Site icon Vistara News

Voter Id : ಮನೆಯಲ್ಲೇ ಕುಳಿತು ಮತಪಟ್ಟಿಗೆ ಈಗಲೂ ನಿಮ್ಮ ಹೆಸರು ಸೇರಿಸಬಹುದು; ನಾಳೆ ಕೊನೇ ದಿನ

Voter List

ಬೆಂಗಳೂರು: ಮತದಾನ ಸಾಂವಿಧಾನಿಕ ಹಕ್ಕು. ಅದನ್ನು ಎಲ್ಲರೂ ಚಲಾಯಿಸಲೇಬೇಕು. ತಪ್ಪಿದರೆ ನಾಗರಿಕರಾಗಿ ನಿಮ್ಮ ಜವಾಬ್ದಾರಿ ಹಾಗೂ ಹೊಣೆಗಾರಿಕೆಯಿಂದ ನುಣುಚಿಕೊಂಡ ಹಾಗೆ. ಆದರೆ, ಸಾಕಷ್ಟು ಮಂದಿ ಮತದಾನದ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚನೆ ಮಾಡುವುದಿಲ್ಲ. ಮಾಡಿದರಾಯಿತು, ಇಲ್ಲದಿದ್ದರೂ ನಡೀತದೆ ಎಂಬ ಭಾವನೆಯೇ ಜಾಸ್ತಿ. ಇವರಲ್ಲಿ ಕೆಲವರು ಉದ್ದೇಶಪೂರ್ವಕಾಗಿ ಮತದಾನ ತಪ್ಪಿಸಿಕೊಂಡರೆ ಇನ್ನೂ ಕೆಲವರು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸಿಕೊಳ್ಳದ ಕಾರಣ ಅವಕಾಶ ನಷ್ಟ ಮಾಡಿಕೊಳ್ಳುತ್ತಾರೆ. ವಯಸ್ಸು ಸೇರಿದಂತೆ ಎಲ್ಲ ಅರ್ಹತೆಗಳು ಇದ್ದ ಹೊರತಾಗಿಯೂ ಮತದಾನ ತಪ್ಪಿಸಬಾರದು ಎಂಬ ಉದ್ದೇಶದಿಂದ ಕೇಂದ್ರ ಚುನಾವಣಾ ಆಯೋಗ ಮನೆಯಲ್ಲಿಯೇ ಕುಳಿತು ಮತದಾರರ ಪಟ್ಟಿಯಲ್ಲಿ (Voter Id) ಹೆಸರು ನೋಂದಾಯಿಸಲು ಅವಕಾಶ ಮಾಡಿಕೊಟ್ಟಿದೆ. ಅದನ್ನು ಸದುಪಯೋಗಪಡಿಸಿಕೊಳ್ಳುವುದು ಜಾಣತನ. ಆದರೆ, ಮರೆಯದರಿ ಈ ಪ್ರಕ್ರಿಯೆಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಮಾರ್ಚ್​ 25ರಂದು ನೋಂದಣಿ ಮಾಡಿಕೊಂಡರೆ ಮಾತ್ರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ (Lok Sabah Election 2024) ಓಟ್​ ಮಾಡಲು ಸಾಧ್ಯ.

ಹೇಗೆ ನೋಂದಣಿ ಮಾಡುವುದು?

ಮತದಾರರ ಪಟ್ಟಿಯಲ್ಲಿ ತಮ್ಮ ನೋಂದಾಯಿಸಿಕೊಳ್ಳಲು ಫಾರ್ಮ್ 6 ಅನ್ನು ಭರ್ತಿ ಮಾಡಬೇಕಾಗುತ್ತದೆ. ಒಂದು ವೇಳೆ ತಿದ್ದುಪಡಿಗಳನ್ನು ಮಾಡಲು ಬಯಸುವವರು ಫಾರ್ಮ್ 8 ಅನ್ನು ಭರ್ತಿ ಮಾಡಬೇಕು. ಫಾರ್ಮ್‌ಗಳನ್ನು ಆನ್‌ಲೈನ್‌ನಲ್ಲಿ (https://voters.eci.gov.in/) ಮನೆಯಲ್ಲಿಯೇ ಕುಳಿತು ಭರ್ತಿ ಮಾಡಬಹುದು. ಅಥವಾ ಅಪ್ಲಿಕೇಷನ್​ ಡೌನ್​ಲೋಡ್ ಮಾಡಿ ಚುನಾವಣಾ ನೋಂದಣಿ ಅಧಿಕಾರಿ ಅಥವಾ ಬೂತ್ ಮಟ್ಟದ ಅಧಿಕಾರಿಗೆ ನೇರವಾಗಿ ಸಲ್ಲಿಸಬಹುದು. ಅವುಗಳನ್ನು ಅಂಚೆ ಮೂಲಕವೂ ಕಳುಹಿಸಬಹುದು. ಆದರೆ, ಕೊನೇ ದಿನಾಂಕಗಳು ಬಾಕಿ ಇರುವಾಗ ಅಂಚೆ ಮೂಲಕ ಕಳುಹಿಸದೇ ಇರುವುದು ಸೂಕ್ತ.

