ಮುಂದಿನ ಲೋಕಸಭೆ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಆದರೆ ಎಲ್ಲ ಪಕ್ಷಗಳಲ್ಲೂ ಚುನಾವಣೆಯ ಸಿದ್ಧತೆ ಜೋರಾಗಿಯೇ ನಡೆಯುತ್ತಿದೆ. ಬಿಜೆಪಿ ಮತ್ತೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ನರೇಂದ್ರ ಮೋದಿ ಅವರನ್ನೇ ತೋರಿಸುವುದು ಖಚಿತವಾಗಿದೆ. ಪ್ರತಿಪಕ್ಷಗಳಲ್ಲಿ ನರೇಂದ್ರ ಮೋದಿ ಅವರಿಗೆ ಮುಖಾಮುಖಿಯಾಗಿ ನಿಲ್ಲಬಲ್ಲವರು ಯಾರಿದ್ದಾರೆ ಎಂಬ ಹುಡುಕಾಟ ಆರಂಭವಾಗಿದೆ. ಪ್ರತಿಯೊಂದು ಪಕ್ಷದಲ್ಲೂ ಒಬ್ಬರಲ್ಲ ಒಬ್ಬರು ಇದ್ದಾರೆ; ಆದರೆ ನರೇಂದ್ರ ಮೋದಿ ಅವರಂತೆ ರಾಷ್ಟ್ರೀಯ ವರ್ಚಸ್ಸು ಹೊಂದಿದ, ಯಾವ ರಾಜ್ಯಕ್ಕೆ ಹೋದರೂ ಜನತೆಯನ್ನು ಸೆಳೆಯಬಲ್ಲ ತಾಕತ್ತು ಹೊಂದಿರುವ ವ್ಯಕ್ತಿಗಳಿಗಾಗಿ ಹುಡುಕಾಟ ಆರಂಭವಾಗಿದೆ.
ಸದ್ಯ ಐದು ಮಂದಿಯ ಹೆಸರು ಕೇಳಿಸುತ್ತಿದೆ- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್, ಸಂಯುಕ್ತ ಜನತಾ ದಳ ನಾಯಕ ನಿತೀಶ್ ಕುಮಾರ್, ತೆಲಂಗಾಣ ರಾಷ್ಟ್ರ ಸಮಿತಿ ನಾಯಕ ಕೆ.ಚಂದ್ರಶೇಖರ ರಾವ್.
ನಿತೀಶ್ ಕುಮಾರ್ ಅವರು ಸದ್ಯದ ಹೊಸ ಸೇರ್ಪಡೆ. ಬಿಹಾರದಲ್ಲಿ ಸಂಭವಿಸಿದ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಮೋದಿ ಅವರಿಗೆ ಎದುರಾಳಿಯಾಗಿ ನಿತೀಶ್ ಹೆಸರು ಕೇಳಿಬರುತ್ತಿದೆ. ಬಿಜೆಪಿಯ ಸಖ್ಯ ತೊರೆದು ಆರ್ಜೆಡಿ ಮತ್ತು ಕಾಂಗ್ರೆಸ್ ಜತೆಗೆ ಕೈ ಜೋಡಿಸಿರುವ ನಿತೀಶ್ ಅವರು ʼʼ2024ರ ಚುನಾವಣೆಯಲ್ಲಿ ಮೋದಿ ಅವರನ್ನು ನೋಡಿಕೊಳ್ಳುತ್ತೇವೆʼʼ ಎಂದು ತೊಡೆ ತಟ್ಟಿದ್ದಾರೆ. ಪ್ರಧಾನ ಮಂತ್ರಿ ಆಗುವತ್ತ ಅವರ ಮಹತ್ವಾಕಾಂಕ್ಷೆ ಇರುವುದು ಖಚಿತ. ಆದರೆ ಅವರ ನೇತೃತ್ವದಲ್ಲಿ ಇತರ ಪ್ರತಿಪಕ್ಷಗಳು ಒಗ್ಗಟ್ಟಾಗಲಿವೆಯೇ ಇಲ್ಲವೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕು.
