ಬೆಂಗಳೂರು: ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ 6ನೇ ದಿನವೂ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್ (Vistara News) ಶನಿವಾರ (ಮಾ. 16) ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್ ಬೂತ್‌ನಲ್ಲಿ (Vistara news polling booth) ಬಿಜೆಪಿ ಅತಿ ಹೆಚ್ಚು ಜನಾಭಿಪ್ರಾಯ ಪಡೆದಿದೆ. ಮೈಸೂರಿನಲ್ಲಿ ಹಾಲಿ ಸಂಸದರಾಗಿರುವ ಪ್ರತಾಪ್ ಸಿಂಹ ಅವರ ಬದಲಾಗಿ ರಾಜ ವಂಶಸ್ಥ ಯದುವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಆದರೆ, ಅಭ್ಯರ್ಥಿ ಬದಲಾದರೂ ಜನರ ಒಲವು ಬಿಜೆಪಿ ಕಡೆಗೇ ಇರುವುದು ಕಂಡುಬಂದಿದೆ. ವಿಸ್ತಾರ ಪೋಲಿಂಗ್ ಬೂತ್‌ಗೆ ಸಾವಿರಾರು ಕರೆಗಳು ಬಂದಿದ್ದು, ಇದರಲ್ಲಿ ಬಿಜೆಪಿಗೆ ಶೇ. 57ರಷ್ಟು ಮತಗಳು ಬಂದರೆ, ನಂತರದ ಸ್ಥಾನದಲ್ಲಿರುವ ಕಾಂಗ್ರೆಸ್‌ಗೆ ಶೇ.38 ಮತಗಳು ಬಂದಿವೆ.
ನ್ಯೂಸ್ ಪೋಲಿಂಗ್ ಬೂತ್‌ನ ಫಲಿತಾಂಶದ ಪ್ರಕಾರ ಮೈಸೂರು-ಕೊಡಗು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯೇ ನಂಬರ್ 1 ಎಂಬುವುದು ತಿಳಿದುಬಂದಿದ್ದು, ಮತ್ತೆ ಕಮಲ ‘ದರ್ಬಾರ್’ ಖಚಿತ ಎಂದು ಕ್ಷೇತ್ರದ ಮತದಾರರು ತಿಳಿಸಿದ್ದಾರೆ. ‘ವಿಸ್ತಾರ ಪೋಲಿಂಗ್ ಬೂತ್’ನಲ್ಲಿ ಒಟ್ಟು 5537 ಕರೆಗಳನ್ನು ಸ್ವೀಕರಿಸಿದ್ದು, ಈ ಪೈಕಿ ಬಿಜೆಪಿಗೆ 3157 ಮತಗಳು, ಕಾಂಗ್ರೆಸ್‌ಗೆ 2104 ಮತಗಳು, ಇತರರಿಗೆ 276 ಮತಗಳು ಬಂದಿವೆ.
ಪಕ್ಷಗಳು ಪಡೆದ ಶೇಕಡಾವಾರು ಮತ!
ಸ್ವೀಕರಿಸಿದ ಕರೆಗಳು : 5537
ಬಿಜೆಪಿ : 3157- 57%
ಕಾಂಗ್ರೆಸ್ : 2104 – 38%
ಇತರೆ : 276 – 5%
ಇದನ್ನೂ ಓದಿ | Vistara news polling booth: ಹುಬ್ಬಳ್ಳಿ-ಧಾರವಾಡಕ್ಕೆ ಜೋಶಿ ಜೋಶ್; ಕಾಂಗ್ರೆಸ್‌ಗೆ 2ನೇ ಪ್ಲೇಸ್!
ಅಭ್ಯರ್ಥಿಗಳು ಯಾರು?
