Site icon Vistara News

Vistara Impact: ಹಾವೇರಿಯಲ್ಲಿ ಗಾಂಧಿ ಭವನ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

Cm Siddaramaiah inaugurates Gandhi Bhavan in Haveri

ಹಾವೇರಿ: ಕಾಮಗಾರಿ ಮುಗಿದು 7 ತಿಂಗಳ ಬಳಿಕ ಕೊನೆಗೂ ನಗರದ ಗಾಂಧಿ ಭವನಕ್ಕೆ ಉದ್ಘಾಟನಾ ಭಾಗ್ಯ ದೊರೆತಿದೆ. ನಗರದ ರೈಲು ನಿಲ್ದಾಣದ ಎದುರಿನ ಹಳೆಯ ಧರ್ಮಶಾಲಾ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಿರ್ಮಿಸಿರುವ ಗಾಂಧಿ ಭವನವನ್ನು (Gandhi Bhavan) ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಉದ್ಘಾಟಿಸಿದರು.

ಮೂರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಗಾಂಧಿ ಭವನ ಕಾಮಗಾರಿ ಮುಗಿದು 7 ತಿಂಗಳು ಕಳೆದಿದ್ದರೂ ಉದ್ಘಾಟನೆಯಾಗಿರಲಿಲ್ಲ. ಗಾಂಧಿ ಭವನದ ಉದ್ಘಾಟನೆ ಯಾವಾಗ ಎಂದು ವಿಸ್ತಾರ ನ್ಯೂಸ್‌ನಲ್ಲಿ ವೀಕ್ಷಕ ವರದಿಗಾರ ಸುದ್ದಿ ಪ್ರಸಾರ (Vistara Impact) ಮಾಡಲಾಗಿತ್ತು.

ವಿಸ್ತಾರ ನ್ಯೂಸ್ ವರದಿಗೆ ಸ್ಪಂದಿಸಿ ಭರವಸೆ ನೀಡಿದ್ದ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ಸಿಎಂ ಕಡೆಯಿಂದ ಗಾಂಧಿ ಭವನ ಉದ್ಘಾಟನೆ ಮಾಡಿಸುವ ಭರವಸೆ ನೀಡಿದ್ದರು. ಅದರಂತೆ ಭಾನುವಾರ ಗಾಂಧಿ ಭವನ ಉದ್ಘಾಟನೆಯಾಗಿದೆ. ಇದು ವಿಸ್ತಾರ ನ್ಯೂಸ್ ವರದಿಯ ಇಂಪ್ಯಾಕ್ಟ್.

ಇದನ್ನೂ ಓದಿ | Lok Sabha Election 2024: ಲೋಕಸಭೆ ಚುನಾವಣೆಗೆ ಬಿಜೆಪಿ ಹೈಕಮಾಂಡ್‌ ಟಾಸ್ಕ್;‌ ಕಾಂಗ್ರೆಸ್‌ ಹೈಕಮಾಂಡ್‌ಗೆ ಶಾಕ್!

ಗಾಂಧಿ ಭವನದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ, ಮೋಹನದಾಸ್ ಕುಟೀರ, ಕಸ್ತೂರಬಾ ಕುಟೀರ, ಸ್ವದೇಶಿ, ಚರಕ, ಫೀನಿಕ್ಸ್, ಸಬರಮತಿ ಕುಟೀರಗಳು, ಸತ್ಯಾನ್ವಷಣೆ ಗ್ರಂಥಾಲಯ, ಸತ್ಯಶೋಧನೆ ಅಧ್ಯಯನ ಕೊಠಡಿ, ಹೃದಯಕುಂಜ್ ಪ್ರಾರ್ಥನಾ ಮಂದಿರ, ಮೋಹನದಾಸ್ ಟು ಮಹಾತ್ಮ ಬೆಳವಣಿಗೆಯ ಗಾಂಧೀಜಿಯವರ ಜೀವನದರ್ಶನ ಕುರಿತ ಛಾಯಾಚಿತ್ರಗಳ ಪ್ರದರ್ಶನಾಲಯ, ಸತ್ಯಾಗ್ರಹ ಸಭಾಂಗಣ, ರಂಗಚಟುವಟಿಕೆಗಳಿಗಾಗಿ ಬಾಪೂಜಿ ಬಯಲು ರಂಗಮಂದಿರನ್ನು ವೀಕ್ಷಿಸಿದ ಮುಖ್ಯಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿ, ಗಣ್ಯರ ಭೇಟಿಯ ಸಂದರ್ಶನ ಪುಸ್ತಕದಲ್ಲಿ ಅಭಿಪ್ರಾಯ ದಾಖಲಿಸಿದರು.

ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪ ಅವರೊಂದಿಗಿದ್ದ ಸನ್ನಿವೇಶದ ಪ್ರತಿಕೃತಿ, ದಂಡಿ ಯಾತ್ರೆ ಕಲಾಕೃತಿಗಳನ್ನು ತಾಳ್ಮೆಯಿಂದ ವೀಕ್ಷಿಸಿದ ಮುಖ್ಯಮಂತ್ರಿಗಳು ಹಾಗೂ ಗಣ್ಯರು ಸಂತಸ ವ್ಯಕ್ತಪಡಿಸಿದರು.

ಇದನ್ನೂ ಓದಿ | DK Shivakumar: ಬೆಂಗಳೂರಲ್ಲಿ ಡಬಲ್‌ ಡೆಕ್ಕರ್‌ ಫ್ಲೈ ಓವರ್ ಮೇಲೆ ಮೆಟ್ರೋ ಸೇರಿ ವಿವಿಧ ಯೋಜನೆ: ಡಿಕೆಶಿ

ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಡಾ.ಜಿ.ಪರಮೇಶ್ವರ, ಎಚ್‌.ಕೆ.ಪಾಟೀಲ, ದಿನೇಶ್‌ ಗುಂಡೂರಾವ್, ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಬಿ.ಎಸ್.ಸುರೇಶ್, ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ಶ್ರೀನಿವಾಸ ಮಾನೆ, ಬಸವರಾಜ ಶಿವಣ್ಣವರ, ಯು.ಬಿ.ಬಣಕಾರ, ಪ್ರಕಾಶ ಕೋಳಿವಾಡ, ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಒ ಅಕ್ಷಯ್ ಶ್ರೀಧರ್, ಜಿಲ್ಲಾ ವಾರ್ತಾಧಿಕಾರಿ ಡಾ.ರಂಗನಾಥ ಬಿ.ಆರ್,ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ್ ಪದಕಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ‌ ತಿಮ್ಮೇಶಕುಮಾರ್‌, ಸಾಹಿತಿ ಸತೀಶ ಕುಲಕರ್ಣಿ, ಬೆಂಗಳೂರಿನ ಗಾಂಧಿ ಸ್ಮಾರಕ‌ ನಿಧಿ ಉಪಾಧ್ಯಕ್ಷ ಡಾ.ತಿಪ್ಪನಗೌಡ ಮತ್ತಿತರರು ಇದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version