Site icon Vistara News

Vistara News Polling Booth: ಹಾಸನದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ತೀವ್ರ ಪೈಪೋಟಿ; ಫೋಟೋ ಫಿನಿಶ್‌ ಫಲಿತಾಂಶ ನಿರೀಕ್ಷೆ

Hassan vistara poll

ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ವಿಸ್ತಾರ ನ್ಯೂಸ್‌ (Vistara News) ಬುಧವಾರ (ಮಾ.20) ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನಡೆಸಿದ ಪೋಲಿಂಗ್‌ ಬೂತ್‌ ಸಮೀಕ್ಷೆಯಲ್ಲಿ (Vistara news polling booth) ಕ್ಷೇತ್ರದ ಮುಂದಿನ ಸಂಸದ ಯಾರಾಗಬೇಕು ಎಂದು ಮತದಾರರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕ್ಷೇತ್ರದಿಂದ ಸಾವಿರಾರು ಕರೆಗಳು ಬಂದಿದ್ದು, ಅವುಗಳಲ್ಲಿ ಒಟ್ಟು 7649 ಕರೆಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಶೇ. 49ರಷ್ಟು ಮಂದಿ ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಿದ್ದರೆ, ಶೇಕಡಾ 47ರಷ್ಟು ಜನರು ಕಾಂಗ್ರೆಸ್‌ ಪರ ಒಲವು ತೋರಿದ್ದು, ಶೇ.4 ಮಂದಿ ಇತರೆ ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದ್ದಾರೆ.

ವಿಸ್ತಾರ ಪೋಲಿಂಗ್‌ ಬೂತ್‌ನಲ್ಲಿ ಸಂಗ್ರಹಿಸಿದ ಜನಾಭಿಪ್ರಾಯದ ಪ್ರಕಾರ ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್ ನಡುವೆ ಕಠಿಣ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್‌ಗೆ 3745 ಮತದಾರರು ಮತ ನೀಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ 3635 ಮತಗಳು ಬಂದಿದ್ದು, ಇತರೆ(ಬಿಎಸ್‌ಪಿಗೆ) 269 ಮತ ಬಂದಿವೆ. ಇದರಿಂದ ಜೆಡಿಎಸ್‌-ಕಾಗ್ರೆಸ್‌ ನಡುವೆ ತೀವ್ರ ಪೈಪೋಟಿ ಇರುವುದು ಕಂಡುಬಂದಿದೆ. ಫೋಟೊ ಫಿನಿಶ್‌ ಫಲಿತಾಂಶದಲ್ಲಿ ಜೆಡಿಎಸ್‌ ಅಭ್ಯರ್ಥಿ ಪ್ರಜ್ವಲ್‌ ಕೊಂಚ ಮುನ್ನಡೆ ಸಾಧಿಸಿದ್ದಾರೆ.

ಕರೆಗಳ ಶೇಕಡಾವಾರು ವಿವರ

ಸ್ವೀಕರಿಸಿದ ಕರೆಗಳು: 7649
ಬಿಜೆಪಿ- ಜೆಡಿಎಸ್​​ : 3745 (ಶೇ.49)
ಕಾಂಗ್ರೆಸ್ : 3635 (ಶೇ.47)
ಇತರೆ : 269 (ಬಿಎಸ್​ಪಿ-ಶೇ.4)

ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಹಾಲಿ ಸಂಸದ ಪ್ರಜ್ವಲ್‌ ರೇವಣ್ಣ ಸ್ಪರ್ಧಿಸಲಿದ್ದು, ಕಾಂಗ್ರೆಸ್‌ನಿಂದ ಶ್ರೇಯಸ್‌ ಪಟೇಲ್‌ಗೆ ಟಿಕೆಟ್‌ ನೀಡಲಾಗಿದೆ. ಕ್ಷೇತ್ರದಲ್ಲಿ 2004, 2009, 2014ರಲ್ಲಿ ಜೆಡಿಎಸ್‌ನ ಎಚ್‌.ಡಿ.ದೇವೇಗೌಡ ಗೆಲುವು ಕಂಡಿದ್ದರು. 2019ರಲ್ಲಿ ಪ್ರಜ್ವಲ್‌ ರೇವಣ್ಣ ಗೆದ್ದಿದ್ದರು. ಸತತ ಐದನೇ ಬಾರಿ ಕ್ಷೇತ್ರದಲ್ಲಿ ಗೆಲುವು ಕಾಣಲು ಜೆಡಿಎಸ್‌ ರಣತಂತ್ರ ರೂಪಿಸಿದೆ. ಆದರೆ, ಈ ಬಾರಿ ಕಠಿಣ ಸ್ಪರ್ಧೆ ಇರಲಿದೆ ಎಂಬುವುದು ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ ಫಲಿತಾಂಶದ ಮೂಲಕ ತಿಳಿದುಬಂದಿದೆ.