ವಿಳಾಸ ಬದಲಾವಣೆಯ ಸಂದರ್ಭದಲ್ಲಿ, ಅರ್ಜಿದಾರರು ಫಾರ್ಮ್ 8 ಎ ಅನ್ನು ಭರ್ತಿ ಮಾಡಬೇಕಾಗುತ್ತದೆ. ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಲು ಫಾರ್ಮ್ 7 ಅನ್ನು ಭರ್ತಿ ಮಾಡಬೇಕಾಗುತ್ತದೆ.

ಇದನ್ನೂ ಓದಿ: Lok Sabha Election : ರಾಜ್ಯದ 5 ಕ್ಷೇತ್ರ ಸೇರಿದಂತೆ ಬಿಜೆಪಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಇಂದು ಪ್ರಕಟ ಸಾಧ್ಯತೆ

ವೋಟರ್ ಐಡಿ ಇಲ್ಲದೆಯೂ ಮತದಾನ ಮಾಡಿ!

ಒಂದು ವೇಳೆ ನೀವು ನೋಂದಣಿ ಮಾಡಿಕೊಂಡಿದ್ದರೂ ವೋಟರ್ ಐಡಿ ನಿಮ್ಮ ಕೈ ತಲುಪದೇ ಹೋದರೂ ಮತದಾನ ಮಾಡಬಹುದು. ಆದರೆ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಲಾದ 12 ಸರ್ಕಾರಿ-ದೃಢೀಕೃತ ಗುರುತಿನ ಪುರಾವೆಗಳಲ್ಲಿ ಯಾವುದನ್ನಾದರೂ ಒಂದನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗಬೇಕಾಗುತ್ತದೆ.

‘ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆ ಎಂದು ಖಚಿತಪಡಿಸಿಕೊಂಡರೆ ಸಾಕು. ನೀವು ಆ ಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ತೆಗೆದುಕೊಳ್ಳಬಹುದು ಮತ್ತು ಮತದಾನಕ್ಕೂ ಮೊದಲು ಪರಿಶೀಲನೆ ಕೌಂಟರ್‌ನಲ್ಲಿ ಅದನ್ನು ತೋರಿಸಬಹುದು. ಆದರೆ, ಪ್ರಿಂಟೌಟ್ ತೆಗೆದುಕೊಳ್ಳುವುದನ್ನು ಮಾನ್ಯ ದಾಖಲೆ ಎಂದು ಪರಿಗಣಿಸಲಾಗುವುದಿಲ್ಲ. ಮತದಾರರ ಪಟ್ಟಿಯಲ್ಲಿನ ನಿಮ್ಮ ವಿವರಗಳನ್ನು ವೇಗವಾಗಿ ಹುಡುಕಲು ಸ್ಕ್ರೀನ್‌ಶಾಟ್ ಚುನಾವಣಾ ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ.

ಮತದಾರ ವೋಟರ್ ಐಡಿಯನ್ನು ಹೊಂದಿಲ್ಲದಿದ್ದರೆ, ಅಧಿಕೃತ ಗುರುತಿನ ಚೀಟಿ ತೋರಿಸಿ ಮತದಾನ ಮಾಡಬೇಕಾಗುತ್ತದೆ. ಆದಾಗ್ಯೂ ನಾಗರಿಕರು E-EPIC ಅನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಉತ್ತಮ ಆಯ್ಕೆಯಾಗಿದೆ.

ಹೆಸರಿದೆಯಾ ಪರಿಶೀಲಿಸಿ

ಮತ ಚಲಾಯಿಸಲು ತೆರಳುವ ಮುನ್ನ ಪ್ರತಿಯೊಬ್ಬ ನಾಗರಿಕ ತಮ್ಮ ಮತದಾರರ ಪಟ್ಟಿಯಲ್ಲಿ ತಮ್ಮ ವಿವರಗಳನ್ನು ಪರಿಶೀಲಿಸಬೇಕು. ಅದು ವೆಬ್‌ಸೈಟ್ ಅಥವಾ ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಮುಕ್ತವಾಗಿ ಲಭ್ಯವಿದೆ. . ಎಪಿಕ್​ ಕಾರ್ಡ್​ ಹೊಂದಿದ ತಕ್ಷಣ ಪಟ್ಟಿಯಲ್ಲಿ ಹೆಸರಿದ್ದೇ ಇರುತ್ತದೆ ಎಂದು ಖಾತರಿಯಾಗಿ ಹೇಳುವುದಕ್ಕೆ ಸಾಧ್ಯವಿಲ್ಲ.

