ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂಬ ಕರ್ನಾಟಕದ ಮನವಿಯನ್ನು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಪುರಸ್ಕರಿಸಿದೆ. ಎರಡೂ ರಾಜ್ಯಗಳಲ್ಲಿನ ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆ (live storage) ಯನ್ನು ಪರಿಗಣಿಸಿದ ಸಿಡಬ್ಲ್ಯುಎಂಎ, ಕರ್ನಾಟಕದಿಂದ ನೀರು (Cauvery Dispute) ಬಿಡುಗಡೆಗೆ ಯಾವುದೇ ನಿರ್ದೇಶನ ನೀಡದಿರುವುದು ಕಂಡುಬಂದಿದೆ.
ನವ ದೆಹಲಿಯಲ್ಲಿ ಗುರುವಾರ ನಡೆದ ಸಿಡಬ್ಲ್ಯುಎಂಎ ಸಭೆಯಲ್ಲಿ ಕರ್ನಾಟಕ ಅಧಿಕಾರಿಗಳು, ರಾಜ್ಯದ ಜಲಾಶಯಗಳ ಸದ್ಯದ ಸ್ಥಿತಿಯನ್ನು ಪ್ರಾಧಿಕಾರದ ಗಮನಕ್ಕೆ ತಂದಿದ್ದಾರೆ. 2024ರ ಮೇ ಅಂತ್ಯದವರೆಗೆ 18 ಟಿಎಂಸಿ ನೀರು (7.61 ಟಿಎಂಸಿ ಬಾಕಿ ಸೇರಿದಂತೆ) ಬಿಡುಗಡೆ ಮಾಡುವಂತೆ ತಮಿಳುನಾಡು ಒತ್ತಾಯಿಸಿತು. ಆದರೆ ನೀರಾವರಿ ಅವಧಿಯು ಜನವರಿ 31ಕ್ಕೆ ಕೊನೆಗೊಂಡಿರುವ ಅಂಶವನ್ನು ಮತ್ತು ಎರಡೂ ರಾಜ್ಯಗಳಲ್ಲಿನ ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆಯನ್ನು ಪರಿಗಣಿಸಿದ CWMA, ಕರ್ನಾಟಕದಿಂದ ನೀರು ಬಿಡುಗಡೆಗೆ ಯಾವುದೇ ನಿರ್ದೇಶನ ನೀಡಿಲ್ಲ.
ಜ.18ರಂದು ನಡೆದಿದ್ದ ಸಿಡಬ್ಲ್ಯುಆರ್‌ಸಿಯ 92ನೇ ಸಭೆಯಲ್ಲಿ ಜನವರಿಯಲ್ಲಿ 1182 ಕ್ಯೂಸೆಕ್ ಹಾಗೂ ಫೆಬ್ರವರಿ ತಿಂಗಳಲ್ಲಿ 998 ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಬಿಡಲು ಕರ್ನಾಟಕಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಸೂಚಿಸಿತ್ತು.
ಇದನ್ನೂ ಓದಿ | Budget 2024: ವಿನಾಶಕಾರಿ ಭಾರತ ಬಜೆಟ್; 190 ಲಕ್ಷ ಕೋಟಿ ರೂ. ಸಾಲ ಮಾಡಿದ ಮೋದಿ: ಸಿಎಂ ಸಿದ್ದರಾಮಯ್ಯ
ಕರ್ನಾಟಕವು ಈ ಕೆಳಕಂಡ ಅಂಶಗಳನ್ನು CWMA ಗಮನಕ್ಕೆ ಸಲ್ಲಿಸಿತು:
1.ಕರ್ನಾಟಕದ 4 ಜಲಾಶಯಗಳಿಗೆ 2023ರ ಜೂ.1 ರಿಂದ 2024ರ ಜ.29 ರವರೆಗೆ ಸಂಚಿತ ಒಳಹರಿವಿನ ಕೊರತೆ ಶೇ. 52.44 ಇದೆ.
