ಬೆಂಗಳೂರು: ರಾಜಧಾನಿಯಲ್ಲಿ ನೀರಿನ ಬಿಕ್ಕಟ್ಟಿನ (drinking water crisis) ಪರಿಹಾರಕ್ಕಾಗಿ, ಬೃಹತ್ ಪ್ರಮಾಣದಲ್ಲಿ ನೀರನ್ನು ಬಳಸುವ ಕಂಪನಿಗಳು, ಆಸ್ಪತ್ರೆಗಳು, ರೈಲ್ವೆ, ವಿಮಾನ ನಿಲ್ದಾಣ ಸೇರಿದಂತೆ ದೊಡ್ಡ ಸಂಸ್ಥೆಗಳಿಗೆ ಮಾಡುವ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತ ಮಾಡಲು ಬೆಂಗಳೂರು ಜಲಮಂಡಳಿ (BWSSB) ನಿರ್ಧಾರ ಮಾಡಿದೆ.
ಹೆಚ್ಚಿನ ನೀರಿನ ಸಂಪರ್ಕ ಪಡೆದಿರುವ ಪ್ರಮುಖ ಗ್ರಾಹಕ ಸಂಸ್ಥೆಗಳೊಂದಿಗೆ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ಪ್ರಸಾತ್ ಮನೋಹರ್ ಅವರು ಮಂಗಳವಾರ ಸಭೆ ನಡೆಸಿದ್ದು, ಅಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇಲ್ಲಿ ಉಳಿಸುವ ನೀರನ್ನು ಸ್ಲಂಗಳು ಹಾಗೂ ನೀರಿನ ಸಮಸ್ಯೆ ಇರುವ ಜಾಗಗಳಿಗೆ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ.
ಸದ್ಯ ಬೆಂಗಳೂರಿಗೆ ನೀರಿನ ಸಮಸ್ಯೆ ಎದುರಾಗಿದೆ. ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಇದ್ದು, ಈ ಸಂದರ್ಭದಲ್ಲಿ ನೀರು ಒದಗಿಸುವುದು ಸವಾಲಾಗಿದೆ. ಮಂಡಳಿ ಬೆಂಗಳೂರಿಗರಿಗೆ ಅಗತ್ಯ ನೀರು ಒದಗಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.
ಯಾವಾಗಿನಿಂದ ಜಾರಿ?
ಬೇಹತ್ ಗಾತ್ರದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ನೀರನ್ನು ಕಡಿತಗೊಳಿಸಲು ನಿರ್ಧರಿಸಲಾಗಿದ್ದು, ಮಾ.15ರಿಂದ ಹಂತಹಂತವಾಗಿ ಮಂಡಳಿಯಿಂದ ಪೂರೈಸಲಾಗುತ್ತಿರುವ ಕಾವೇರಿ ನೀರನ್ನು ಕಡಿತಗೊಳಿಸಲಾಗುವುದು. ಏ.1ರಿಂದ ಶೇ.20ರಷ್ಟು ಕಡಿತಗೊಳಿಸಲಾಗುವುದು. ಬೆಂಗಳೂರಿನಲ್ಲಿ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವವರು 3 ಲಕ್ಷ ಜನರಿದ್ದಾರೆ. ದೊಡ್ಡ ಗಾತ್ರದ ನೀರಿನ ಸಂಪರ್ಕ ಪಡೆದಿರುವವರಿಗೆ ಮಂಡಳಿ ವತಿಯಿಂದ ಇದುವರೆಗೆ ಶೇ.95ರಿಂದ ಶೇ.100ರಷ್ಟು ಪೂರೈಸಲಾಗುತ್ತಿತ್ತು.
35 ಪ್ರಮುಖ ಸಂಸ್ಥೆಗಳಿಗೆ ಕಾವೇರಿ ನೀರಿನ ಪೂರೈಕೆಯಲ್ಲಿ ಶೇಕಡಾ 20ರಷ್ಟು ಕಡಿತ ಮಾಡಲು ನಿರ್ಧಾರ ಮಾಡಲಾಗಿದೆ. ಮಾರ್ಚ್ 15ರಿಂದ ಏಪ್ರಿಲ್ 1ರವರಿಗೆ ಶೇಕಡಾ 10ರಷ್ಟು ಕಡಿತವಾಗಲಿದೆ. ಏಪ್ರಿಲ್ 1ರಿಂದ 15ರವರೆಗೆ ಶೇಕಡಾ 20ರಷ್ಟು ಕಾವೇರಿ ನೀರಿನ ಕಡಿತವಾಗಲಿದೆ.