ಹೆಸರು ನೋಂದಾಯಿಸಲು ಹೀಗೆ ಮಾಡಿ

ಗೂಗಲ್​ ಪ್ಲೇಸ್ಟೋರ್/ ಆ್ಯಪಲ್ ಫೋನ್​ ಐಒಎಸ್​ನಿಂದ ಭಾರತದ ಚುನಾವಣಾ ಆಯೋಗ ನೀಡುವ ಮತದಾರರ ಸಹಾಯವಾಣಿ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

ಮುಖ ಪುಟದಲ್ಲಿ, ಸುಲಭವಾಗಿ ಗೋಚರಿಸುವ ‘ಮತದಾರರ ನೋಂದಣಿ’ ಆಯ್ಕೆಯನ್ನು ಮಾಡಿ ಮತ್ತು ‘ಹೊಸ ಮತದಾರರ ನೋಂದಣಿ (ಫಾರ್ಮ್ 6) ಎಂದು ಹೇಳುವ ಪಟ್ಟಿಯಿಂದ ಎರಡನೇ ಆಯ್ಕೆಯನ್ನು ಆರಿಸಿ. ಅಗತ್ಯ ಮಾಹಿತಿಗಳನ್ನು ತುಂಬಿಸಿ ನೋಂದಣಿ ಮಾಡಿ.

ಫಾರ್ಮ್ 6 ತುಂಬುವುದು ಹೇಗೆ?

ಒಮ್ಮೆ ನೀವು ಹೊಸ ನೋಂದಣಿ ಆಯ್ಕೆ ಆರಿಸಿದಾಗ ವೈಯಕ್ತಿಕ ಡಿಜಿಟಲ್ ಸಹಾಯಕ ‘ವೋಟರ್ ಮಿತ್ರ’ ಜತೆ ಸಂವಹನ ನಡೆಸಲು ಕೇಳುತ್ತದೆ. ಅದು ನಿಮಗೆ ಮಾರ್ಗದರ್ಶನ ನೀಡುತ್ತದೆ.

ಮೊದಲಿಗೆ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕು. ಬಳಿಕ , ‘ಹೌದು, ಮೊದಲ ಬಾರಿಗೆ ಅರ್ಜಿ ಸಲ್ಲಿಸುವುದು ಎಂಬ ಆಯ್ಕೆಯನ್ನು ‘ ಕ್ಲಿಕ್ ಮಾಡಬೇಕು.

ರಾಜ್ಯ, ವಿಧಾನಸಭಾ ಕ್ಷೇತ್ರ, ಹುಟ್ಟಿದ ದಿನಾಂಕ ಮತ್ತು ಸಂಬಂಧಿತ ಜನನ ಪುರಾವೆ ದಾಖಲೆಯಂತಹ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.

ಪುಟದ ಕೆಳಭಾಗದಲ್ಲಿ, ನೀವು ಲಗತ್ತಿಸಿದ ‘ವಯಸ್ಸಿನ ಘೋಷಣೆ ಫಾರ್ಮ್’ ಅನ್ನು ಡೌನ್ಲೋಡ್ ಮಾಡಬೇಕು.

ನಿಮ್ಮ ಲಿಂಗ, ಹೆಸರು ಮತ್ತು ಇತರ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಚಿತ್ರವನ್ನು ಅಪ್ಲೋಡ್ ಮಾಡಬೇಕು.

ನಿಮ್ಮೊಂದಿಗೆ ವಾಸಿಸುವ ಕುಟುಂಬ ಸದಸ್ಯರ ವಿವರಗಳನ್ನು ನಮೂದಿಸಬೇಕು.

ಮುಂದಿನ ಹಂತದಲ್ಲಿ, ನಿಮ್ಮ ವಿಳಾಸ ಮತ್ತು ಗ್ರಾಮ, ಅಂಚೆ ಕಚೇರಿ, ಪಿನ್ ಕೋಡ್ ವಿವರಗಳು, ನಿಮ್ಮ ಜಿಲ್ಲೆ, ಕ್ಷೇತ್ರವನ್ನು ನಮೂದಿಸಬೇಕು. ಈ ಹಂತವನ್ನು ಪೂರ್ಣಗೊಳಿಸಲು ವಿಳಾಸ ದಾಖಲೆಯನ್ನು ನೀಡಬೇಕು.

ಅಂತಿಮ ಹಂತದಲ್ಲಿ ಹೇಳಿಕೆಯನ್ನು ಒಪ್ಪಿಕೊಂಡು ಕ್ಲಿಕ್ ಮಾಡಿದೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣ.

Exit mobile version