ಹಾಸನ ಕ್ಷೇತ್ರದಲ್ಲಿ 1991ರಲ್ಲಿ ಜನತಾ ಪಕ್ಷ, 1998ರಲ್ಲಿ ಜನತಾದಳ ಪಕ್ಷ, 2004, 2009, 2014ರಲ್ಲಿ ಜೆಡಿಎಸ್‌ನಿಂದ 3 ಬಾರಿ ಸೇರಿ ಒಟ್ಟು 5 ಬಾರಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ | Vistara News Polling Booth: ಬೆಂಗಳೂರು ಸೆಂಟ್ರಲ್‌ನಲ್ಲಿ ಬಿಜೆಪಿ-ಕಾಂಗ್ರೆಸ್‌ ಮಧ್ಯೆ ನೆಕ್‌ ಟು ನೆಕ್‌ ಫೈಟ್‌!

ಗುರುವಾರ ಯಾವ ಕ್ಷೇತ್ರ?

ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ದಾವಣಗೆರೆ ಮತ್ತು ಮಧ್ಯಾಹ್ನ 2ರಿಂದ ಸಂಜೆ 6 ಗಂಟೆಯವರೆಗೆ ಬೀದರ್‌ ಕ್ಷೇತ್ರದ ಜನ ಫೋನ್‌ ಮಾಡಿ ಓಟ್‌ ಮಾಡಬಹುದು. ರಾತ್ರಿ 8 ಗಂಟೆಗೆ ಎರಡೂ ಕ್ಷೇತ್ರಗಳ ಫಲಿತಾಂಶ ಹೊರಬೀಳಲಿದೆ.

ಏನಿದು ಪೋಲಿಂಗ್‌ ಬೂತ್‌?

ಬೆಂಗಳೂರಿನಲ್ಲಿರುವ ವಿಸ್ತಾರ ನ್ಯೂಸ್‌ ಮುಖ್ಯ ಕಚೇರಿಯಲ್ಲಿ ತೆರೆಯಲಾಗಿರುವ ಪೋಲಿಂಗ್‌ ಬೂತ್‌ಗೆ ಸಾರ್ವಜನಿಕರು ನಿಗದಿತ ಸಮಯದಲ್ಲಿ ಪೋನ್‌ ಮಾಡುವ ಮೂಲಕ ತಮ್ಮ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಯಾರಾಗಬೇಕು, ಯಾವ ಪಕ್ಷ ಈ ಬಾರಿ ಗೆಲ್ಲಬೇಕು ಎಂದು ತಿಳಿಸಬಹುದು.

ಪೋಲಿಂಗ್‌ ಬೂತ್‌ನಲ್ಲಿ ಮಾಹಿತಿ ಸಂಗ್ರಹ ಹೇಗೆ?

ವಿಸ್ತಾರ ನ್ಯೂಸ್‌ ಪೋಲಿಂಗ್‌ ಬೂತ್‌ಗೆ ಒಂದೇ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ. ಆದರೆ, ಈ ಒಂದೇ ದೂರವಾಣಿ ಸಂಖ್ಯೆ ಸುಮಾರು 20ಕ್ಕೂ ಅಧಿಕ ಫೋನ್‌ಗಳಿಗೆ ಕನೆಕ್ಟ್‌ ಆಗುತ್ತದೆ. ಏಕಕಾಲದಲ್ಲಿ 20ಕ್ಕೂ ಅಧಿಕ ಮಂದಿ ಕರೆಯನ್ನು ಸ್ವೀಕರಿಸಿ ಮಾಹಿತಿಯನ್ನು ಸಂಗ್ರಹ ಮಾಡಲಾಗುತ್ತದೆ. ಯಾರು ಅಭ್ಯರ್ಥಿಯಾಗಬೇಕು? ಯಾರು ಗೆಲ್ಲಬೇಕು? ಯಾರಿಗೆ ಮತ ಎಂಬಿತ್ಯಾದಿ ಮಾಹಿತಿಗಳನ್ನು ಈ ವೇಳೆ ದಾಖಲಿಸಿಕೊಳ್ಳಲಾಗುತ್ತದೆ. ಬಳಿಕ ಅವುಗಳನ್ನು ಸಮೀಕರಿಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.

ಇದನ್ನೂ ಓದಿ | Vistara News Polling Booth: ತುಮಕೂರು ಕ್ಷೇತ್ರದಲ್ಲಿ ಮತ್ತೆ ಬಿಜೆಪಿಗೆ ಜೈ ಎಂದ ಮತದಾರರು!

ಈಗಾಗಲೇ ಮಂಡ್ಯ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ, ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರಗಳ ಸಮೀಕ್ಷೆ ಮುಕ್ತಾಯಗೊಂಡಿವೆ.

ನೀವು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ: 080-69554488

Exit mobile version