ಬೆಂಗಳೂರು: ಆರೋಗ್ಯವಂತ ಪ್ರಜೆಗಳಿಂದ ಆರೋಗ್ಯವಂತ ಸಮಾಜ, ಅದರಿಂದ ಆರೋಗ್ಯಯುತ ದೇಶ ನಿರ್ಮಾಣವಾಗುತ್ತದೆ. ಈ ಕುರಿತು ಸಮಾಜದಲ್ಲಿ ವಿಶ್ವಾಸಾರ್ಹ ಜಾಗೃತಿ ಮೂಡಿಸಲು ʻವಿಸ್ತಾರ ಹೆಲ್ತ್ʼ ಯೂಟ್ಯೂಬ್ ಚಾನೆಲ್ ಶ್ರಮಿಸಲಿದೆ ಎಂದು ವಿಸ್ತಾರ ನ್ಯೂಸ್ ಮೀಡಿಯಾದ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಹೇಳಿದರು.
ಬುಧವಾರ (ಆ.24) ನಡೆದ ʻವಿಸ್ತಾರ ಹೆಲ್ತ್ʼ ಯೂಟ್ಯೂಬ್ ಚಾನೆಲ್ ಅನಾವರಣ ಸಂದರ್ಭದಲ್ಲಿ ಅವರು ಈ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಉತ್ತಮ ಬದುಕಿಗೆ ಒಳ್ಳೆಯ ಮನಸ್ಥಿತಿ, ಆರೋಗ್ಯಕರ ಆಹಾರ ಎಲ್ಲವೂ ಬೇಕು. ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ, ವ್ಯಾಯಾಮದಿಂದ ಹಿಡಿದು ಮನೆಮದ್ದಿನವರೆಗೆ ಎಲ್ಲ ವಿಚಾರಗಳನ್ನೂ ಜನತೆಗೆ ತಿಳಿಸಿಕೊಡಬೇಕಾಗಿದೆ. ಅನಾರೋಗ್ಯವನ್ನು ತಡೆಯುವುದು ಹೇಗೆ, ಆರೋಗ್ಯವನ್ನು ಉಳಿಸಿ ಬೆಳೆಸಿಕೊಳ್ಳುವುದು ಹೇಗೆ, ಯಾವ ಕಾಯಿಲೆ ಬಂದಾಗ ಯಾರ ಬಳಿ ಹೋಗಬೇಕು, ಆಸ್ಪತ್ರೆಯಿಂದ ಹೊರ ಬರುವಾಗ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಮುಂದಿನ ಬದುಕನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳುವುದು ಹೇಗೆ- ಎಂಬಿತ್ಯಾದಿ ಎಲ್ಲ ವಿಚಾರಗಳಲ್ಲೂ ವಿಸ್ತಾರ ಹೆಲ್ತ್ ಯೂಟ್ಯೂಬ್ ಚಾನೆಲ್ ಜಾಗೃತಿ ಮೂಡಿಸಲಿದೆ ಎಂದರು.
ಇದು ವಿಸ್ತಾರ ನ್ಯೂಸ್ ಮೀಡಿಯಾದ ಮೂರನೆಯ ಪ್ರಯತ್ನವಾಗಿದೆ. ಲೋಗೊ ಅನಾವರಣ, ಹಣಕಾಸು ಶಿಕ್ಷಣ ನೀಡುವ ಮನಿ ಪ್ಲಸ್ ಯೂಟ್ಯೂಬ್ ಚಾನೆಲ್ ನಂತರ ಹೆಲ್ತ್ ವಾಹಿನಿ ಬರುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿರುವ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರು ಇದನ್ನು ಲೋಕಾರ್ಪಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ. ಅವರು ಆರೋಗ್ಯ ವಲಯದಲ್ಲಿ ದೇಶಕ್ಕೇ ಮಾದರಿಯಾದ ಸೇವೆ ಸಲ್ಲಿಸಿದ್ದಾರೆ. ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಅವರು ಉನ್ನತ ಖಾಸಗಿ ಸಂಸ್ಥೆಗಳು ಸೆಲ್ಯೂಟ್ ಹೊಡೆಯುವಂತೆ ಜಯದೇವವನ್ನು ಕಟ್ಟಿದ್ದಾರೆ. ಆರೋಗ್ಯವೇ ಸಂಪತ್ತು ಎಂಬುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ ಎಂದರು.
ಅನೇಕ ಸುದ್ದಿಸಂಸ್ಥೆಗಳ ನಡುವೆ ವಿಸ್ತಾರ ತನ್ನದೇ ವಿಶೇಷತೆ, ಗುರಿ ಹೊಂದಿದೆ. ಸಮಾಜಕ್ಕೆ ಉತ್ತಮ, ಅವಶ್ಯಕ ಸೇವೆ ನೀಡುವುದು, ಸಮಾಜದಲ್ಲಿ ಬದಲಾವಣೆ ತರುವುದು, ಆತ್ಮವಿಶ್ವಾಸ- ಹುಮ್ಮಸ್ಸು ಮೂಡಿಸುವುದು, ಸಾಧನೆಯ ಪ್ರೇರಣೆ ಒದಗಿಸುವುದು ನಮ್ಮ ಆಶಯವಾಗಿದೆ ಎಂದು ಅವರು ವಿವರಿಸಿದರು.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರು ಚಾನೆಲ್ ಲೋಕಾರ್ಪಣೆ ಮಾಡಿದರು. ಸಂಸ್ಥೆಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಚ್.ವಿ.ಧರ್ಮೇಶ್, ವಿಸ್ತಾರ ನ್ಯೂಸ್‌ನ ಎಕ್ಸಿಕ್ಯೂಟಿವ್ ಎಡಿಟರ್ ಶರತ್ ಎಂ.ಎಸ್. ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ | Vistara Health | ವಿಸ್ತಾರ ಹೆಲ್ತ್ ಯುಟ್ಯೂಬ್ ಚಾನೆಲ್ ಪರಿಸರ ವೈದ್ಯ ಆಗಲಿ: ಡಾ. ಸಿ.ಎನ್ ಮಂಜುನಾಥ್ ಹಾರೈಕೆ
ಇದನ್ನೂ ಓದಿ | Vistara Money+| ವಿಸ್ತಾರ ಮೀಡಿಯಾದಿಂದ ಹಣಕಾಸು ಕುರಿತ ಯೂಟ್ಯೂಬ್ ಚಾನೆಲ್ ಲೋಕಾರ್ಪಣೆ