ಇದನ್ನೂ ಓದಿ: ವಿಸ್ತಾರ Explainer | ಬಿಜೆಪಿ ಜತೆಗೆ ನಿತೀಶ್ ಕುಮಾರ್ ಮುನಿಸಿಗೆ ಕಾರಣಗಳೇನು? ಮುಂದೇನು ಗೇಮ್ ಪ್ಲ್ಯಾನ್?
2024ರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾವು ಈ ಐದು ನಾಯಕರ ಶಕ್ತಿ ಹಾಗೂ ದೌರ್ಬಲ್ಯಗಳನ್ನು ಇಲ್ಲಿ ಗಮನಿಸೋಣ.
ನಿತೀಶ್ ಕುಮಾರ್ ಶಕ್ತಿಗಳು
- ಹಿಂದಿ ಹೃದಯ ಭಾಗದಲ್ಲಿರುವ ದೊಡ್ಡ ರಾಜ್ಯವೊಂದರಿಂದ ಬಂದಿದ್ದಾರೆ.
- ಬಹು ದೀರ್ಘವಾದ ಆಡಳಿತಾತ್ಮಕ ಅನುಭವವಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದರು.
- ನಿತೀಶ್ ಒಬಿಸಿ ಸಮುದಾಯದಿಂದ ಬಂದ ಲೀಡರ್
- ಮಹಿಳಾ ಸಶಕ್ತೀಕರಣದಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ.
- ಯಾವುದೇ ಭ್ರಷ್ಟಾಚಾರದ ಆರೋಪ ಇವರ ಮೇಲಿಲ್ಲ. ಮಿ.ಕ್ಲೀನ್ ಎಂಬ ಬಿರುದು.
- ಕುಟುಂಬ ರಾಜಕಾರಣದ ಆರೋಪವಿಲ್ಲದ, ಮಂಡಲ್ ಯುಗದ ಧುರೀಣ.
ಬಲಹೀನತೆಗಳು
- ಬಟ್ಟೆ ಬದಲಾಯಿಸಿದಂತೆ ಮೈತ್ರಿ ಬದಲಾಯಿಸಿದ್ದಾರೆ. ಅಧಿಕಾರದಲ್ಲಿ ಸದಾ ಉಳಿದಿದ್ದಾರೆ. ಇದು ಭವಿಷ್ಯದ ಸ್ನೇಹಿತರಲ್ಲಿ ಇವರ ಬಗ್ಗೆ ವಿಶ್ವಾಸದ ಕೊರತೆ ಮೂಡಿಸಲಿದೆ.
- ಪ್ಯಾನ್ ಇಂಡಿಯಾ ಇಮೇಜ್ ಸಾಕಷ್ಟು ಇಲ್ಲ.
- ಯಾವಾಗಲೂ ಮೈತ್ರಿ ಬದಲಾಯಿಸುವುದರಿಂದ ರಾಜಕೀಯ ನಂಬಿಕೆ ಸಿದ್ಧಾಂತಗಳಲ್ಲಿ ರಾಜಿ ಮಾಡಿಕೊಂಡಿದ್ದಾರೆ.
- ಸ್ಪಷ್ಟವಾದ ಆರ್ಥಿಕ ದೂರದೃಷ್ಟಿಯನ್ನು ಇನ್ನಷ್ಟೇ ಪ್ರದರ್ಶಿಸಬೇಕಿದೆ.
- ವಿಶಾಲವಾದ ಯುವಜನಾಂಗದ ಸಂಪರ್ಕವಿಲ್ಲ.
ಮಮತಾ ಬ್ಯಾನರ್ಜಿ ಶಕ್ತಿಗಳು
- ದೇಶದಲ್ಲಿ ಈಗ ಇರುವ ಏಕೈಕ ಮಹಿಳಾ ಮುಖ್ಯಮಂತ್ರಿ.