2. 2024ರ ಜನವರಿ ತಿಂಗಳ ಬಾಕಿ ಅವಧಿಗೆ ಹಾಗೂ ಫೆಬ್ರವರಿ ಪೂರ್ಣ ಅವಧಿಗೆ ಕರ್ನಾಟಕವು ಸುಪ್ರೀಂ ಕೋರ್ಟ್ ಮಾರ್ಪಡಿಸಿದಂತೆ CWDT ಯ ಆದೇಶದ ಪ್ರಕಾರ ನಿಗದಿತ ಪ್ರಮಾಣದ ಹರಿವನ್ನು ಖಚಿತಪಡಿಸಿಕೊಳ್ಳಬೇಕೆಂದು CWRC ಜ.18ರಂದು ನಡೆದ 92ನೇ ಸಭೆಯಲ್ಲಿ ತೀರ್ಮಾಸಿತ್ತು. ಬಿಳಿಗುಂಡ್ಲುವಿನಲ್ಲಿ ಅಂತಹ ಹರಿವುಗಳನ್ನು ಸ್ಥಿರಗೊಳಿಸುವುದರಿಂದ ಬಿಳಿಗುಂಡ್ಲುವರೆಗಿನ ಹರಿವು ಸಾಮಾನ್ಯವಾಗಿರುತ್ತದೆ. ಆದರೆ ಡಿ.19 ರಿಂದ ಜ. 28ರವರೆಗೆ ಕರ್ನಾಟಕ ಜಲಾಶಯಗಳಲ್ಲಿ ಶೇ.52.461 ಒಳಹರಿವಿನ ಕೊರತೆ ಇದೆ.
ಸಂಕಷ್ಟವನ್ನು ಅನ್ವಯಿಸಿದಾಗ, ಬಿಳಿಗುಂಡ್ಲುವಿನ ಹರಿವು 2.65TMC ಆಗಿದ್ದರೆ, ಅದೇ ಅವಧಿಯಲ್ಲಿ ಬಿಳಿಗುಂಡ್ಲುವಿನಲ್ಲಿ 4.064TMC ಹರಿವು ಕಂಡುಬಂದಿದ್ದು, ಹೆಚ್ಚುವರಿ 1.414 ಟಿಎಂಸಿ ಯಷ್ಟು ಹರಿವನ್ನು ಒದಗಿಸಿದಂತಾಗುತ್ತದೆ.
3.ಪ್ರಸಕ್ತ ಜಲ ವರ್ಷದಲ್ಲಿ ತಮಿಳುನಾಡಿಗಿಂತ ಕರ್ನಾಟಕವು ಹೆಚ್ಚು ಸಂಕಷ್ಟವನ್ನು ಅನುಭವಿಸಿದೆ. ಅನಿಯಂತ್ರಿತ ಜಲಾನಯನದಿಂದ ಕೊಡುಗೆಯನ್ನು ಹೊರತುಪಡಿಸಿ ಬಿಳಿಗುಂಡ್ಲು ತಲುಪಲು ಕರ್ನಾಟಕವು ತನ್ನ ಜಲಾಶಯಗಳಿಂದ ಯಾವುದೇ ನೀರನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಸಮಿತಿಯ ನಿರ್ದೇಶನಗಳನ್ನು ಪ್ರಾಧಿಕಾರವು ಮರುಪರಿಶೀಲಿಸುವ ಅಗತ್ಯತೆ ಇರುತ್ತದೆ.
4. 2024ರ ಮೇ ಅಂತ್ಯದವರೆಗೆ 18 ಟಿಎಂಸಿ ನೀರು (7.61 ಟಿಎಂಸಿ ಬಾಕಿ ಸೇರಿದಂತೆ) ಬಿಡುಗಡೆ ಮಾಡುವಂತೆ ತಮಿಳುನಾಡು ಒತ್ತಾಯಿಸಿತು.
5. ಅಂತಿಮವಾಗಿ, CWMA ನೀರಾವರಿ ಅವಧಿಯು 2024ರ ಜನವರಿ 31ಕ್ಕೆ (ಈ ನೀರಿನ ವರ್ಷಕ್ಕೆ) ಕೊನೆಗೊಂಡಿರುವ ಅಂಶವನ್ನು ಮತ್ತು ಎರಡೂ ರಾಜ್ಯಗಳಲ್ಲಿನ ಜಲಾಶಯಗಳಲ್ಲಿನ ಉಪಯುಕ್ತ ಸಂಗ್ರಹಣೆ (live storage) ಯನ್ನು ಪರಿಗಣಿಸಿ, ಕರ್ನಾಟಕದಿಂದ ನೀರು ಬಿಡುಗಡೆಗೆ ಯಾವುದೇ ನಿರ್ದೇಶನಗಳನ್ನು ನೀಡಲಿಲ್ಲ.