ಕ್ಷೇತ್ರದಲ್ಲಿ ಎರಡು ಬಾರಿಯ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ತಪ್ಪಿದೆ. ಅವರ ಬದಲಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭ್ಯರ್ಥಿಯಾಗಿದ್ದಾರೆ. ಆದರೆ, ಅಭ್ಯರ್ಥಿ ಬದಲಾದರೂ ಕ್ಷೇತ್ರದಲ್ಲಿ ಬಿಜೆಪಿಗೇ ಅತಿ ಹೆಚ್ಚಿನ ಜನಬೆಂಬಲ ವ್ಯಕ್ತವಾಗಿದೆ. ಇನ್ನು ಕಾಂಗ್ರೆಸ್‌ನಲ್ಲಿ ಮೂವರು ಆಕಾಂಕ್ಷಿಗಳ ಹೆಸರು ಚಾಲ್ತಿಯಾಲ್ಲಿದ್ದು, ಅವರ ಪೈಕಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಪರ ಜನರು ಒಲವು ತೋರಿದ್ದಾರೆ. ಡಾ.ಶುಶ್ರೂತ್ ಗೌಡ ಮತ್ತು ಎಂ.ಲಕ್ಷ್ಮಣ್ ಅವರ ಹೆಸರನ್ನೂ ಹಲವರು ಉಲ್ಲೇಖಿಸಿದ್ದಾರೆ. ಅದೇ ರೀತಿ ಕೆ.ಆರ್.ಎಸ್ ಪಕ್ಷಕ್ಕೂ ಕೆಲ ಜನರ ಜೈಕಾರ ಹಾಕಿರುವುದು ಕಂಡುಬಂದಿದೆ.
ಕ್ಷೇತ್ರದಲ್ಲಿ 2014, 2019ರ ಲೋಕಸಭಾ ಚುನಾವಣೆಯಲ್ಲಿ ಸತತ ಎರಡು ಬಾರಿ ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಗೆಲುವಿನ ಪತಾಕೆ ಹಾರಿಸಿದ್ದರು. ಕ್ಷೇತ್ರದಲ್ಲಿ ಒಕ್ಕಲಿಗ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಪ್ರತಾಪ್ ಸಿಂಹ ಅವರು ಕೂಡ ಒಕ್ಕಲಿಗ ಸಮುದಾಯದವರಾಗಿದ್ದಾರೆ.
ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಕೂಡ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಲೋಕಸಭಾ ಚುನಾವಣೆಯಲ್ಲಿ 6 ಭಾರಿ ಸ್ಪರ್ಧಿಸಿದ್ದ ಅವರು 4 ಬಾರಿ ಕಾಂಗ್ರೆಸ್‌ನಿಂದ ಗೆಲುವು ಕಂಡರೆ, ಒಂದು ಬಾರಿ ಬಿಜೆಪಿ ಮತ್ತು ಮತ್ತೊಂದು ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಇದೀಗ ಮತ್ತೊಮ್ಮೆ ರಾಜಮನೆತನದ ವ್ಯಕ್ತಿಗೆ ಬಿಜೆಪಿ ಮಣೆ ಹಾಕಿದ್ದು, ಸತತ 3ನೇ ಬಾರಿಯೂ ಕ್ಷೇತ್ರದಲ್ಲಿ ಗೆಲ್ಲಲು ರಣತಂತ್ರ ರೂಪಿಸಿದೆ. ಇದಕ್ಕೆ ಪ್ರತಿಯಾಗಿ ಒಕ್ಕಲಿಗಾಸ್ತ್ರ ಪ್ರಯೋಗಿಸಲು ಕಾಂಗ್ರೆಸ್ ಆದ್ಯತೆ ನೀಡಿದೆ ಎಂದು ತಿಳಿದುಬಂದಿದೆ.
ಏನಿದು ಪೋಲಿಂಗ್ ಬೂತ್?
ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.
ಪೋಲಿಂಗ್ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?
ವಿಸ್ತಾರ ನ್ಯೂಸ್ ಪೋಲಿಂಗ್ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಇದನ್ನೂ ಓದಿ | Vistara news polling booth: ಚಿಕ್ಕಬಳ್ಳಾಪುರ ಲೋಕಸಭೆಯಲ್ಲಿ ಬಿಜೆಪಿಗೆ ಜೈ ಎಂದ ಮತದಾರ; 2ನೇ ಸ್ಥಾನದಲ್ಲಿ ಕಾಂಗ್ರೆಸ್!
ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ, ಶಿವಮೊಗ್ಗ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.
ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488