- 42 ಸಂಸದರನ್ನು ಕೇಂದ್ರಕ್ಕೆ ಕಳಿಸುವ ಬಲಿಷ್ಠ ರಾಜ್ಯದಲ್ಲಿ ಪ್ರಭಾವಿ ನಾಯಕಿ.
- ಬಡವರ ಪರ ಇಮೇಜ್ ಹೊಂದಿರುವ ಸಾಮೂಹಿಕ ನಾಯಕಿ.
- ರಾಜಕೀಯ ವಿರೋಧಿಗಳನ್ನು ಎದುರಿಸುವಲ್ಲಿ ಬೀದಿಗಿಳಿದು ಹೋರಾಡಬಲ್ಲ ಛಾತಿ ತೋರಿಸಿದ್ದಾರೆ.
ಬಲಹೀನತೆಗಳು
- ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಸೀಮಿತ ಭಾಷಿಕ ಶಕ್ತಿ ಹೊಂದಿದ್ದಾರೆ.
- ಪಶ್ಚಿಮ ಬಂಗಾಳದಲ್ಲಿ ಮಾತ್ರ ಬೇರುಗಳನ್ನು ಹೊಂದಿದ್ದಾರೆ.
- ಇವರ ತೃಣಮೂಲ ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ.
- ಸ್ವಜನಪಕ್ಷಪಾತ, ಕುಟುಂಬ ರಾಜಕಾರಣದ ಆರೋಪವಿದೆ.
- ಅನಿರೀಕ್ಷಿತ ಸ್ವಭಾವ ಎಂಬ ಕುಖ್ಯಾತಿಯಿದೆ.
ಇದನ್ನೂ ಓದಿ: ವಿಸ್ತಾರ Explainer | 4G ಸ್ಮಾರ್ಟ್ಫೋನ್ನಲ್ಲೇ 5G ಪಡೆಯಲು ಸಾಧ್ಯವೇ?
ಅರವಿಂದ ಕೇಜ್ರಿವಾಲ್ ಶಕ್ತಿಗಳು
- ಸ್ಟಾರ್ಟಪ್ ಪಕ್ಷವೊಂದರ ಯುವ ನಾಯಕನಾಗಿ ಹೋರಾಡಿದ ಅನುಭವ.
- ಮಧ್ಯಮ ವರ್ಗ ಹಾಗೂ ನಗರ ಯುವಜನತೆಯ ಜತೆಗೆ ಕನೆಕ್ಟ್ ಆಗುತ್ತಾರೆ.
- ಹಿಂದಿ ಮತ್ತು ಇಂಗ್ಲಿಷ್ಗಳೆರಡರಲ್ಲೂ ಸಾಕಷ್ಟು ಹಿಡಿತ ಇದೆ.
- ರಾಷ್ಟ್ರೀಯ ಮಟ್ಟದಲ್ಲಿ ಕಟ್ಟಿಕೊಂಡ ಭ್ರಷ್ಟಾಚಾರ- ವಿರೋಧಿ ಇಮೇಜ್.
- ನುರಿತ ಸಂವಹನಶೀಲರಾಗಿ ಪಳಗಿದ್ದಾರೆ.
ಬಲಹೀನತೆಗಳು
- ಆಮ್ ಆದ್ಮಿ ಪಾರ್ಟಿ ದೇಶದ ಕೆಲವೇ ಕಡೆಗಳಿಗೆ ಸೀಮಿತವಾಗಿದೆ.
- ಪಕ್ಷದಲ್ಲಿ ಏಕೈಕ ನಾಯಕ, ಒನ್ ಮ್ಯಾನ್ ಶೋ ಎಂಬ ಕುಖ್ಯಾತಿ.
- ಪ್ರತಿಪಕ್ಷಗಳಲ್ಲಿ ಹೆಚ್ಚಿನ ಗೆಳೆಯರಿಲ್ಲ.