ರೈಲ್ವೆ, ಎಚ್ಎಎಲ್, ಏರ್‌ಫೋರ್ಸ್, ಡಿಫೆನ್ಸ್, ಸಿ.ಆರ್.ಪಿ.ಎಫ್, ಬಯೋಕಾನ್, ನಿಮ್ಹಾನ್ಸ್, ವಿಕ್ಟೋರಿಯಾ ಆಸ್ಪತ್ರೆ ಸೇರಿದಂತೆ ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದಿರುವ ಅನೇಕ ಸಂಸ್ಥೆಗಳಿವೆ. ಇವುಗಳಲ್ಲಿ ನಿಮ್ಹಾನ್ಸ್, ವಿಕ್ಟೋರಿಯಾ, ಏರ್‌ಫೋರ್ಸ್ ಕಮಾಂಡಿಂಗ್ ಆಸ್ಪತ್ರೆಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಈ ಸಂಸ್ಥೆಗಳು ತಮ್ಮ ಕ್ಯಾಂಪಸ್‌ನಲ್ಲಿ ನೀರಿನ ಪ್ರಾಮುಖ್ಯತೆ, ನೀರಿನ ಉಳಿತಾಯ ಕುರಿತು ಅರಿವು ಮೂಡಿಸಬೇಕು ಎಂದು ಸೂಚನೆ ನೀಡಿದ ಮಂಡಳಿ ಅಧ್ಯಕ್ಷ ರಾಮ್‌ಪ್ರಸಾತ್, ಕ್ಯಾಂಪಸ್‌ನಲ್ಲಿ ಈಜುಕೋಳಗಳಿದ್ದರೆ ಕೂಡಲೇ ಸ್ಥಗಿತಗೊಳಿಸಿ ಎಂದು ನಿರ್ದೇಶಿಸಿದರು. ನೀರಿನ ಸಮಸ್ಯೆ ಹಿನ್ನೆಲೆ ಬೆಂಗಳೂರು ನಗರದಲ್ಲಿರುವ ಎಲ್ಲ ಈಜುಕೊಳ ಕಾರ್ಯನಿರ್ವಹಣೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೊಡ್ಡಗಾತ್ರದ ನೀರಿನ ಸಂಪರ್ಕ ಪಡೆದ ಪ್ರಮುಖ ಗ್ರಾಹಕರ ನೀರಿನ ಪೂರೈಕೆಯಲ್ಲಿ ಶೇ.20ರಷ್ಟು ಕಡಿತಗೊಳಿಸಿದ ನೀರನ್ನು ಜನನಿಬಿಡ ಪ್ರದೇಶಗಳಿಗೆ, ಸ್ಲಂಗಳು ಹಾಗೂ ಬಡವರು ವಾಸಿಸುತ್ತಿರುವ ಪ್ರದೇಶಗಳಿಗೆ ಮತ್ತು ಅತ್ಯಂತ ಅವಶ್ಯವಿರುವ ಪ್ರದೇಶಗಳಿಗೆ ಪೂರೈಸುವಂತೆ ಎಂಜನಿಯರ್‌ಗಳಿಗೆ ನಿರ್ದೇಶನ ನೀಡಿದರು.
ರಾಜಧಾನಿಯ ಎಲ್ಲೆಡೆ ಈಜುಕೊಳಗಳನ್ನು ಸ್ಥಗಿತಗೊಳಿಸಲು ನಿರ್ದೇಶಿಸಲಾಗಿದ್ದು, ಚಾಲನೆಯಲ್ಲಿರುವುದು ಕಂಡುಬಂದರೆ ಮೊದಲಿಗೆ ರೂ. 5000 ದಂಡ ವಿಧಿಸಲು ಆದೇಶಿಸಲಾಗಿದೆ.
ಇದನ್ನೂ ಓದಿ: Water Crisis: ಈಜು ಕೊಳಕ್ಕೆ ನೀರು ಬಳಸಿದರೂ ಬೀಳುತ್ತೆ ಭಾರಿ ದಂಡ; ಜಲ ಮಂಡಳಿ ಎಚ್ಚರಿಕೆ