ಮೇಕೆದಾಟು ಯೋಜನೆ ಬಗ್ಗೆ ಚರ್ಚೆ
ಕರ್ನಾಟಕ ರಾಜ್ಯದ ಪರ ವಕೀಲರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಸಲ್ಲಿಕೆಗಳನ್ನು ಪರಿಗಣಿಸಿ, ಈ ಪರಿಣಿತ ಸಂಸ್ಥೆಯು ಸಂಕಷ್ಟದ ವರ್ಷಗಳಲ್ಲಿ ಶಾಶ್ವತವಾಗಿ ಸಮಸ್ಯೆಯನ್ನು ಪರಿಹರಿಸಲು ಮೇಕೆದಾಟುವಿನ permissibility ಅನ್ನು ಪರಿಗಣಿಸಬೇಕು ಮತ್ತು ನಿರ್ಧರಿಸಬೇಕು ಎಂದು ಕರ್ನಾಟಕ ಪುನರುಚ್ಚರಿಸಿತು. ಇದಲ್ಲದೆ, ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ನಿರ್ಮಾಣದ ಕುರಿತು ನ್ಯಾಯಾಧಿಕರಣದ ತೀರ್ಪಿನಲ್ಲಿ ಅಥವಾ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ಯಾವುದೇ ನಿರ್ಬಂಧಗಳು ಅಥವಾ ಯಾವುದೇ ಅಡೆತಡೆಗಳಿಲ್ಲ ಎಂಬ ಅಂಶವನ್ನು ಪ್ರಾಧಿಕಾರದ ಗಮನಕ್ಕೆ ತರಲಾಯಿತು.
ಮೇಕೆದಾಟು ಯೋಜನೆಯ ಡಿಪಿಆರ್ ಬಗ್ಗೆ ಸೂಕ್ತ ದೃಷ್ಟಿಕೋನ/ ನಿಲುವು ತೆಗೆದುಕೊಳ್ಳುವಂತೆ ಮತ್ತು ಯೋಜನೆಯ ವರದಿಯು ಈ ಯೋಜನೆಯ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಎಂದು ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲ್ಯುಸಿ) ತನ್ನ ಅಭಿಪ್ರಾಯಗಳನ್ನು ರವಾನಿಸುವಂತೆ ಕರ್ನಾಟಕವು ಮೇಲಿನ ಸಂಗತಿಗಳಿಗೆ ಸರಿಯಾಗಿ ಒತ್ತು ನೀಡುವಂತೆ ಪ್ರಾಧಿಕಾರಕ್ಕೆ ಮನವಿ ಮಾಡಿತು.
ಕಾರ್ಯಸೂಚಿಯನ್ನು ಮುಂದೂಡದೆ ಮೇಕೆದಾಟು ಯೋಜನೆ ಕುರಿತ ಚರ್ಚೆಗಳು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಕರ್ನಾಟಕವು ಪ್ರಾಧಿಕಾರವನ್ನು ಒತ್ತಾಯಿಸಿತು. ಆದರೆ, ಮೇಕೆದಾಟು ಯೋಜನೆಯ ಚರ್ಚೆಗೆ ತಮಿಳುನಾಡು ಮತ್ತು ಪುದುಚೇರಿ ಆಕ್ಷೇಪ ವ್ಯಕ್ತಪಡಿಸಿದವು.
ಮೇಕೆದಾಟುಗೆ ಸಂಬಂಧಿಸಿದ ವಿಷಯವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ. ಆದರೆ CWMA ಯಲ್ಲಿ ಮೇಕೆದಾಟು ಯೋಜನೆಯ ಚರ್ಚೆಗೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ಬಂಧವಿರುವುದಿಲ್ಲ ಎಂದು CWMA ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡೆಸಿದರು.
ಇದನ್ನೂ ಓದಿ | Congress Guarantee: ಗ್ಯಾರಂಟಿ ರದ್ದು ಮಾಡುವ ಕಾಂಗ್ರೆಸ್ ರಹಸ್ಯ ಚರ್ಚೆ ಬಯಲಾಗಿದೆ ಎಂದ ಎಚ್‌ಡಿಕೆ
ಈ ಬಗ್ಗೆ CWMAನ ಎಲ್ಲಾ ಸದಸ್ಯರ ಅಭಿಪ್ರಾಯವನ್ನು ಕೇಳಲಾಯಿತು. ಯೋಜನಾ ವರದಿಯ ತಾಂತ್ರಿಕ ಪರಿಶೀಲನೆಗೆ ಪ್ರಾಧಿಕಾರವು ಸಮರ್ಥವಾಗಿಲ್ಲ ಮತ್ತು CWC (ಕೇಂದ್ರ ಜಲ ಆಯೋಗ) ಸಕ್ಷಮ ಪ್ರಾಧಿಕಾರವಾಗಿರುವುದರಿಂದ ಹೆಚ್ಚಿನ ಪರಾಮರ್ಷೆಗಾಗಿ ಮೇಕೆದಾಟು ಯೋಜನೆಯ ಪ್ರಸ್ತಾವನೆಯನ್ನು CWCಗೆ ಹಿಂತಿರುಗಿಸಬಹುದು ಎಂದು ಬಹುತೇಕ ಸದಸ್ಯರು (5 ಸದಸ್ಯರು) ಅಭಿಪ್ರಾಯ ವ್ಯಕ್ತಪಡಿಸಿದರು.