- ಇತ್ತೀಚೆಗೆ ʼಸೆಕ್ಯುಲರ್ ನಾಯಕʼ ಎಂಬ ಅವರ ಇಮೇಜ್ಗೆ ಕೆಲವು ಬಾರಿ ಧಕ್ಕೆಯಾಗುವಂತೆ ನಡೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಶಕ್ತಿಗಳು
- ದೇಶದ ಅತಿ ದೊಡ್ಡ ಪ್ರತಿಪಕ್ಷದ ನಾಯಕನಾಗಿದ್ದಾರೆ.
- ಕಾಂಗ್ರೆಸ್ ಹಾಗೂ ಗಾಂಧಿ ಕುಟುಂಬ ಈಗಲೂ ಪ್ಯಾನ್ ಇಂಡಿಯಾ ವರ್ಚಸ್ಸು ಹೊಂದಿದೆ.
- ನರೇಂದ್ರ ಮೋದಿ ಅವರನ್ನು ಸಾಕಷ್ಟು ಬಾರಿ ಎದುರು ಹಾಕಿಕೊಂಡಿದ್ದಾರೆ. ಮುಂದೆಯೂ ಎದುರಿಸಲು ಹಿಂಜರಿಯುವುದಿಲ್ಲ.
- ಲೆಫ್ಟ್ ಆಫ್ ಸೆಂಟರ್ ವೇದಿಕೆಯಲ್ಲಿ ಸೂಕ್ತ ಪರ್ಯಾಯ ಎನಿಸಿಕೊಂಡಿದ್ದಾರೆ.
ಬಲಹೀನತೆಗಳು
- ಕುಟುಂಬ ರಾಜಕಾರಣದ ಭೂತದಿಂದ ಪೀಡಿತರು.
- ಬಿಜೆಪಿಯನ್ನು ಮುಖಾಮುಖಿಯಾಗಿ ಎದುರಿಸಲು ಕಾಂಗ್ರೆಸ್ ಆಗಾಗ ಎಡವುತ್ತದೆ.
- ಯಾವುದೇ ಆಡಳಿತಾತ್ಮಕ ಅನುಭವವಿಲ್ಲ, ಯಾವುದೇ ಪ್ರಮುಖ ಆಡಳಿತ ಹೊಣೆ ನಿರ್ವಹಿಸಿಲ್ಲ.
- 24×7 ರಾಜಕಾರಣಿಯಲ್ಲ. ಪಕ್ಷ ಸಂಕಷ್ಟದಲ್ಲಿದ್ದಾಗ ಆಗಾಗ ಕಣ್ಮರೆಯಾಗಿಬಿಡುತ್ತಾರೆ.
ಕೆ.ಚಂದ್ರಶೇಖರ ರಾವ್ ಶಕ್ತಿಗಳು
- ಸುದೀರ್ಘ ಕಾಲದ ಆಡಳಿತ ಅನುಭವವಿದೆ.
- ಪ್ರತ್ಯೇಕ ತೆಲಂಗಾಣ ರಾಜ್ಯಕ್ಕಾಗಿ ಹೋರಾಡಿ ಅದನ್ನು ದಕ್ಕಿಸಿಕೊಂಡ ಹೋರಾಟಗಾರ.
- ದಕ್ಷಿಣದ ರಾಜ್ಯಗಳಲ್ಲಿ ಉತ್ತರದ ಮಹತ್ವಾಕಾಂಕ್ಷೆ ಹೊಂದಿರುವ ಏಕೈಕ ನಾಯಕ.
ಬಲಹೀನತೆಗಳು
- ಈಗಾಗಲೇ ಒಮ್ಮೆ ಪ್ರತಿಪಕ್ಷ ನಾಯಕರನ್ನು ಸಂಘಟಿಸಲು ಯತ್ನಿಸಿ ವಿಫಲರಾಗಿದ್ದಾರೆ.
- ತೆಲಂಗಾಣದ ಆಚೆಗೆ ರಾಷ್ಟ್ರೀಯ ವರ್ಚಸ್ಸು ಇಲ್ಲ.
- ಹಿಂದಿ ಮತ್ತು ಇಂಗ್ಲಿಷ್ನ ಮೇಲೆ ಸಾಕಷ್ಟು ಹಿಡಿತವಿಲ್ಲ.