಿನವರ ಸಾವಿಗೆ ಕಾರಣವಾಯಿತು. ನಂತರ ವಿದೇಶಿ ಪ್ರವಾಸಿಗರ ಹತ್ಯಾಕಾಂಡ ನಡೆಸತೊಡಗಿದ. ಎರಡು ವರ್ಷಗಳ ನಂತರ, ಗುಂಪು ನಡೆಸಿದ ಅನೇಕ ದಾಳಿಗಳಲ್ಲಿ ಅವನ ಪಾತ್ರಕ್ಕಾಗಿ ಈಜಿಪ್ಟಿನ ಮಿಲಿಟರಿ ನ್ಯಾಯಾಲಯ ಅವನಿಗೆ ಮರಣದಂಡನೆ ನಿಗದಿಪಡಿಸಿತು.
ನಂತರ ಈತ ಈಜಿಪ್ಟ್‌ನಿಂದ ಪರಾರಿಯಾಗಿ ಉಗ್ರ ಸಂಘಟನೆಗೆ ಹಣ ಕಲೆಹಾಕಲು ಪ್ರಪಂಚದಾದ್ಯಂತ ಪ್ರಯಾಣಿಸಿದ. ಅಫ್ಘಾನಿಸ್ತಾನದ ಸೋವಿಯತ್ ಕದನದ ನಂತರದ ವರ್ಷಗಳಲ್ಲಿ ಬಲ್ಗೇರಿಯಾ, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ವಾಸಿಸುತ್ತಿದ್ದ. ಕೆಲವೊಮ್ಮೆ ಬಾಲ್ಕನ್ಸ್, ಆಸ್ಟ್ರಿಯಾ, ಯೆಮೆನ್, ಇರಾಕ್, ಇರಾನ್ ಮತ್ತು ಫಿಲಿಪೈನ್ಸ್‌ಗೂ ಸುಳ್ಳು ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ. ಡಿಸೆಂಬರ್ 1996ರಲ್ಲಿ ಚೆಚೆನ್ಯಾದಲ್ಲಿ ವೀಸಾ ಇಲ್ಲದೆ ಸಿಕ್ಕಿಬಿದ್ದ. ಆರು ತಿಂಗಳು ರಷ್ಯಾದ ಬಂಧನದಲ್ಲಿದ್ದ.
ಲಾಡೆನ್ ಜತೆಗೆ ಜಲಾಲಾಬಾದ್‌ನಲ್ಲಿ
1997ರಲ್ಲಿ ಈತ ಒಸಾಮಾ ಬಿನ್ ಲಾಡೆನ್ ನೆಲೆಗೊಂಡಿದ್ದ ಆಫ್ಘನ್ ನಗರವಾದ ಜಲಾಲಾಬಾದ್‌ಗೆ ಸ್ಥಳಾಂತರಗೊಂಡ. ಒಂದು ವರ್ಷದ ನಂತರ, ಈಜಿಪ್ಟಿನ ಇಸ್ಲಾಮಿಕ್ ಜಿಹಾದಿಗಳು ಜಾಗತಿಕ ಸಂಘಟನೆ ರಚಿಸಲು ಒಟ್ಟಾದರು. ಅಲ್ ಖೈದಾ ಅದರಲ್ಲಿ ಸೇರಿತು. ಅಮೆರಿಕದ ನಾಗರಿಕರ ಹತ್ಯೆಗೆ ಫತ್ವಾ ನೀಡುತ್ತಿತ್ತು. ಕೀನ್ಯಾ ಮತ್ತು ತಾಂಜಾನಿಯಾದಲ್ಲಿನ US ರಾಯಭಾರ ಕಚೇರಿಗಳನ್ನು ನಾಶಪಡಿಸಿದರು. 223 ಜನ ಸಾವನ್ನಪ್ಪಿದರು.
ದಾಳಿಯ ಎರಡು ವಾರಗಳ ನಂತರ, ಅಫ್ಘಾನಿಸ್ತಾನದ ಗುಂಪಿನ ತರಬೇತಿ ಶಿಬಿರಗಳ ಮೇಲೆ US ಬಾಂಬ್ ದಾಳಿ ನಡೆಸಿತು. ಮರುದಿನ, ಜವಾಹಿರಿ ಪಾಕಿಸ್ತಾನಿ ಪತ್ರಕರ್ತರಿಗೆ ದೂರವಾಣಿ ಕರೆ ಮಾಡಿ ʼʼಯುದ್ಧವು ಈಗಷ್ಟೇ ಪ್ರಾರಂಭವಾಗಿದೆ” ಎಂದ. 2001ರಲ್ಲಿ, ಬಹು ನಿಖರವಾದ ಯೋಜನೆ ರೂಪಿಸಿ, ಅವಳಿ ಗೋಪುರಗಳ ಮೇಲೆ ದಾಳಿ ನಡೆಸಿದ. ಅಮೆರಿಕ ಪ್ರತೀಕಾರದ ಶಪಥ ತೊಟ್ಟಿತು. 2011ರಲ್ಲಿ ಲಾಡೆನ್‌ನನ್ನು ಮುಗಿಸಿತು. ಜವಾಹಿರಿ ಪರಾರಿಯಾದ. ಇತ್ತೀಚಿನ ವರ್ಷಗಳಲ್ಲಿ ಗುಪ್ತ ಸ್ಥಳಗಳಲ್ಲಿ ಅಡಗಿ ಕುಳಿತು ಸಾಂದರ್ಭಿಕವಾಗಿ ಸಂದೇಶಗಳನ್ನು ನೀಡುತ್ತಿದ್ದ. ಕರ್ನಾಟಕದಲ್ಲಿ ನಡೆದ ಹಿಜಾಬ್ ಗಲಾಟೆಗೂ ಈತ ಪ್ರತಿಕ್ರಿಯಿಸಿದ್ದನ್ನು ನೆನಪಿಸಿಕೊಳ್ಳಬಹುದು. ಇವನ ಪತ್ನಿಯರೂ ಈತನ ಪಾತಕ ಕೃತ್ಯಗಳಲ್ಲಿ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: Al-jawahiri dead| ಕಾಬೂಲ್‌ನ ಆ ಮನೆಯ ಬಾಲ್ಕನಿಗೇ ಬಡಿದಿತ್ತು ಮಿಸೈಲ್, ಹೆಣವಾಗಿ ಬಿದ್ದಿದ್ದ ಜವಾಹಿರಿ